ಬುಧವಾರ, ಏಪ್ರಿಲ್ 14, 2021
24 °C

ಆತ್ಮವಿಶ್ವಾಸದ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ಭೂಪ್ರದೇಶ, ಜನಸಂಖ್ಯೆ, ಆರ್ಥಿಕ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇತರ ಸಣ್ಣಪುಟ್ಟ ದೇಶಗಳು ಒಲಿಂಪಿಕ್ಸ್‌ನಲ್ಲಿ ಮಾಡಿರುವ ಸಾಧನೆಯ ಬಗ್ಗೆ ಯೋಚಿಸಿದರೆ ನಾವು ಬಹಳ ಹಿಂದಿದ್ದೇವೆ ಎನಿಸುವುದು ಸಹಜ. ಆದರೆ ಒಲಿಂಪಿಕ್ಸ್ ಚರಿತ್ರೆಯಲ್ಲಿಯೇ ಭಾರತ ಇದೇ ಮೊದಲ ಬಾರಿಗೆ ಆರು ಪದಕಗಳನ್ನು ಗೆದ್ದಿದೆ.

 

ಬ್ಯಾಡ್ಮಿಂಟನ್‌ನಲ್ಲಂತೂ ಮೊದಲ ಸಲ ಪದಕ ಗಳಿಸಿದೆ. ಜತೆಗೆ ಶೂಟಿಂಗ್, ಮಹಿಳಾ ಬಾಕ್ಸಿಂಗ್, ಕುಸ್ತಿಗಳಲ್ಲಿಯೂ ಭಾರತ ಪದಕದ ಹೆಗ್ಗಳಿಕೆ ಸಾಧಿಸಿದೆ. ಭಾರತದ ಶೂಟರ್‌ಗಳು ಪದಕ ಗೆದ್ದಿರುವುದಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.



ಮೇರಿ ಕೋಮ್ ಫೈನಲ್ ತಲುಪುವುದರಿಂದ ವಂಚಿತರಾದರೂ, ದೇಶದ ಯುವಜನರಿಗೆ ಸ್ಫೂರ್ತಿ ನೀಡುವಂತಹ ಸಾಮರ್ಥ್ಯ ತೋರಿದ್ದಾರೆ. ಸೈನಾ, ಸುಶೀಲ್, ವಿಜಯ್ ಕುಮಾರ್, ಗಗನ್, ಯೋಗೀಶ್ವರ್ ತಮ್ಮ ಸಾಮರ್ಥ್ಯದ ಮೂಲಕ ಭಾರತದ ಎಳೆಯರಿಗೆ ಮಾದರಿ ಎನಿಸಿದ್ದಾರೆ.

 

ಭಾರತ ಬಂಗಾರ ಗೆಲ್ಲದಿರಬಹುದು, ಆದರೆ ಭವಿಷ್ಯದಲ್ಲಿ ಮಹತ್ವದ ಸಾಧನೆ ತೋರುವ ದಿಸೆಯಲ್ಲಿ ಆತ್ಮವಿಶ್ವಾಸದ ಆಳವಾದ ಹೆಜ್ಜೆ ಇರಿಸಿರುವುದಂತೂ ನಿಜ. ಹಾಗೆಂದುಕೊಂಡು ಇಷ್ಟಕ್ಕೇ ಸಂತೃಪ್ತರಾಗಿ ಸಂಭ್ರಮಿಸುತ್ತಾ ವಿರಮಿಸುವ ಅಗತ್ಯವಿಲ್ಲ. 



ಲಂಡನ್‌ನಲ್ಲಿ ಕಲಿತ `ಪಾಠ~ವನ್ನು ಗಮನದಲ್ಲಿಟ್ಟುಕೊಂಡು ನಾವು ಮುಂದಿನ ಒಲಿಂಪಿಕ್ಸ್‌ಗೆ ಈಗಿನಿಂದಲೇ ತಯಾರಿ ನಡೆಸಬೇಕಿದೆ. ಈ ಬಗ್ಗೆ ಸರ್ಕಾರ ಮತ್ತು ಸಂಬಂಧಪಟ್ಟ ಕ್ರೀಡಾ ಫೆಡರೇಷನ್‌ಗಳು ಹೆಚ್ಚು ಗಮನ ಹರಿಸಬೇಕಿದೆ. ಈ ಒಲಿಂಪಿಕ್ಸ್‌ನಲ್ಲಿ ನಮ್ಮ ದೌರ್ಬಲ್ಯ ಏನಿತ್ತು ಎಂಬುದರ ಬಗ್ಗೆಯೂ ಕ್ರೀಡಾಡಳಿತಗಾರರು ಗಂಭೀರವಾಗಿ ಯೋಚಿಸಬೇಕಿದೆ. 



ವಿಕಾಸ್, ಪೂನಿಯಾ ಎಡವಿದ ಹೆಜ್ಜೆಗಳ ಜಾಡು ಹುಡುಕಿ ನಾವು ಸುಧಾರಿಸಿಕೊಳ್ಳಬೇಕಿದೆ. ಹಿಂದೆ ನಮ್ಮ ಹೆಮ್ಮೆಯ ಪ್ರತೀಕವಾಗಿದ್ದ ಹಾಕಿ ಈ ನೆಲದಲ್ಲಿ ತಲುಪಿರುವ ದಯನೀಯ ಸ್ಥಿತಿಯ ಬಗ್ಗೆ ಆರೋಪ ಪ್ರತ್ಯಾರೋಪ ಮಾಡುತ್ತಾ ದಿನ ಕಳೆಯುವುದಕ್ಕಿಂತ ಈ ಕ್ರೀಡೆಯಲ್ಲಿ ವೃತ್ತಿಪರತೆ ತಂದು, ಮತ್ತೆ ನಮ್ಮ ಆಟಗಾರರು ಜಾಗತಿಕ ಮಟ್ಟದಲ್ಲಿ ಎದ್ದು ನಿಲ್ಲುವಂತೆ ಮಾಡಬೇಕಿದೆ.



ಇದು ಮಾನವಕುಲದ ಮಹಾಮೇಳ. ಯಥಾ ಪ್ರಕಾರ ಅಮೆರಿಕಾ, ಚೀನಾ ಪದಕ ಗಳಿಕೆಯಲ್ಲಿ ಸಿಂಹಪಾಲು ಪಡೆದಿವೆ, ನಿಜ. ಜತೆಗೆ ಬಹಳಷ್ಟು ಸಣ್ಣಪುಟ್ಟ ದೇಶಗಳೂ ಪದಕ ಗಳಿಕೆಯಲ್ಲಿ ಹೆಚ್ಚುಗಾರಿಕೆ ತೋರಿಸಿವೆ. ಇದರಿಂದ ಒಲಿಂಪಿಕ್ಸ್ ಮೂಲ ಆಶಯ ಗರಿಗೆದರಿದಂತಾಗಿದೆ.



ಜಮೈಕ, ಕೆನ್ಯಾಗಳಂತಹ ದೇಶಗಳ ಕ್ರೀಡಾಪಟುಗಳ ಅಬ್ಬರ, ಸೌದಿ ಅರೆಬಿಯಾದ ಸಾರಾ ಪಾಲ್ಗೊಳ್ಳುವಿಕೆ ನೀಡಿದ ಸಂದೇಶ, ಈಜುಗಾರ ಫೆಲ್ಪ್ಸ್ ಪದಕ ಗಳಿಕೆಯ ದಾಖಲೆ, ಬೋಲ್ಟ್ ಅಸಾಮಾನ್ಯ ವೇಗ ಮುಂತಾದ ಸಂಗತಿಗಳನ್ನು ಮರೆಯುವಂತಿಲ್ಲ.



ವಿಶ್ವ ಉದ್ದೀಪನಾ ಮದ್ದು ನಿರೋಧಕ ಏಜೆನ್ಸಿಯು ತೆಗೆದುಕೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಮದ್ದು ಸಂಬಂಧಿ ವಿವಾದಗಳು ತೀರಾ ಕಡಿಮೆಯಾದವು.

 

ಇದು ಆರೋಗ್ಯಕರ ಬೆಳವಣಿಗೆ. ಬಹಳಷ್ಟು ಸ್ಪರ್ಧೆಗಳಲ್ಲಿ ಅತ್ಯುತ್ತಮ ಪೈಪೋಟಿ ಮೂಡಿ ಬಂದಿತು. ಹಲವು ದಾಖಲೆಗಳನ್ನು ಹೊಸದಾಗಿ ಬರೆಯಲಾಯಿತು. ಜಗತ್ತಿನ ಕ್ರೀಡಾ ಚರಿತ್ರೆಯಲ್ಲಿ ಲಂಡನ್ ಇದೀಗ ಒಂದು ಮೈಲುಗಲ್ಲಾಗಿ ನಿಂತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.