ಶುಕ್ರವಾರ, ಮೇ 7, 2021
27 °C

ಆತ್ಮಹತ್ಯೆ ಬೆದರಿಕೆ ಪತ್ರ: ವಿದ್ಯಾರ್ಥಿನಿ ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಶಾಲೆಯ ಪ್ರಾಂಶುಪಾಲರು ಹಾಗೂ ಗಣಿತ ಶಿಕ್ಷಕರು ಕಿರುಕುಳ ನೀಡುತ್ತಿರುವುದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ' ಎಂದು ಪತ್ರ ಬರೆದಿಟ್ಟು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಶುಕ್ರವಾರದಿಂದ ನಾಪತ್ತೆಯಾಗಿದ್ದಾಳೆ.ಶ್ರೀರಾಂಪುರ ಸಮೀಪದ ಪ್ರಕಾಶನಗರದಲ್ಲಿರುವ ರೇಣುಕಾ ಇಂಗ್ಲೀಷ್ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾ (ಹೆಸರು ಬದಲಾಯಿಸಲಾಗಿದೆ) ಕಾಣೆಯಾದವಳು. ಆಕೆ, ಲಕ್ಷ್ಮಿನಾರಾಯಣಪುರದ ಮಂಜುನಾಥ್ ಮತ್ತು ಅರುಧಂತಿ ದಂಪತಿಯ ಮಗಳು.`ಶುಕ್ರವಾರ ಸಂಜೆ ತರಗತಿ ಮುಗಿಸಿಕೊಂಡು ಮನೆಗೆ ಬಂದ ಮಗಳು, ಅಜ್ಜಿ ಮನೆಗೆ ಹೋಗುವುದಾಗಿ ಹೇಳಿ ಹೋದಳು. ಆದರೆ, ರಾತ್ರಿಯಾದರೂ ಆಕೆ ಹಿಂದಿರುಗದ ಕಾರಣ, ಮಗಳನ್ನು ಕರೆದುಕೊಂಡುಬರಲು ನಾನೇ ತಾಯಿ ಮನೆಗೆ ಹೋಗಿದ್ದೆ. ಆದರೆ, ಆಕೆ ಅಲ್ಲಿಗೂ ಹೋಗಿಲ್ಲ ಎಂಬ ಸಂಗತಿ ತಿಳಿದು ಆಘಾತವಾಯಿತು. ಪರಿಚಿತರು ಹಾಗೂ ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಟ ನಡೆಸಿದರೂ ಮಗಳು ಪತ್ತೆಯಾಗಲಿಲ್ಲ. ರಾತ್ರಿ ಮನೆಗೆ ವಾಪಸ್ ಬಂದಾಗ ಆಕೆಯ ಕೋಣೆಯಲ್ಲಿ ಒಂದು ಪತ್ರ ಸಿಕ್ಕಿತು' ಎಂದು ಅರುಂಧತಿ ತಿಳಿಸಿದರು.ಪತ್ರದಲ್ಲೇನಿತ್ತು: `ಶಾಲೆಯ ಪ್ರಾಂಶುಪಾಲರಾದ ಪ್ರಶಾಂತ್, ಗಣಿತ ಶಿಕ್ಷಕರೊಂದಿಗೆ ಸೇರಿಕೊಂಡು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ, ಶಾಲೆಗೆ ಹೋಗಲು ಇಷ್ಟವಿಲ್ಲ. ನನ್ನನ್ನು ಹುಡುಕಬೇಡಿ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ಪ್ರಾಂಶುಪಾಲರು ಹಾಗೂ ಗಣಿತ ಶಿಕ್ಷಕರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿ' ಎಂದು ವಿದ್ಯಾ ಪತ್ರ ಬರೆದಿಟ್ಟಿದ್ದಾಳೆ.ಮತ್ತೊಂದು ಪತ್ರ:  ಶನಿವಾರ ಬೆಳಿಗ್ಗೆ ವಿದ್ಯಾರ್ಥಿನಿಯ ಬ್ಯಾಗ್‌ನಲ್ಲಿ ಮತ್ತೊಂದು ಪತ್ರ ಸಿಕ್ಕಿದೆ. ಆ ಪತ್ರದಲ್ಲಿ ತನ್ನ ನೆಚ್ಚಿನ ಶಿಕ್ಷಕರು ಹಾಗೂ ಸಹಪಾಠಿಗಳಿಗೆ ವಿದ್ಯಾ ಕ್ಷಮೆಯಾಚಿಸಿದ್ದಾಳೆ. `ಉಮಾ, ಶಿಲ್ಪಾ ಹಾಗೂ ಅರ್ಪಿತಾ ಮಿಸ್, ನನ್ನನ್ನು ಕ್ಷಮಿಸಿಬಿಡಿ. ನಾನು ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸಬೇಕು ಎಂದುಕೊಂಡಿದ್ದೆ. ಆದರೆ, ಇತ್ತೀಚೆಗೆ ಕೆಲ ಶಿಕ್ಷಕರ ಕಿರುಕುಳ ಹೆಚ್ಚಾಗಿದೆ. ನಿಮ್ಮನ್ನೆಲ್ಲಾ ಬಿಟ್ಟು ದೂರ ಹೋಗುತ್ತಿದ್ದೇನೆ. ನನ್ನನ್ನು ಹುಡುಕಬೇಡಿ' ಎಂದು ಪತ್ರದಲ್ಲಿ ಹೇಳಿದ್ದಾಳೆ. ಜತೆಗೆ, ಸಹಪಾಠಿಗಳಾದ ನಿಶಾ, ದೀಪಾ, ಅಶ್ವಿನಿ, ರಾಜೇಶ್ ಹಾಗೂ ವಿಶ್ವಾಸ್ ಎಂಬುವರಲ್ಲಿಯೂ ಕ್ಷೆಮೆಯಾಚಿಸಿದ್ದಾಳೆ. `ಶಿಕ್ಷಕರು ಕಿರುಕುಳ ನೀಡುತ್ತಿರುವ ವಿಷಯವನ್ನು ಮಗಳು ಈ ಹಿಂದೆಯೇ ತಿಳಿಸಿದ್ದಳು. ಈ ವಿಷಯವನ್ನು ಜುಲೈ ತಿಂಗಳಲ್ಲಿ ನಡೆಯಲಿರುವ ಪೋಷಕರು ಹಾಗೂ ಶಿಕ್ಷಕರ ಸಭೆಯಲ್ಲಿ ಪ್ರಸ್ತಾಪ ಮಾಡಲು ನಿರ್ಧರಿಸಿದ್ದೆ' ಎಂದು ವಿದ್ಯಾರ್ಥಿನಿಯ ತಂದೆ ಮಂಜುನಾಥ್ ತಿಳಿಸಿದರು.ಕಾಣೆಯಾದ ಸಹಪಾಠಿ

`ವಿದ್ಯಾಳ ಸಹಪಾಠಿ ಕೂಡ ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದಾನೆ. ಆದರೆ, ಮಗ ಕಾಣೆಯಾಗಿರುವ ಬಗ್ಗೆ ಆತನ ಪೋಷಕರು, ಯಾವುದೇ ಲಿಖಿತ ದೂರು ಕೊಟ್ಟಿಲ್ಲ. ಬದಲಾಗಿ ಆತನ ಭಾವಚಿತ್ರವನ್ನು ಠಾಣೆಗೆ ತಂದುಕೊಟ್ಟು ಮಗನನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಇಬ್ಬರೂ ವಿದ್ಯಾರ್ಥಿಗಳ ಹುಡುಕಾಟ ಮುಂದುವರಿದಿದೆ ಎಂದು ಶ್ರೀರಾಂಪುರ ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.