ಶುಕ್ರವಾರ, ಮೇ 14, 2021
21 °C

ಆತಂಕಕ್ಕೆ ಎಡೆಮಾಡಿದ ವನಸಿರಿ ಕೊರತೆ

-ಚಂದ್ರಕಾಂತ ಬಾರಕೇರ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಸಸಿ ಪಾಲನಾ ಕ್ಷೇತ್ರದ ಜತೆಗೆ ವಿಸ್ತಾರ ಗುಡ್ಡಗಾಡು ಪ್ರದೇಶ ಹೊಂದಿರುವ ಗಜೇಂದ್ರಗಡ ಭಾಗದಲ್ಲಿ ಮರ- ಗಿಡಗಳ ಸಂಖ್ಯೆ ಕ್ಷೀಣಿಸಿರುವುದು ಪರಿಸರಪ್ರಿಯರಲ್ಲಿ ಆತಂಕ ತಂದಿದೆ.ಗಜೇಂದ್ರಗಡ ಭಾಗದಲ್ಲಿನ ಪರಿಸರ ಸಂಪತ್ತನ್ನು ದೋಚುವ ಕೆಲಸ ನಿರಂತರವಾಗಿ ನಡೆದಿದ್ದರೂ ಅದನ್ನು ತಡೆಗಟ್ಟಲು ಪರಿಸರವಾದಿಗಳು ಕನಿಷ್ಠ ಹೋರಾಟವನ್ನು ಕೈಗೊಂಡಿಲ್ಲ. ಹೀಗಾಗಿ ಅಧಿಕಾರಿಗಳೂ ನಿರ್ಲಕ್ಷ್ಯ ತಾಳಿದ್ದಾರೆ. ತಾಲ್ಲೂಕಿನ ಗಜೇಂದ್ರಗಡದಿಂದ ಆರಂಭಗೊಳ್ಳುವ ಐತಿಹಾಸಿಕ ಬೆಟ್ಟ ತಾಲ್ಲೂಕಿನ ಕೊನೆಯ ಗ್ರಾಮ ಶಾಂತಗೇರಿ ವರೆಗೆ 2,000 ಕ್ಕೂ ಅಧಿಕ ಎಕರೆ ವಿಸ್ತೀರ್ಣ ಹೊಂದಿದೆ. ಈ ಬೆಟ್ಟದಲ್ಲಿ ವಿಪುಲ ಅರಣ್ಯ ಸಂಪತ್ತು ಸದಾ ಕಂಗೊಳಿಸುತ್ತಿತ್ತು. ಮಳೆಗಾಲ ಮತ್ತು ಚಳಿಗಾಲದ ಸಂದರ್ಭಗಳಲ್ಲಿ ಹೃನ್ಮನ ಸೆಳೆಯುತ್ತಿದ್ದವು.

ಬೇಸಿಗೆ ಕಾಲದಲ್ಲಿ ತೇವಾಂಶದ ಕೊರತೆಯಿಂದ ಪರಿಸರ ಸಂಪತ್ತಿನ ಸೌಂದರ್ಯಕ್ಕೆ ಅಲ್ಪ ಪ್ರಮಾಣದ ಮಂಕು ಕವಿಯುತ್ತಿತ್ತು. ಕಳೆದ ಕೆಲ ವರ್ಷಗಳಿಂದ ಇಲ್ಲಿನ ಪರಿಸರ ಸಂಪತ್ತಿನ ಲೂಟಿ ದಂಧೆ ಹಗಲು ರಾತ್ರಿ ಎನ್ನದೇ ಸಾಗಿತು. ಜತೆಗೆ ಅರಣ್ಯ ಪ್ರದೇಶದಲ್ಲಿನ ಪ್ರಾಣಿ ಸಂಕುಲಗಳ ಬೇಟೆಗೂ ಮುಂದಾದರು.ಪರಿಸರ ಸಂಪತ್ತಿನ ಲೂಟಿ ಕುರಿತಾಗಿ ಯಾವೊಂದು ಪರಿಸರ ಸಂರಕ್ಷಣೆ ಸಂಘಟನೆಯಾಗಲಿ, ಪರಿಸರ ವಾದಿಗಳಾಗಲಿ ಧ್ವನಿ ಎತ್ತದಿರುವುದು ಅರಣ್ಯ ಸಂಪತ್ತಿನ ಲೂಟಿಕೋರರಿಗೆ ರಾಜ ಮಾರ್ಗ ನಿರ್ಮಿಸಿದಂತಾಯಿತು. ಗಜೇಂದ್ರಗಡ ಸುತ್ತಮುತ್ತ ಇರುವ ಬೆಟ್ಟಗಳಲ್ಲಿ ಅಪಾರ ಶಿಲಾ ಸಂಕುಲಗಳಿವೆ. ಅನೇಕ ನೀರಿನ ಹೊಂಡಗಳು ಎಂಥ ಭೀಕರ ಬರದಲ್ಲಿಯೂ ಸದಾ ತುಂಬಿ ಹರಿಯುತ್ತವೆ. ಹೀಗಾಗಿ ಈ ಭಾಗದ ಗುಡ್ಡ-ಗಾಡು ಅರಣ್ಯ ಪ್ರದೇಶದಲ್ಲಿ ಮಲೆನಾಡು ಪ್ರದೇಶವನ್ನೂ ನಾಚಿಸುವ ಮಟ್ಟಿಗಿತ್ತು.

ಆದರೆ, 2001ರಿಂದೀಚೆಗೆ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಸಂರಕ್ಷಣೆ ಇಲಾಖೆಗಳು ಪೂರ್ಣ ಪ್ರಮಾಣದಲ್ಲಿ ನಿಷ್ಕ್ರಿಯಗೊಂಡ ಪರಿಣಾಮ ತಾಲ್ಲೂಕಿನ ಪರಿಸರ ಲೂಟಿ ದಂಧೆ ಬಲಾಢ್ಯವಾಯಿತು ಎಂದು ಹಿರಿಯ ಪರಿಸರವಾದಿ ಕೂಡ್ಲೆಪ್ಪ ಗುಡಿಮನಿ ಆಕ್ರೋಶ ವ್ಯಕ್ತಪಡಿಸಿದರು.ತಾಲ್ಲೂಕಿನ ಪರಿಸರ ಸಂಪತ್ತಿನ ಉನ್ನತೀಕರಣವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು 1982ರಲ್ಲಿ ಅಂದಿನ ಶಾಸಕ ಜ್ಞಾನದೇವ ದೊಡ್ಡಮೇಟಿ ಅವರು ತಾಲ್ಲೂಕಿನ ನೆಲ್ಲೂರ ಗ್ರಾಮದ ಹೊರ ವಲಯದಲ್ಲಿ `ಸಸಿ ಪಾಲನಾ ಕ್ಷೇತ್ರ' ಸ್ಥಾಪಿಸಿದ್ದರು. ಆರಂಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಇದು ನಂತರದ ವರ್ಷಗಳಲ್ಲಿ ಕಳೆಗುಂದಿತು.ಪ್ರತಿ ವರ್ಷ ಎರಡು ಅರಣ್ಯ ಇಲಾಖೆಗಳು ಕನಿಷ್ಠ 6,45,256 ಸಸಿಗಳನ್ನು ಸಿದ್ಧಪಡಿಸುತ್ತಿವೆ. ಆದರೂ ನೆಟ್ಟ ಸಸಿಗಳ ಸಂರಕ್ಷಣೆ ವ್ಯವಸ್ಥಿತ ರೀತಿಯಲ್ಲಿ ನಡೆಯದಿರುವುದರಿಂದ ಅರಣ್ಯ ಸಂಪತ್ತಿನ ಉನ್ನತೀಕರಣ ಸಾಧ್ಯವಾಗುತ್ತಿಲ್ಲ. ಇಲಾಖೆ ಅಧಿಕಾರಿಗಳು ಇತ್ತ ಗಮಹರಿಸಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.