ಶುಕ್ರವಾರ, ನವೆಂಬರ್ 22, 2019
22 °C

ಆತ್ಮವಿಶ್ವಾಸ ಬೆಳೆಸುವ ರಂಗಭೂಮಿ: ದಿಲೀಪ್

Published:
Updated:

ಮೈಸೂರು: ಸಿನಿಮಾದಲ್ಲಿ ನಟಿಸುವುದರಿಂದ ಖ್ಯಾತಿ, ಹಣ ದೊರೆಯಬಹುದು, ಆದರೆ ರಂಗಭೂಮಿಯಲ್ಲಿ ಸಿಗುವ ಖುಷಿಯನ್ನು ಚಿತ್ರರಂಗ ನೀಡುವುದಿಲ್ಲ ಎಂದು ನಟ ದಿಲೀಪ್ ರಾಜ್ ಅಭಿಪ್ರಾಯಪಟ್ಟರು.ನಗರದ ಬೋಗಾದಿಯ ಬ್ಯಾಂಕ್ ಕಾಲೊನಿಯ ಶ್ರೀಸಾಯಿ ಸರಸ್ವತಿ ವಿದ್ಯಾ ಕೇಂದ್ರದ ಆವರಣದಲ್ಲಿ ನಟನ ಸಂಸ್ಥೆ ಭಾನುವಾರ ಏರ್ಪಡಿಸಿದ್ದ `ರಜಾಮಜಾ' ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಕಲಾವಿದರ ವ್ಯಕ್ತಿತ್ವವನ್ನು ರಂಗಭೂಮಿ ರೂಪಿಸುತ್ತದೆ. ಸಮಾಜಮುಖಿ ಜೀವನ ಶೈಲಿಯನ್ನು ಕಲಿಸುತ್ತದೆ. ಹೀಗಾಗಿ ಈ ಕ್ಷೇತ್ರದಲ್ಲಿ ಎಲ್ಲರಿಗೂ ಅವಕಾಶಗಳು ಸಿಗುತ್ತವೆ. ಆದರೆ ಸಿನಿಮಾ, ಕಿರುತೆರೆಯಲ್ಲಿ ಏಕತಾನತೆ ಕಾಡುತ್ತದೆ. ರಂಗಭೂಮಿಯಷ್ಟು ವೈವಿಧ್ಯತೆ ಚಿತ್ರರಂಗದಲ್ಲಿ ಇಲ್ಲ ಎಂದು ಹೇಳಿದರು.ರಂಗದ ಮೇಲಿನ ನಾಟಕದ ಪ್ರತಿ ಪ್ರದರ್ಶನ ಕಲಾವಿದರಲ್ಲಿ ಆತ್ಮವಿಶ್ವಾಸ ಹುಟ್ಟಿಸುತ್ತದೆ. ಹೊಸ ಸಾಧನೆಗಳಿಗೆ ಕಲಾವಿದರನ್ನು ಪ್ರೇರೇಪಿಸುತ್ತದೆ. ಹೀಗಾಗಿ ರಂಗಭೂಮಿಗೆ ಮರಳಬೇಕು ಎಂಬ ಹಂಬಲ ಸಿನಿಮಾ ಕಲಾವಿದರಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳಲ್ಲಿ ನಾಟಕಗಳ ಕುರಿತು ಒಲವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.ಸಿನಿಮಾಗೆ ರಂಗಭೂಮಿ ಮೆಟ್ಟಿಲು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯವಿದೆ. ಪ್ರಸ್ತುತ ಸಂದರ್ಭದಲ್ಲಿ ರಂಗಭೂಮಿ ಕೂಡ ಉತ್ತಮ ಕಲಾವಿದರ ಕೊರತೆಯನ್ನು ಎದುರಿಸುತ್ತಿದೆ. ಆಕರ್ಷಣೆ ಕಳೆದುಕೊಳ್ಳುತ್ತಿರುವ ರಂಗಭೂಮಿಗೆ ಹೊಸಬರು ಬರುತ್ತಿರುವುದು ನೈಜ ಕಾಳಜಿಯಿಂದಲೇ ಹೊರತು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅಲ್ಲ ಎಂದರು.ಕಿರುತೆರೆ ನಟ ಕಿಟ್ಟಿ ಮಾತನಾಡಿ, ದಾರಿ ತಪ್ಪುತ್ತಿರುವ ಯುವ ಸಮೂಹವನ್ನು ರಂಗಭೂಮಿಗೆ ಕರೆತರುವ ಅಗತ್ಯವಿದೆ.ವಿಶ್ವವಿದ್ಯಾನಿಲಯದಂತಿರುವ ರಂಗಭೂಮಿ ನಿಜವಾದ ಜೀವನ ಕಲಿಸುತ್ತದೆ ಎಂದು ಹೇಳಿದರು.ಕಿರುತೆರೆ ನಟ ಪಿ.ಡಿ.ಸತೀಶಚಂದ್ರ, ನಟ ಮಂಡ್ಯ ರಮೇಶ್, ರಂಗಕರ್ಮಿ ರಾಜಶೇಖರ ಕದಂಬ, ಅಮರ ಕಲಾ ಸಂಘದ ಸುಬ್ಬನರಸಿಂಹ ಹಾಜರಿದ್ದರು.

ಪ್ರತಿಕ್ರಿಯಿಸಿ (+)