ಆತ್ಮಹತ್ಯೆ ಮಾಡಿಕೊಳ್ಳೋಣ ಅನಿಸಿತ್ತು...

7
ಅತ್ಯಾಚಾರಕ್ಕೆ ಒಳಗಾದ ಬಾಲಕಿ ತಂದೆಯ ರೋದನ

ಆತ್ಮಹತ್ಯೆ ಮಾಡಿಕೊಳ್ಳೋಣ ಅನಿಸಿತ್ತು...

Published:
Updated:

ಹುಬ್ಬಳ್ಳಿ: ‘ನಾನು ಈಗ ಇದ್ದೂ ಸತ್ತಾಂಗೆ. ಬೆಂಕಿ­ಹಚ್ಚಿಕೊಂಡು ಆತ್ಮಹತ್ಯೆ ಮಾಡಿ­ಕೊಳ್ಳೋಣ ಅನಿಸಿತ್ತು. ಆದರೆ, ಮಗಳಿಗೆ ಮತ್ತೊಂದು ಆಘಾತ ತಡೆದು­ಕೊಳ್ಳಲು ಆಗದು ಎಂಬ ಕಾರಣಕ್ಕೆ ಛಲದಿಂದ ಹೋರಾ­ಡಲು ನಿರ್ಧರಿಸಿದೆ. ರಕ್ಷಿಸ­ಬೇಕಾದ ಪೊಲೀಸರು, ನಮ್ಮಂಥವರ ವೋಟ್‌­ನಿಂದ ಗೆದ್ದ ಜನಪ್ರತಿನಿಧಿಗಳು ನಮ್ಮ ವಿರುದ್ಧವೇ ನಿಂತಾಗ ಒಂದು ಕ್ಷಣ ದಿಕ್ಕು ತೋಚದಂತಾಗಿತ್ತು...’



ಸಾಮೂಹಿಕ ಅತ್ಯಾಚಾರದಿಂದ ಜರ್ಝರಿ­­ತಳಾಗಿ ಅಡಿಯಿಂದ ಮುಡಿವರೆಗೆ ಚಾದರ ಹೊದ್ದುಕೊಂಡು ಮಲಗಿದ್ದ ಹದಿಮೂರು ವರ್ಷದ ಬಾಲಕಿಯ ಪಕ್ಕ ನಿಂತಿದ್ದ ಆಕೆಯ ತಂದೆಯ ಈ ಮಾತುಗಳು ರೋಷಾ­ವೇಶದೊಂದಿಗೆ ನಗರದ ಕಿಮ್ಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ವಾರ್ಡಿನ ಗೋಡೆಗಳಿಗೆ ಬಡಿಯು­ತ್ತಿದ್ದಾಗ ವಾರ್ಡಿನ ಇತರ ಹಾಸಿಗೆಗಳಲ್ಲಿದ್ದ ಮಹಿಳೆ­ಯರ ಕಣ್ಣಾಲಿಗಳು ತುಂಬಿಬಂದವು. 



ದೈಹಿಕ–ಮಾನಸಿಕ ನೋವಿನಿಂದ ಬಳಲುತ್ತಿದ್ದ ಬಾಲಕಿಗೆ ನ್ಯಾಯ ಒದಗಿಸಲು ಹಿಂದೇಟು ಹಾಕಿದ ಪೊಲೀಸರ ಉದಾಸೀನದ ಬೆನ್ನಲ್ಲೇ ಆಸ್ಪತ್ರೆಯಲ್ಲಿ ವಿವಿಧ ಪರೀಕ್ಷೆಗಳಿಗಾಗಿ ಬೆಳಿಗ್ಗೆಯಿಂದ ಅತ್ತಿಂದಿತ್ತ, ಇತ್ತಿಂದತ್ತ ಓಡಾಡಿಸಿದ್ದನ್ನು ಕಂಡ ಈ ವಾರ್ಡಿನ ಮಹಿಳೆಯರು ತಂದೆಯ ರೋದನ ಕಂಡು ಮರುಗಿದರು.



ಡಿಸೆಂಬರ್‌ 31ರ ರಾತ್ರಿ ಅಪಹರಣ ಮತ್ತು ಅತ್ಯಾಚಾರಕ್ಕೆ ಒಳಗಾದ ಹುಬ್ಬಳ್ಳಿ ತಾಲ್ಲೂಕು ಬುಡರಸಿಂಗಿ ಗ್ರಾಮದ ವಿದ್ಯಾರ್ಥಿನಿಯನ್ನು ಬುಧವಾರ (ಜನವರಿ 1) ತಡರಾತ್ರಿ ಒಂದು ಗಂಟೆಗೆ ಕಿಮ್ಸ್‌ಗೆ ದಾಖಲಿಸಲಾಗಿದೆ. ಆದರೆ, ಇಲ್ಲಿ ಮಧ್ಯಾಹ್ನದವರೆಗೂ ಆಕೆಗೆ ವಿಶ್ರಾಂತಿ ಸಿಗಲಿಲ್ಲ. ನೋವು, ಅವಮಾನದಿಂದ ಬಳಲಿದ್ದ ಆಕೆಗೆ ಸಾಲು ಸಾಲು ಪರೀಕ್ಷೆಗಳೂ ಕಾದಿದ್ದವು. ಆಸ್ಪತ್ರೆಯ ತಳ ಅಂತಸ್ತಿನಿಂದ ನೆಲ ಅಂತಸ್ತಿಗೆ, ಅಲ್ಲಿಂದ ಮೊದಲ ­­­­ಅಂತಸ್ತಿಗೆ ಓಡಾಡಿ ರಕ್ತ ಪರೀಕ್ಷೆ, ಬಟ್ಟೆಗಳ ಪರಿಶೀಲನೆ, ಗಾಯಗಳ ತಪಾಸಣೆಗೆ ಮೈಯೊಡ್ಡುವುದು ಆಕೆಗೆ ಅನಿವಾರ್ಯ­ವಾಗಿತ್ತು. ಹದಿನೈದಕ್ಕೂ ಹೆಚ್ಚು ಹಾಸಿಗೆಗಳಿರುವ ದೊಡ್ಡ ಕೊಠಡಿ­ಯಲ್ಲಿಯೇ ಆಕೆಯ ಆರೈಕೆಯೂ ನಡೆಯಿತು. 



‘ಇಂಥ ವಿಶೇಷ ಪ್ರಕರಣಗಳಲ್ಲಿ ಸಂತ್ರಸ್ತರನ್ನು ಪ್ರತ್ಯೇಕವಾಗಿರಿಸಿ ಆರೈಕೆ ಮಾಡುವ ಸವಲತ್ತು ಕಿಮ್ಸ್‌ನಲ್ಲಿಲ್ಲ. ದೌರ್ಜನ್ಯಕ್ಕೆ ಒಳಗಾದ ಬಾಲಕಿ ಅಥವಾ ಮನೆ ಮಂದಿ ಬಯಸಿದರೆ ಮೂರು ಹಾಸಿಗೆ ಇರುವ ಕೊಠಡಿಗೆ ಸ್ಥಳಾಂತರಿಸ­ಲಾಗುವುದು’ ಎಂದು ಕಿಮ್ಸ್‌ ಮಾಜಿ ನಿರ್ದೇಶಕ ಮತ್ತು ಪ್ರಸೂತಿ–ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ. ಎಂ.ಜಿ.ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.



ಕರಾಳ ರಾತ್ರಿಯ ಆ ದಿನ

ಅತ್ಯಾಚಾರಕ್ಕೆ ಒಳಗಾದ ಬಾಲಕಿ ಮತ್ತು ಆಕೆಯ ಮನೆ ಮಂದಿ ಪಾಲಿಗೆ ಮಂಗಳವಾರ ಮತ್ತು ಬುಧವಾರ ಕರಾಳ ರಾತ್ರಿಗಳಾಗಿದ್ದವು. ಮಂಗಳವಾರ ರಾತ್ರಿ 9.30ರ ಸುಮಾರಿಗೆ ಬಹಿರ್ದೆಸೆ­ಗೆಂದು ಹೊರ ಬಂದ ಬಾಲಕಿ­ಯನ್ನು ಪರಶುರಾಮ ಮಾಗಡಿ, ಮನೋಹರ ರಾಣೋಜಿ ಮತ್ತು ನಾಗಪ್ಪ ರಾಣೋಜಿ ಅಪ­ಹರಿಸಿ­ಕೊಂಡು ಹೋಗಿದ್ದರು.



ವಿಷಯ ತಿಳಿದ ಬಾಲಕಿಯ ತಂದೆ ಮತ್ತು ಇಬ್ಬರು ಚಿಕ್ಕಪ್ಪಂದಿರು  ವ್ಯಾನೊಂದರಲ್ಲಿ ಬೆನ್ನು ಹತ್ತಿ­ದರು. ಹುಡುಕಾಟದ ನಂತರ ಹಾವೇರಿಯ ನೆಲೋ­ಗಲ್‌ ಗ್ರಾಮದಲ್ಲಿ ಬುಧವಾರ ನಸುಕಿ­ನಲ್ಲಿ ಅತ್ಯಾಚಾರ ನಡೆ­ಯು­ವುದನ್ನು ಕಣ್ಣಾರೆ ಕಂಡಿದ್ದಾರೆ. ಇವರನ್ನು ಕಂಡ ಆರೋಪಿಗಳು ಪರಾರಿ­ಯಾಗಲು ಪ್ರಯ­ತ್ನಿ­ಸಿದರು. ‘ಅವರಲ್ಲಿ ಪರಶು­ರಾಮ­ನನ್ನು ಹಿಡಿದ ನಾವು ಆತನನ್ನು ಹಾವೇರಿ ಪೊಲೀಸ­­ರಿಗೆ ಒಪ್ಪಿಸಿದೆವು’ ಎಂದರು.



ದುರ್ದೈವಿ ನಾನು...

‘ಮಗಳ ಮೇಲೆ ನಡೆದ ಅತ್ಯಾಚಾರ­ವನ್ನು ಕಣ್ಣಾರೆ ಕಂಡ ದುರ್ದೈವಿ ನಾನು. ಆ ಕ್ಷಣದಲ್ಲಿ ನಮಗೆ ಏನು ಮಾಡ­ಬೇಕೆಂದು ತಿಳಿಯಲಿಲ್ಲ. ಜೋರಾಗಿ ಮಗಳ ಹೆಸರು ಕೂಗಿದೆವು. ಇದನ್ನು ಕೇಳಿ ಆ ದುರುಳರು ಆಕೆಯನ್ನು ಬಿಟ್ಟು­ಬಿಟ್ಟರು’ ಎಂದು ವಿವರಿಸುವಾಗ ತಂದೆ­ಯಲ್ಲಿ ರೋಷ ಹೊತ್ತಿ ಉರಿಯುತ್ತಿತ್ತು.



‘ದೌರ್ಜನ್ಯಕ್ಕೆ ಒಳಗಾದ ಮಗಳಿಗೆ ನ್ಯಾಯ ಒದಗಿಸಲು ಕುಂದಗೋಳ ಪೊಲೀಸರು ಹಿಂದೇಟು ಹಾಕಿದರು. ಸ್ಥಳೀಯ ಜನಪ್ರತಿನಿಧಿ ಸಾಂತ್ವನ ಹೇಳುವುದು ಬಿಟ್ಟು, ಗದರಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದರು. ಹೀಗಾಗಿ ಬುಧವಾರ ರಾತ್ರಿವರೆಗೂ ನ್ಯಾಯಕ್ಕಾಗಿ ಅಲೆದಾಡಬೇಕಾಗಿ ಬಂತು. ರಾತ್ರಿ ಒಂದು ಗಂಟೆಗೆ ಕಿಮ್ಸ್‌ಗೆ ಬಂದ ನಾವು ಇನ್ನೂ ಒಂದು ಕ್ಷಣ ನಿದ್ದೆ ಮಾಡಲಿಲ್ಲ. ಮಲಗಿದರೆ ನಿದ್ದೆ ಬರುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು ಅವರು.



ಇಬ್ಬರು ಶಂಕಿತರು ವಶಕ್ಕೆ

ಧಾರವಾಡ:
ಹುಬ್ಬಳ್ಳಿ ತಾಲ್ಲೂಕಿನ ಬುಡರ­ಸಿಂಗಿ ಗ್ರಾಮದ ಬಾಲಕಿಯ ಮೇಲೆ ನಡೆದ ಅತ್ಯಾ­ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದ­ಗೋಳ ಠಾಣೆಯ ಪೊಲೀಸರು ಇಬ್ಬರು ಶಂಕಿತರನ್ನು ಗುರು­ವಾರ ವಶಕ್ಕೆ ಪಡೆದುಕೊಂಡಿದ್ದಾರೆ.

‘ಬಾಲಕಿಯನ್ನು ಅಪಹರಿಸಿದ ಮೂವರು ಆಕೆಯ ಮೇಲೆ ಹಾವೇರಿ ಜಿಲ್ಲೆಯ ನೆಲೋಗಲ್‌ ಬಳಿ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಇಬ್ಬರು ಶಂಕಿತರನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಅವರನ್ನು ಬಂಧಿಸಿಲ್ಲ. ವೈದ್ಯಕೀಯ ತಪಾಸಣೆಗಾಗಿ ಬಾಲಕಿ­ಯನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಬುಧವಾರ ರಾತ್ರಿ ದಾಖಲಿಸಲಾಗಿದೆ. ವೈದ್ಯಕೀಯ ವರದಿ ಬಂದ ಬಳಿಕ ಆರೋಪಿ­ಗಳನ್ನು ಅಧಿಕೃತ­ವಾಗಿ ಬಂಧಿಸುತ್ತೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.­ಲೋಕೇಶ­ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.



‘ಘಟನೆ ನಡೆದುದು ಹಾವೇರಿ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ. ಬಾಲಕಿಯ ಮೇಲೆ ಅತ್ಯಾ­ಚಾರ ನಡೆದಿದೆಯೋ ಇಲ್ಲವೋ ಎಂಬುದು ತನಿಖೆಯ ನಂತರ ಗೊತ್ತಾಗುತ್ತದೆ. ಆದರೆ, ಬಾಲಕಿ ಹಾಗೂ ಆಕೆಯ ತಂದೆ ಈ ಸಂಬಂಧ ದೂರು ನೀಡಲು ಮುಂದಾದಾಗ ಹಾವೇರಿ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿ­ಕೊಳ್ಳ­ಬೇಕಿತ್ತು. ನಂತರ ಧಾರವಾಡ ಜಿಲ್ಲಾ ವ್ಯಾಪ್ತಿಯ ಕುಂದಗೋಳ ಠಾಣೆಗೆ ವರ್ಗಾ­ಯಿಸಬೇಕಾಗಿತ್ತು. ಕುಂದಗೋಳ ಪೊಲೀಸರೂ ಬಾಲಕಿಯ ಪೋಷಕರನ್ನು ಸತಾಯಿಸದೇ ಪ್ರಕರಣ ದಾಖಲಿಸಿ­ಕೊಳ್ಳ­ಬೇಕಿತ್ತು. ಪೋಷಕರು ನನ್ನ ಕಚೇರಿವರೆಗೆ ಬರುವ ಸಂದರ್ಭ ಎದುರಾ­ಗ-­­ಬಾರದಿತ್ತು’ ಎಂದೂ ಅವರು ಹೇಳಿದರು.



ಏತನ್ಮಧ್ಯೆ, ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ‘ಜಿಲ್ಲೆಯ ಪ್ರಭಾವಿ ಶಾಸಕ­ರೊಬ್ಬರು, ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಿ. ನಿಮಗೆ ಕೇಳಿದಷ್ಟು ಹಣ ನೀಡುತ್ತೇವೆ ಎಂದು ಆಮಿಷ ಒಡ್ಡಲು ತಮ್ಮ ಪ್ರತಿನಿಧಿ­ಯನ್ನು ನಮ್ಮ ಬಳಿ ಕಳುಹಿಸಿದ್ದರು’ ಎಂದು ಬಾಲಕಿಯ ಚಿಕ್ಕಪ್ಪ ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ನಿರಾಕರಿಸಿರುವ ಆ ಶಾಸಕರು, ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry