ಮಂಗಳವಾರ, ಮೇ 24, 2022
29 °C

ಆತ್ಮವಿಶ್ವಾಸ ಹೆಚ್ಚಿಸುವ ಪ್ರತಿಭಟನಾ ಮನೋಭಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನೋಭಾವನೆಯನ್ನು ಮಹಿಳೆಯರು ಬೆಳೆಸಿಕೊಳ್ಳುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ ಕರೆ ನೀಡಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ಮಂಗಳವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳೆಯರ ಸಬಲೀಕರಣ ಎಂದರೆ ಕೇವಲ ಶಿಕ್ಷಣ ನೀಡಿ, ಉದ್ಯೋಗ ದೊರೆಯುವಂತೆ ಮಾಡುವುದಲ್ಲ. ಬದಲಿಗೆ ಅವರಲ್ಲಿ ಆತ್ಮವಿಶ್ವಾಸ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಸಾಮರ್ಥ್ಯ ಬೆಳೆಸಬೇಕು ಎಂದು ಸಲಹೆ ನೀಡಿದರು.ಮಾನವ ಹಕ್ಕುಗಳ ವೇದಿಕೆ ಕಾರ್ಯದರ್ಶಿ ಎಲ್.ಎಚ್. ಅರುಣಕುಮಾರ್ ಮಾತನಾಡಿ,  ಹಿಂದೆ ಬಾಲ್ಯವಿವಾಹ, ಸತಿ ಸಹಗಮನ, ದೇವದಾಸಿ ಮತ್ತಿತರ ಅನಿಷ್ಟ ಪದ್ಧತಿಗಳು ಇದ್ದವು. ಅನೇಕ ಸುಧಾರಕರು ಮಹಿಳಾ ಶೋಷಣೆ ವಿರುದ್ಧ ಧ್ವನಿ ಎತ್ತಿದರು. ಮಹಿಳೆಯರು ಸಂಘಟಿತ ಹೋರಾಟ ನಡೆಸಿದರು. ಇದರಿಂದಾಗಿ ಇಂದು ಮಹಿಳೆಯರಿಗೆ ಸೂಕ್ತ ಸ್ಥಾನ ದೊರೆಕಿ ಸಬಲೀಕರಣ ಸಾಧ್ಯವಾಗಿದೆ ಎಂದರು.ಮಹಿಳೆಯರು ಮಹಿಳೆಯರನ್ನು ಶೋಷಿಸುವ ಘಟನೆಗಳು ನಡೆಯುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ. ಕಾನೂನಿನಿಂದಲೇ ಬದಲಾಯಿಸುತ್ತೇವೆ ಎನ್ನುವ ಭ್ರಮೆ ಬೇಡ. ಮನೋಭಾವನೆಗಳು ಬದಲಾದರೆ, ಕಾನೂನು ಸಮರ್ಪಕವಾಗಿ ಅನುಷ್ಠಾನಗೊಂಡರೆ ಮಾತ್ರ ಸಮಾನತೆಗೆ ಅರ್ಥ ಸಿಗುತ್ತದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿ. ವಾಸುದೇವ, ಶಿಶು ಅಭಿವೃದ್ಧಿ ಯೊಜನಾಧಿಕಾರಿ ಕೆ.ಎಸ್. ರಾಜಾನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.