ಆತಂಕ ಸೃಷ್ಟಿಸಿದ ಸೂಟ್‌ಕೇಸ್

7

ಆತಂಕ ಸೃಷ್ಟಿಸಿದ ಸೂಟ್‌ಕೇಸ್

Published:
Updated:

ಇಳಕಲ್: ನಗರದ ಬಸ್ ನಿಲ್ದಾಣದ ಮೂತ್ರಾಲಯದಲ್ಲಿ ಭಾನುವಾರ ಬೆಳಿಗ್ಗೆ ಅನಾಮಧೇಯ ಸೂಟ್‌ಕೇಸ್‌ವೊಂದು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆಯಿತು.ಮೂತ್ರ ವಿಸರ್ಜನೆಗೆ ತೆರಳಿದ್ದ ಬಸ್ ನಿಲ್ದಾಣದ ಸಿಬ್ಬಂದಿಯೊಬ್ಬರು ಸೂಟ್‌ಕೇಸ್ ಕಂಡು ಗಾಬರಿಯಾಗಿ ಸಾರಿಗೆ ನಿಯಂತ್ರಕರಿಗೆ ಹಾಗೂ ಘಟಕ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದರು.ವಿಷಯ ತಿಳಿದ ಪ್ರಯಾಣಿಕರು ಸಹ ಸೂಟ್‌ಕೇಸ್ ನೋಡಲು ಕುತೂಹಲದಿಂದ ಮೂತ್ರಾಲಯದ ಸುತ್ತ ನೆರೆದರು. ಸೂಟ್‌ಕೇಸ್ ಒಳಗಿರುವ ವಸ್ತುಗಳನ್ನು ಕಲ್ಪನೆ ಮಾಡಿಕೊಂಡು ಒಬ್ಬೊಬ್ಬರೂ ಒಂದೊಂದು ರೀತಿ ಮಾತನಾಡಿದರು. ಕೆಲವರು ಸೂಟ್‌ಕೇಸ್ ಒಳಗೆ ಬಾಂಬ್ ಇದ್ದಿರಬಹುದೆಂಬ ಶಂಕೆಯನ್ನೂ ವ್ಯಕ್ತಪಡಿಸಿದರು.ಸ್ಥಳಕ್ಕೆ ಆಗಮಿಸಿದ ಪೊಲೀಸರೂ ಸಹ ಆತಂಕದಿಂದಲೇ ಸೂಟ್‌ಕೇಸ್ ಎತ್ತಿಕೊಂಡು ಹೊರಗೆ ಕಲ್ಲಿನ ರಾಶಿಯ ಮೇಲೆ ಇಟ್ಟರು. ಪೊಲೀಸ್ ಅಧಿಕಾರಿಗಳು ಬಂದ ನಂತರ ಸೂಟ್‌ಕೇಸ್ ತೆರೆದಾಗ ಖಾಲಿ ಇತ್ತು. ನಂತರವೇ ಎಲ್ಲರೂ ನಿಟ್ಟುಸಿರು ಬಿಟ್ಟರು. ಆದರೆ ಈ ನಡುವೆ ಸುಮಾರು ಎರಡು ತಾಸು ಕಾಲ ಆತಂಕದ ಅಸಂಗತ ಪ್ರಹಸನ ನಡೆದಿತ್ತು.ಕಳ್ಳರು ಸೂಟ್‌ಕೇಸ್ ಕದ್ದು, ಅದರೊಳಗೆ ಇದ್ದ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಖಾಲಿ ಸೂಟ್‌ಕೇಸನ್ನು ಮೂತ್ರಾಲಯದಲ್ಲಿ ಇಟ್ಟು ಹೋಗಿದ್ದಾರೆ. ಅನಾಮಧೇಯ ಸೂಟ್‌ಕೇಸ್ ಆತಂಕದ ವಾತಾವರಣ ನಿರ್ಮಿಸಿತ್ತು ಎಂದು ಪೊಲೀಸರು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry