ಶುಕ್ರವಾರ, ನವೆಂಬರ್ 15, 2019
20 °C
ಬೇಜವಾಬ್ದಾರಿ ಹೇಳಿಕೆ ತಂದ ಪೇಚು

ಆತ್ಮ ಶುದ್ಧಿಗಾಗಿ ಉಪವಾಸ- ಅಜಿತ್

Published:
Updated:

ಸತಾರಾ, ಮಹಾರಾಷ್ಟ್ರ (ಪಿಟಿಐ): ಅಣೆಕಟ್ಟೆ ಬರಿದಾದರೆ ಮೂತ್ರದಿಂದ ತುಂಬಿಸಲು ಸಾಧ್ಯವೇ ಎಂಬ ಹೇಳಿಕೆಯಿಂದ ಪೇಚಿಗೆ ಸಿಲುಕಿರುವ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಭಾನುವಾರ ಕರಾಡ್‌ನಲ್ಲಿ ಒಂದು ದಿನದ ಪಶ್ಚಾತ್ತಾಪ ಉಪವಾಸ  ನಡೆಸಿದರು.ಮಹಾರಾಷ್ಟ್ರದ ಪ್ರಥಮ ಮುಖ್ಯಮಂತ್ರಿಯಾಗಿದ್ದ  ಯಶವಂತ್ ರಾವ್ ಚವಾಣ್ ಸ್ಮಾರಕದ ಬಳಿ ಬೆಳಿಗ್ಗೆ ಅಜಿತ್ ಅವರು ಪಶ್ಚಾತ್ತಾಪ ಉಪವಾಸ ಆರಂಭಿಸಿದರು.

ಅಜಿತ್ ಅವರ ಚಿಕ್ಕಪ್ಪ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರೂ ಹೇಳಿಕೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.ತಮ್ಮ ಹೇಳಿಕೆಯ ಬಗ್ಗೆ ಅಜಿತ್ ಕ್ಷಮೆ ಯಾಚಿಸಿದರು. ಶಿವಸೇನೆ, ಬಿಜೆಪಿ ಮತ್ತು ಎಂಎನ್‌ಎಸ್ ಶಾಸಕರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮೂರು ದಿನಗಳಿಂದ ಅಜಿತ್ ಹೇಳಿಕೆಯನ್ನು ಖಂಡಿಸಿ ಗದ್ದಲ ಉಂಟು ಮಾಡಿದ್ದರಿಂದ ಕಲಾಪ ನಡೆಯಲಿಲ್ಲ. ಈ ಪಕ್ಷಗಳ ಮುಖಂಡರು ಅಜಿತ್ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.ಉಪವಾಸ ನಡೆಸುತ್ತಿರುವ ಸಂದರ್ಭದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅಜಿತ್, `ತಾವು ಉಪವಾಸ ನಡೆಸುತ್ತಿರುವುದು ಪ್ರಚಾರ ಪಡೆಯುವ ತಂತ್ರವಲ್ಲ, ಬದಲಿಗೆ ನಿಜವಾಗಿಯೂ ತಪ್ಪು ಹೇಳಿಕೆ ನೀಡಿದ್ದಕ್ಕೆ ಪಶ್ಚಾತ್ತಾಪ ಪಟ್ಟು ಆತ್ಮ ಶುದ್ಧಿ ಮಾಡಿಕೊಳ್ಳುವ ಉದ್ದೇಶದ್ದು' ಎಂದು ತಿಳಿಸಿದ್ದಾರೆ.`ಅಜಿತ್ ಅವರು ಬಾಯಿತಪ್ಪಿನಿಂದ ಆದ ಪ್ರಮಾದಕ್ಕೆ ನಿಜವಾಗಿಯೂ ಪಶ್ಚಾತ್ತಾಪ ಪಡುತ್ತಿದ್ದಾರೆ, ತಮ್ಮ ಹೇಳಿಕೆಯ ಬಗ್ಗೆ ಅವರಿಗೆ ನೋವು ಉಂಟಾಗಿದೆ' ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ತಿಳಿಸಿದ್ದಾರೆ.ಉಪವಾಸ ನಡೆಸುವ ಬದಲು ಅಜಿತ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು ಎಂದು ಶಿವಸೇನೆಯ ಮುಖಂಡ ದಿವಾಕರ್ ರೌತೆ ಹೇಳಿದ್ದಾರೆ. ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮತ್ತು ಬಿಜೆಪಿ ಮುಖಂಡ ವಿನೋದ್ ತವಡೆ ಅವರೂ ಅಜಿತ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)