ಆತ್ಮರಕ್ಷಣೆಗೆ ಟೆಕ್ವಾಂಡೋ ಅಗತ್ಯ

7

ಆತ್ಮರಕ್ಷಣೆಗೆ ಟೆಕ್ವಾಂಡೋ ಅಗತ್ಯ

Published:
Updated:

ಚಿತ್ರದುರ್ಗ:  ಪ್ರತಿಯೊಬ್ಬರೂ ತಮ್ಮ ಆತ್ಮರಕ್ಷಣೆಗೆ ಬೇಕಾದ ಕಲೆ ಕಲಿಯುವುದು ಸೂಕ್ತ ಎಂದು ಶಾಸಕ ಎಸ್.ಕೆ. ಬಸವರಾಜನ್ ಅಭಿಪ್ರಾಯಪಟ್ಟರು. ನಗರದ ಒನಕೆ ಓಬವ್ವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಚಿತ್ರದುರ್ಗ ಫೋರ್ಟ್ ಟೆಕ್ವಾಂಡೋ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ‘2ನೇ ಅಂತರ ಜಿಲ್ಲಾ ಸಬ್ ಜ್ಯೂನಿಯರ್ ಮತ್ತು ಜ್ಯೂನಿಯರ್ ಹಾಗೂ ಸೀನಿಯರ್ ಟೆಕ್ವಾಂಡೋ ಚಾಂಪಿಯನ್‌ಶಿಪ್ 2011’ರ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.  ಇಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯಿಂದ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ರಕ್ಷಣೆ ನೀಡುವುದು ಸಾಧ್ಯವಿಲ್ಲ. ಅಂತೆಯೇ, ಆಯುಧಗಳನ್ನು ಇಟ್ಟುಕೊಂಡು ಆತ್ಮರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ತಮ್ಮ ಆತ್ಮರಕ್ಷಣೆಗೆ ಅಗತ್ಯವೆನಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಅತ್ಮರಕ್ಷಣೆಗೆ ಟೆಕ್ವಾಂಡೋ ಉತ್ತಮ ಕಲೆಯಾಗಿದೆ. ಆತ್ಮರಕ್ಷಣೆಗೆ ಇನ್ನೊಬ್ಬರ ಸಹಾಯ ಪಡೆಯದೇ ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಲು ಟೆಕ್ವಾಂಡೋ ಪೂರಕವಾಗಿದೆ. ಅಲ್ಲದೇ, ಕ್ರೀಡೆಗಳು ಮಾನವನ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಸಹಕಾರಿ ಎಂದರು.ಟೆಕ್ವಾಂಡೋ ಕಲೆಯಿಂದ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಲು ಅವಕಾಶವಿದೆ. ಈ ಕಲೆಗೆ ಸಾರ್ವಜನಿಕರು ಪ್ರೋತ್ಸಾಹಿಸಬೇಕು ಹಾಗೂ ಸರ್ಕಾರವು ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದರು.ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ 200 ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ಮೂರು ವಿಭಾಗಗಳಿದ್ದು, ಸಬ್ ಜ್ಯೂನಿಯರ್ ವಿಭಾಗದಲ್ಲಿ 14ರಿಂದ 16 ವರ್ಷ ಒಳಗಿನವರು, ಜ್ಯೂನಿಯರ್ ವಿಭಾಗದಲ್ಲಿ 16ರಿಂದ 17ವರ್ಷ ಒಳಗಿನವರು ಹಾಗೂ ಸೀನಿಯರ್ ವಿಭಾಗದಲ್ಲಿ 17ವರ್ಷ ಮೇಲ್ಪಟ್ಟವರು ಪಾಲ್ಗೊಂಡಿದ್ದಾರೆ ಎಂದು ತೀರ್ಪುಗಾರ ಶಿವಮೊಗ್ಗದ ದೊರೈಚಿನ್ನಪ್ಪ ವಿವರ ನೀಡಿದರು.ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ತೀರ್ಪುಗಾರರಾದ ಬೆಂಗಳೂರಿನ ಎ.ಟಿ. ರಾಜಾ ಹಾಗೂ ಧಾರವಾಡದ ಅಂಜಲಿ ಪರಪ್ಪ, ಟೆಕ್ವಾಂಡೋ ಕ್ರೀಡಾಪಟು ಎಂ. ಅನಿತಾ ಇತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry