ಬುಧವಾರ, ಅಕ್ಟೋಬರ್ 16, 2019
22 °C

ಆತ್ಮಸ್ಥೈರ್ಯ ಇರಲಿ...

Published:
Updated:

ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾಳೆ. ಆಧುನಿಕ ಯುಗದಲ್ಲಿ ಪುರುಷರ ಸರಿಸಮನಾಗಿ ದುಡಿಯುತ್ತಿದ್ದಾಳೆ ಎಂದು ನಾವು ಹೇಳುತ್ತಿದ್ದರೂ ಅವಳ ಮೇಲಾಗುತ್ತಿರುವ ಮಾನಸಿಕ, ದೈಹಿಕ ಕಿರುಕುಳ ಮಾತ್ರ ಕಡಿಮೆಯಾಗುತ್ತಿಲ್ಲ.  ಕೆಲವು ದಿನಗಳ ಹಿಂದೆ ವೈದ್ಯ ಪತಿ ತನ್ನ ಪತ್ನಿಗೆ ಕೊಡುತ್ತಿದ ಕಿರುಕುಳವನ್ನು ಟಿವಿ ಯಲ್ಲಿ ನೋಡ್ದ್ದಿದೇವೆ. ಡಾಕ್ಟರ್ ಪತಿ ತನ್ನ ಪತ್ನಿಗೆ ಹಣ ಕೊಡುವಂತೆ ಪೀಡಿಸುತ್ತಿದ್ದುದಲ್ಲದೆ, ಬೆತ್ತಲೆ ವಿಡಿಯೊವನ್ನು ವೆಬ್‌ಸೈಟ್‌ನಲ್ಲಿ ಬಿತ್ತರಿಸಿ ಅವಳ ನಂಬಿಕೆಗೆ ಅನರ್ಹ ಎನ್ನಿಸಿದ್ದಾನೆ. ಈಗ ಪತ್ನಿ ಡೈವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾಳೆ. ಅವಳಿಗೆ ವಿಚ್ಛೇದನ ಸಿಗಬಹುದು.ಜತೆಗೆ ಅವಳೂ ಎಂಜಿನಿಯರ್. ಆದ್ದರಿಂದ ತನ್ನ ಸ್ವಂತ ಬದುಕನ್ನು ಕಟ್ಟಿ ಕೊಳ್ಳಬಲ್ಲಳು. ಆದರೆ ಅವಳಿಗಾದ ಅವಮಾನಗಳ ನೋವು?  ಹುಡುಗ ಒಳ್ಳೆ ಕೆಲಸದಲ್ಲಿದ್ದಾನೆ ಎಂದಾಗ ಸಾಮಾನ್ಯವಾಗಿ ಮನೆಯವರು ಶಕ್ತಿ ಮೀರಿ ಮದುವೆಮಾಡಿಕೊಡುತ್ತಾರೆ.  ಎಷ್ಟೋ ಕನಸುಗಳನ್ನು ಹೊತ್ತು ಮದುವೆಯಾಗುವ ಮಹಿಳೆಗೆ ಈ ರೀತಿಯ ದೌರ್ಜನ್ಯ ಅಸಹನೀಯ. ಈ ಸನ್ನಿವೇಶ ಮದುವೆಯ ಬಗ್ಗೆಯೇ ಭಯ ಹುಟ್ಟಿಸುವ ರೀತಿಯಲ್ಲಿದೆ. ಹೆಂಡತಿಯನ್ನೇ ಸಾಮಾಜಿಕ ತಾಣಗಳ ಮೂಲಕ ಮಾರುವ, ಪ್ರೀತಿಸಿ ಹುಡುಗಿಗೆ ಮೋಸ ಮಾಡಿ ವೇಶ್ಯಾವಾಟಿಕೆಗೆ ತಳ್ಳುವ, ಪ್ರೀತಿಸಿಲ್ಲ ಎಂಬ ಕಾರಣಕ್ಕೆ ಹುಡುಗಿಗೆ ಆ್ಯಸಿಡ್ ಎರಚುವ, ಗುರುವೇ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವ ಹೀಗೆ ಅನೇಕ ಪ್ರಕರಣಗಳು ನಡೆಯುತ್ತಲೇ ಇವೆ. ಆದರೆ ಎಷ್ಟೋ ಪ್ರಕರಣಗಳು ಸಮಾಜಕ್ಕೆ ಅಂಜಿ ಬಹಿರಂಗ ಪಡಿಸದಿದ್ದಾಗ ಹಾಗೇ ಮರೆಯಾಗುತ್ತವೆ.  ಹುಡುಗರಿಗಿರುವಷ್ಟು ಸ್ವಾತಂತ್ರ್ಯ ಚಿಕ್ಕ ವಯಸ್ಸಿನಿಂದಲೂ ಹುಡುಗಿಗೆ ದೊರಕುವುದಿಲ್ಲ. ಮನೆಯಿಂದಲೇ ಆರಂಭವಾಗುವ ಬೇಲಿಯನ್ನು ಬಿಡಿಸಿಕೊಳ್ಳಲಾಗದೆ ಸಾಗುತ್ತಾಳೆ. ಮದುವೆಯ ನಂತರ ಗಂಡನ ಮನೆಯನ್ನು ಅನುಸರಿಸಿಕೊಂಡು ಹೋಗುವ ಅನಿವಾರ್ಯ. ನಂತರ ಮಕ್ಕಳನ್ನು ಸಾಕಿ ಬೆಳೆಸುವ ಹೊಣೆಗಾರಿಕೆ. ಉದ್ಯೋಗನಿರತ ಮಹಿಳೆಯರಿಗೆ ಇವೆಲ್ಲವನ್ನು ಒಟ್ಟಿಗೇ ನಿಭಾಯಿಸಿಕೊಂಡು ಹೋಗುವ ಜವಾಬ್ದಾರಿ.

 

ಕಚೇರಿಯಲ್ಲೂ ಲೈಂಗಿಕ ಕಿರುಕುಳಕ್ಕೊಳಗಾಗುವ ಮಹಿಳೆಯರು ಇದ್ದಾರೆ. ಆದರೆ ಮನೆ ನಿಭಾಯಿಸಲು ಉದ್ಯೋಗ ಅನಿವಾರ್ಯವಾದರಿಂದ ಈ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳಲಾಗದ ಪರಿಸ್ಥಿತಿ. ಇವಿಷ್ಟೆ ಸಾಲದೆಂಬಂತೆ ಕಿಡಿಗೆಡಿಗಳಿಂದ ರಾತ್ರಿ ಹೊತ್ತಿನಲ್ಲಿ ಮಹಿಳೆಯರು ರಸ್ತೆಯಲ್ಲಿ ತಿರುಗಲಾರದ ಸ್ಥಿತಿ.  ಈ ಎಲ್ಲಾ ಸಮಸ್ಯೆಗಳು ಪೂರ್ತಿಯಾಗಿ ಪರಿಹಾರವಾಗುವುದು ಸಾಧ್ಯವಿಲ್ಲವಾದರೂ, ದಿಟ್ಟತನದಿಂದ ಇವೆಲ್ಲವನ್ನೂ ಎದುರಿಸಲು ಮಹಿಳೆ ಶಕ್ತವಾದರೆ ಸ್ವಲ್ಪ ಮಟ್ಟಿಗಾದರೂ ಈ ರೀತಿಯ ದೌರ್ಜನ್ಯವನ್ನು ಕಡಿಮೆಮಾಡಲು ಸಾಧ್ಯ.ತಮಗೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅಂಜಿಕೆಯನ್ನು ಬಿಟ್ಟು ತಮಗಾಗುತ್ತಿರುವ ತೊಂದರೆಯನ್ನು ಆಪ್ತರೊಂದಿಗೆ ಹಂಚಿಕೊಳ್ಳಬೇಕು. ಎಲ್ಲವನ್ನೂ ಸಹಿಸಿಕೊಂಡು ಹೋಗುವ ಮನೋಭಾವ ಬಿಟ್ಟು ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು.

 

Post Comments (+)