ಆಣೆಯಿಂದ ಹಿಂದೆ ಸರಿಯಿರಿ..

ಶನಿವಾರ, ಜೂಲೈ 20, 2019
22 °C

ಆಣೆಯಿಂದ ಹಿಂದೆ ಸರಿಯಿರಿ..

Published:
Updated:

ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇದೇ 27ರಂದು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡುವ ತೀರ್ಮಾನದಿಂದ ಹಿಂದೆ ಸರಿದು ವಾತಾವರಣವನ್ನು ತಿಳಿಗೊಳಿಸಿ ಜನತೆಗೆ ನೆಮ್ಮದಿ ತರಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸಲಹೆ ನೀಡಿದರು.ಮಂಗಳೂರಿನಲ್ಲಿ ಮಂಗಳವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ರಾಜ್ಯದ ಇಬ್ಬರು ಪ್ರಮುಖ ರಾಜಕಾರಣಿಗಳ ಆಣೆ- ಪ್ರಮಾಣ ಘೋಷಣೆಯಿಂದ ಮನಸ್ಸಿಗೆ ಆತಂಕವಾಗಿದೆ. ಇದು ದೇವರ ಮುಂದೆ ಆತ್ಮ ಸಮರ್ಥನೆ ಮಾಡುವುದರ ಜತೆಗೇ ಇನ್ನೊಬ್ಬರಿಗೆ ಶಾಪ- ಪ್ರತಿಶಾಪವಾಗಿ ಪರಿಣಮಿಸುತ್ತದೆ. ಈ ದೃಷ್ಟಿಯಿಂದ ಆಣೆ-ಪ್ರಮಾಣ ಇಬ್ಬರಿಗೂ ಒಳ್ಳೆಯದಲ್ಲ.ಇದನ್ನು ನಾನು ವಿರೋಧಿಸುತ್ತೇನೆ. ಮಠದಲ್ಲೂ ಅದಕ್ಕೆ ಅವಕಾಶ ನೀಡಿಲ್ಲ. ಇಂಥ ರೂಢಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತದೆ. ಇಬ್ಬರೂ ನಾಯಕರು ಹಿಂದೆ ಸರಿಯಬೇಕು~ ಎಂದು ಕಿವಿಮಾತು ಹೇಳಿದರು.`ಇಬ್ಬರ ಆರೋಪ-ಪ್ರತ್ಯಾರೋಪ ಸರಿಪಡಿಸಲು ಬೇರೆ ಮಾರ್ಗ ಅನುಸರಿಸಬೇಕು. ಇದಕ್ಕೆ ನಮ್ಮಿಂದ ಸಾಧ್ಯವಿರುವ ಎಲ್ಲ ಸಹಕಾರ ನೀಡಲು ಸಿದ್ಧ. ದೇವರೆದುರು ಪ್ರಾರ್ಥನೆ ಮಾಡುವ ಮೂಲಕ ವಿವಾದ ಕೊನೆಗೊಳಿಸಬಹುದು. ಇಬ್ಬರ ಮೇಲೂ ವಿಶ್ವಾಸವಿದ್ದು, ನನ್ನ ಸಲಹೆ ಮೇರೆಗೆ ಅವರು ಆಣೆ ಪ್ರಮಾಣದಿಂದ ಹಿಂದೆ ಸರಿಯುತ್ತಾರೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.`ಜನತಾ ನ್ಯಾಯಾಲಯಕ್ಕೆ ಹೋಗಿ~

`ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ನಮ್ಮ ನ್ಯಾಯಾಲಯ. ಕೆಲ ದಿನಗಳಿಂದ ರಾಜ್ಯದ ಇಬ್ಬರು ರಾಜಕೀಯ ನಾಯಕರ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಯಾವ ಮಠ, ಮಂದಿರಕ್ಕೂ ತೆಗೆದುಕೊಂಡು ಹೋಗಬೇಡಿ. ಬದಲಿಗೆ ಈ ಕುರಿತು ಜನತಾ ನ್ಯಾಯಾಲಯದ ಮುಂದೆ ಹೋಗಿ~ ಎಂದು ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು, ಕಿವಿಮಾತು ಹೇಳಿದರು.

ಕನಕಪುರದಲ್ಲಿ ಏರ್ಪಡಿಸಿದ್ದ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಗುರುವಂದನಾ ಸಮಾರಂಭದಲ್ಲಿ ಮಾತನಾಡಿದರು.`ಬೇಕಿದ್ದರೆ ವಿಧಾನಸೌಧದ ಮುಂಭಾಗ ಜನರನ್ನು ಸೇರಿಸಿ, ಅವರ ಮುಂದೆ ಈ ಇಬ್ಬರೂ ನಾಯಕರು ತಮ್ಮ ವಿಚಾರವನ್ನು ಮಂಡಿಸಲಿ. ಇಲ್ಲದಿದ್ದರೆ ಮುಖ್ಯಮಂತ್ರಿಯವರು ಜನತಾದರ್ಶನದಲ್ಲಿ ಈ ಕುರಿತು ಜನತೆಗೆ ತಿಳಿಸಲಿ. ಅದನ್ನು ಬಿಟ್ಟು ಇಂತಹ ಜಟಿಲ ಹಾಗೂ ಭಾವನಾತ್ಮಕ ವಿಚಾರಗಳನ್ನು ದೇವರ ಬಳಿಗೆ ಒಯ್ಯವುದು ಸರಿಯಲ್ಲ. ಭಾವನಾತ್ಮಕವಾದ ದೈವೀ ಭಾವನೆಯನ್ನು ಯಾರೂ ದುರುಪಯೋಗ ಮಾಡಿಕೊಳ್ಳಬಾರದು~ ಎಂದು ಸಲಹೆ ನೀಡಿದರು.`ಈ ಇಬ್ಬರು ನಾಯಕರ ನಡುವಿನ ಸಂಘರ್ಷ ಬಹಳ ವರ್ಷಗಳಿಂದ ಅನ್ಯೋನ್ಯವಾಗಿರುವ ರಾಜ್ಯದ ಎರಡು ಪ್ರಮುಖ ಜಾತಿಗಳ ನಡುವಿನ ಸಂಘರ್ಷಕ್ಕೆ ನಾಂದಿ ಹಾಡುವುದನ್ನು ತಡೆಯಬೇಕಿದೆ ಎಂದರು.`ಆತ್ಮ ವಿಮರ್ಶೆ ಮಾಡಿಕೊಳ್ಳಿ~

ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, `ದೇವರ ದರ್ಶನಕ್ಕೆ ಧರ್ಮಸ್ಥಳಕ್ಕೆ ಹೋಗುವುದು ತಪ್ಪಲ್ಲ, ಆದರೆ ಯಾವುದೊ ಘಟನೆಗೆ ಸಂಬಂಧಿಸಿದಂತೆ ಆಣೆ, ಪ್ರಮಾಣ ಮಾಡಲು ಅಲ್ಲಿಗೆ ಹೋಗುವುದು ಔಚಿತ್ಯವಲ್ಲ. ಈ ಕುರಿತ ವಿಚಾರವನ್ನು ರಾಜ್ಯದ ಇಬ್ಬರೂ ನಾಯಕರು ಕೈಬಿಟ್ಟು, ಆತ್ಮವಿಮರ್ಶೆ ಮಾಡಿಕೊಳ್ಳಬೇಕು~ ಎಂದು ಸಲಹೆ ನೀಡಿದರು.ಮಾತಿಗೆ ಮಾತು ಬೆರೆತಾಗ ಅಮೃತ ಉಂಟಾಗಬೇಕೆ ಹೊರತು ದ್ವೇಷ, ಅಸೂಯೆ ಉಂಟಾಗಬಾರದು. ಈ ವಿಚಾರವನ್ನು ಬದಿಗಿಟ್ಟು, ಇಬ್ಬರೂ ನಾಯಕರು ರಾಜ್ಯದ ಅಭಿವೃದ್ಧಿಗೆ ಕಂಕಣ ತೊಡಬೇಕು ಎಂದರು.ಮುಖ್ಯಮಂತ್ರಿ ಆದವರು ಎಲ್ಲದಕ್ಕೂ ಪ್ರತಿಕ್ರಿಯಿಸಲು ಹೋಗಬಾರದು ಎಂದ ಸ್ವಾಮೀಜಿ, ಬೇಕಿದ್ದರೆ ಈ ಇಬ್ಬರು ನಾಯಕರು ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಪಡೆದು, ಪ್ರೀತಿ ಮತ್ತು ಸೌಹಾರ್ದದಿಂದ ಹಿಂದಿರುಗಲಿ ಎಂದು ಆಶಿಸಿದರು.ಗುರುವಂದನೆ ಸ್ವೀಕರಿಸಿ ಮಾತನಾಡಿದ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ, `ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಪಕ್ಷಗಳಿಗೂ ಸಮಾನ ಗೌರವ ಇರುತ್ತದೆ. ಇಬ್ಬರೂ ಮುಖಂಡರು ತಮ್ಮ ಭಿನ್ನಾಭಿಪ್ರಾಯ, ವೈಮನಸ್ಸು ಕುರಿತು ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳುವುದು ಸೂಕ್ತ. ಇದಕ್ಕಾಗಿ ಬೇರೆಡೆ ಹೋಗುವ ಅಗತ್ಯ ಇಲ್ಲ~ ಎಂದು ತಿಳಿಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry