ಗುರುವಾರ , ನವೆಂಬರ್ 14, 2019
26 °C

ಆತುರದ ಪ್ರವಾಸ ಬೇಡ, ಕೈಪಿಡಿ ಇಲ್ಲದ ಪ್ರವಾಸವೂ ಬೇಡ

Published:
Updated:

ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಎಂದರೆ ಖುಷಿ. ಅಷ್ಟೇಕೆ? ಅದೊಂದು ಜೀವನಾನುಭವದ ಸುಮಧುರ ಕ್ಷಣ. ಶಾಲಾ ಶಿಕ್ಷಕ - ಶಿಕ್ಷಕಿಯರು ತಮ್ಮ ಶಾಲಾ ಬಾಲಕ - ಬಾಲಕಿಯರಿಗೆ ಐತಿಹಾಸಿಕ - ಧಾರ್ಮಿಕ - ಪ್ರಕೃತಿ ರಮಣೀಯ ತಾಣಗಳ ಪರಿಚಯ ಮಾಡಿಸುತ್ತಾರೆ.ಜತೆಗೆ ಆಯಾ ಊರಿನ ಜನಜೀವನ - ಸಂಸ್ಕೃತಿ - ಪರಂಪರೆ ಕುರಿತು ಅರಿವು ಮೂಡಿಸುತ್ತಾರೆ. ಕೃಷಿ - ಪರಿಸರ ಜ್ಞಾನವೂ ಎಳೆಯರಿಗೆ ಹೆಚ್ಚು ಪರಿಣಾಮ ಬೀರಬಲ್ಲುದು. ಸರ್ಕಾರವು ಶಾಲೆಗಳ ವಿದ್ಯಾರ್ಥಿ ವೃಂದದ ಪ್ರವಾಸಕ್ಕೆ ಪ್ರೋತ್ಸಾಹ ನೀಡುವುದಂತೂ ಔಚಿತ್ಯಪೂರ್ಣ ಯೋಜನೆಗಳಲ್ಲೊಂದಾಗಿದೆ.ಶೈಕ್ಷಣಿಕ ಪ್ರವಾಸದ ವೇಳೆ ಟಿಪ್ಪಣಿ ಬರೆದಿಡುತ್ತಾರೆ. ಪ್ರವಾಸದ ಬಳಿಕ ಪ್ರವಾಸದ ಅನುಭವವನ್ನು ಪ್ರಬಂಧ ರೂಪದಲ್ಲಿ ಬರೆಯುವಂತೆ ಶಾಲಾ ಅಧ್ಯಾಪಕರು ಹೇಳುತ್ತಾರೆ. ಆದರೆ ಪರಿಪೂರ್ಣ ಪ್ರವಾಸ ಎನ್ನುವಂತಾಗಿಲ್ಲ. ಯಾಕೆಂದರೆ ವಿದ್ಯಾರ್ಥಿಗಳಿಗೆ ಐತಿಹಾಸಿಕ ಸ್ಮಾರಕಗಳ ಅಥವಾ ಮಂದಿರಗಳ `ವೀಕ್ಷಣೆ~ ಮಾತ್ರ ಸಾಧ್ಯವಾಗುತ್ತದೆಯೇ ಹೊರತು ಇತಿಹಾಸ ಅಥವಾ ವಾಸ್ತು ಶಿಲ್ಪ - ಕಲೆ - ಮಹತ್ವದ ಅಂಶಗಳು ತಿಳಿಯುತ್ತಿಲ್ಲ.ಸರ್ಕಾರಿ ಅಥವಾ ಖಾಸಗಿ ಬಸ್ಸು ಮತ್ತು ಮ್ಯಾಕ್ಸಿಕ್ಯಾಬ್ ವಾಹನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿ, ವಾಪಸು ಹಿಂತಿರುಗಿ ಬರುವ `ನಿಗದಿತ ವೇಳಾಪಟ್ಟಿ~ ಅನುಸರಿಸುವ ತರಾತುರಿಯಲ್ಲಿ ಸ್ಮಾರಕಗಳ/ ಮಂದಿರಗಳ/ ತಾಣಗಳ ಹೆಸರು ಕೂಡಾ ಮಕ್ಕಳಿಗೆ ಮರೆತಿರುತ್ತದೆ!ಇತ್ತೀಚೆಗೆ, ಡಿಸೆಂಬರ್ ಉತ್ತರಾರ್ಧದಲ್ಲಿ ಎರಡು ವಾರಗಳ ಅವಧಿಯಲ್ಲಿ ಉಡುಪಿ - ಕಾರ್ಕಳ - ಮೂಡುಬಿದಿರೆ - ವೇಣೂರು - ಧರ್ಮಸ್ಥಳ - ಸುಬ್ರಹ್ಮಣ್ಯ ಹಾಗೂ ಮಂಗಳೂರು ಕಡಲಕಿನಾರೆ, ಸುರತ್ಕಲ್ ಕಡಲಕಿನಾರೆ, ಮಲ್ಪೆ - ಮಂಗಳೂರು ಬಂದರು ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ನೂರಾರು ಶಾಲಾ ವಿದ್ಯಾರ್ಥಿಗಳು ಆಗಮಿಸಿದ್ದರು.ಕೆಲವು ಶಾಲಾ ಅಧ್ಯಾಪಕರು ತಮ್ಮ ಶಾಲಾ ವಿದ್ಯಾರ್ಥಿಗಳಿಗೆ ಆಯಾ ಸ್ಥಳದ ಕುರಿತು ಮಾಹಿತಿ ನೀಡುತ್ತಿದ್ದರಷ್ಟೆ!! ಉಳಿದಂತೆ ಬಸ್ಸಿನಿಂದ ಇಳಿಯುವುದು, ಓಡೋಡಿ ಹೋಗಿ ಒಂದು ಸುತ್ತು ಪ್ರದಕ್ಷಿಣೆ ಬಂದು ಮತ್ತೆ ಬಸ್ಸಿಗೆ ಹತ್ತುವುದನ್ನಷ್ಟೇ ಮಾಡುತ್ತಿದ್ದರು.

 

ಸಾವಿರ ಕಂಬದ ಬಸದಿಯ ವಾಸ್ತು - ಶಿಲ್ಪಕಲಾ ವೈಭವ ಅಥವಾ ಧರ್ಮಸ್ಥಳ - ವೇಣೂರು - ಕಾರ್ಕಳದ ಗೊಮ್ಮಟ ಏಕಶಿಲಾವಿಗ್ರಹದ ಚರಿತ್ರೆ ಹೇಳುವವರಿಲ್ಲ!! ಸಮುದ್ರ ಕಿನಾರೆ, ಬಂದರು, ಪಶ್ಚಿಮಘಟ್ಟದ ಸಸ್ಯ ಸಂಪತ್ತು ಮತ್ತು ಹೊಲಗದ್ದೆ ತೋಟಗಳಲ್ಲಿ ಬೆಳೆದ ಅಡಿಕೆ - ತೆಂಗು - ಭತ್ತ - ಕಬ್ಬು - ರಬ್ಬರ್ ಮತ್ತಿತರ ಫಲ - ಪುಷ್ಪ ನೀಡುವ ಗಿಡಮರಗಳ ಪರಿಚಯವನ್ನು ತಿಳಿಸುವವರಿಲ್ಲ.ಇದು ಶೈಕ್ಷಣಿಕ ಪ್ರವಾಸ ಎಂದಾದೀತೆ? ಸರ್ಕಾರದ ಪ್ರವಾಸೋದ್ಯಮ ಇಲಾಖೆ, ವಾರ್ತಾ - ಪ್ರಚಾರ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರವಾಸೀ ತಾಣಗಳಲ್ಲಿ ಸಂಕ್ಷಿಪ್ತ ಮಾಹಿತಿ ನೀಡುವ ವ್ಯವಸ್ಥೆ ಆಗಬೇಕಿದೆ.ಶಾಲಾ ಮಕ್ಕಳಿಗೆ ಪ್ರವಾಸದ ಅನುಭವವು ಜೀವನದುದ್ದಕ್ಕೂ ಮರೆಯುವಂತಾಗಬಾರದು. ಇತಿಹಾಸ, ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಪರಿಸರ ಕಾಳಜಿ ಅರಿವು ಮೂಡಿಸಲು ಸರ್ಕಾರವು ಸ್ವಲ್ಪ ಹಣವಿನಿಯೋಗಿಸಿ ಉತ್ತಮ ಮಾರ್ಗದರ್ಶಿ ಪ್ರವಾಸೀ ಕೈಪಿಡಿ, ಕರಪತ್ರ ಮುದ್ರಿಸಿ, ವಿತರಿಸಲು ಯೋಜನೆ ರೂಪಿಸಬೇಕಾಗಿದೆಯಲ್ಲವೇ?ಕೇರಳ ರಾಜ್ಯದ ರೈಲ್ವೆ, ಬಸ್ಸು ನಿಲ್ದಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಹೇರಳ ಕೈಪಿಡಿ, ಕರಪತ್ರ, ನಕಾಶೆ ವಿತರಿಸಲಾಗುತ್ತಿದೆ. ಕರ್ನಾಟಕ ಸರ್ಕಾರಕ್ಕೆ ಇಂತಹ ವ್ಯವಸ್ಥೆ ರೂಪಿಸಲು ಅಸಾಧ್ಯವೇ? ಪ್ರಚಾರ ಸಾಹಿತ್ಯವನ್ನು  ಕನ್ನಡ - ಹಿಂದಿ - ಭಾಷೆಗಳಲ್ಲಿ ಮುದ್ರಿಸಬೇಕು.  ಪ್ರವಾಸಿಗರ ವಯೋಮಾನ, ಆಸಕ್ತಿ ತಕ್ಕಂತೆ ಉಚಿತವಾಗಿ ಹಂಚಬೇಕು.ಈಗಂತೂ ವೈಜ್ಞಾನಿಕ ತಂತ್ರಜ್ಞಾನದ ಮೂಲಕ ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ದೃಶ್ಯ ಮಾಧ್ಯಮದ ಸಿ.ಡಿ.ಯನ್ನೂ ವಿತರಿಸಬಹುದು. ಶಾಲೆಗೊಂದರಂತೆ ಇಂತಹ ಸಿ.ಡಿ. ಕೊಡಬಹುದು. ಅರಣ್ಯ ಇಲಾಖೆ, ವನ್ಯಜೀವಿ ಘಟಕ  ಕೂಡಾ ಆಯಾ ಜಿಲ್ಲೆಗಳ ವನ್ಯಸಂಪತ್ತಿನ ಕುರಿತು ಕರಪತ್ರ ಮುದ್ರಿಸಿ ಪ್ರವಾಸಿಗರಿಗೆ ವಿತರಿಸಬೇಕು.ಇನ್ನು ಖಾಸಗಿ ದೇವಾಲಯಗಳು - ಪುಣ್ಯಕ್ಷೇತ್ರಗಳ ಆಡಳಿತ ಮಂಡಳಿಯವರೂ ಆ ಕ್ಷೇತ್ರದ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಮುದ್ರಿಸಿ ವಿತರಿಸಬೇಕು. ಕನ್ನಡನಾಡಿನ ನೆಲ - ಜಲ - ಸಂಸ್ಕೃತಿಯ ಭವ್ಯ ಪರಂಪರೆಯನ್ನು ನಾಡಿನ ಮಕ್ಕಳಿಗೆ ಮೊತ್ತಮೊದಲು ತೋರ್ಪಡಿಸಬೇಕು.ವರ್ಣಮಯ ಸಚಿತ್ರ ಕೈಪಿಡಿಯನ್ನು ಪ್ರತಿಯೊಬ್ಬ ಬಾಲಕ - ಬಾಲಕಿ ಅಥವಾ ಪ್ರವಾಸಿಗ/ ಯಾತ್ರಾರ್ಥಿ ಸಂಗ್ರಹಿಸಿಡುವ ಮೂಲಕ ಪ್ರವಾಸ/ ಯಾತ್ರೆ/ ದರ್ಶನದ ನೆನಪು ಸದಾ ಉಳಿದೀತು. ಪರಿಚಯ ಕೈಪಿಡಿ ಅನಿವಾರ್ಯವಲ್ಲವೇ?ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಬರುವ ಶೈಕ್ಷಣಿಕ ಪ್ರವಾಸದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಕಾಲೇಜು ವಿದ್ಯಾರ್ಥಿ ಸಮುದಾಯದವರು ಕೇವಲ ಐದು ನಿಮಿಷಗಳಲ್ಲಿ `ವೀಕ್ಷಣೆ~ ಮಾಡಿ ತೋರಿಸುತ್ತಾರೆ! ಈ ಉದಾಹರಣೆ ಇಲ್ಲಿಗೆ ಮಾತ್ರ ಸೀಮಿತವಾಗಿಲ್ಲ! ಬಹುತೇಕ ಎಲ್ಲ ಧಾರ್ಮಿಕ ಪುಣ್ಯಕ್ಷೇತ್ರ, ಇತಿಹಾಸ ಪ್ರಸಿದ್ಧ ಸ್ಮಾರಕ, ರಾಷ್ಟ್ರೀಯ ಉದ್ಯಾನವನ ಮುಂತಾದ ಪ್ರವಾಸಿ ತಾಣಗಳಲ್ಲಿ ಕಂಡುಬರುತ್ತಿರುವ ದೃಶ್ಯ.ಕೊನೆಯಪಕ್ಷ ಸರ್ಕಾರವು ಆಯಾ ಜಿಲ್ಲೆಗಳ ಪ್ರವಾಸೀ ತಾಣಗಳ ಕುರಿತು ಮಾಹಿತಿ ಕೈಪಿಡಿಯನ್ನು ಮುದ್ರಿಸಿ ಪ್ರಕಟಿಸುವ `ಸತ್ಕಾರ್ಯ~ ಮಾಡಿದರೆ, ಶೈಕ್ಷಣಿಕ ಪ್ರವಾಸದಲ್ಲಿ ಪಾಲ್ಗೊಂಡವರಿಗೆ ಸಹಕಾರಿಯಾಗಬ್ಲ್ಲಲದು.ಈ ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಭವನ, ಶೌಚಾಲಯದ ವ್ಯವಸ್ಥೆಯೂ ಕಡ್ಡಾಯವಾಗಿ ಆಗಬೇಕು. ಕಸ ಕಡ್ಡಿ, ತ್ಯಾಜ್ಯಗಳನ್ನು ಎಸೆಯಲು ತೊಟ್ಟಿಗಳನ್ನೂ ಇರಿಸಿರಬೇಕು. ಸ್ಥಳೀಯ ನಗರಸಭೆ/ ಮಹಾನಗರಪಾಲಿಕೆ/ ಗ್ರಾಮ ಪಂಚಾಯತಿ ಈ ಬಗ್ಗೆ ನಿಗಾವಹಿಸಬೇಕು.

 

ನವೆಂಬರ್ ತಿಂಗಳಿನಿಂದ ಜನವರಿ ತಿಂಗಳಾಂತ್ಯದವರೆಗೆ ಮೂರು ತಿಂಗಳಾವಧಿಯಲ್ಲಿ ಶೈಕ್ಷಣಿಕ ಪ್ರವಾಸದ ಭರಾಟೆ ಇರುತ್ತದೆ. ಆಗ ತುರ್ತು ವೈದ್ಯಕೀಯ ಸೌಲಭ್ಯ, ಪೊಲೀಸರು ಗಸ್ತು, ವಾಹನ ಸಂಚಾರ ಸುಗಮವಾಗಿರಲು ಸರ್ಕಾರವು ತುರ್ತುಕ್ರಮ ಕೈಗೊಳ್ಳಬೇಕೆನಿಸುತ್ತಿದೆ.`ಶೈಕ್ಷಣಿಕ ಪ್ರವಾಸ~ ನಿಜವಾದ ಅರ್ಥದಲ್ಲಿ ಜ್ಞಾನಾರ್ಜನೆಯ ಅಂಗವಾಗಬೇಕಿದೆ. ಎಳೆಯ ಮಕ್ಕಳಿಗೆ ಕೇವಲ ಮನೋರಂಜನೆ ಪ್ರವಾಸವಾಗದೆ, ಇತಿಹಾಸ - ಸಂಸ್ಕೃತಿಯ ದರ್ಶನವಾಗಲಿ. ಶೈಕ್ಷಣಿಕ ಪ್ರವಾಸ ಅರ್ಥಪೂರ್ಣವಾಗಿರಲಿ.

 

ಪ್ರತಿಕ್ರಿಯಿಸಿ (+)