ಶುಕ್ರವಾರ, ಮೇ 14, 2021
35 °C
ಜಾನಪದ ವಿವಿ ಬೋಧಕ ಹುದ್ದೆಗಳು- ಶೈಕ್ಷಣಿಕ ವಿದ್ಯಾರ್ಹತೆ ಮಾನದಂಡ ಚರ್ಚೆಗೆ

ಆತಂಕದಲ್ಲಿ ಉದ್ಯೋಗ ಆಕಾಂಕ್ಷಿಗಳು

ಎ.ಎಂ.ಸುರೇಶ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಾನಪದ ವಿಶ್ವವಿದ್ಯಾಲಯದಲ್ಲಿನ ಬೋಧಕ ಹುದ್ದೆಗಳಿಗೆ ಜಾನಪದ ವಿಷಯದ ಜೊತೆಗೆ ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜಶಾಸ್ತ್ರ, ಮಾನವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೂ ಅವಕಾಶ ನೀಡಿರುವುದರಿಂದ ತಮಗೆ ಅನ್ಯಾಯವಾಗಲಿದೆ ಎಂದು ಜಾನಪದ ವಿಷಯದ ಉದ್ಯೋಗ ಆಕಾಂಕ್ಷಿಗಳು ಆತಂಕಗೊಂಡಿದ್ದಾರೆ.ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕರ 19 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಈ ಹುದ್ದೆಗಳಿಗೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯ ಮಾನದಂಡ ಚರ್ಚೆಗೆ ಗ್ರಾಸವಾಗಿದೆ.ಜಾನಪದ ವಿಷಯಗಳ ಅಧ್ಯಯನಕ್ಕಾಗಿಯೇ ಪ್ರತ್ಯೇಕ ವಿಶ್ವವಿದ್ಯಾಲಯ ಆರಂಭಿಸಲಾಗಿದೆ. ಆ ವಿಷಯಗಳ ಬೋಧನೆಗೆ ಜಾನಪದ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಪಿ.ಎಚ್‌ಡಿ ಹಾಗೂ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ಎನ್‌ಇಟಿ) ಪಾಸಾದವರಿಗೆ ಅಷ್ಟೇ ಅವಕಾಶ ನೀಡಬೇಕು. ಅದು ಬಿಟ್ಟು ಬೇರೆ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದು `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಹಲವರು ಬೇಸರ ವ್ಯಕ್ತಪಡಿಸಿದರು.ಜಾನಪದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ, ಜಾನಪದ ವಿ.ವಿ. ಹೊರತುಪಡಿಸಿದರೆ ಬೇರೆ ಕಡೆ  ಅವಕಾಶವಿಲ್ಲ. ಹೀಗಾಗಿ ಜಾನಪದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡುವುದು ನ್ಯಾಯೋಚಿತವಾಗಿದೆ. ವಿಶ್ವವಿದ್ಯಾಲಯ ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎಂಬುದು ಅಭ್ಯರ್ಥಿಗಳ ಆಗ್ರಹ.ಜಾನಪದ ಶಾಸ್ತ್ರ, ಜಾನಪದ ಸಾಹಿತ್ಯ, ಜಾನಪದ ಕಲೆ ವಿಷಯಗಳ ಬೋಧಕ ಹುದ್ದೆಗಳಿಗೆ ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜಶಾಸ್ತ್ರ, ಮಾನವಶಾಸ್ತ್ರ ವಿಷಯಗಳನ್ನು ಸಮಾನಾಂತರ ಎಂದು ಪರಿಗಣಿಸಲಾಗಿದೆ. ಇದರಿಂದಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಗಳ ಪ್ರಕಾರ ಜಾನಪದ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಪಿ.ಎಚ್‌ಡಿ, ಎನ್‌ಇಟಿ ಆದವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎಂದರು.ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜಶಾಸ್ತ್ರ, ಮಾನವಶಾಸ್ತ್ರ ವಿಷಯಗಳ ಉಪನ್ಯಾಸಕರ ಆಯ್ಕೆಗೆ ಜಾನಪದವನ್ನು ಎಂದೂ ಪರಿಗಣಿಸಿಲ್ಲ, ಪರಿಗಣಿಸುವ ಸಾಧ್ಯತೆಯೂ ಇಲ್ಲ. ಆದರೆ, ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದವರನ್ನು ಜಾನಪದ ಪಾಠ ಮಾಡಲು ಅರ್ಹರು ಎಂದು ಪರಿಗಣಿಸಿರುವುದರ ಹಿಂದೆ ವಿಶ್ವವಿದ್ಯಾಲಯ ಆಡಳಿತ ವರ್ಗದವರ ವೈಯಕ್ತಿಕ ಹಿತಾಸಕ್ತಿ ಇದ್ದಂತೆ ಕಾಣುತ್ತದೆ ಎಂಬ ಸಂಶಯ ವ್ಯಕ್ತಪಡಿಸಿದರು.ನಿರ್ದಿಷ್ಟವಾಗಿ ತಿಳಿಸಲಿ: ಬಹುಶಿಸ್ತೀಯ ವಿಷಯಗಳು ಎಂದು ಸಾಮಾನ್ಯವಾಗಿ ಹೇಳುವ ಬದಲು ಜಾನಪದ ಕಲೆ, ಸಾಹಿತ್ಯದಲ್ಲಿ ಹಿಂದಿ, ಇಂಗ್ಲಿಷ್, ಕನ್ನಡ, ಸಮಾಜಶಾಸ್ತ್ರ, ಮಾನವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು ಎಂದು ನಿರ್ದಿಷ್ಟವಾಗಿ ತಿಳಿಸಬೇಕು. ಇಲ್ಲದಿದ್ದರೆ ಜಾನಪದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಜಾನಪದ ವಿದ್ವಾಂಸ ಹಿ.ಶಿ ರಾಮಚಂದ್ರೇಗೌಡ ಅಭಿಪ್ರಾಯಪಟ್ಟರು.ಜಾನಪದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಆಳವಾಗಿ ಅಧ್ಯಯನ ಮಾಡಿರುತ್ತಾರೆ. ಆದ್ದರಿಂದ ಮೊದಲ ಆದ್ಯತೆ ಅವರಿಗೆ ನೀಡಬೇಕು. ಇದೊಂದು ಬಹುಶಿಸ್ತೀಯ ಅಧ್ಯಯನ ಆಗಿರುವುದರಿಂದ ಬೇರೆ ವಿಷಯಗಳನ್ನು ಅಧ್ಯಯನ ಮಾಡಿರುವವರೂ ಬೇಕಾಗುತ್ತಾರೆ. ಆದರೆ, ಈ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂಬುದು ಮತ್ತೊಬ್ಬ ವಿದ್ವಾಂಸ ಡಾ.ಕಾಳೇಗೌಡ ನಾಗವಾರ ಅವರ ಅನಿಸಿಕೆ.

`ಆದ್ಯತೆ ನೀಡುತ್ತೇವೆ'

ಜಾನಪದ ಬಹುಶಿಸ್ತೀಯ ಜ್ಞಾನ ಕ್ಷೇತ್ರ. ಇದನ್ನು ಸಾಹಿತ್ಯದ ನೆಲೆಯಿಂದ ಅಷ್ಟೇ ನೋಡಬಾರದು. ಭಾಷೆಗಳ ವಿಷಯದಲ್ಲಿ ಅನನ್ಯವಾದ ಜ್ಞಾನ ಇದ್ದೇ ಇರುತ್ತದೆ. ಜಾನಪದ ವಿಷಯದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಬೇರೆ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಜಾನಪದ ವಿಷಯದಲ್ಲಿ ಪಿ.ಎಚ್‌ಡಿ ಆಗಿರಲೇಬೇಕು.ಜಾನಪದ ವಿ.ವಿ ಸದ್ಯಕ್ಕೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ. ಮುಂದೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಬಹುದು. ಬೇರೆ ಭಾಷೆಗಳಲ್ಲಿ ಜಾನಪದ ಅಧ್ಯಯನ ಮಾಡಿದವರೂ ಬೋಧನಾ ಕ್ಷೇತ್ರಕ್ಕೆ ಬಂದರೆ, ಉತ್ತಮ ಗುಣಮಟ್ಟ ಕಾಪಾಡಬಹುದು ಎಂಬ ಸದುದ್ದೇಶದಿಂದ ಈ ರೀತಿ ಮಾಡಲಾಗಿದೆ.

-ಅಂಬಳಿಕೆ ಹಿರಿಯಣ್ಣ, ಕುಲಪತಿ, ಜಾನಪದ ವಿಶ್ವವಿದ್ಯಾಲಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.