ಸೋಮವಾರ, ಮೇ 10, 2021
22 °C
ಚಾಂಪಿಯನ್ಸ್ ಟ್ರೋಫಿ: ಇಂದು ಸೆಮಿಫೈನಲ್, `ಚೋಕರ್ಸ್‌' ಪಟ್ಟ ತಪ್ಪಿಸಿಕೊಳ್ಳುವುದೇ ಡಿವಿಲಿಯರ್ಸ್ ಪಡೆ?

ಆತಿಥೇಯರಿಗೆ ದಕ್ಷಿಣ ಆಫ್ರಿಕಾ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆತಿಥೇಯರಿಗೆ ದಕ್ಷಿಣ ಆಫ್ರಿಕಾ ಸವಾಲು

ಲಂಡನ್ (ಪಿಟಿಐ): ದಕ್ಷಿಣ ಆಫ್ರಿಕಾ ತಂಡ ಪ್ರಮುಖ ಟೂರ್ನಿಗಳ ನಾಕೌಟ್ ಹಂತದಲ್ಲಿ ಒತ್ತಡಕ್ಕೆ ಒಳಗಾಗಿ ಸೋಲು ಅನುಭವಿಸುವುದು ಸಾಮಾನ್ಯ. ಇದಕ್ಕಾಗಿ ಈ ತಂಡಕ್ಕೆ `ಚೋಕರ್ಸ್‌' ಎಂಬ ಹಣೆಪಟ್ಟಿ ನೀಡಲಾಗಿದೆ. ಹಲವು ವರ್ಷಗಳಿಂದ ಅಂಟಿಕೊಂಡಿರುವ ಈ ಹಣೆಪಟ್ಟಿಯನ್ನು ಕಳಚಿಕೊಳ್ಳಲು ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಅವಕಾಶ ಲಭಿಸಿದೆ.ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ಬುಧವಾರ ನಡೆಯಲಿದ್ದು, ಎಬಿ ಡಿವಿಲಿಯರ್ಸ್ ನೇತೃತ್ವದ ದಕ್ಷಿಣ ಆಫ್ರಿಕಾ ಆತಿಥೇಯ ಇಂಗ್ಲೆಂಡ್‌ನ ಸವಾಲನ್ನು ಎದುರಿಸಲಿದೆ. ಇಲ್ಲಿ ಗೆಲುವು ಪಡೆದು ಫೈನಲ್ ಪ್ರವೇಶಿಸಿ ತನ್ನನ್ನು `ಚೋಕರ್ಸ್‌' ಎನ್ನುವವರ ಬಾಯಿ ಮುಚ್ಚಿಸುವುದು ತಂಡದ ಗುರಿ.ಇಂಗ್ಲೆಂಡ್ `ಎ' ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದರೆ, ದಕ್ಷಿಣ ಆಫ್ರಿಕಾ `ಬಿ' ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಸೆಮಿಫೈನಲ್‌ಗೆ ಮುನ್ನಡೆದಿತ್ತು. ಗುರುವಾರ ನಡೆಯುವ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಎದುರಾಗಲಿವೆ.

ದಕ್ಷಿಣ ಆಫ್ರಿಕಾ ತಂಡ 1998 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಯಲ್ಲಿ (ಆಗ ಈ ಟೂರ್ನಿಗೆ ಐಸಿಸಿ ನಾಕೌಟ್ ಟ್ರೋಫಿ ಎಂಬ ಹೆಸರಿತ್ತು) ಪ್ರಶಸ್ತಿ ಜಯಿಸಿತ್ತು.

ಆ ಬಳಿಕ ಐಸಿಸಿಯ ಎಲ್ಲ ಪ್ರಮುಖ ಟೂರ್ನಿಗಳಲ್ಲಿ ಸೆಮಿಫೈನಲ್ ಹಂತ ದಾಟಲು ವಿಫಲವಾಗಿದೆ. ಅತ್ಯುತ್ತಮ ಆಟಗಾರರನ್ನು ಹೊಂದಿದ್ದರೂ ತಂಡ ಒತ್ತಡಕ್ಕೆ ಸಿಲುಕಿ ಸೋಲು ಅನುಭವಿಸುತ್ತಿತ್ತು. ಆದ್ದರಿಂದ ಈ ಬಾರಿ ಫೈನಲ್ ಪ್ರವೇಶಿಸಿ `ಚೋಕರ್ಸ್‌' ಹಣೆಪಟ್ಟಿ ಕಳಚಿಕೊಳ್ಳುವ ಲೆಕ್ಕಾಚಾರವನ್ನು ಡಿವಿಲಿಯರ್ಸ್‌ ಬಳಗ ಹೊಂದಿದೆ. ದಕ್ಷಿಣ ಆಫ್ರಿಕಾ ತಂಡ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಭಾರತದ ಎದುರು ಸೋಲು ಅನುಭವಿಸಿತ್ತು. ಆದರೆ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ನಾಲ್ಕರಘಟ್ಟಕ್ಕೆ ಅರ್ಹತೆ ಗಿಟ್ಟಸಿದೆ.ಹಾಶಿಮ್ ಆಮ್ಲಾ, ಕಾಲಿನ್ ಇನ್‌ಗ್ರಾಮ್, ಎಬಿ ಡಿವಿಲಿಯರ್ಸ್ ಮತ್ತು ಜೆ.ಪಿ. ಡುಮಿನಿ ಅವರು ತಂಡದ ಬ್ಯಾಟಿಂಗ್ ವಿಭಾಗದ ಶಕ್ತಿ ಎನಿಸಿಕೊಂಡಿದ್ದಾರೆ. ತಂಡವು ಆಮ್ಲಾ ಅವರಿಂದ ಉತ್ತಮ ಆರಂಭ ನಿರೀಕ್ಷಿಸುತ್ತಿದೆ. ವಿಂಡೀಸ್ ವಿರುದ್ಧ 83 ರನ್ ಗಳಿಸಿದ್ದ ಇನ್‌ಗ್ರಾಮ್ ಕೂಡಾ ಉತ್ತಮ ಫಾರ್ಮ್‌ನಲ್ಲಿದ್ದಾರೆ.ಮತ್ತೊಂದೆಡೆ ಅಲಸ್ಟೇರ್ಕುಕ್ ನೇತೃತ್ವದ ಇಂಗ್ಲೆಂಡ್ ತವರು ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿಯಲಿದೆ. ಲೀಗ್ ಹಂತದಲ್ಲಿ ಎರಡು ಗೆಲುವು ಪಡೆದಿರುವ ತಂಡದ ಆತ್ಮವಿಶ್ವಾಸ ಉನ್ನತ ಮಟ್ಟದಲ್ಲಿದೆ. ಈ ಹಿಂದಿನ ಎರಡೂ ಪಂದ್ಯಗಳಲ್ಲಿ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಮಿಂಚಿದ್ದರು. ಕುಕ್ ಅಲ್ಲದೆ ಇಯಾನ್ ಬೆಲ್, ಜೊನಾಥನ್ ಟ್ರಾಟ್ ಮತ್ತು ಜೋ ರೂಟ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಡೇಲ್ ಸ್ಟೇನ್ ಅವರನ್ನೊಳಗೊಂಡ ದಕ್ಷಿಣ ಆಫ್ರಿಕಾದ ಬೌಲಿಂಗ್ ದಾಳಿಯನ್ನು ಇವರು ಎಷ್ಟರಮಟ್ಟಿಗೆ ಎದುರಿಸಿ ನಿಲ್ಲುವರು ಎಂಬುದನ್ನು ನೋಡಬೇಕು.ಗಾಯದ ಕಾರಣ ಮೊದಲ ಎರಡು ಪಂದ್ಯಗಳನ್ನು ಕಳೆದುಕೊಂಡಿದ್ದ ಸ್ಟೇನ್ ವಿಂಡೀಸ್ ವಿರುದ್ಧ ಆಡಿದ್ದರು. ಮಾತ್ರವಲ್ಲ 33 ರನ್‌ಗಳಿಗೆ ಎರಡು ವಿಕೆಟ್ ಪಡೆದಿದ್ದರು. ಸ್ಟೇನ್ ವಿರುದ್ಧ ಎಚ್ಚರಿಕೆಯ ಆಟವಾಡಿ ಇತರ ಬೌಲರ್‌ಗಳ ಮೇಲೆ `ದಂಡೆತ್ತಿ' ಹೋಗುವ ಯೋಜನೆಯನ್ನು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ರೂಪಿಸಿರುವುದು ಸ್ಪಷ್ಟ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.