ಆತ್ಮಹತ್ಯಾ ದಾಳಿ: 27 ಸೈನಿಕರ ಬಲಿ

7

ಆತ್ಮಹತ್ಯಾ ದಾಳಿ: 27 ಸೈನಿಕರ ಬಲಿ

Published:
Updated:

ಪೆಶಾವರ (ಪಿಟಿಐ): ಸೇನೆಯ ಬಿಗಿ ಭದ್ರತೆಯ ಕೋಟೆ ಎಂದೇ ಭಾವಿಸಲಾಗಿದ್ದ ದೇಶದ ವಾಯವ್ಯ ಭಾಗದ ಮರ್ದಾನ್‌ನಲ್ಲಿರುವ ಸೇನಾ ತರಬೇತಿ ಕೇಂದ್ರದಲ್ಲಿ ಗುರುವಾರ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ ಕನಿಷ್ಠ 27 ಸೈನಿಕರು ಸತ್ತಿದ್ದಾರೆ ಮತ್ತು ಇತರ 40 ಮಂದಿ ಗಾಯಗೊಂಡಿದ್ದಾರೆ. ‘ಶಾಲಾ ಸಮವಸ್ತ್ರ ತೊಟ್ಟಿದ್ದ ವಿದ್ಯಾರ್ಥಿಯೊಬ್ಬ ನಡೆದುಕೊಂಡು ಬಂದು ಪೆರೇಡ್ ಮಧ್ಯೆ ಸೇರಿಕೊಂಡ. ಬಳಿಕ ಆತ ಸ್ಕೂಲ್‌ಬ್ಯಾಗ್‌ನಲ್ಲಿ ತುಂಬಿಸಿ ಇಟ್ಟಿದ್ದ ಬಾಂಬ್ ಸ್ಫೋಟಿಸಿದ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಬ್ದುಲ್ಲಾ ಖಾನ್ ತಿಳಿಸಿದ್ದಾರೆ.ಗಾಯಗೊಂಡ ಕೆಲವು ಸೈನಿಕರ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಕಿಸ್ತಾನದ ಸೇನಾಪಡೆಯ ಮೇಲೆ ನಡೆದಿರುವ ಅತ್ಯಂತ ಮಾರಕ ದಾಳಿಗಳಲ್ಲಿ ಇದೂ ಒಂದಾಗಿದೆ. ದೇಶದ ವಾಯವ್ಯ ಭಾಗದಲ್ಲಿ ಉಗ್ರರ ವಿರುದ್ಧ ಕಳೆದ ಎರಡು ವರ್ಷಗಳಿಂದ ಸಮರ ಸಾರಿರುವ ಸೇನೆಗೆ ಇದೊಂದು ದೊಡ್ಡ ಹೊಡೆತವಾಗಿದ್ದು, ಅತ್ಯಂತ ಭದ್ರತೆಯ ಸೇನಾ ಕೋಟೆಯೊಳಗೆ ಬಾಲಕ ಹೇಗೆ ನುಸುಳಿಬಂದ ಎಂಬುದು ಅಚ್ಚರಿಯ ವಿಷಯವಾಗಿದೆ.ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ದೇಹದ ಭಾಗಗಳು ದೂರ ದೂರದ ತನಕ ಚದುರಿ ಹೋಗಿದ್ದವು. ಸ್ಫೋಟಕ್ಕೆ ತಾನು ಕಾರಣ ಎಂದು ಇದುವರೆಗೆ ಯಾವ ಭಯೋತ್ಪಾದಕ ಸಂಘಟನೆಯೂ ಹೇಳಿಕೊಂಡಿಲ್ಲ. ಆದರೆ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ ಸಾಮಾನ್ಯವಾಗಿ ಇಂತಹ ದಾಳಿಗಳನ್ನು ನಡೆಸುತ್ತದೆ. ಈ ಘಟನೆಯನ್ನು ಖಂಡಿಸಿರುವ ಪ್ರಧಾನಿ ಯೂಸುಫ್ ರಝಾ ಗಿಲಾನಿ, ಭಯೋತ್ಪಾದಕರ ವಿರುದ್ಧ ಸಮರ ಸಾರಿರುವ ಭದ್ರತಾ ಪಡೆಗಳ ನೈತಿಕ ಸ್ಥೈರ್ಯವನ್ನು ಇಂತಹ ಹೇಡಿ ದಾಳಿಗಳು ಕುಗ್ಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry