ಶುಕ್ರವಾರ, ಜೂಲೈ 3, 2020
22 °C

ಆತ್ಮಾಹುತಿ ಬಾಂಬ್ ದಾಳಿಗೆ 37 ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆತ್ಮಾಹುತಿ ಬಾಂಬ್ ದಾಳಿಗೆ 37 ಬಲಿ

ಪೆಶಾವರ (ಪಿಟಿಐ):  ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ತಾಲಿಬಾನ್ ವಿರೋಧಿ ಸಂಘಟನೆಯ ಸದಸ್ಯರನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 37 ಜನರು ಮೃತರಾಗಿ 52 ಮಂದಿ ಗಾಯಗೊಂಡ ಘಟನೆ ಪಾಕಿಸ್ತಾನದ ವಾಯವ್ಯ ಭಾಗದಲ್ಲಿ ನಡೆದಿದೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ.ಅದೇಜೈ ಎಂಬ ಪ್ರದೇಶದಲ್ಲಿ ತಾಲಿಬಾನ್ ವಿರುದ್ಧ ಹೋರಾಡುತ್ತಿರುವ ‘ಶಾಂತಿ ಸಮಿತಿ’ಯ ನಾಯಕ ಹಕೀಮ್ ಖಾನ್ ಅವರ ಪತ್ನಿಯ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.ಕಾಲ್ನಡಿಗೆಯಲ್ಲಿ ಬಂದಿದ್ದ ದಾಳಿಕೋರ ಯುವಕ 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸೊಂಟಕ್ಕೆ ಕಟ್ಟಿಕೊಂಡಿದ್ದ ಬಾಂಬ್ ಅನ್ನು ಸ್ಫೋಟಿಸಿದ ಎಂದು ಜಿಲ್ಲಾಡಳಿತ ತಿಳಿಸಿದೆ.ನಿಷೇಧಿತ ತೆಹ್ರಿಕ್- ಎ- ತಾಲಿಬಾನ್ ಪಾಕಿಸ್ತಾನ್ ಸಂಘಟನೆಯು ಘಟನೆಯ ಹೊಣೆ ಹೊತ್ತಿದೆ. ಅದೇಜೈ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ ನಡೆಸಿ ಉಗ್ರರನ್ನು ಕೊಲ್ಲುತ್ತಿರುವುದಕ್ಕೆ ಪ್ರತೀಕಾರವಾಗಿ ಈ ಕೃತ್ಯ ಎಸಗಿರುವುದಾಗಿ ಅದು ಹೇಳಿಕೊಂಡಿದೆ. ಶಾಂತಿ ಸಮಿತಿಯು ಅದೇಜೈ ಪ್ರದೇಶದಲ್ಲಿ ಭಯೋತ್ಪಾದಕರನ್ನು ಹೊಡೆದೋಡಿಸಲು ಆದಿವಾಸಿಗಳು ರಚಿಸಿಕೊಂಡಿರುವ ಪಡೆಯಾಗಿದೆ. ತಮ್ಮ ಈ ಪ್ರಯತ್ನಗಳಿಗೆ ಸರ್ಕಾರ ಸೂಕ್ತ ಬೆಂಬಲ ನೀಡುತ್ತಿಲ್ಲ ಎಂದು ಶಾಂತಿ ಸಮಿತಿ ನಾಯಕರು ಇತ್ತೀಚೆಗೆ ದೂರಿದ್ದಾರೆ.ತೀವ್ರ ಖಂಡನೆ: ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ಯೂಸುಫ್ ರಜಾ ಗಿಲಾನಿ, ಕ್ಯಾನ್ಸರ್ ಎಂಬ ಭಯೋತ್ಪಾದನೆಯನ್ನು ದೇಶದಿಂದ ಹೊರಗಟ್ಟಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.