ಸೋಮವಾರ, ಏಪ್ರಿಲ್ 12, 2021
32 °C

ಆತಿಥೇಯರಿಂದ ಪ್ರಬಲ ಸ್ಪರ್ಧೆ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆತಿಥೇಯರಿಂದ ಪ್ರಬಲ ಸ್ಪರ್ಧೆ ನಿರೀಕ್ಷೆ

ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಧ್ಯಾನದಲ್ಲಿರವ ಉದ್ಯಾನ ನಗರಿಯ ಜನರು ಒಂದಿಷ್ಟು ಬಿಡುವು ಮಾಡಿಕೊಂಡು ವೇಟ್‌ಲಿಫ್ಟಿಂಗ್ ಸ್ಪರ್ಧಿಗಳ ತಾಕತ್ತು ನೋಡುವ ಅವಕಾಶ! ಬುಧವಾರ ಆರಂಭವಾಗಲಿರುವ 63ನೇ ಪುರುಷರ ಹಾಗೂ 26ನೇ ಮಹಿಳೆಯರ ರಾಷ್ಟ್ರೀಯ ಸೀನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನತ್ತ ಚಿತ್ತವನ್ನು ಹರಿಸಿದರೆ ಅಲ್ಲಿಯೂ ಪ್ರಬಲ ಸ್ಪರ್ಧೆ ನೋಡಿದ ಸಂತಸ ಸಿಗಲಿದೆ.ಕರ್ನಾಟಕ ರಾಜ್ಯ ವೇಟ್‌ಲಿಫ್ಟರ್ಸ್‌ ಸಂಸ್ಥೆಯು (ಕೆಎಸ್‌ಡಬ್ಲ್ಯುಎ) ಆಯೋಜಿಸಿರುವ ಚಾಂಪಿಯನ್‌ಷಿಪ್ ಹನ್ನೆರಡು ವರ್ಷಗಳನಂತರ ಬೆಂಗಳೂರಿನಲ್ಲಿ ಮಾರ್ಚ್ 23ರಿಂದ 27ರ ವರೆಗೆ ನಡೆಯಲಿದೆ. ಇದಕ್ಕಾಗಿ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣ ಸ್ಪರ್ಧಿಗಳ ಪೈಪೋಟಿಗೆ ಸಾಕ್ಷಿಯಾಗಲು ಸಜ್ಜುಗೊಂಡಿದೆ. ಪುಷ್ಪರಾಜ್ ಹೆಗ್ಡೆ, ಶ್ಯಾಮಲಾ ಶೆಟ್ಟಿ, ಸತೀಶ್ ರೈ, ಎಂ.ಸಂದೀಪ್, ಸುಧೀರ್ ಕುಮಾರ್, ಜಿ. ಲಕ್ಷ್ಮೀ, ಚಂದ್ರಾ ಶೌರಿದೇವಿ, ಅರ್ಥರ್ ಡಿಸೋಜಾ ಸೇರಿದಂತೆ  ಹಲವಾರು ಸ್ಪರ್ಧಿಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ ಕರ್ನಾಟಕದ ಸ್ಪರ್ಧಿಗಳು ಕೂಡಾ ಈ ಚಾಂಪಿಯನ್‌ಷಿಪ್‌ನಲ್ಲಿ ಪ್ರಬಲ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ.ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಕೆ. ರವಿ ಕುಮಾರ್, ಶರಬ್‌ಜಿತ್ ಖಾಂಡಾ ಕೂಡಾ ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. 136 ಪುರುಷ,  85 ಮಹಿಳಾ ಸ್ಪರ್ಧಿಗಳು, ದೇಶದ ವಿವಿಧ ರಾಜ್ಯಗಳ ಸ್ಪರ್ಧಿಗಳು ತಮ್ಮ ಸಾಮರ್ಥ್ಯವನ್ನು ಈ ಚಾಂಪಿಯನ್‌ಷಿಪ್‌ನಲ್ಲಿ  ಪ್ರದರ್ಶಿಸಲಿದ್ದಾರೆ. ಪುರುಷರಿಗಾಗಿ 8 ವಿಭಾಗ ಹಾಗೂ ಮಹಿಳೆಯರಿಗಾಗಿ 7 ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. 67 ತಂಡದ ಅಧಿಕಾರಿಗಳು, 50 ತಾಂತ್ರಿಕ ಅಧಿಕಾರಿಗಳು ಸಹ ಭಾಗವಹಿಸಲಿದ್ದಾರೆ.ಕಳೆದ ವರ್ಷ ಪುಣೆಯಲ್ಲಿ ನಡೆದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಉದಯ್‌ಪುರ್ ಹಾಗೂ ಸರ್ವಿಸಸ್ ತಂಡಗಳು ಮಹಿಳೆಯರ ವಿಭಾಗದಲ್ಲಿ ಮಣಿಪುರ ರಾಜ್ಯದ ತಂಡಗಳು ಪಾರಮ್ಯ ಮೆರೆದಿದ್ದವು. ಈ ಸಲದ ಚಾಂಪಿಯನ್‌ಷಿಪ್‌ನಲ್ಲಿ ಈ ತಂಡಗಳು ಪ್ರಬಲ ಹೋರಾಟ ತೋರುವ ನಿರೀಕ್ಷೆಯಿದೆ. ‘ಚಾಂಪಿಯನ್‌ಷಿಪ್ ಸುಸೂತ್ರವಾಗಿ ನಡೆಯಬೇಕು ಎನ್ನುವ ಉದ್ದೇಶದಿಂದ ಉನ್ನತ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದೆ.ಎಲೆಕ್ಟ್ರಾನಿಕ್ ಲೈಟಿಂಗ್ ವ್ಯವಸ್ಥೆ, ಅಂತರರಾಷ್ಟ್ರೀಯ ಮಟ್ಟದ ಬಾರ್ಬೆಲ್ ಸೆಟ್ ಮತ್ತು ಪ್ಲಾಟ್‌ಫಾರ್ಮ್ ವ್ಯವಸ್ಥೆಯನ್ನು ಕೂಡಾ ಮಾಡಿದೆ’ ಎಂದು ಕೆಎಸ್‌ಡಬ್ಲ್ಯುಎ ಗೌರವ ಕಾರ್ಯದರ್ಶಿ ಡಿ. ಚಂದ್ರಹಾಸ್ ರೈ ‘ಪ್ರಜಾವಾಣಿ’ಗೆ ತಿಳಿಸಿದರು. ಉದ್ಘಾಟನಾ ಸಮಾರಂಭವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಸುರೇಶ್ ಕುಮಾರ್ ನೆರವೇರಿಸಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.