ಗುರುವಾರ , ಫೆಬ್ರವರಿ 25, 2021
30 °C

ಆತಂಕ ಹೆಚ್ಚಿಸುವ ‘ಲ್ಯಾಟರಲ್ ಸೆಪ್ಟಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆತಂಕ ಹೆಚ್ಚಿಸುವ ‘ಲ್ಯಾಟರಲ್ ಸೆಪ್ಟಂ’

ಆತಂಕ ಅಥವಾ ಭಯಕ್ಕಿಂತ ದೊಡ್ಡ ಶತ್ರು ಮತ್ತೊಂದಿಲ್ಲ. ಇದು ಮನೋರೋಗದ ಒಂದು ಪ್ರಮುಖ ಲಕ್ಷಣ. ಈ ರೋಗಕ್ಕೆ ತುತ್ತಾಗುವ ವ್ಯಕ್ತಿ ಸದಾ ನಕಾರಾತ್ಮಕ ಯೋಚನೆಗಳನ್ನೇ ಮಾಡುತ್ತಿರುತ್ತಾನೆ.

ಆತಂಕ ಅಥವಾ ಭಯ ಮನುಷ್ಯ ಸಹಜ. ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಸಹಜವಾಗಿ ಒಂದು ರೀತಿಯ ಆತಂಕ. ಪ್ರಶ್ನೆಗೆ ಉತ್ತರ ಹೊಳೆಯದಿದ್ದಾಗ ಆತಂಕ ಮತ್ತಷ್ಟು ಹೆಚ್ಚುತ್ತದೆ. ಆಗ ಗೊತ್ತಿರುವ ಪ್ರಶ್ನೆಗಳಿಗೂ ಉತ್ತರಿಸಲಾಗದೆ ಪರದಾಡುತ್ತಾರೆ. ಪರೀಕ್ಷಾ ಕೊಠಡಿಯಿಂದ ಹೊರಬಂದ ಮೇಲೆ ಮರೆತ ಪ್ರಶ್ನೆಗಳೆಲ್ಲವೂ ನೆನಪಾಗುತ್ತವೆ.ಇಂತಹ ಆತಂಕ ಪ್ರತಿಯೊಬ್ಬರಲ್ಲೂ ಇರುತ್ತದೆ. ಸಂದರ್ಶನ ಎದುರಿಸುವಾಗ,  ಭವಿಷ್ಯದ ಬಗ್ಗೆ ಚಿಂತಿಸುವಾಗ ಹೀಗೆ ಇನ್ನೂ ಅನೇಕ ವಿಧದಲ್ಲಿ... ಆತಂಕ ಕಾಡುತ್ತದೆ. ಆದರೆ ಇದೇ ಆತಂಕ ಕೆಲವೊಮ್ಮೆ ವಿಪರೀತವಾಗಿ ಮನೋರೋಗವಾಗುವ ಸಾಧ್ಯತೆಗಳಿವೆ.

ಆತ್ಮವಿಶ್ವಾಸದ ಕೊರತೆ, ಕೀಳರಿಮೆ ಈ ಮನೋರೋಗಕ್ಕೆ ಮುಖ ಕಾರಣ. ಈ ಆತಂಕ ಅಥವಾ ಖಿನ್ನತೆ ನಮ್ಮ ಮೆದುಳಿನಲ್ಲಿ ಹೇಗೆ  ಉತ್ಪತ್ತಿಯಾಗುತ್ತದೆ ಎಂಬುದನ್ನು ತಿಳಿಯಲು ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆ (ಕ್ಯಾಲ್‌ಟೆಕ್) ಅಧ್ಯಯನ ಕೈಗೊಂಡಿದೆ.ಜೀವಿಗಳ ಮೆದುಳಿನಲ್ಲಿ ಲ್ಯಾಟರಲ್ ಸೆಪ್ಟಂ  (ಭಾವನೆಗಳು ಮತ್ತು ಒತ್ತಡಕ್ಕೆ ಪ್ರತಿಸ್ಪಂದಿಸುವ ಭಾಗ) ಎಂಬ ಭಾಗವಿದೆ. ಇದು ಭಾವನೆಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಈ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಸಂಶೋಧಕರು  ಇಲಿಯನ್ನು ಪ್ರಯೋಗಕ್ಕೆ ಬಳಸಿಕೊಂಡಿದ್ದಾರೆ.ಮೆದುಳಿನ ‘ಲ್ಯಾಟರಲ್ ಸೆಪ್ಟಂ’  ಭಾಗಕ್ಕೆ ಸಂಪರ್ಕ ಕಲ್ಪಿಸುವ ನರಮಂಡಲವು ಆತಂಕ ಹುಟ್ಟಿಸುತ್ತದೆ ಎಂಬ ಅಂಶ ಪ್ರಯೋಗದಿಂದ ತಿಳಿದುಬಂದಿದೆ ಎನ್ನುತ್ತಾರೆ ಸಂಸ್ಥೆಯ ಜೀವಶಾಸ್ತ್ರಜ್ಞ ಡೇವಿಡ್ ಆ್ಯಂಡರ್ಸನ್.ಈ ಲ್ಯಾಟರಲ್ ಸೆಪ್ಟಂ ನರಕೋಶಗಳು ಬೇರೆ ನರಕೋಶಗಳು ಕೆಲಸ ಮಾಡದಂತೆ ಪ್ರತಿಬಂಧಕ ನರಕೋಶಗಳಾಗಿವೆ. ಹೀಗಾಗಿ ಆತಂಕ ಹೆಚ್ಚಾಗುತ್ತಿದ್ದಂತೆಯೇ ನಮಗೆ ಬೇರೆ ಏನನ್ನೂ ಯೋಚಿಸಲು ಆಗದೆ, ನೆನಪಿರುವ ಅಂಶಗಳೂ ಮರೆತುಹೋಗುತ್ತವೆ.

ಆಶ್ಚರ್ಯ ಪಡುವ ಸಂಗತಿ ಎಂದರೆ, ಲೆಕ್ಟರಲ್ ಸೆಪ್ಟಂ ಕೋಶವು ಆತಂಕವನ್ನು ನಿಯಂತ್ರಿಸುವ ಬದಲು ಹೆಚ್ಚಿಸುತ್ತದೆ ಎನ್ನುತ್ತಾರೆ ಡೇವಿಡ್.ಮೆದುಳಿನ ಲ್ಯಾಟರಲ್ ಸೆಪ್ಟಂ ಭಾಗದ ನಿರ್ದಿಷ್ಟ ಕಾರ್ಯವೈಖರಿ ಅರಿತುಕೊಂಡರೆ ಮಾನಸಿಕ ಅಸ್ವಸ್ಥರಿಗೆ ಸುಲಭವಾಗಿ ಚಿಕಿತ್ಸೆ ನೀಡಬಹುದು. ಈ ನಿಟ್ಟಿನಲ್ಲಿ ಆತಂಕವನ್ನು ನಿಯಂತ್ರಿಸಲು ಮೆದುಳಿನ ಲ್ಯಾಟರಲ್ ಸೆಪ್ಟಂ ಹೇಗೆ ಉಪಯುಕ್ತವಾಗಲಿದೆ ಎಂಬ ಬಗ್ಗೆ  ಸಂಶೋಧನಾ ತಂಡ ವಿಸ್ತೃತವಾದ ಅಧ್ಯಯನ ನಡೆಸುತ್ತಿದೆ.ಲ್ಯಾಟರಲ್ ಸೆಪ್ಟಂ ನರಕೋಶಗಳು ಮೆದುಳನ್ನು ಸಂಪರ್ಕಿಸುವ ಸ್ಥಳವಾದ ಕೆಳಮಿದುಳು ಕುಳಿಯಲ್ಲಿ (ದೇಹದ ಉಷ್ಣತೆ, ಹಸಿವು, ಬಾಯಾರಿಕೆ ನಿಯಂತ್ರಿಸುವ ಅಂಗ) ಬೇರೆ ನರಕೋಶಗಳಿಗೆ ಅಡ್ಡಿಮಾಡುತ್ತವೆ.ಈ ಕೋಶಗಳು ಉದ್ವೇಗದ ಮೇಲೆ ಧನಾತ್ಮಕ ಅಥವಾ ರುಣಾತ್ಮಕ ಪರಿಣಾ ಬೀರುತ್ತದೆಯೇ ಎಂಬುದನ್ನು ಪತ್ತೆ ಮಾಡುವುದು ಕಷ್ಟ. ಅಲ್ಲದೆ ಈ ಕೋಶಗಳನ್ನು ನಿರ್ವಹಿಸಲು ಯಾವ ಔಷಧಿ ಉತ್ಪಾದಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಒಂದೊಮ್ಮೆ ಈ ಅಧ್ಯಯನ ಯಶಸ್ವಿಯಾದಲ್ಲಿ ಮಾನಸಿಕ ಅಸ್ವಸ್ಥತೆಗೆ  ಹೊಸ ಚಿಕಿತ್ಸಾ ವ್ಯವಸ್ಥೆ ಅಭಿವೃದ್ಧಿಪಡಿಸಬಹುದು.ಕಳೆದ 40ರಿಂದ 50 ವರ್ಷಗಳಲ್ಲಿ ಮನೋರೋಗಕ್ಕೆ ಕೆಲವೇ ಕೆಲವು ಔಷಧಿಗಳನ್ನು ಕಂಡುಹಿಡಿಯಲಾಗಿದೆ. ಇದರಿಂದಾಗಿ ಖಿನ್ನತೆ ಅಥವಾ ಆತಂಕದಂತಹ ಭಾವನೆಗಳನ್ನು ನಿಯಂತ್ರಿಸುವ ಮೆದುಳಿನ ನರಕೋಶಗಳು ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳಲಾಗಿಲ್ಲ ಎನ್ನುವುದು ಡೇವಿಡ್ ಅಭಿಪ್ರಾಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.