ಆತ್ಮಸ್ಥೈರ್ಯ ಮೂಡಿಸಿದ ‘ಸಾಹಸ ಶಿಬಿರ’

ಕಾರವಾರ: ಕಡಲತೀರದಲ್ಲಿ ರಕ್ಷಣಾ ಕವಚ ಧರಿಸಿದ್ದ ಪುಟ್ಟ ಮಕ್ಕಳು ಯಾವುದೇ ಅಂಜಿಕೆಯಿಲ್ಲದೇ ನೀರಿಗಳಿದು ಈಜು ಕಲಿಯುತ್ತಿದ್ದರು. ಇನ್ನು ಕೆಲ ಮಕ್ಕಳು ಚಿಕ್ಕ ದೋಣಿಯಲ್ಲಿ ಕುಳಿತು ಹರಿಗೋಲನ್ನು ದೂಡುತ್ತಾ ಮುಂದೆ ಸಾಗಲು ಯತ್ನಿಸುತ್ತಿದ್ದ ದೃಶ್ಯಗಳು ನೋಡುಗರನ್ನು ಬೆರಗುಗೊಳಿಸಿತು.
ಇದೆಲ್ಲ ಕಂಡದ್ದು ಇಲ್ಲಿನ ಅಲ್ಲಿಗದ್ದಾ ಕಡಲತೀರದಲ್ಲಿ. ಯುವ ಸಬಲೀಕರಣ ಇಲಾಖೆ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಆಶ್ರಯದಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಒಂದು ವಾರಗಳ ಸಾಹಸ ಕ್ರೀಡಾ ತರಬೇತಿ ಬೇಸಿಗೆ ಶಿಬಿರದಲ್ಲಿ ಅಕಾಡೆಮಿ ವ್ಯವಸ್ಥಾಪಕ ಹಾಗೂ ಮುಖ್ಯ ತರಬೇತುದಾರ ಪ್ರಕಾಶ್ ಹರಿಕಂತ್ರ ಅವರು ಮಕ್ಕಳಿಗೆ ಈಜು, ಕಯಾಕಿಂಗ್ ಮತ್ತಿತರ ಸಾಹಸ ವಿದ್ಯೆಯನ್ನು ಕಲಿಸುತ್ತಿದ್ದರು.
ಮೇ 6ರಿಂದ ಆರಂಭಗೊಂಡಿರುವ ಈ ತರಬೇತಿ ಶಿಬಿರ ಮೇ 12ರಂದು ಮುಕ್ತಾಯಗೊಳ್ಳಲಿದೆ. ಶಿಬಿರದಲ್ಲಿ 8ರಿಂದ 16ರ ವಯೋಮಿತಿಯವರಿಗೆ ಅವಕಾಶ ಕಲ್ಪಿಸಲಾಗಿದ್ದು, ಒಟ್ಟು 35 ಮಕ್ಕಳು ಪಾಲ್ಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹಳಿಯಾಳ ಹಾಗೂ ಕಾರವಾರ ತಾಲ್ಲೂಕಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದಾರೆ.
ಶಿಬಿರದಲ್ಲಿ ಮಕ್ಕಳು ಈಜು, ಕಯಾಕಿಂಗ್ ಜೊತೆಗೆ ಕೊರೆಕಲ್, ರ್್ಯಾಫ್ಟಿಂಗ್, ಚಾರಣ, ರ್ಯಾಪ್ಲಿಂಗ್, ರೀವರ್ ಕ್ರಾಸಿಂಗ್ ಕಲಿಯುವುದರ ಜೊತೆಗೆ ಪ್ರಕೃತಿ ಅಧ್ಯಯನ ಕೂಡ ನಡೆಸಿದ್ದಾರೆ. ಅಷ್ಟೆ ಅಲ್ಲದೇ ಮನರಂಜನಾ ಕ್ರೀಡಾ ಸ್ಪರ್ಧೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವ ಮೂಲಕ ನಕ್ಕು ನಲಿಯುತ್ತಿದ್ದಾರೆ.
ಸದಾಶಿವಗಡದಲ್ಲಿನ ಕೇಂದ್ರದಲ್ಲಿ ಶಿಬಿರಾರ್ಥಿಗಳಿಗೆ ಲ್ಯಾಡರ್ ಕ್ಲೈಂಬಿಂಗ್, ರ್್ಯಾಪ್ಲಿಂಗ್ ಬಗ್ಗೆ ತರಬೇತಿ ನೀಡಲಾಯಿತು. ಕೇಂದ್ರದ ಬಳಿಯಲ್ಲೇ ಇರುವ ಕಾಳಿನದಿಯಲ್ಲಿ ರೀವರ್ ರ್್ಯಾಫ್ಟಿಂಗ್, ರೀವರ್ ಕ್ರಾಸಿಂಗ್ ಮಾಡಿಸಲಾಯಿತು. ಕಾರವಾರ ತಾಲ್ಲೂಕಿನ ಗುಡ್ಡೆಹಳ್ಳಿಯಲ್ಲಿ ಚಾರಣ ಹಾಗೂ ಅಲಿಗದ್ದಾ ಕಡಲತೀರದಲ್ಲಿ ಈಜು, ವಿಂಡ್ ಸರ್ಫಿಂಗ್, ಸೇಲಿಂಗ್ ಮಾಡುವ ಕಸರತ್ತುಗಳ ಬಗ್ಗೆ ತರಬೇತಿ ನೀಡಲಾಯಿತು. ಮಕ್ಕಳಿಗೆ ಯಾವುದೇ ತೊಂದರೆ ಬಾರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಮುಖ್ಯ ತರಬೇತುದಾರ ಪ್ರಕಾಶ್ ಹರಿಕಂತ್ರ ಅವರ ತಂಡದಲ್ಲಿ ಒಟ್ಟು 8 ಮಂದಿ ಇತರ ತರಬೇತುದಾರರಿದ್ದಾರೆ. ಚಿತ್ರದುರ್ಗದ ಸಿ.ಡಿ. ಪ್ರಭು, ಬೆಂಗಳೂರಿನ ಸುಮಾ ಕೃಷ್ಣ, ಅನಿತಾ ಹರಿಕಂತ್ರ, ಚಂದ್ರಕಾಂತ ಹರಿಕಂತ್ರ, ಶ್ರೀಧರ ಗುಡೆಅಂಗಡಿ, ರಘುನಾಥ ದುರ್ಗೇಕರ, ವಿಜಯಾನಂದ ನಾಯ್ಕ, ಜಯರಾಂ ಹರಿಕಂತ್ರ ಶಿಬಿರಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಪವನಕುಮಾರ ಹಾಗೂ ಆನಂದ ಹರಿಕಂತ್ರ ಸಹಾಯಕರಾಗಿದ್ದಾರೆ.
ಶಿಬಿರಾರ್ಥಿಗಳಿಂದ ನೋಂದಣಿ ಶುಲ್ಕ ಎಂದು ₨ 500 ಮಾತ್ರ ಪಡೆಯಲಾಗಿದೆ. ತರಬೇತಿ ಅವಧಿಯಲ್ಲಿ ಊಟ, ವಸತಿಯನ್ನು ಉಚಿತವಾಗಿ ನೀಡಲಾಗುತ್ತಿದೆ.
‘ಟೆಂಟ್ಗಳಲ್ಲಿ ವಸತಿ, ನಡುಗಡ್ಡೆಗಳ ಮೇಲೆ ಸಾಹಸ ಮಾಡುತ್ತ ಭೋಜನ ಸ್ವೀಕರಿಸುವುದು. ಇವೆಲ್ಲ ಜೀವನದಲ್ಲಿ ಮರೆಯಲಾಗದ ರೋಮಾಂಚನಕಾರಿ ಕ್ಷಣಗಳು’ ಎನ್ನುತ್ತಾರೆ ವಿದ್ಯಾರ್ಥಿ ಮಸೂಬ್ ಅಲಿ.
‘ಪರಿಸರ ಕಾಳಜಿಯ ಜೊತೆಗೆ ಸ್ವ ರಕ್ಷಣೆಗೆ ಇಂತಹ ತರಬೇತಿಗಳು ಉಪಯೋಗಕಾರಿ’ ಎನ್ನುತ್ತಾರೆ ಶಿಬಿರಾರ್ಥಿ ಶ್ರೇಯಾ ದುರ್ಗೇಕರ.
ಆತ್ಮಸ್ಥೈರ್ಯ ಹೆಚ್ಚಿಸಲಿದೆ..
ಸಾಹಸ ಮನೋಭಾವ ಬೆಳೆಸಿಕೊಳ್ಳಲು ಹಾಗೂ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಇಂತಹ ಬೇಸಿಗೆಯ ಸಾಹಸ ಶಿಬಿರಗಳು ಅನುಕೂಲಕರವಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಸಾಹಸ ಕ್ರೀಡೆಯನ್ನು ಬಡವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಕಲಿಸಿಕೊಡುವುದೇ ತಮ್ಮ ಉದ್ದೇಶ.
ಪ್ರಕಾಶ್ ಹರಿಕಂತ್ರ, ಮುಖ್ಯ ತರಬೇತುದಾರ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.