ಶುಕ್ರವಾರ, ನವೆಂಬರ್ 22, 2019
26 °C
ಮುಚ್ಚಳಿಕೆ ಬರೆದ ಕ್ಷೇತ್ರದ್ಲ್ಲಲೇ ಭಾರೀ ಅಕ್ರಮ: ವಿಷಾದ

ಆತ್ಮಸಾಕ್ಷಿ ಅನುಸಾರ ಚುನಾವಣೆ ನಡೆಯಲಿ

Published:
Updated:

ಹರಪನಹಳ್ಳಿ: ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಎಲ್ಲಾ ರಾಜಕೀಯ ಪಕ್ಷದ ಅಭ್ಯರ್ಥಿಗಳು `ಚುನಾವಣೆಯಲ್ಲಿ ಹಣ, ಹೆಂಡ ಹಂಚುವುದಿಲ್ಲ, ಆಮಿಷ ಒಡ್ಡುವುದಿಲ್ಲ. ಮಠದ ಮಾರ್ಗದರ್ಶನ ಹಾಗೂ ಅಪ್ಪಣೆಯ ಅನುಸಾರ ಪರಿಶುದ್ಧ ಚುನಾವಣೆ ಮಾಡುತ್ತೇವೆ' ಎಂದು ಪ್ರಮಾಣ ಸ್ವೀಕರಿಸಿ, ಮುಚ್ಚಳಿಕೆ ಬರೆದುಕೊಟ್ಟಿದ್ದ ಅಭ್ಯರ್ಥಿಗಳ ಕ್ಷೇತ್ರದಲ್ಲಿ ಉಳಿದೆಲ್ಲಾ ಕ್ಷೇತ್ರಗಳಿಗಿಂತ ಭಾರೀ ಅಕ್ರಮ ನಡೆದಿದೆ ಎಂಬ ಜಿಲ್ಲಾಧಿಕಾರಿ ವರದಿ ತಮಗೆ ಆಘಾತ ಉಂಟುಮಾಡಿದೆ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.ತಾಲ್ಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಗುರುವಾರ ಆಂಜನೇಯ ಹಾಗೂ ಬಸವೇಶ್ವರ ದೇಗುಲಗಳ ನೂತನ ಗೋಪುರ  ಕಳಸಾರೋಹಣ,  ಜೋಡಿ ರಥಗಳ ಉದ್ಘಾಟನೆ ಬಳಿಕ,  ನಡೆದ ಸರ್ವಶರಣ  ಸಮ್ಮೇಳನ  ಉದ್ಘಾಟಿಸಿದ  ನಂತರ  ಆಶೀರ್ವಚನ  ನೀಡಿದರು.ಆಶೀರ್ವಾದ  ಬೇಡಿ   ಮಠಕ್ಕೆ ಬಂದ ಅವರು ನಮ್ಮ ಮಠದ ಜಾತಿಯ ಶಿಷ್ಯರೇನು ಆಗಿರಲಿಲ್ಲ. ಮಠದ ವೈಚಾರಿಕ ಪರಂಪರೆಯ ಶಿಷ್ಯರಾಗಿದ್ದರು. ಅವರನ್ನೇನು ನಾವಾಗಿ ನಾವೇ ಆಮಂತ್ರಿಸಿರಲಿಲ್ಲ, ಅವರಾಗಿಯೇ ಬಂದಿದ್ದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರು ಸೇರಿದಂತೆ ಎಲ್ಲಾ ಪಕ್ಷದವರನ್ನು ಕರೆಸಿ, ಎಲ್ಲರನ್ನು ವಿಚಾರಿಸಿದೆವು. ಎಲ್ಲರೂ ಹಣ, ಹೆಂಡ ಹಂಚುವುದಿಲ್ಲ, ಆಮಿಷ ಒಡ್ಡುವುದಿಲ್ಲ. ಪರಿಶುದ್ಧವಾದ ಚುನಾವಣೆಯನ್ನು ತಮ್ಮ ಮಾರ್ಗದರ್ಶನದಲ್ಲಿ ಮಾಡುತ್ತೇವೆ ಎಂದು ಭರವಸೆ ನೀಡಿ, ಪ್ರಮಾಣ ಸ್ವೀಕರಿಸಿ ಶಿರಬಾಗಿ ನಮಸ್ಕಾರ ಮಾಡಿದರು. ಜತೆಗೆ ಮುಚ್ಚಳಿಕೆಗೆ ಸಹಿ ಹಾಕಿದ್ದರು.ಜನರ ಸಮಕ್ಷಮದಲ್ಲಿ ಬಹಿರಂಗವಾಗಿ ಪ್ರಮಾಣ ಮಾಡಿ ಎಂದು ಸೂಚಿಸಿದಾಗ ಎಲ್ಲರೂ ಒಪ್ಪಿಕೊಂಡರು. ಹೀಗಾಗಿ, ಬಹಿರಂಗ ಸಭೆ ಏರ್ಪಡಿಸಿದೆವು. ಅದಕ್ಕಿಂತ ಪೂರ್ವದಲ್ಲಿ ಜಿಲ್ಲಾಧಿಕಾರಿಯಿಂದ ಕ್ಷೇತ್ರದಲ್ಲಿ ನಡೆದ ಅಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡಾಗ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿತು. ಹೀಗಾಗಿ, ಮಠದಲ್ಲಿ ಕೊಟ್ಟ ಮಾತಿಗೆ ತಪ್ಪಿದ ಕಾರಣ, ಬಹಿರಂಗವಾಗಿ ಪ್ರಮಾಣ ಬೋಧಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು ಎಂದರು.ಪ್ರಮಾಣಕ್ಕೆ ಪಾವಿತ್ರ್ಯತೆ ಹಾಗೂ ಗೌರವದ ಸ್ಥಾನಮಾನ ಇದೆ. ಹೀಗಾಗಿ, ಅದಕ್ಕೆ ಚ್ಯುತಿಯುಂಟು ಮಾಡಿದ್ದರಿಂದ ಆ ನಿರ್ಧಾರದಿಂದ ಹಿಂದೆ ಸರಿದು, ಆತ್ಮಸಾಕ್ಷಿಗೆ ಅನುಗುಣವಾಗಿ ಚುನಾವಣೆ ನಡೆಸುವಂತೆ ಸೂಚಿಸಿ ವೇದಿಕೆಯಿಂದ ನಿರ್ಗಮಿಸಿದೆವು ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ ಕನಿಷ್ಠ 5ವರ್ಷದ ತನಕ ಅದೇ ಪಕ್ಷದಲ್ಲಿ ಇರಬೇಕು. ಅದಕ್ಕಾಗಿ ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತರಬೇಕು. ಜತೆಗೆ, ಚುನಾವಣೆಯಲ್ಲಿ ಇಂತಿಷ್ಟು ಸ್ಥಾನ ಪಡೆದ ಪಕ್ಷಕ್ಕೆ ಸರ್ಕಾರ ರಚಿಸುವ ಈಗಿರುವ ಕಾಯ್ದೆಯನ್ನು ಸಹ ಪರಿಷ್ಕರಿಸಬೇಕಾಗಿದೆ. ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯದ ಸಂದರ್ಭದಲ್ಲಿ ಶಾಸಕರ ಕುದುರೆ ವ್ಯಾಪಾರಕ್ಕೆ ಕಾರಣ ಆಗುತ್ತಿದೆ. ಹೀಗಾಗಿ, ಹೆಚ್ಚು ಸ್ಥಾನ ಪಡೆದು ಹೊರಹೊಮ್ಮುವ ಪಕ್ಷ ಸರ್ಕಾರ ರಚಿಸಲು ಸಹಕಾರಿ ಆಗುವಂತೆ ಕಾಯ್ದೆಗೆ ತಿದ್ದುಪಡಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)