ಶುಕ್ರವಾರ, ನವೆಂಬರ್ 22, 2019
22 °C
ಮಾತ್‌ಮಾತಲ್ಲಿ

ಆತ್ಮವಿಶ್ವಾಸದ ದ್ಯೋತಕ ಮಾತು

Published:
Updated:

ಮಾತು ಸುಮ್ಮನೆ ಒಲಿಯುವುದಿಲ್ಲ. ನಾವೇ ಒಲಿಸಿಕೊಳ್ಳಬೇಕು. ಹದವರಿತು ಬಳಸಿಕೊಳ್ಳಬೇಕು...ಸಣ್ಣ ವಯಸ್ಸಿನಲ್ಲಿ ಅಮ್ಮ ದಿನಾಲೂ ಕಥೆ ಹೇಳ್ತಿದ್ರು. ಕೇಳಿದ ಕಥೆಯನ್ನು ಮರುದಿನ ನನ್ನ ತರಗತಿಯಲ್ಲಿ ಯಥಾವತ್ ಹೇಳುತ್ತಿದ್ದೆ. ಅಮ್ಮ ಗ್ರಾಂಥಿಕವಾಗಿ ಕಥೆ ಹೇಳಿದ್ರೆ ನಾನು ಆಂಗಿಕ, ಧ್ವನಿಯಲ್ಲಿ ಏರಿಳಿತ ಮಾಡಿಕೊಂಡು ನಾನು ಅನುಭವಿಸುವುದಲ್ಲದೆ ಪ್ರತಿಯೊಬ್ಬ ಕೇಳುಗನೂ ಆ ಕಥೆಯನ್ನು ಅನುಭವಿಸುವಂತೆ ರಸವತ್ತಾಗಿ ವಿವರಿಸುತ್ತಿದ್ದೆ.ಕಥೆಗಳೆಡೆಗಿನ ಆಕರ್ಷಣೆ ಕಥೆ ಪುಸ್ತಕಗಳನ್ನು ಹೇರಳವಾಗಿ ಓದುವಂತೆ ಪ್ರೇರೇಪಿಸಿತು. ನಾನು ಓದಿದ ಮೊದಲ ಕಾದಂಬರಿ ಮತಿಘಟ್ಟ ಕೃಷ್ಣಮೂರ್ತಿ ಅವರ `ಕಳಸಾಪುರದ ಹುಡುಗರು'. ಓದಿದ ಕಥೆಗಳನ್ನು ಮನೆಯಲ್ಲಿ ಮತ್ತು ಸಹಪಾಠಿಗಳ ಮುಂದೆ ಹೇಳುತ್ತಿದ್ದೆ. ಎಲ್ಲಾ ಸಂದರ್ಭಗಳಲ್ಲೂ ಮೂಲ ಕಥೆಗಾರನ ಮೂಲ ಪರಿಕಲ್ಪನೆಗೆ ನನ್ನ ಭಾವ ಮತ್ತು ಭಾವನೆಗಳನ್ನು ಸೇರಿಸಿ ಒಪ್ಪಿಸುವುದು ನನ್ನ ಕ್ರಮ. ವಿಶೇಷವಾಗಿ `ಚಂದಮಾಮ' ಪುಸ್ತಕ ಓದುತ್ತಾ ನನ್ನ ಭಾವಲೋಕವನ್ನು ವಿಸ್ತರಿಸಿಕೊಂಡೆ.ಈ ಕಾರಣದಿಂದಲೇ ಇರಬೇಕು, ನನಗೇ ಗೊತ್ತಿಲ್ಲದಂತೆ ಕನ್ನಡ ಭಾಷೆಯ ಬಗ್ಗೆ ಒಲವು ಮೂಡುತ್ತಾ ಹೋಯಿತು. ಓದುವ ಹವ್ಯಾಸ ಏಳನೇ ತರಗತಿಯಲ್ಲಿ ಕನ್ನಡದಲ್ಲಿ 100ಕ್ಕೆ 100 ಅಂಕ ಗಳಿಸಲು ಸಹಕಾರಿಯಾಯಿತು. ಪ್ರೌಢಶಾಲೆವರೆಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಯಾಗಿದ್ದ ನಾನು ಪಿಯುಸಿಗೆ ಬರುತ್ತಿದ್ದಂತೆ ಇಂಗ್ಲಿಷ್ ತೊಡಕಾಯಿತು. ಉಪನ್ಯಾಸಕರು ಪಾಠ ಮಾಡುತ್ತಿರುವಾಗ ಕೈಬಾಯಿ ನೋಡುವುದಷ್ಟೇ ನಮ್ಮ ಕೆಲಸ. ಅರ್ಥವಾಗುತ್ತಿರಲಿಲ್ಲ.ಆಗ ನಾನು ಪಠ್ಯದ ಕನ್ನಡ ಮತ್ತು ಇಂಗ್ಲಿಷ್ ರೂಪಗಳನ್ನು ಮುಂದಿಟ್ಟುಕೊಂಡು ಒಮ್ಮೆ ಇಂಗ್ಲಿಷ್ ಮತ್ತೊಮ್ಮೆ ಕನ್ನಡ ಪುಸ್ತಕ ಓದುತ್ತಾ ಓದುತ್ತಾ ಅರ್ಥ ಮಾಡಿಕೊಳ್ಳತೊಡಗಿದೆ. ವೈಜ್ಞಾನಿಕ ಕಠಿಣ ಪದಗಳಿಗೆ ಅರ್ಥ ಹುಡುಕುವ ಹೊತ್ತಿಗೆ ಆ ಪದಗಳ ಮೂಲ ರೂಪ ಮತ್ತು ಪದ ಬೆಳೆದುಬಂದ ಬಗೆಯನ್ನು ತಿಳಿದುಕೊಳ್ಳತೊಡಗಿದೆ. ಇದು, ಮುಂದೆ ವಿಜ್ಞಾನ ಸಂಬಂಧಿ ಲೇಖನ/ಪುಸ್ತಕಗಳ ಭಾಷಾಂತರಕ್ಕೆ ಬಹಳ ಸಹಕಾರಿಯಾಯಿತು.ವಿದ್ಯಾರ್ಥಿಯಾಗಿದ್ದಾಗ ನಾನು ಅತ್ಯುತ್ತಮ ಚರ್ಚಾಪಟುವಾಗಿದ್ದೆ. ಇದಕ್ಕಾಗಿ ಇನ್ನಷ್ಟು ಓದುತ್ತಿದ್ದೆ. ಆ ಹೊತ್ತಿನಲ್ಲಾಗಲೇ ಓದಿನ ಹರವು ವಿಶಾಲವಾಗಿತ್ತು. ಇಂತಹುದನ್ನೇ ಓದಬೇಕು, ಇದು ನನಗೆ ಸಂಬಂಧಿಸಿದ್ದಲ್ಲ ಎಂಬ ಮಡಿವಂತಿಕೆ ಇಟ್ಟುಕೊಳ್ಳದೆ ಸಿಕ್ಕಿದ್ದೆಲ್ಲವನ್ನೂ ಓದುತ್ತಿದ್ದೆ. `ಅರಿವು ಯಾವ ಮೂಲೆಯಿಂದ ಬಂದರೂ ಅದನ್ನು ದಕ್ಕಿಸಿಕೊಳ್ಳಬೇಕು' ಎಂಬ ಮಾತೇ ಇದೆಯಲ್ಲಾ; ಅದನ್ನೇ ಪಾಲಿಸಿದೆ.ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದುವಾಗ ಕನ್ನಡದ ಗಂಧವೇ ಇರಲಿಲ್ಲ ಎಂಬ ಕಾರಣಕ್ಕೆ ಕನ್ನಡ ಸಂಘವನ್ನು ಶುರುಮಾಡಿದೆವು. 1984ರಲ್ಲಿ ಇದೇ ಸಂಘದ ಮೂಲಕ ದೂರದರ್ಶನಕ್ಕೆ ಒಂದು ಕಾರ್ಯಕ್ರಮ ನೀಡುವ ಅವಕಾಶ ಸಿಕ್ಕಿತು. ನಾನು ವಿಜ್ಞಾನ ಮತ್ತು ಸಾಹಿತ್ಯವನ್ನು ಸಮೀಕರಿಸಿ `ಕೈಮದ್ದು' ಎಂಬ ನಾಟಕ ಬರೆದು ಗೆಳೆಯರೊಂದಿಗೆ ಪ್ರಸ್ತುತಪಡಿಸಿದೆ. ಅದರ ವಸ್ತು, ವಿಷಯ, ಭಾಷಾಪ್ರೌಢಿಮೆ ಮತ್ತು ನಿರೂಪಣೆಗೆ ಮೆಚ್ಚಿದ ದೂರದರ್ಶನದವರು ಅದೇ ವರ್ಷ ಆರೋಗ್ಯ ಕಾರ್ಯಕ್ರಮಕ್ಕೆ ಆಹ್ವಾನವಿತ್ತರು. ಮುಂದೆ 1987ರಲ್ಲಿ ರಸಪ್ರಶ್ನೆ (ಥಟ್ ಅಂತ ಹೇಳಿ) ಶುರು ಮಾಡಿದೆ.ಈಗಾಗಲೇ 2300 ಸರಣಿಗಳನ್ನು ಪೂರೈಸಿರುವ ಈ ಕಾರ್ಯಕ್ರಮ `ಲಿಮ್ಕಾ' ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದೆ. ಜೊತೆಗೆ ಭಾರತದ ಯಾವುದೇ ವಾಹಿನಿಯಲ್ಲಿ ಪ್ರಸಾರವಾಗದಷ್ಟು ಸುದೀರ್ಘವಾದ ಸರಣಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವುದು ನನ್ನ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದೇ ಭಾವಿಸುತ್ತೇನೆ.ಯಾರೋ ಸಿದ್ಧಪಡಿಸಿದ ರಸಪ್ರಶ್ನೆಗಳನ್ನು ನಾವು ಪ್ರೇಕ್ಷಕರ ಮುಂದೆ ಒಪ್ಪಿಸುವುದು ದೊಡ್ಡದಲ್ಲ. ಇಷ್ಟೂ ಸಂಚಿಕೆಗಳಿಗೆ ನಾನೇ ಸ್ಕ್ರಿಪ್ಟ್ ಸಿದ್ಧಪಡಿಸಿರೋದು. ಯಾವುದೇ ಪೂರ್ವತಯಾರಿ ಮಾಡಿಕೊಳ್ಳುವುದೂ ಇಲ್ಲ. ಬಾಲ್ಯದಿಂದಲೇ ಓದುವ ಗೀಳು ಹತ್ತಿಸಿಕೊಂಡದ್ದು ಹೀಗೆ ಎಲ್ಲೆಲ್ಲೋ ನೆರವಿಗೆ ಬರುತ್ತಿದೆ.ಮಾತು ನಮ್ಮ ಆತ್ಮವಿಶ್ವಾಸದ ಪ್ರತೀಕ. ಅವನ್ನು ನೇಣಿಗೇರಿಸಬೇಡಿ, ಬಿಟ್ಟುಬಿಡಿ ಅನ್ನೋ ಅರ್ಥವಿರುವ ಹ್ಯಾಂಗ್ ಹಿಮ್‌ನಾಟ್, ಲೀವ್ ಹಿಮ್ ಎಂಬ ಮಾತಿನಲ್ಲಿ ಹ್ಯಾಂಗ್ ಹಿಮ್, ನಾಟ್ ಲೀವ್ ಹಿಮ್ ಅಂದುಬಿಟ್ರೆ? ಅವನನ್ನು ಬಿಡಬೇಡಿ, ನೇಣಿಗೇರಿಸಿ ಎಂದಾಗುತ್ತದೆ! ಹಾಗೆ ಮಾತಿಗೆ ಎಲ್ಲಿ ಅಂತರ ಕೊಡಬೇಕು, ಎಲ್ಲಿ ಧ್ವನಿಯಲ್ಲಿ ಏರಿಳಿತ ಮಾಡಬೇಕು ಅಲ್ಲಲ್ಲಿ ಮಾಡಿದರಷ್ಟೇ ಮಾತು ಮಾತಾಗುತ್ತದೆ. ಇಲ್ಲದಿದ್ದರೆ?!ಹ್ರಸ್ವ, ದೀರ್ಘ, ಉಚ್ಚಾರಣೆ, ಪಂಚ್, ಭಾವ, ಆಂಗಿಕ ಎಲ್ಲವೂ ಸೇರಿ ಮಾತು ಪರಿಣಾಮಕಾರಿಯಾಗುತ್ತದೆ. ಭಾಷೆಗೆ ಒತ್ತು ಕೊಡುವುದು, ಅನುಭವಿಸಿ ಮಾತನಾಡುವುದು, ಎರಡೂ ಹೆಜ್ಜೆಗಳನ್ನು ಭದ್ರವಾಗಿ ಊರಿ ನಿಲ್ಲುವುದು, ತಡವರಿಸದೇ ಇರುವುದು, ಸ್ಪಷ್ಟತೆ, ಸೌಮ್ಯತೆ ಇವೆಲ್ಲವೂ ನಿರೂಪಕನ ಆತ್ಮವಿಶ್ವಾಸದ ದ್ಯೋತಕ.

 

ಪ್ರತಿಕ್ರಿಯಿಸಿ (+)