ಆತಂಕ ಮೂಡಿಸಿದ ಮಂಗನ ಕಾಯಿಲೆ

7

ಆತಂಕ ಮೂಡಿಸಿದ ಮಂಗನ ಕಾಯಿಲೆ

Published:
Updated:

ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ): ತಾಲ್ಲೂಕಿನಲ್ಲಿ ಮಂಗನ ಕಾಯಿಲೆ ಭೀತಿಯಿಂದ ಬಳಲುತ್ತಿರುವ ಕೋಣಂದೂರು ಭಾಗದ ಜನರು ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ತೀರ್ಥಹಳ್ಳಿಯ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ.ಆಸ್ಪತ್ರೆಗೆ ಶನಿವಾರ ಸುಮಾರು 30-40 ಜನರು ಬಂದು ವೈದ್ಯರ ಸಲಹೆ ಪಡೆದಿದ್ದಾರೆ. ಮಂಗನ ಕಾಯಿಲೆ ಜೊತೆಗೆ ಇತರೆ ಕಾರಣಗಳಿಂದ ಬಾಧಿಸುವ ಜ್ವರದಿಂದ ನಲುಗಿ ಹೋಗಿರುವ ಈ ಭಾಗದ ಜನರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.ಮಂಗನ ಕಾಯಿಲೆಯಿಂದ ಈಗಾಗಲೇ ಒಬ್ಬರು ಮೃತಪಟ್ಟಿದ್ದಾರೆ. 10-20 ವರ್ಷಗಳಿಂದ ಬೇಸಿಗೆ ಸಮಯದಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆ ತಾಲ್ಲೂಕಿನ ಒಂದಲ್ಲಾ ಒಂದು ಭಾಗದಲ್ಲಿ ಗೋಚರಿಸುತ್ತದೆ.ಕಳೆದ ವರ್ಷ ಮಂಡಗದ್ದೆ ಭಾಗದ ಇರುವತ್ತಿ, ಹಳಗ, ಕುಳುಂಡೆ, ಮಾರುಕೈ, ಹಿಂಗನಬಿದಿರೆ, ತೋಟದಕೊಪ್ಪ ಭಾಗದಲ್ಲಿ ಕಾಣಿಸಿತ್ತು. ನಾಲ್ಕು ವರ್ಷದ ಹಿಂದೆ ತೇಜವಳ್ಳಿಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಿಬ್ಬಣಗದ್ದೆ, ಮಹಿಷಿ, ಉದಯಪುರ, ಹೆಗ್ಗಾರು, ಕೂಡಿಗಿ, ಹಮ್ತಿ ಮುಂತಾದ ಕಡೆಗಳಲ್ಲಿ ಸಹ ಈ ರೋಗ ಕಾಣಿಸಿತ್ತು.ಕೋಣಂದೂರು ಭಾಗದ ದೇಮಲಾಪುರ, ಹುಂಚದಟ್ಟೆ ಗ್ರಾಮ ಪಂಚಾಯ್ತಿ ಭಾಗದ ಅನೇಕ ಹಳ್ಳಿಗಳಲ್ಲಿ ಈ ಬಾರಿ ಕಾಯಿಲೆ ಉಲ್ಬಣಿಸಿದ್ದು, ಅದು ಬಾರದಂತೆ ತಡೆಗಟ್ಟಲು ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ, ರೋಗ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.ಕೋಣಂದೂರು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದರಿಂದ ತಕ್ಷಣ ವೈದ್ಯರನ್ನು ನೇಮಿಸುವಂತೆ  ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತುರ್ತು ಸರ್ವ ಸದಸ್ಯರ ಸಭೆಯಲ್ಲಿ ಒತ್ತಾಯಿಸಲಾಯಿತು.ಈಗಾಗಲೇ ಕೋಣಂದೂರು ಭಾಗದ ಹಳ್ಳಿಗಳಲ್ಲಿ ತುರ್ತು ಆರೋಗ್ಯ ಸೇವೆ ಒದಗಿಸಲು ಮೊಬೈಲ್ ಘಟಕ ಕಾರ್ಯ ನಿರ್ವಹಿಸುತ್ತಿದೆ. ನಾಲ್ಕು ಮಂದಿಯಲ್ಲಿ ಈ ರೋಗ ಇರುವುದು ಪತ್ತೆಯಾಗಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. 20 ಮಂದಿ ರಕ್ತ ಮಾದರಿ ಪರೀಕ್ಷೆಗೆ  ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅವರಲ್ಲಿ ಆರು ಮಂದಿಗೆ ಮಂಗನ ಕಾಯಿಲೆ ಇಲ್ಲವೆಂದು ದೃಢಪಟ್ಟಿದೆ. ಉಳಿದ ಮಾದರಿಗಳ ಫಲಿತಾಂಶ ಬರಬೇಕಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಕಿರಣ್ ತಿಳಿಸಿದ್ದಾರೆ.ವೈದ್ಯರ ತಂಡ ಭೇಟಿ: ಪರಮಾಣು ಕ್ರಿಮಿ ಸಂಶೋಧನಾ ಪ್ರಯೋಗಾಲಯದ ಉಪ ನಿರ್ದೇಶಕರನ್ನು ಒಳಗೊಂಡ ವೈದ್ಯಾಧಿಕಾರಿಗಳ ತಂಡ ಮಂಗನ ಕಾಯಿಲೆಯಿಂದ ಮರಣ ಹೊಂದಿದ ಚಿಕ್ಕಲ್ಲಳ್ಳಿಯ ಶೇಖರಪ್ಪ ಮಾಸ್ತಿನಾಯ್ಕ ಅವರ ಮನೆ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚನ್ನಬಸಪ್ಪ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry