ಮಂಗಳವಾರ, ಮೇ 18, 2021
23 °C
ರೂಪಾಯಿ ಅಪಮೌಲ್ಯ ತಡೆಯಲು ಆರ್‌ಬಿಐ ಮಧ್ಯಪ್ರವೇಶ ಸಾಧ್ಯತೆ

ಆತಂಕ ಬೇಡ: ಚಿದಂಬರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆತಂಕ ಬೇಡ: ಚಿದಂಬರಂ

ನವದೆಹಲಿ (ಪಿಟಿಐ): ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿಯುತ್ತಿರುವ ಕುರಿತು ಆತಂಕಪಡುವ ಅಗತ್ಯವಿಲ್ಲ. ಅಗತ್ಯ ಕಂಡುಬಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಪಮೌಲ್ಯ ತಪ್ಪಿಸಲು ಮಧ್ಯಪ್ರವೇಶ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.ನಮ್ಮಲ್ಲಿ ಅತ್ಯುತ್ತಮ ಹಣಕಾಸು ಸಲಹೆಗಾರರಿದ್ದಾರೆ. ಹಣಕಾಸು ಸಚಿವಾಲಯ ಸಹ ರೂಪಾಯಿ ಅಪಮೌಲ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಗತ್ಯ ಕಂಡುಬಂದರೆ           `ಆರ್‌ಬಿಐ' ಕೂಡ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.`ನನ್ನ ಮನವಿ ಏನೆಂದರೆ ನೀವು (ಮಾಧ್ಯಮದವರು) ರೂಪಾಯಿ ಅಪಮೌಲ್ಯದ ಕುರಿತು ಇನ್ನಷ್ಟು ಆತಂಕ ಸೃಷ್ಟಿಸುವುದು ಬೇಡ. ಅಮೆರಿಕದ ಸೆಂಟ್ರಲ್ ಬ್ಯಾಂಕ್ ಇತ್ತೀಚೆಗೆ ಕೈಗೊಂಡ ಕೆಲವು ಕ್ರಮಗಳಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಇತರೆ ದೇಶಗಳ ಕರೆನ್ಸಿ ಮೌಲ್ಯವೂ ಕುಸಿಯುತ್ತಿದೆ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಶುಕ್ರವಾರ ವಹಿವಾಟಿನ ಒಂದು ಹಂತದಲ್ಲಿ ರೂಪಾಯಿ ಮೌಲ್ಯ ಸಾರ್ವಕಾಲಿಕ ದಾಖಲೆ ಮಟ್ಟವಾದ ್ಙ59.98ಕ್ಕೆ ಕುಸಿಯಿತು. ನಿರಂತರ ಕುಸಿತ ಕಳವಳಕಾರಿ ಸಂಗತಿ. ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.ಭಾರತವೂ ಸೇರಿದಂತೆ ಇತರೆ ದೇಶಗಳಲ್ಲಿ ಕರೆನ್ಸಿ ಮೌಲ್ಯ ತೀವ್ರವಾಗಿ ಕುಸಿಯುತ್ತಿರುವ ಕುರಿತು ಅಮೆರಿಕದ ಸೆಂಟ್ರಲ್ ಬ್ಯಾಂಕ್ ಕಳವಳ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ, ಮುಂದಿನ ವರ್ಷದಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಿಗೆ ನೀಡುತ್ತಿರುವ ಹಣಕಾಸು ಉತ್ತೇಜನ ಕೊಡುಗೆಗಳನ್ನು ಕಡಿತ ಮಾಡುವುದಾಗಿ ಫೆಡರಲ್ ರಿಸರ್ವ್‌ನ ಅಧ್ಯಕ್ಷ ಬೆನ್ ಬೆರ್ನೆಕ್ ನೀಡಿರುವ ಹೇಳಿಕೆ ದೇಶೀಯ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಸ್ಥಿರತೆ ಸೃಷ್ಟಿಸಿದೆ. ಬರ್ನೆಕ್ ಹೇಳಿಕೆ ಅಪಾರ್ಥದಿಂದ ಕೂಡಿದೆ ಎಂದು ಚಿದಂಬರಂ ಪ್ರತಿಕ್ರಿಯಿಸಿದ್ದಾರೆ.ಅಗತ್ಯ ಕ್ರಮ-ಆರ್‌ಬಿಐ

ರೂಪಾಯಿ ಅಪಮೌಲ್ಯ ತಪ್ಪಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ.

`ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ ಮತ್ತು ಅಪಮೌಲ್ಯದ ಮೇಲೆ ನಿಗಾ ವಹಿಸುತ್ತಿದ್ದೇವೆ' ಎಂದು  `ಆರ್‌ಬಿಐ' ಡೆಪ್ಯುಟಿ ಗವರ್ನರ್ ಎಚ್.ಆರ್. ಖಾನ್ ಶುಕ್ರವಾರ ಇಲ್ಲಿ  ನಡೆದ ರಾಷ್ಟ್ರೀಯ ಪಾವತಿ ನಿಗಮದ (ಎನ್‌ಪಿಸಿಐ) ಕಾರ್ಯಕ್ರಮದಲ್ಲಿ ಹೇಳಿದರು.ಅಮೆರಿಕದ ಸೆಂಟ್ರಲ್ ಬ್ಯಾಂಕ್ ಕ್ರಮದಿಂದ ಮೇ ತಿಂಗಳ ಮೊದಲ ವಾರದಲ್ಲಿ ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಶೇ 8ರಷ್ಟು ಕುಸಿತ ಕಂಡಿದೆ. ಆಮದುದಾರಿಂದ ಡಾಲರ್ ಬೇಡಿಕೆ ಹೆಚ್ಚುತ್ತಿರುವುದು ಮತ್ತು ಮುಖ್ಯವಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ದೊಡ್ಡ ಪ್ರಮಾಣದಲ್ಲಿ ಷೇರುಪೇಟೆಯಿಂದ ಬಂಡವಾಳ ವಾಪಾಸ್ ಪಡೆಯುತ್ತಿರುವುದು ರೂಪಾಯಿ ಮೌಲ್ಯ ನಿರಂತರ ಕುಸಿಯುವಂತೆ ಮಾಡಿವೆ ಎಂದರು.`ಎನ್‌ಆರ್‌ಐ' ಬಾಂಡ್ ಬಳಸಿ ರೂಪಾಯಿ ಅಪಮೌಲ್ಯ ತಪ್ಪಿಸಬಹುದೇ ಎಂಬ ವರದಿಗಾರರ ಪ್ರಶ್ನೆಗೆ, ಆರ್‌ಬಿಐ ಅಗತ್ಯಕ್ಕೆ ತಕ್ಕಂತೆ ಅಲ್ಪಾವಧಿ, ಮಧ್ಯಮ ಮತ್ತು ದೀರ್ಘಾವಧಿ  ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಖಾನ್ ಹೇಳಿದರು.ಸೂಚ್ಯಂಕ ಚೇತರಿಕೆ

ಮುಂಬೈ (ಪಿಟಿಐ): ಶುಕ್ರವಾರದ ವಹಿವಾಟಿನಲ್ಲಿ ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ 55 ಅಂಶಗಳಷ್ಟು ಚೇತರಿಕೆ ಕಂಡಿದ್ದು 18,774 ಅಂಶಗಳಿಗೆ ಏರಿಕೆ ಕಂಡಿದೆ.

`ರೂಪಾಯಿ ಅಪಮೌಲ್ಯದ ಕುರಿತು ಆತಂಕ ಪಡುವ ಅಗತ್ಯ ಇಲ್ಲ' ಎಂಬ ಹಣಕಾಸು ಸಚಿವರ ಹೇಳಿಕೆಯಿಂದ ಮಧ್ಯಾಹ್ನದ ನಂತರ ಷೇರುಪೇಟೆಯಲ್ಲಿ ವಹಿವಾಟು ಚುರುಕುಗೊಂಡಿತು. ವಾಹನ ಉದ್ಯಮ, ತೈಲ ಶುದ್ಧೀಕರಣ ಮತ್ತು ಇಂಧನ ವಲಯದ ಷೇರುಗಳು  ಲಾಭ ಮಾಡಿಕೊಂಡವು. ಮಾರಾಟದ ಒತ್ತಡದಿಂದ ರಿಯಲ್ ಎಸ್ಟೇಟ್ ಕಂಪೆನಿಗಳ ಷೇರು ಮೌಲ್ಯ ಕುಸಿತ ಕಂಡಿತು.ರಾಷ್ಟ್ರೀಯ ಸೂಚ್ಯಂಕ `ನಿಫ್ಟಿ' ಕೂಡ 12 ಅಂಶಗಳಷ್ಟು ಜಿಗಿತ ಕಂಡು 5,667 ಅಂಶಗಳಿಗೆ ವಾರಾಂತ್ಯದ ವಹಿವಾಟು ಕೊನೆಗೊಳಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.