ಆತ್ಮಹತ್ಯೆಗೆ ಯತ್ನಿಸಿದ ಬಾಲಕನ ಸ್ಥಿತಿ ಗಂಭೀರ

7

ಆತ್ಮಹತ್ಯೆಗೆ ಯತ್ನಿಸಿದ ಬಾಲಕನ ಸ್ಥಿತಿ ಗಂಭೀರ

Published:
Updated:

ವಿಜಾಪುರ: ಶಾಲೆಯಲ್ಲಿಯೇ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಚಿಂತಾಜನಕ ಸ್ಥಿತಿಯಲ್ಲಿರುವ ಇಲ್ಲಿಯ ನೀಲಕಂಠೇಶ್ವರ ವಿದ್ಯಾಮಂದಿರದ ವಿದ್ಯಾರ್ಥಿ ಅಜಯ್ ಪ್ರಮೋದ ಜಾಧವ (10)  ಆರೋಗ್ಯ ಸ್ಥಿತಿಬಿಗಡಾಯಿಸುತ್ತಿದೆ.

`ನನಗೆ ಯಾರ ಮೇಲೂ ಸಿಟ್ಟಿಲ್ಲ. ನನಗೆ ತ್ರಾಸ್ ಆಯಿತು, ಅದಕ್ಕೇ ಹೀಗೆ ಮಾಡಿಕೊಂಡೆ. ಈಗ ಮಾತನಾಡಲು ತೊಂದರೆಯಾಗುತ್ತಿದೆ. ನಿದ್ರೆ ಮಾತ್ರೆ ಕೊಡಿ ಎಂದು ಅಜಯ್ ಹೇಳಿದ' ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ವನಿತಾ ಎನ್.ತೊರವಿ, ಎಡ್ವರ್ಡ್ ಥಾಮಸ್ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿದ್ದವರು`ಪ್ರಜಾವಾಣಿ'ಗೆ ತಿಳಿಸಿದರು.

ಡಾ. ವನಿತಾ ಮತ್ತು ಥಾಮಸ್ ಅವರು ಅಜಯ್ ಪಾಲಕರಿಂದ ಘಟನೆಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡರು. ಇದಕ್ಕೂ ಮುನ್ನ ಅವರಿಬ್ಬರೂ ನೀಲಕಂಠೇಶ್ವರ ವಿದ್ಯಾ ಮಂದಿರಕ್ಕೆ ತೆರಳಿ ಶಿಕ್ಷಕಿ ರಾಧಿಕಾ ರಜಪೂತ, ಮುಖ್ಯ ಶಿಕ್ಷಕಿ ಅರುಣಾ ತೆನಿಹಳ್ಳಿ ಹಾಗೂ ಇತರ ಶಿಕ್ಷಕರು, ಆಡಳಿತ ಮಂಡಳಿಯವರೊಂದಿಗೆ ಸಮಾಲೋಚನೆ ನಡೆಸಿದರು.

`ಘಟನೆ ನಡೆದ ಸ್ಥಳ ಪರಿಶೀಲಿಸಿದ ಅವರು ಎಪಿಎಂಸಿ ಪೊಲೀಸ್ ಠಾಣೆ, ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿದ ಜಿಲ್ಲಾ ಸರ್ಕಾರಿ ಆಸ್ಪತ್ರೆ ವೈದ್ಯರಿಂದಲೂ ಮಾಹಿತಿ ಪಡೆದರು.

ಶಾಲೆಗಳಿಗೆ ಬೇಕು ಮನಃಶಾಸ್ತ್ರಜ್ಞರು

ವಿಜಾಪುರ: `ಮಕ್ಕಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗೆ ಯತ್ನಿಸುವ ಪ್ರವೃತ್ತಿಯನ್ನು ತಡೆಯಲು ಅವರ ಮನೋಸ್ಥೈರ್ಯ ಹೆಚ್ಚಿಸುವ ಕೆಲಸವಾಗಬೇಕಿದ್ದು ಅದಕ್ಕಾಗಿ ಪ್ರತಿ ಶಾಲೆಗೂ ಒಬ್ಬರು ಮನಃಶಾಸ್ತ್ರಜ್ಞರ ನೇಮಕವಾಗಬೇಕು. ಇಲ್ಲವಾದಲ್ಲಿ ರಾಜ್ಯದ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತಲಾ ಒಬ್ಬರು ಮನಃಶಾಸ್ತ್ರಜ್ಞರನ್ನು ನೇಮಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು' ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ವನಿತಾ ಎನ್. ತೊರವಿ, ಎಡ್ವರ್ಡ್ ಥಾಮಸ್ ಹೇಳಿದರು.

'ಮನೆಯಲ್ಲಿ ಪಾಲಕರು, ಶಾಲೆಯಲ್ಲಿ ಶಿಕ್ಷಕರು ಸ್ವಲ್ಪ ಬುದ್ಧಿವಾದ ಹೇಳಿದರೂ ಆತ್ಮಹತ್ಯೆಗೆ ಯತ್ನಿಸುವ ಅಪಾಯಕಾರಿ ಪ್ರವೃತ್ತಿ ಮಕ್ಕಳಲ್ಲಿ ಹೆಚ್ಚಾಗುತ್ತಿದೆ. ಕೇವಲ 10 ವರ್ಷ ವಯಸ್ಸಿನ ಅಜಯ್ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರದಲ್ಲಿಯೇ ಅಚ್ಚರಿ ಘಟನೆಯಾಗಿದೆ. ಇದನ್ನು ತಡೆಯಬೇಕಾದರೆ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಆಗಬೇಕು' ಎಂದು ಪ್ರತಿಪಾದಿಸಿದರು.

'ಶಿಕ್ಷಕರು ಮತ್ತು ಮಕ್ಕಳ ತರಬೇತಿಗೆ ಸರ್ಕಾರ ರೂಪಿಸಿರುವ ಎಲ್ಲ ಯೋಜನೆಗಳು ಸರ್ಕಾರಿ ಶಾಲೆಗಳಿಗೆ ಮಾತ್ರ ಸೀಮಿತವಾಗಿವೆ. ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರು-ಮಕ್ಕಳಿಗೆ ಇಂತಹ ಯಾವುದೇ ತರಬೇತಿ ಇಲ್ಲ. ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರಿಗೆ ಮಕ್ಕಳ ಹಕ್ಕುಗಳ ತರಬೇತಿಯನ್ನು ಕಡ್ಡಾಯಗೊಳಿಸಬೇಕು ಮತ್ತು ಶಿಕ್ಷಣ ಇಲಾಖೆಯ ಎಲ್ಲ ತರಬೇತಿ ಯೋಜನೆಗಳನ್ನು ಎಲ್ಲ ಮಾದರಿಯ ಶಾಲೆಗಳಿಗೂ ವಿಸ್ತರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ' ಎಂದರು.

`ಬಿಇಒ ಮತ್ತು ಡಿಡಿಪಿಐ ಕಚೇರಿಗಳಲ್ಲಿ ಈಗ ಎಲ್ಲ ವಿಷಯಗಳಿಗೂ ವಿಷಯ ಪರಿವೀಕ್ಷಕರು ಇದ್ದಾರೆ. ಇದೇ ಮಾದರಿಯಲ್ಲಿ ಮನಃಶಾಸ್ತ್ರಜ್ಞರನ್ನು ನೇಮಿಸಬೇಕು. ಎಲ್ಲ ಶಾಲೆಗಳಿಗೆ ಇವರು ಭೇಟಿ ನೀಡಿ ನಿಯಮಿತವಾಗಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಕೌನ್ಸೆಲಿಂಗ್, ತರಬೇತಿ ನೀಡುವಂತಾಗಬೇಕು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry