ಆತ್ಮಾವಲೋಕನ ಮಾಡಿಕೊಳ್ಳಿ

7

ಆತ್ಮಾವಲೋಕನ ಮಾಡಿಕೊಳ್ಳಿ

Published:
Updated:

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುಮುಖ್ಯ ಘಟಕವಾದ ಸಂಸತ್‌ಗೆ ಅರವತ್ತು ವರ್ಷಗಳು ತುಂಬಿವೆ. ಹೊರಗಿನಿಂದ ಆಕ್ರಮಣಗಳೆಷ್ಟೇ ನಡೆದರೂ ದೇಶದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಇನ್ನೂ ಬಲವಾಗಿರುವ ಕಾರಣ ನಮ್ಮ ಸಂಸದೀಯ ವ್ಯವಸ್ಥೆ ಸುಭದ್ರವಾಗಿದೆ.

 

ಆದರೆ ಇದೇ ಮಾತನ್ನು ನಮ್ಮ ಸಂಸದರ ಸಾಧನೆ ಬಗ್ಗೆ ಹೇಳುವ ಹಾಗಿಲ್ಲ. ಆರು ದಶಕಗಳ ಸಂಸತ್ ಕಲಾಪದ ಇತಿಹಾಸಕ್ಕೊಂದು ನೋಟ ಹರಿಸಿದರೆ ಹೆಮ್ಮೆ ಅನಿಸುವುದಿಲ್ಲ, ನಿರಾಶೆಯಾಗುತ್ತದೆ. ಸಂಸತ್‌ನ ಪ್ರಾರಂಭದ ದಿನಗಳ ಗುಣಮಟ್ಟವನ್ನು ಈಗಿನ ಕಲಾಪಗಳಲ್ಲಿ ಕಾಣಲಾಗದು.

 

ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡ ನಾಯಕರೆಲ್ಲರೂ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅದರ ಸುಧಾರಣೆಗೆ ಸಂಕಲ್ಪವನ್ನೂ ಮಾಡಿದ್ದಾರೆ. ಸಂಸತ್‌ಗೆ 50 ತುಂಬಿದ ಸಂದರ್ಭದಲ್ಲಿಯೂ ನಡೆದ ವಿಶೇಷ ಅಧಿವೇಶನ ಇಂತಹದ್ದೇ ನಿರ್ಣಯಗಳನ್ನು ಕೈಗೊಂಡಿತ್ತು. ಅದರಲ್ಲಿ ಯಾವುದೂ ಕಾರ್ಯರೂಪಕ್ಕೆ ಬರಲೇ ಇಲ್ಲ.

 

ಕಳೆದ 60 ವರ್ಷಗಳಲ್ಲಿ ಸಂಸದರ ಶೈಕ್ಷಣಿಕ ಮಟ್ಟದಲ್ಲಿ ವೃದ್ಧಿಯಾಗಿದೆ, ಅವರಿಗೆ ನೀಡಲಾಗುವ ಸಂಬಳ-ಭತ್ತೆ ಮತ್ತಿತರ ಸೌಲಭ್ಯಗಳು ಹೆಚ್ಚಾಗಿವೆ. ಇವೆಲ್ಲದರ ಹೊರತಾಗಿಯೂ ಕಲಾಪದ ಗುಣಮಟ್ಟ ಕುಸಿಯುತ್ತಿರುವುದೇಕೆ? ಪ್ರತಿಯೊಂದು ಅಧಿವೇಶನದ ಹೆಚ್ಚಿನ ಅವಧಿಯನ್ನು ಗದ್ದಲ-ಸಭಾತ್ಯಾಗಗಳು ಕಬಳಿಸುತ್ತಿರುವುದೇಕೆ?ಲೋಕಸಭೆಯ ಪ್ರಾರಂಭದ ವರ್ಷಗಳಲ್ಲಿ ವರ್ಷಕ್ಕೆ ಸರಾಸರಿ 127 ದಿನಗಳ ಕಾಲ ನಡೆದ ಕಲಾಪ 2011ರಲ್ಲಿ ಕೇವಲ 73 ದಿನಗಳಿಗೆ ಇಳಿದಿರುವುದು ಯಾಕೆ?  ಅರವತ್ತು ವರ್ಷಗಳನ್ನು ಸಂಸತ್ ಪೂರ್ಣಗೊಳಿಸಿರುವ ಸಂದರ್ಭದಲ್ಲಿ  ಸಂಸದರು ಮಾತ್ರವಲ್ಲ ನಮ್ಮ ರಾಜಕೀಯ ಪಕ್ಷಗಳು ಕೂಡಾ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಸಂಸತ್‌ನ ಗುಣಮಟ್ಟ ಅದನ್ನು ಪ್ರವೇಶಿಸುವ ಸಂಸದರನ್ನು  ಅವಲಂಬಿಸಿದೆ.`ಲೋಕಸಭೆಯಲ್ಲಿ ಕೊಲೆಗಡುಕರಿದ್ದಾರೆ~ ಎಂಬ ಆರೋಪ ಅತಿರೇಕತನದ್ದಾಗಿರಬಹುದು. ಆದರೆ ವಾಸ್ತವ ಸ್ಥಿತಿ ಆರೋಪವನ್ನು ಪುಷ್ಟೀಕರಿಸುವಂತಿದೆ. ಕಳೆದ ಹದಿನೈದು ಲೋಕಸಭೆಗಳ ಸದಸ್ಯರ ಸ್ವಪರಿಚಯದ ವಿವರವನ್ನು ನೋಡಿದರೆ ಆಘಾತವಾಗುತ್ತದೆ.ಕೊಲೆ,ಸುಲಿಗೆ, ಅತ್ಯಾಚಾರದಂತಹ ಹೀನ ಅಪರಾಧಗಳ ಆರೋಪ ಹೊತ್ತ ಕನಿಷ್ಠ 150 ಸದಸ್ಯರು ಲೋಕಸಭೆಯಲ್ಲಿದ್ದಾರೆ. ಮುನ್ನೂರು ಸದಸ್ಯರು ಕೋಟ್ಯಧಿಪತಿಗಳು. ಇವರಲ್ಲಿ ಹೆಚ್ಚಿನವರು ಸಂಸದರಾಗಿರುವುದು ಜನಸೇವೆಗಾಗಿ ಅಲ್ಲ. ಇದಕ್ಕೆ ಅವರನ್ನು ಆರಿಸಿ ಕಳುಹಿಸುವ ಮತದಾರರನ್ನಷ್ಟೇ ದೂಷಿಸಿದರೆ ಸಾಲದು.

 

ಇದನ್ನು ತಡೆಯುವ ಮಾರ್ಗೋಪಾಯಗಳ ಬಗ್ಗೆ ಚಿಂತನೆ ನಡೆಯಬೇಕಾಗಿದೆ. ತುರ್ತಾಗಿ ನಡೆಯಬೇಕಾಗಿರುವುದು ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ. ಕೇಂದ್ರ ಚುನಾವಣಾ ಆಯೋಗ ನೀಡಿರುವ ಸುಧಾರಣಾ ಕ್ರಮಗಳ ವರದಿ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.

 

ಈ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಆಷಾಢಭೂತಿಗಳು. ಚುನಾವಣೆಯಲ್ಲಿ ಟಿಕೆಟ್ ನೀಡುವಾಗ, ಗೆಲ್ಲುವ ಸಾಮರ್ಥ್ಯವನ್ನಷ್ಟೇ ನೋಡದೆ ಅಭ್ಯರ್ಥಿಗಳ ಚಾರಿತ್ರ್ಯವನ್ನು ಗಮನಕ್ಕೆ ತೆಗೆದುಕೊಂಡರೆ ಕಳಂಕಿತರು ಸಂಸತ್ ಪ್ರವೇಶಿಸುವುದನ್ನು ತಡೆಯಬಹುದು.ಇದರ ಜತೆಗೆ ವರ್ಷಕ್ಕೆ ಕನಿಷ್ಠ ನೂರುದಿನಗಳ ಕಲಾಪ ನಡೆಸುವುದನ್ನು ಕಡ್ಡಾಯಗೊಳಿಸಬೇಕು, ಗದ್ದಲ ಮಾಡುವವರನ್ನು ಸದನದಿಂದ ಹೊರಹಾಕಿದರಷ್ಟೇ ಸಾಲದು, ಸದಸ್ಯತ್ವ ರದ್ಧತಿಯಂತಹ ಕಠಿಣಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಲೋಕಸಭೆ ಮತ್ತು ವಿಧಾನಸಭಾ ಅಧ್ಯಕ್ಷರ ರಾಷ್ಟ್ರೀಯ ಸಮ್ಮಳನ ಕೈಗೊಂಡ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry