ಶನಿವಾರ, ಮೇ 28, 2022
27 °C

ಆತ್ಮಾಭಿಮಾನ ಅಹಂಕಾರವಲ್ಲ; ವ್ಯಕ್ತಿತ್ವದ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಂಡೇಲಿ: ‘ಸಾಧನೆಯ ಕುರಿತ ಅಭಿಮಾನ ಅಹಂಕಾರವಲ್ಲ, ಸ್ವಂತ ವ್ಯಕ್ತಿತ್ವದ ದರ್ಶನ’ ಎಂದು ಶರಣ ಸಾಹಿತ್ಯ ಚಿಂತಕ ಶಂಕರ ದೇವನೂರ ಅಭಿಪ್ರಾಯಪಟ್ಟರು.  ಅವರು ಶುಕ್ರವಾರ ಇಲ್ಲಿಯ ರಂಗನಾಥ ಸಭಾ ಭವನದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮಾಸ್ಕೇರಿ ಸಾಹಿತ್ಯಾರಾಧನಾ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಾಹಿತ್ಯಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗೆ ತನ್ನ ಸಾಧನೆಯೇ ದೊಡ್ಡ ವಿಷುಯವಾಗುತ್ತದೆ ಎಂದು ಹೇಳಿದ ಅವರು, ಇಂದು ಮನುಷ್ಯನಿಗೆ ಪ್ರೀತಿ ಮತ್ತು ಸಮಾಧಾನ ಬೇಕಾಗಿದ್ದು ಅದಕ್ಕಾಗಿ ನಮ್ಮೊಳಗಿನ ಮನುಷ್ಯನನ್ನು ಬೆಳಕಿಗೆ ತರಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ತುಳಸಿದೇವಿ ಚಂಡಕ   ಶಿರಸಿಯ ನೃತ್ಯಪಟು ಸಹನಾ ಭಟ್ಟ ಅವರಿಗೆ ಈ ವರ್ಷದ ಶ್ರೀಗಂಧಹಾರ ಪ್ರಶಸ್ತಿ ಹಾಗೂ ‘ಅಭಿನವ ಶಾಂತಲೆ’ ಬಿರುದನ್ನು ಪ್ರದಾನ ಮಾಡಿದರು.ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ವಿಶೇಷ ಅಧಿಕಾರಿ ಬಿ.ಆರ್.ಹಿರೇಮಠ ಮುಖ್ಯ ಅತಿಥಿಯಾಗಿದ್ದರು. ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸ ಎಂದು ಅವರು ಹೇಳಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಹನಾ ಭಟ್ಟ, ನಮ್ಮ ದೇಶದ ಮೂಲ ಸಂಸ್ಕೃತಿ-ಕಲೆಯ ಕುರಿತು ಇಂದಿನ ಪೀಳಿಗೆಯಲ್ಲಿ ಅರಿವು ಮೂಡಿಸುವ ಕೃತಿಗಳು ಗ್ರಂಥಾಲಯಗಳಲ್ಲಿ ದಾಖಲಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.ಸಾಹಿತ್ಯ ಗೋಷ್ಠಿಯಲ್ಲಿ  ‘ಪಂಪನ ಪ್ರಕೃತಿ ವರ್ಣನೆ’  ಕುರಿತು ಡಾ.ಆರ್.ಜಿ. ಹೆಗಡೆ, ಚನ್ನಬಸವಣ್ಣನ ವಚನ ವಿಚಾರಗಳ ಬಗ್ಗೆ ಸಾಹಿತಿ ಅಳಗುಂಡಿ ಅಂದಾನಯ್ಯ, ‘ಡಾ.ಸಿದ್ದಲಿಂಗಯ್ಯ ಅವರ ಕಾವ್ಯದಲ್ಲಿ ಸಾಮಾಜಿಕ ನೋವು’ ಕುರಿತು ಉಪನ್ಯಾಸಕ ಉಪೇಂದ್ರ ಘೋರ್ಪಡೆ, ‘ಮನು ಬಳಿಗಾರ ಅವರ ಮೈಲಾರ ಮಹಾದೇವ ನಾಟಕದಲ್ಲಿ ದೇಶೀಯತೆ’’ ಕುರಿತು ಉಪನ್ಯಾಸಕ ಮಂಜುನಾಥ ಭಟ್ಟ, ಸರಜೂ ‘ಕಾಟ್ಕರ ಅವರ ಅತೀತ ಕೃತಿಯಲ್ಲಿ ಮಾನವೀಯ ಸಂವೇದನೆ’ ಕುರಿತು ಉಪನ್ಯಾಸಕ ಎನ್.ಕೆ. ಭಟ್ಟ, ‘ಸಮಾಜಮುಖಿ ದಾಸವರೇಣ್ಯರ ಅಲೌಕಿಕ ಧ್ವನಿ’ ಎಂಬ ವಿಷಯದ ಕುರಿತು ವಿಚಾರ ಪ್ರೊ. ಜಗನ್ನಾಥ ಮೊಗೇರ,  ‘ಮಾಸ್ಕೇರಿ ನಾಯಕರ ಬಂಗಾರ ಮಕ್ಕಿ ಬೆಳಗು ಕೃತಿಯಲ್ಲಿ ಬೆವರಿನ ಬೆಲೆ’ ಕುರಿತು ಶಿಕ್ಷಕಿ ಹೇಮಾ ಕಾಮತ್ ಮುಂತಾದವವರು ವಿಚಾರ ಮಂಡಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಮಾಸ್ಕೇರಿ ಎಂ.ಕೆ. ನಾಯಕ, ‘ಪಂಪ ಪ್ರಶಸ್ತಿಯ ಸ್ಥಳ ವಿವಾದಕ್ಕೆ ರಾಜಕೀಯ ಪ್ರೇರಿತ ತಿರುವು ನೀಡುವ ಬದಲು ಈ ವಿಷಯದಲ್ಲಿ ಕವಿಯ ಜನ್ಮ ಸ್ಥಳದ ಮಹತ್ವವನ್ನು ಬೆಳಕಿಗೆ ತರುವ ಪ್ರಯತ್ನಗಳು ನಡೆಯಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು. ಮಂಗಲಾ ಆಗೇರ ಕಾರ್ಯಕ್ರಮ ನಿರೂಪಿಸಿದರು. ಸಮಾಜ ಸೇವಕ  ಶಂಕರ ಮುಂಗರವಾಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಾಸ್ಕೇರಿ ನಾಯಕರು ರಚಿಸಿದ ಭಾವಗೀತೆಗಳನ್ನು ಶಿಕ್ಷಕಿ ನಂದಿನಿ ನಾಯ್ಕ, ಮಿಲನ ಭಾಗವತ ಹಾಗೂ ಟಿ.ಬಿ.ಬಡಿಗೇರ ಹಾಡಿದರು.

ಕಾರ್ಯಕ್ರಮದ ಅಂಗವಾಗಿ ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮದರ್ಶಿ ಮಾರುತಿ ಗುರೂಜಿ ಅವರ ಜನ್ಮ ದಿನದ ಪ್ರಯುಕ್ತ ಬೆಳಿಗ್ಗೆ ನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.                           

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.