ಆತಂಕದಲ್ಲಿ ಹಿನ್ನೀರು ಗ್ರಾಮಸ್ಥರು

ಶನಿವಾರ, ಜೂಲೈ 20, 2019
28 °C

ಆತಂಕದಲ್ಲಿ ಹಿನ್ನೀರು ಗ್ರಾಮಸ್ಥರು

Published:
Updated:

ನರಸಿಂಹರಾಜಪುರ: ಬಿ.ಆರ್.ಪ್ರಾಜೆಕ್ಟ್‌ನಲ್ಲಿರುವ ಭದ್ರಾ ಅಣೆಕಟ್ಟನ್ನು ಎತ್ತರಿಸುತ್ತಾರೆ ಎಂಬ ವದಂತಿ ವ್ಯಾಪಕವಾಗಿ ಹಬ್ಬಿದ್ದು ಇದರಿಂದ ಗ್ರಾಮಸ್ಥರು ಆತಂಕದ ಸ್ಥಿತಿ ಎದುರಿಸುವಂತಾಗಿದೆ

ಭದ್ರಾ ಅಣೆಕಟ್ಟನ್ನು 5 ಅಡಿ ಎತ್ತರಿಸುತ್ತಾರೆ ಇದರಿಂದಾಗಿ ಎನ್.ಆರ್.ಪುರದ ಭದ್ರಾ ಹಿನ್ನೀರಿನ ವ್ಯಾಪ್ತಿಯ ಇನ್ನಷ್ಟು ಗ್ರಾಮ ಮತ್ತು ತೋಟಗಳು ಮುಳುಗಡೆಯಾಗುತ್ತದೆ ಎಂಬ ವದಂತಿ ಗ್ರಾಮಗಳಲ್ಲಿ ಹಬ್ಬಿದೆ ಎಂದು ಸಾಕಷ್ಟು ಗ್ರಾಮಸ್ಥರು  ಪ್ರಜಾವಾಣಿಗೆ ದೂರವಾಣಿ ಮೂಲಕ ತಿಳಿಸಿದರು.

ಕಳೆದೊಂದು ತಿಂಗಳ ಹಿಂದೆ ಭದ್ರಾ ಹಿನ್ನೀರಿನ ವ್ಯಾಪ್ತಿಯಲ್ಲಿ ದೆಹಲಿ ಮೂಲದ ಕಂಪೆನಿಯೊಂದು ಸರ್ವೆ ಕಾರ್ಯ ನಡೆಸಿತ್ತು. ಆ ಸಂದರ್ಭದಲ್ಲಿ ಪ್ರಜಾವಾಣಿ ಸಂಬಂಧಪಟ್ಟ ಕಂಪೆನಿ ಸಂಪರ್ಕಿಸಿದಾಗ ಹಿಂದೆ ಎಷ್ಟು ಪ್ರಮಾಣದಲ್ಲಿ ಹಿನ್ನೀರು ನಿಲ್ಲುತ್ತಿತ್ತು, ಎಷ್ಟು ಪ್ರಮಾಣದಲ್ಲಿ ಹೂಳು ತುಂಬಿ ಕೊಂಡಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದ್ದರು. ಆದರೆ ಪ್ರಸ್ತುತ ಪುನ: ಹಲವು ಗ್ರಾಮಗಳಲ್ಲಿ ಭದ್ರಾಅಣೆಕಟ್ಟನ್ನು ಎತ್ತರಿಸುತ್ತಾರೆ ಎಂಬ ವದಂತಿ ವ್ಯಾಪಕವಾಗಿ ಹಬ್ಬಿದೆ.

ಈ ಬಗ್ಗೆ ಪ್ರಜಾವಾಣಿ ಶಾಸಕ ಡಿ.ಎನ್.ಜೀವರಾಜ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಭದ್ರಾ ಅಣೆಕಟ್ಟನ್ನು ಎತ್ತರಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಇದನ್ನು ಎತ್ತರಿಸಬಾರದು ಎಂಬ ಕಾರಣಕ್ಕಾಗಿಯೇ ತುಂಗಾನದಿಯಿಂದ ಭದ್ರಾ ನದಿಗೆ ನೀರು ಹರಿಸುವ ತುಂಗಾ ತಿರುವು ಯೋಜನೆ ಕೈಗೊಳ್ಳಲಾಗುತ್ತಿದೆ ಎಂದರು.

ಭದ್ರಾಹಿನ್ನೀರಿನ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆದ ಬಗ್ಗೆ ಗಮನ ಸೆಳೆದಾಗ ಎಲ್ಲಾ ಜಲಾಶಯಗಳ ಹಿನ್ನೀರಿನ ವ್ಯಾಪ್ತಿಯಲ್ಲೂ ಎಷ್ಟು ಹೂಳು ತುಂಬಿ ಕೊಂಡಿದೆ.ಜಲಾಶಯಗಳ ನೀರಿನ ಸಂಗ್ರಹ ಸಾಮರ್ಥ್ಯ ಹಿಂದೆ ಎಷ್ಟಿತ್ತು, ಈಗ ಎಷ್ಟಿದೆ ಎಂಬುದರ ಬಗ್ಗೆ ಸಮೀಕ್ಷೆ ನಡೆದಿದ್ದೂ ಅದೇ ರೀತಿ ಸಮೀಕ್ಷೆ ಇಲ್ಲೂ ನಡೆದಿದೆ. ಜನರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.

ತಹಸೀಲ್ದಾರ್ ಎಚ್.ಜಯ ಅವರನ್ನು ಮಾತನಾಡಿಸಿದಾಗಲೂ ಭದ್ರಾ ಅಣೆಕಟ್ಟನ್ನು ಎತ್ತರಿಸುವ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry