ಶುಕ್ರವಾರ, ನವೆಂಬರ್ 22, 2019
22 °C

ಆತ್ಮವಿಶ್ವಾಸದಲ್ಲಿ ವಾರಿಯರ್ಸ್

Published:
Updated:

ಪುಣೆ (ಪಿಟಿಐ): ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಪುಣೆ ವಾರಿಯರ್ಸ್ ಆಡಿದ ಐದು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆಲುವು ಪಡೆದಿದೆ. ಆದರೆ ಈ ತಂಡದ ಆಟಗಾರರ ಆತ್ಮವಿಶ್ವಾಸಕ್ಕೆ ಯಾವುದೇ ಧಕ್ಕೆ ಉಂಟಾಗಿಲ್ಲ. ಸೋಮವಾರದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದೊರೆತ ಅಚ್ಚರಿಯ ಗೆಲುವು ಅದಕ್ಕೆ ಕಾರಣ.ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ವಾರಿಯರ್ಸ್ ಪ್ರಬಲ ಸೂಪರ್ ಕಿಂಗ್ಸ್ ಎದುರು 24 ರನ್‌ಗಳ ಜಯ ಸಾಧಿಸಿತ್ತು. ಈ ಗೆಲುವಿನಿಂದ ಹೊಸ ಉತ್ತೇಜನ ಪಡೆದಿರುವ ಪುಣೆಯ ತಂಡ ಬುಧವಾರ ನಡೆಯುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ನಾಯಕ ಏಂಜೆಲೊ ಮ್ಯಾಥ್ಯೂಸ್ ಅನುಪಸ್ಥಿತಿಯಲ್ಲಿ ರಾಸ್ ಟೇಲರ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಶ್ರೀಲಂಕಾದ ಆಟಗಾರರು ಚೆನ್ನೈನಲ್ಲಿ ಆಡುವುದಕ್ಕೆ ನಿಷೇಧ ಇರುವ ಕಾರಣ ಮ್ಯಾಥ್ಯೂಸ್ ಹೊರಗುಳಿದಿದ್ದರು.ಸನ್‌ರೈಸರ್ಸ್ ವಿರುದ್ಧದ ಪಂದ್ಯಕ್ಕೆ ಅಂತಿಮ ಇಲೆವೆನ್‌ನ ಆಯ್ಕೆ ತಂಡದ ಆಡಳಿತಕ್ಕೆ ಅಲ್ಪ ತಲೆನೋವು ಉಂಟುಮಾಡಿದೆ. ಏಕೆಂದರೆ ಮ್ಯಾಥ್ಯೂಸ್ ಬದಲು ಅವಕಾಶ ಪಡೆದಿದ್ದ ಸ್ಟೀವನ್ ಸ್ಮಿತ್ ಉತ್ತಮ ಪ್ರದರ್ಶನ ನೀಡಿದ್ದರು. ಆದ್ದರಿಂದ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯುವ ನಾಲ್ಕು ಮಂದಿ ವಿದೇಶಿ ಆಟಗಾರರು ಯಾರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.ಆ್ಯರನ್ ಫಿಂಚ್ ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ಅವರನ್ನು ಕೈಬಿಡುವಂತಿಲ್ಲ. ಮಿಷೆಲ್ ಮಾರ್ಷ್ ಅಥವಾ ಇದುವರೆಗೆ ವಿಫಲರಾಗಿರುವ ಟೇಲರ್ ಅವಕಾಶ ಕಳೆದುಕೊಂಡರೂ ಅಚ್ಚರಿಯಿಲ್ಲ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಯುವರಾಜ್ ಸಿಂಗ್ ಈ ಪಂದ್ಯದಲ್ಲೂ ಆಡುತ್ತಿಲ್ಲ. ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಅವರು ಆಡಿರಲಿಲ್ಲ.ಭುವನೇಶ್ವರ್ ಕುಮಾರ್ ನೇತೃತ್ವದ ಬೌಲಿಂಗ್ ವಿಭಾಗ ಸೂಪರ್ ಕಿಂಗ್ಸ್ ವಿರುದ್ಧ ಸಮರ್ಥ ದಾಳಿ ನಡೆಸಿತ್ತು. ಸನ್‌ರೈರ್ಸ್ ವಿರುದ್ಧವೂ ಅಂತಹದೇ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸದಲ್ಲಿ ಎಲ್ಲ ಬೌಲರ್‌ಗಳು ಇದ್ದಾರೆ. ಮತ್ತೊಂದೆಡೆ ಕುಮಾರ ಸಂಗಕ್ಕಾರ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ಟೂರ್ನಿಯಲ್ಲಿ ತನ್ನ ನಾಲ್ಕನೇ ಗೆಲುವನ್ನು ಎದುರು ನೋಡುತ್ತಿದೆ.

ಪ್ರತಿಕ್ರಿಯಿಸಿ (+)