ಭಾನುವಾರ, ಮೇ 29, 2022
21 °C

ಆತ್ಮಹತ್ಯೆಗೆ ಸಂಶೋಧನಾ ವಿದ್ಯಾರ್ಥಿನಿ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಿವಬಸವಯ್ಯ  ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮನನೊಂದ ಸಂಶೋಧನಾ ವಿದ್ಯಾರ್ಥಿನಿ ಸರಿತಾ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಸರಿತಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿವಾಹಿತೆ ಸರಿತಾ ವಿಜಯನಗರ 3ನೇ ಹಂತದಲ್ಲಿ ವಾಸವಿದ್ದು, ಇವರಿಗೆ ಹೆಣ್ಣು ಮಗುವಿದೆ. ಪತಿ ವಿಜಯಕುಮಾರ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಒಂದು ವರ್ಷದಿಂದ ಶಿವಬಸವಯ್ಯ ಅವರ ಮಾರ್ಗದರ್ಶನದಲ್ಲಿ ಸರಿತಾ ಸಂಶೋಧನೆ ನಡೆಸುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಇವರಿಗೆ ಶಿವಬಸವಯ್ಯ ಲೈಂಗಿಕ ಕಿರುಕುಳ ನೀಡುತ್ತಿ ದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಸರಿತಾ ಶನಿವಾರ ರಾತ್ರಿ ಮನೆಯಲ್ಲಿ ನಿದ್ರೆ  ಮಾತ್ರೆಗಳನ್ನು ಸೇವಿಸಿದ್ದರಿಂದ ಅಸ್ವಸ್ಥರಾಗಿದ್ದರು.ಕೂಡಲೇ ಅವರನ್ನು ಪತಿ ವಿಜಯಕುಮಾರ್ ಆಸ್ಪತ್ರೆಗೆ ದಾಖಲಿಸಿದರು. ಈಗ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.  ‘ಮೂರು ತಿಂಗಳ ಹಿಂದಿನಿಂದಲೂ ಪ್ರೊ. ಶಿವಬಸವಯ್ಯ ಅವರು ಪಾರ್ಟಿ ಮತ್ತು ಗಿಫ್ಟ್ ಕೊಡುವಂತೆ ಸರಿತಾರನ್ನು ಒತ್ತಾಯಿಸುತ್ತಲೇ ಇದ್ದರು. ಈ ವಿಷಯವನ್ನು ಪತ್ನಿ ನನ್ನ ಗಮನಕ್ಕೆ ತಂದಿದ್ದರು. ಈ ಸಂಬಂಧ ಕುಲಪತಿ ಪ್ರೊ.ವಿ.ಜಿ.ತಳವಾರ್ ಅವರಿಗೆ ದೂರು ನೀಡಲಾಗಿತ್ತು.ಫೆಬ್ರುವರಿಯಲ್ಲಿ ಮಗು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಸರಿತಾ ವಿಭಾಗಕ್ಕೆ ಹೋಗಿರಲಿಲ್ಲ. ಮಗು ನೋಡುವ ನೆಪದಲ್ಲಿ ಶಿವಬಸವಯ್ಯ ನಮ್ಮ  ಮನೆಗೆ ಬಂದು ಸರಿತಾ ಜೊತೆ ಅಸಭ್ಯ ವರ್ತಿಸಿದ್ದಾರೆ’ ಎಂದು ವಿಜಯಕುಮಾರ್ ಆರೋಪಿಸಿದ್ದಾರೆ. ‘ಕುಲಪತಿ ಪ್ರೊ. ವಿ.ಜಿ. ತಳವಾರ್ ಸಮ್ಮುಖದಲ್ಲಿ ಈ ವಿಷಯ ಪ್ರಸ್ತಾಪವಾಗಿ ಪ್ರೊ. ಶಿವಬಸವಯ್ಯ ತಾವು ಸರಿತಾಗೆ ಮಾರ್ಗದರ್ಶನ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ವಿವಾದ ಬಗೆಹರಿಯದ ಕಾರಣ  ಮನೆಗೆ ತೆರಳಿದೆವು. ನಾನು ಶನಿವಾರ ರಾತ್ರಿ ಮನೆ ಕೆಳಗೆ ನಿಂತು ಮೊಬೈಲ್‌ನಲ್ಲಿ ಮಾತನಾಡುವಾಗ  ಸರಿತಾ  ನಿದ್ರೆ ಮಾತ್ರೆ ಸೇವಿಸಿದ್ದರು’ ಎಂದು ತಿಳಿಸಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕುಲಪತಿ ಹೇಳಿಕೆ:‘ಸಂಶೋಧನಾ ವಿದ್ಯಾರ್ಥಿನಿ ಸರಿತಾ ಮೇಲಿನ ಲೈಂಗಿಕ ಕಿರುಕುಳ ಪ್ರಕರಣವನ್ನು ವಿಶ್ವವಿದ್ಯಾನಿಲಯದ  ಮಹಿಳಾ ದೌರ್ಜನ್ಯ ವಿಚಾರಣಾ ಘಟಕ ಒಪ್ಪಿಸಿ ತನಿಖೆ ನಡೆಸಲಾಗುವುದು’ ಕುಲಪತಿ ಪ್ರೊ. ವಿ.ಜಿ.ತಳವಾರ್  ಹೇಳಿದ್ದಾರೆ. 

‘ಪ್ರೊ.ಶಿವಬಸವಯ್ಯ ಇನ್ನು ಮುಂದೆ ಸರಿತಾಗೆ ಮಾರ್ಗದರ್ಶನ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಈ  ಕುರಿತು ಲಿಖಿತ ಉತ್ತರ ನೀಡಲು 3 ದಿನಗಳ ಕಾಲಾವಕಾಶ ನೀಡಿದ್ದೇನೆ. ಅಲ್ಲದೇ ಪ್ರಕರಣ ಸಂಬಂಧ ಲಿಖಿತ  ದೂರು ನೀಡುವಂತೆ ಸರಿತಾ ಅವರನ್ನು ಸಹ ಕೇಳಿದ್ದು, ಇಬ್ಬರ ಉತ್ತರವನ್ನು ಮಹಿಳಾ ದೌರ್ಜನ್ಯ  ವಿಚಾರಣಾ ಘಟಕಕ್ಕೆ ನೀಡುತ್ತೇನೆ. ಉತ್ತರ ಬಂದ ನಂತರ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.