ಆತ್ಮಗಳ ಕಥೆಯೊಳಗೆ ಅಲೆಮಾರಿಯ ವಕ್ರದಂತೋಕ್ತಿ

7

ಆತ್ಮಗಳ ಕಥೆಯೊಳಗೆ ಅಲೆಮಾರಿಯ ವಕ್ರದಂತೋಕ್ತಿ

Published:
Updated:
ಆತ್ಮಗಳ ಕಥೆಯೊಳಗೆ ಅಲೆಮಾರಿಯ ವಕ್ರದಂತೋಕ್ತಿ

ಧಾರವಾಡ: `ಆತ್ಮಕಥೆ ಎಂದರೆ ಬರೀ ಜೀವನದಲ್ಲಿ ನಡೆಯುವ ಘಟನೆಗಳಲ್ಲ. ಆ ಘಟನೆಗಳ ಜತೆಜತೆಗೆ ಆ ವ್ಯಕ್ತಿಯ ಆಂತರಿಕ ಬೆಳವಣಿಗೆಯೂ ಸೇರುತ್ತದೆ' ಎಂಬ ಕಥೆಗಾರ ಎಸ್.ದಿವಾಕರ ಅಭಿಮತಕ್ಕೆ ತಕ್ಕಂತೆಯೇ ಮೂವರ ಆತ್ಮಕಥೆಗಳು `ಆತ್ಮಕಥೆಯ ಓದು' ಗೋಷ್ಠಿಯಲ್ಲಿ ಸಭಿಕರೆದುರು ಅನಾವರಣಗೊಂಡವು.ಈ ಮೊದಲೇ ಆತ್ಮಕಥೆ ಓದಿದ್ದರೂ, ಸ್ವತಃ ಲೇಖಕನೇ ಭಾವಪೂರ್ಣವಾಗಿ ತನ್ನ ಕಥೆಯನ್ನು ಓದುವಾಗಿನ ಸೊಗಡೇ ಬೇರೆ ತಾನೇ?!

`ಯಾವುದನ್ನು ಓದಲಿ' ಎಂಬ ಪ್ರಶ್ನೆಯಿಟ್ಟುಕೊಂಡು ಮುಂದೆ ಸಾಗಿದ ಬಗೆಯನ್ನು ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ ಕಾರ್ನಾಡ ವಿವರಿಸಿದರೆ, ಆತ್ಮವಿಶ್ವಾಸದ ಕೊರತೆ ಸೃಷ್ಟಿಸಿದ ವಕ್ರದಂತ ಹಾಗೂ ಅದನ್ನು ಮೀರಿ ಬೆಳೆದಿದ್ದನ್ನು ಕವಯತ್ರಿ ಪ್ರತಿಭಾ ನಂದಕುಮಾರ ಸಭಿಕರ ಮುಂದಿಟ್ಟರು. ಗೊಂದಲಿಗ ಜನಾಂಗದ ನೋವು- ನಲಿವು ತೆರೆದಿಟ್ಟಿದ್ದು ಈ ಸಮುದಾಯಕ್ಕೆ ಸೇರಿದ ಸಾಹಿತಿ ಎ.ಎಂ.ಮದರಿ.`ಆತ್ಮಗಳ ಕಥೆ':“ನನ್ನದು ಆತ್ಮಕಥೆ ಅಲ್ಲ; ಆತ್ಮಗಳ ಕಥೆ” ಎಂಬ ಕುಶಲೋಪರಿಯೊಂದಿಗೆ ಮಾತು ಶುರು ಮಾಡಿದ್ದು ಗಿರೀಶ ಕಾರ್ನಾಡ. `ಆಡಾಡತ ಆಯುಷ್ಯ'ದಲ್ಲಿ ಹಲವರ ಆತ್ಮಗಳ ಕಥೆಯೂ ಬರುವುದರಿಂದ ತಾವು ಕೃತಿಗೆ ಆ ಹೆಸರು ಇಟ್ಟಿದ್ದಾಗಿ ಕಾರ್ನಾಡ ಹೇಳಿದರು. `...ಆಯುಷ್ಯ'ದಲ್ಲಿ ಅವರು ಆಯ್ದುಕೊಂಡ ಭಾಗ- ಶಿರಸಿಯಿಂದ ಧಾರವಾಡಕ್ಕೆ ಬಂದು ಇಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ ದಿನಗಳನ್ನು ಕುರಿತದ್ದು.ಒಟ್ಟು ಆರು ವರ್ಷಗಳ ಅವಧಿಯಲ್ಲಿ ಬಾಸೆಲ್ ಮಿಶನ್ ಹೈಸ್ಕೂಲು ಹಾಗೂ ಕರ್ನಾಟಕ ಕಾಲೇಜು ವಿದ್ಯಾರ್ಥಿಯಾಗಿದ್ದ ದಿನಗಳ ನೆನಪು ಮಾಡಿಕೊಂಡ ಕಾರ್ನಾಡ, `ಶಾಲೆಯ ದಿನಗಳಲ್ಲಿ ಇದ್ದಾಗಲೂ ಕರ್ನಾಟಕ ಕಾಲೇಜನ್ನೇ ಧ್ಯಾನಿಸುತ್ತಿದ್ದೆವು. ಕರ್ನಾಟಕ ಕಾಲೇಜು ನನ್ನ ಜಾಗೃತ ಜೀವನವನ್ನೇ ಆವರಿಸಿ ಬಿಟ್ಟಿತ್ತು. ಅಂಥ ಕೇಂದ್ರ ಸಂಸ್ಥೆ ಅದು” ಎಂದು ಸ್ಮರಿಸಿಕೊಂಡರು.ಕಾದಂಬರಿಕಾರರು, ಕಥೆಗಾರರು ಎಂದರೆ ಯಾವುದೋ ದೈವಿ ಶಕ್ತಿಯುಳ್ಳವರು ಎಂದು ಕಾರ್ನಾಡರು ಭಾವಿಸಿದ್ದರಂತೆ! ಅದೇ ಗುಂಗಿನಲ್ಲಿ ಧಾರವಾಡಕ್ಕೆ ಬಂದಾಗ ಅವರಿಗೆ ನಿರಾಶೆಯಾಗಲಿಲ್ಲ. ವಿ.ಕೃ.ಗೋಕಾಕರ ಸಲಹೆ ಮೇರೆಗೆ ಹಲವು ಇಂಗ್ಲಿಷ್ ಲೇಖಕರ ಕೃತಿ ಓದಲು ಶುರು ಮಾಡಿದರು. ಓದು ಹೆಚ್ಚಿದಂತೆಲ್ಲ, ಎಂಟು ದಿನಗಳ ಹಿಂದೆ ಖುಷಿಕೊಟ್ಟ ಅವರ ಕವನ ನಂತರ ಬಾಲಿಶ ಅನ್ನಿಸುತ್ತಿತ್ತಂತೆ!`ಒಂದು ಆಮಂತ್ರಣ' ಎಂಬ ಎರಡನೇ ಅಧ್ಯಾಯದಲ್ಲಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಜಪಾನ್ ಪ್ರವಾಸ ಕುರಿತು ನಡೆದ ಪತ್ರ ವ್ಯವಹಾರವನ್ನು ಹೇಳಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.ಆತ್ಮವಿಶ್ವಾಸ: “ಸುಂದರ ಹಲ್ಲು, ಉದ್ದ ಕೂದಲು ಹೊಂದಿರುವುದೇ ಸೌಂದರ್ಯ' ಎಂದು ಭಾವಿಸಿದ್ದ ಪ್ರತಿಭಾ ನಂದಕುಮಾರ, ಅದನ್ನು ಮೀರಿ ಬೆಳೆದ ಬಗೆಯನ್ನು ತಮ್ಮ ಆತ್ಮಕಥೆ `ಅನುದಿನದ ಅಂತರಗಂಗೆ'ಯಲ್ಲಿ ವಿವರಿಸಿದ್ದಾರೆ. ಇದೇ ಸಾರಾಂಶವುಳ್ಳ `ವಕ್ರದಂತೆಯ ವಕ್ರೋಕ್ತಿ' ಎಂಬ ಅಧ್ಯಾಯವನ್ನು ಪ್ರತಿಭಾ ಓದಿದರು.ಚೆನ್ನಾಗಿ ನಾಟ್ಯ ಮಾಡುತ್ತಿದ್ದ, ಓದಿನಲ್ಲಿ ಜಾಣೆಯಾಗಿದ್ದ ಪ್ರತಿಭಾ, ಕೇವಲ ಉಬ್ಬುಹಲ್ಲಿನ  ಕಾರಣದಿಂದಾಗಿ ಸ್ನೇಹಿತೆಯರಿಂದ ಅವಮಾನಕ್ಕೆ ಈಡಾಗುತ್ತಿದ್ದ ಆ ದಿನಗಳ ಸಂಕಟವನ್ನು ನಿರಾಳವಾಗಿ ಹೇಳಿಕೊಂಡರು. ಹಲ್ಲುಗಳಿಗೆ ಕ್ಲಿಪ್ ಹಾಕುವ ಸಂದರ್ಭದಲ್ಲಿ ಮೂರು ಬೇರೆ ಹಲ್ಲುಗಳನ್ನು ವೈದ್ಯರು ತಪ್ಪಾಗಿ ಕಿತ್ತಿದ್ದನ್ನು ತುಸು ತಮಾಷೆಯಿಂದಲೇ ನಿರೂಪಿಸಿದರು. ಮಗಳನ್ನು ಅಲಂಕರಿಸುವ ಮೂಲಕ ತಮ್ಮ ಕನಸು ನನಸು ಮಾಡಲು ನಡೆಸುವ ಯತ್ನ ಹೇಳುವುದರೊಂದಿಗೆ ಆತ್ಮಕಥೆಯ ಓದು ಮುಗಿಸಿದಾಗ ಸಭಿಕರ ಹೃದಯ ಭಾರವಾಗಿತ್ತು.ಅಲೆಮಾರಿಯ ಸ್ವಗತ: ಬದುಕಿಗೆ ಆದಾಯ ಹುಡುಕಿಕೊಂಡು ಒಂದೂರಿನಿಂದ ಇನ್ನೊಂದು ಕಡೆಗೆ ಹೋಗುವ ಅಲೆಮಾರಿ ಸಮುದಾಯಗಳಲ್ಲಿ ಗೊಂದಲಿಗ ಸಮಾಜವೂ ಒಂದು. ಕುಟುಂಬದೊಂದಿಗೆ `ಮುಸಾಫಿರ್'ಗೆ ಹೊರಟರೆ ಮತ್ತೆ ಊರಿಗೆ ಬರುವುದು ಆಷಾಢ ಮಾಸದಲ್ಲಿಯೇ. ಆ ಸಮುದಾಯಕ್ಕೆ ಸೇರಿದ ಎ.ಎಂ.ಮದರಿ, ತಮ್ಮ ಅಜ್ಜ ಹಾಗೂ ಅಪ್ಪನ ಬದುಕನ್ನೂ ಸೇರಿಸಿಕೊಂಡು ಬರೆದ ಆತ್ಮಕಥೆ- `ಗೊಂದಲಿಗ್ಯಾ'.ಮಹಾರಾಷ್ಟ್ರದಿಂದ ವಿಜಾಪುರ, ಅಲ್ಲಿಂದ ಗುಲ್ಬರ್ಗದತ್ತ ವಲಸೆ ಬಂದಿದ್ದು ಮದರಿ ಪೂರ್ವಜರು. “ಅನಕ್ಷರಸ್ಥ ಅಜ್ಜ ಎಂತೆಂಥ ಲಾವಣಿ ರಚಿಸಿದ್ದ” ಎಂದು ನೆನೆಪಿಸಿಕೊಂಡರು ಎ.ಎಂ.ಮದರಿ.ಗೋಷ್ಠಿಯ ನಿರ್ದೇಶಕ ಎಸ್.ದಿವಾಕರ, ಆತ್ಮಕಥೆಯೆಂದರೆ ಒಂದು ಜೀವನ ಕಾಲದಲ್ಲಿ ಆಗುಹೋಗುಗಳನ್ನು ಮನದಲ್ಲಿ ಮಥಿಸಿ ಅದನ್ನು ಅಕ್ಷರರೂಪಕ್ಕೆ ಇಳಿಸುವ ಕೃತಿ ಎಂದು ಬಣ್ಣಿಸಿದರು. ತಾನು ಏನಾಗಿದ್ದೆ ಎಂಬುದನ್ನು ವ್ಯಕ್ತಪಡಿಸುವಾಗ ಸಂವೇದನಾಶೀಲ ಕೃತಿಕಾರ ಕೆಲವೊಂದು ಸಲ ಭಾವೋದ್ವೇಗಕ್ಕೆ ಒಳಗಾಗುತ್ತಾನೆ ಎಂಬ ದಿವಾಕರ್ ಅಭಿಮತ ಮೂವರ ಆತ್ಮಕಥೆ ಓದಿನಲ್ಲೂ ಪ್ರತಿಧ್ವನಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry