ಆದಮಿಂಡೆ ಮಗನ್ ಅಬೂ...

7

ಆದಮಿಂಡೆ ಮಗನ್ ಅಬೂ...

Published:
Updated:

ಅಬೂಕ್ಕನಿಗೆ ಎಪ್ಪತ್ತರ ಇಳಿವಯಸ್ಸು. ಅತ್ತರ್ ಮತ್ತು ಧಾರ್ಮಿಕ ಕಿರುಹೊತ್ತಿಗೆಗಳ ಕೈಪೆಟ್ಟಿಗೆ ಹಾಗೂ ಹೆಗಲಚೀಲಗಳ ಭಾರವನ್ನು ಹೊತ್ತು ಹಿಂದಿನಂತೆ ಊರು ತಿರುಗಲು ಆಗುತ್ತಿಲ್ಲ. ಇತ್ತೀಚೆಗೆ ಅತ್ತರ್ ಬಳಿಯುವವರೂ ಕಡಿಮೆಯಾಗಿದ್ದಾರೆ. ಮನೆಬಾಗಿಲಲ್ಲೇ ದೇಶವಿದೇಶಗಳ ಪರ್ಫ್ಯೂಮ್‌ಗಳು ಸಿಗುವಾಗ ಅತ್ತರ್ ಕಂಪು ಯಾರಿಗೆ ಬೇಕು? ಇತ್ತೀಚಿನ ಹುಡುಗರಂತೂ ಧಾರ್ಮಿಕ ಕಿರುಪುಸ್ತಕಗಳನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ. ಆದರೂ ಆತನ ಕಾಯಕ ನಡೆದೇ ಇದೆ. ಕಳೆದ 12 ವರ್ಷಗಳಿಂದ ಮರದ ಪೆಟ್ಟಿಗೆಯೊಂದರಲ್ಲಿ ಕೂಡಿಟ್ಟಿರುವ ಪುಡಿಕಾಸು ಅಬೂಕ್ಕನ ಬೆನ್ನು ಬಿಡುವುದಿಲ್ಲ. ಅದು ಪವಿತ್ರ ಹಜ್ ಯಾತ್ರೆಗೆ ಹೋಗಲು ಆತ ಕೂಡಿಟ್ಟಿರುವ ಹಣ. ಪ್ರತಿವಾರದ ಊರೂರು ತಿರುಗಾಟದ ಬಳಿಕವೂ ಹತ್ತು, ನೂರು ರೂಪಾಯಿಗಳ ನೋಟುಗಳನ್ನು ಆ ಪೆಟ್ಟಿಗೆಗೆ ತುರುಕುತ್ತಾನೆ. ಪ್ರೀತಿಯ ಪತ್ನಿ ಐಸುವಿನ ಜತೆಗೂಡಿ ಹಜ್ ಯಾತ್ರೆ ಮಾಡುವುದು ಆತನ ಜೀವಮಾನದ ಕನಸು. ಆಕೆಗೂ ಅದಾಗಲೇ ಇಳಿವಯಸ್ಸಿನ ಮಂಡಿನೋವು ಶುರುವಾಗಿದೆ. ಈ ಸಲ ಹೇಗಾದರೂ ಮಾಡಿ ಹಜ್‌ಗೆ ಹೋಗಲೇಬೇಕು. ಹಜ್ ಕಮಿಟಿಯವರೂ ಅರ್ಜಿಗಳನ್ನು ಕರೆದಿದ್ದಾರೆ. ಕಳೆದ ವರ್ಷಕ್ಕಿಂತ ಈ ಸಲ ಹೋಗುವವರ ಸಂಖ್ಯೆಯನ್ನು ದುಪ್ಪಟ್ಟು ಬೇರೆ ಮಾಡಿದ್ದಾರಂತೆ..

`ಹಜ್ ಕಮಿಟಿಯಲ್ಲಿ ತುಂಬ ರಶ್ಯು. ಅದರಲ್ಲಿ ನಿಮಗೆಲ್ಲಿ ಅವಕಾಶ ಸಿಗುತ್ತದೆ? ಅಕ್ಬರ್ ಟ್ರಾವೆಲ್ ಕಂಪೆನಿಯವರು ಪ್ರತಿವರ್ಷ ಬಹಳ ಚೆನ್ನಾಗಿ ಹಜ್ ಟೂರ್ ಏರ್ಪಾಡು ಮಾಡುತ್ತಾರೆ. ಅಲ್ಲಿ ನನಗೆ ಗೊತ್ತಿರುವ ಮ್ಯಾನೇಜರ್ ಅಶ್ರಫ್ ಇದ್ದಾನೆ. ಅವನಿಗೊಂದು ಮಾತು ಹೇಳ್ತೇನೆ. ನೀವು ಅದರಲ್ಲೇ ಹೋಗಿ~ ಎನ್ನುತ್ತಾರೆ ಊರಿನ ಶ್ರೀಮಂತ, ಸುಲೇಮಾನ್ ಹಾಜಿ. ಅವರು ಅದಾಗಲೇ ನಾಲ್ಕು ಸಲ ಹಜ್‌ಗೆ ಹೋಗಿ ಬಂದಿದ್ದಾರೆ. ಅವರ ಒಬ್ಬ ಹುಡುಗ ಬೇರೆ ಸೌದಿಯಲ್ಲೇ ಸೆಟ್ಲ್ ಆಗಿದ್ದಾನೆ.

-ಅಲ್ಲಿಂದ ಶುರುವಾಗುತ್ತದೆ ಅಬೂವಿನ ಹಜ್ ಯಾತ್ರೆಯ ಸಿದ್ಧತೆ. ಮೊದಲು ಪಾಸ್‌ಪೋರ್ಟ್ ಆಗಬೇಕು. ಅದಕ್ಕೆ ಶಾಲೆಯಿಂದ ಬರ್ತ್ ಸರ್ಟಿಫಿಕೇಟ್ ಬೇಕು. ಫೋಟೋ ತೆಗೆಸಬೇಕು. ವಾಸ್ತವ್ಯದ ಖಾತ್ರಿಗೆ ರೇಶನ್ ಕಾರ್ಡ್ ಬೇಕು. ಪೊಲೀಸ್ ಎನ್‌ಕ್ವೈರಿ ನಡೆಯಬೇಕು. ಒಂದೊಂದಾಗಿ ಎಲ್ಲ ಕೆಲಸಕ್ಕೂ ಅಬೂ ಓಡಾಡುತ್ತಾನೆ. ಎಲ್ಲಕ್ಕಿಂತ ಮುಖ್ಯ ಹಣದ ಏರ್ಪಾಡು. ಗಂಡ ಹೆಂಡತಿ ಇಬ್ಬರೂ ಪೆಟ್ಟಿಗೆ ಒಡೆದು ರಾತ್ರಿಯಿಡೀ ಕುಳಿತು ಹಣ ಎಣಿಸುತ್ತಾರೆ. ಪುಡಿ ನೋಟುಗಳನ್ನೆಲ್ಲ ಸೇರಿಸಿ ಒಂದೊಂದೇ ಕಟ್ಟುಗಳನ್ನಾಗಿ ಮಾಡುತ್ತಾರೆ. ಕೂಡಿಟ್ಟ ಹಣವನ್ನು ಜೋಪಾನವಾಗಿ ಒಯ್ದು ಟ್ರಾವೆಲ್ಸ್ ಮ್ಯಾನೇಜರ್ ಅಶ್ರಫ್‌ಗೆ ನೀಡುತ್ತಾರೆ. ಆತ ಕರುಣಾಮಯಿ. `ಏನೂ ಹೆದರಬೇಡಿ. ಎಲ್ಲ ವ್ಯವಸ್ಥೆಗಳನ್ನೂ ಅಚ್ಚುಕಟ್ಟಾಗಿ ಮಾಡುತ್ತೇನೆ. ಉಳಿದ ಹಣವನ್ನು ಇನ್ನೊಂದು ತಿಂಗಳಲ್ಲಿ ಹೊಂದಿಸಿ~ ಎನ್ನುತ್ತಾನೆ.

`ಅಶ್ರಫ್‌ನನ್ನು ನೋಡಿದಿರಾ? ತುಂಬ ಒಳ್ಳೆಯ ಹುಡುಗ. ನಮ್ಮ ಮಗನ ಹಾಗೆಯೇ ಕಾಣಿಸುತ್ತಾನೆ~ ಎಂದಳು ಐಸು. ಅಬೂ ಸಿಡುಕುತ್ತಾನೆ- `ಅಶ್ರಫ್ ತುಂಬ ಒಳ್ಳೆಯವ. ನಮ್ಮ ಮಗನಿಗೇಕೆ ಹೋಲಿಸುತ್ತೀ? ಬಿಟ್ಟು ಬಿಡು!~

ಅದೊಂದು ಫ್ಲ್ಯಾಶ್‌ಬ್ಯಾಕ್. ಇದ್ದ ಒಬ್ಬನೇ ಮಗನನ್ನು ಬಾಲ್ಯದಲ್ಲಿ ಮುದ್ದಾಗಿ ಸಾಕಿದ್ದಾರೆ ಅಬೂ ಮತ್ತು ಐಸು. ಬೆಳೆದು ನಿಂತ ಮಗ ದೂರದೂರಿನ ಶ್ರೀಮಂತರೊಬ್ಬರ ಬಳಿ ಕಾರು ಡ್ರೈವರ್ ಆಗಿ ಕೆಲಸಕ್ಕೆ ಸೇರಿದ. ಕ್ರಮೇಣ ಅವರ ಮನೆಯವನೇ ಆದ. ಅವರು ಹೆಣ್ಣು ಕೊಟ್ಟು ಮದುವೆ ಮಾಡಿದರು. ಅಳಿಯ-ಮಗಳನ್ನು ಕೊಲ್ಲಿ ದೇಶಕ್ಕೆ ಕಳಿಸಿದರು. ಅಲ್ಲೆಗ ಆತ ಸುಖವಾಗಿದ್ದಾನೆ. ಇಬ್ಬರು ಮಕ್ಕಳೂ ಮುದ್ದಾಗಿದ್ದಾರಂತೆ. ಹಾಗೆಂದು ಹೋಗಿ ಬಂದವರು ಹೇಳುತ್ತಾರೆ. ಇಳಿವಯಸ್ಸಿನ ಅಪ್ಪ- ಅಮ್ಮನನ್ನು ಆತ ಮರೆತೇಬಿಟ್ಟಿದ್ದಾನೆ.   

ಈ ಮಧ್ಯೆ ಹಜ್ ಕ್ಯಾಂಪಿನಲ್ಲಿ ತರಬೇತಿಗೆ ಹಾಜರಾಗುತ್ತಾರೆ ದಂಪತಿ. ಮಕ್ಕಾದಲ್ಲಿ ಧರಿಸುವ ಇಹ್ರಾಮಿನ ಬಿಳಿಬಟ್ಟೆ ಖರೀದಿಸುತ್ತಾರೆ. ಬುರ್ಖಾ, ಸೊಂಟಕ್ಕೆ ಧರಿಸುವ ಬೆಲ್ಟು ಪಟ್ಟಿ- ಹೀಗೆ ಒಂದೊಂದೇ ಖರೀದಿ ಆಗುತ್ತದೆ. ಐದಾರು ವರ್ಷಗಳ ಹಿಂದೆ ನೆರೆಮನೆಯಲ್ಲಿದ್ದು ಜಗಳವಾಡಿದ್ದ ಒಬ್ಬನನ್ನು ಹುಡುಕಿಕೊಂಡು ಮೈಲುಗಟ್ಟಳೆ ಹೋಗಿ ಅಬೂ ಮತ್ತು ಐಸು ಕ್ಷಮೆ ಯಾಚಿಸಿ ಬರುತ್ತಾರೆ. ನೆನಪಿಲ್ಲದ, ಇದ್ದ ಎಲ್ಲ ಸಣ್ಣಪುಟ್ಟ ಸಾಲಗಳನ್ನೂ ತೀರಿಸುತ್ತಾರೆ.

ಇನ್ನೇನು ಮುಂದಿನ ತಿಂಗಳು ಹೋಗುವುದು. ಜೀವಮಾನದ ಕನಸು ನನಸಾಗುವ ದಿನ ಹತ್ತಿರ ಬರುತ್ತಿದೆ. ಟ್ರಾವೆಲ್ ಏಜೆಂಟನಿಗೆ ಇನ್ನೂ ಒಂದು ಲಕ್ಷ ರೂಪಾಯಿ ಕೊಡಬೇಕು. ದಾರಿ ಖರ್ಚಿಗೆ 10-15 ಸಾವಿರ ಬೇಕು. ಅಬೂ ಮುಂದೆ ಐದಾರು ದಾರಿಗಳಿವೆ. ನಿಧಾನಕ್ಕೆ ಮರದ ವ್ಯಾಪಾರಿ ಜಾನ್ಸನ್‌ನ ಟಿಂಬರ್ ಮಿಲ್‌ನತ್ತ ಅಬೂ ಹೆಜ್ಜೆ ಹಾಕುತ್ತಾನೆ.

`ಏನು ಅಬೂಕ್ಕ.. ಇಷ್ಟು ದೂರ?~

`ನಮ್ಮ ಹಿತ್ತಲಲ್ಲಿರುವ ದೊಡ್ಡ ಹಲಸಿನ ಮರ ಮಾರಬೇಕು..~

`ಎರಡು ವರ್ಷದ ಹಿಂದೆ ನಾನೇ ಕೇಳಿದೆ. ಆಗ, ಮಾರಲ್ಲ- ಸಮಯ ಬಂದಾಗ ಮಾರುತ್ತೇನೆ ಅಂದಿರಿ.. ಈಗ ಏಕೆ ಮಾರುತ್ತಿದ್ದೀರಿ?~

`ನಾನು ಮತ್ತು ಐಸು ಹಜ್ ಯಾತ್ರೆಗೆ ಹೊರಟಿದ್ದೇವೆ. ಸ್ವಲ್ಪ ಹಣ ಹೊಂದಿಸಬೇಕಿದೆ. ಅದಕ್ಕೇ..~

`ಪುಣ್ಯಕಾರ್ಯಕ್ಕೆ ಹಣ ಇಲ್ಲ ಅನ್ನುತ್ತೇನೆಯೆ? 60 ಸಾವಿರ ಕೊಡುತ್ತೇನೆ. ಈಗ ಹತ್ತು ಸಾವಿರ ತಗೊಳ್ಳಿ. ಉಳಿದದ್ದು ನಿಮಗೆ ಅಗತ್ಯ ಬಿದ್ದಾಗ ಕೊಡುತ್ತೇನೆ. ಇದು ವ್ಯಾಪಾರ ಖಂಡಿತಾ ಅಲ್ಲ. ನಿಮಗೆ ಸಹಾಯವೂ ಆಗಲಿ ಅಂತ~ ಎನ್ನುತ್ತಾ ಹಣ ನೀಡುತ್ತಾನೆ ಜಾನ್ಸನ್.

ಮನೆಗೆ ಬರುತ್ತಾನೆ ಅಬೂ. ಹೆಂಡತಿಯ ಜತೆಗೆ ಚರ್ಚೆ ನಡೆಸುತ್ತಾನೆ- ಇನ್ನೂ 40 ಸಾವಿರ ಬೇಕಲ್ಲ?

ಕಿವಿಯಲ್ಲಿ ಇದ್ದ ಒಂದೇ ಜತೆ ಬೆಂಡೋಲೆಯನ್ನು ಬಿಚ್ಚಿಕೊಡುತ್ತಾಳೆ ಐಸು. `ಇದನ್ನು ಮಾರಿ, 30-35 ಸಾವಿರಕ್ಕೆ ಮೋಸವಿಲ್ಲ~ ಎನ್ನುತ್ತಾಳೆ. `ಬೇಡ. ಮದುವೆಯಾದ ನಂತರ ನಿನ್ನಲ್ಲಿ ಇದ್ದ ಬೇರೆಲ್ಲ ಒಡವೆಗಳನ್ನು ಮಾರಿಯೋ, ಗಿರವಿ ಇಟ್ಟೋ ಬದುಕಿದ್ದೇನೆ. ಈಗ ಇದೊಂದೇ ಇರೋದು~ ಎನ್ನುತ್ತಾನೆ ಅಬೂ. `ಇರಲಿ, ಒಳ್ಳೆಯ ಕೆಲಸಕ್ಕೆ ತಾನೆ..~ ಎನ್ನುತ್ತಾಳೆ ಐಸು.

ಇನ್ನೂ ಹದಿನೈದು ಸಾವಿರವಾದರೂ ಬೇಕು..!

*

ಈ ಹಂತದಲ್ಲಿ ಎರಡು ದೃಶ್ಯಗಳು ಬರುತ್ತವೆ. ಎರಡೂ ದೃಶ್ಯಗಳಲ್ಲಿ ಒಂದೇ ಒಂದು ಸಂಭಾಷಣೆಯೂ ಇಲ್ಲ. ಬದಲಾಗಿ ದೃಶ್ಯಗಳೇ ಮಾತನಾಡುತ್ತವೆ. ಒಬ್ಬ ನಿರ್ದೇಶಕನ ಪ್ರತಿಭೆ ಅನಾವರಣಗೊಳ್ಳುವುದೇ ಇಂತಹ ದೃಶ್ಯಗಳಲ್ಲಿ. ಅದರಲ್ಲೂ ಚೊಚ್ಚಲ ಸಿನಿಮಾ ನಿರ್ದೇಶಿಸಿದ ಸಲೀಂ ಅಹ್ಮದ್, ಎಂತಹ ಅದ್ಭುತ ಪ್ರತಿಭಾವಂತ ಎಂದು ವಿಸ್ಮಯವಾಗುತ್ತದೆ.

`ಇನ್ನೂ ಹದಿನೈದು ಸಾವಿರವಾದರೂ ಬೇಕು..~ ಎಂದು ಅಬೂ ಚಿಂತಾಕ್ರಾಂತನಾಗುವ ವೇಳೆಗೆ ಸರಿಯಾಗಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಅಂಬಾ.. ಎಂದು ಕೂಗುತ್ತದೆ. ಮಧು ಅಂಬಟ್ ಅವರ ಕ್ಯಾಮೆರಾ, ಅಬೂ ಎದುರಿಗೆ ಕುಳಿತಿದ್ದ ಪತ್ನಿ ಐಸು ಮುಖದ ಮೇಲೆ ಕೇಂದ್ರೀಕೃತವಾಗುತ್ತದೆ. ಆಕೆಯ ಕಣ್ಣುಗಳಲ್ಲಿ ಎದ್ದು ಕಾಣುವ ಕಾಠಿಣ್ಯ. ಕೊರಳ ಸೆರೆ ಉಬ್ಬುವುದು, ಮನಸ್ಸಿನೊಳಗಿನ ತಾಕಲಾಟ.. ಎಲ್ಲವೂ ಮುಂದಿನ ಕಥೆಯನ್ನು ಪ್ರೇಕ್ಷಕನ ಮನಸ್ಸಿನಲ್ಲಿ ಬಿಚ್ಚುತ್ತದೆ!

ತಕ್ಷಣದ ದೃಶ್ಯ- ಲಾಂಗ್ ಶಾಟ್. ಅದರಲ್ಲೂ ಮಾತುಕತೆಯಿಲ್ಲ. ಮನೆಯೊಳಗೆ ಕ್ಯಾಮೆರಾ ಇದೆ. ಹೊರಗೆ ಅಂಗಳದ ತುದಿಯಲ್ಲಿ ಸಣ್ಣ ಟೆಂಪೋ ಒಂದಕ್ಕೆ ಕೆಲಸಗಾರರು ಹಸು ಮತ್ತು ಕರುವನ್ನು ಹತ್ತಿಸುತ್ತಿದ್ದಾರೆ. ಪಕ್ಕದಲ್ಲಿ ನಿಂತ ಅಬೂವಿನ ಕೈಗೆ ಹಣ ಬರುತ್ತದೆ. ಟೆಂಪೋ ನಿಧಾನಕ್ಕೆ ಚಲಿಸುತ್ತದೆ. ಮನೆಯ ಅಂಗಳ ದಾಟಿ ರಸ್ತೆಗೆ, ಅಲ್ಲಿಂದ ತಿರುವಿಗೆ, ನಿಧಾನಕ್ಕೆ ವಾಹನ ಚಲಿಸುತ್ತಾ ಹೋಗುತ್ತದೆ. ವಾಹನದ ಹಿಂಭಾಗದಿಂದ ಹಸು-ಕರು ಎರಡೂ ಕರುಣಾಜನಕವಾಗಿ ಮನೆಯತ್ತಲೇ ನೋಡುತ್ತಿರುತ್ತವೆ. ಅಂಗಳದಲ್ಲಿ ಮರಗಟ್ಟಿ ನಿಂತ ಐಸುವಿನ ಕೆನ್ನೆಯ ಮೇಲೆ ಹೆಪ್ಪುಗಟ್ಟಿದ ಕಣ್ಣೀರು..

ಹಣದ ತಾಪತ್ರಯ ಮುಗಿಯಿತು. ಟಿಕೆಟ್ ಕೂಡಾ ಆಗಿದೆ. ಹಜ್ ವಿಮಾನ ಏರುವುದಷ್ಟೇ ಬಾಕಿ ಉಳಿದಿದೆ. ಜಾನ್ಸನ್ ನೀಡಲು ಬಾಕಿ ಉಳಿಸಿದ್ದ ಹಣವನ್ನು  ಕೇಳಲು ಅಬೂ ಹೋಗುತ್ತಾನೆ. `ನೀವು ಕೊಟ್ಟ ಮರ ಒಳಗೆಲ್ಲ ಟೊಳ್ಳು ಅಬೂಕ್ಕ. ಏನೂ ಪ್ರಯೋಜನವಿಲ್ಲ. ಆದರೂ ಹಣ ತಗೊಳ್ಳಿ~ ಎನ್ನುತ್ತಾನೆ ಜಾನ್ಸನ್. ಅಬೂ ಹಣ ತೆಗೆದುಕೊಳ್ಳದೆ ವಾಪಸ್ ಬರುತ್ತಾನೆ!

ಹಜ್‌ಗೆ ಹೋಗಬೇಕೆಂದರೆ ನ್ಯಾಯವಾಗಿ ದುಡಿದ ಹಣವೇ ಆಗಬೇಕು. ಯಾರೋ ಕೊಟ್ಟ ಭಿಕ್ಷೆ ಆಗುವುದಿಲ್ಲ. ಹಾಗೆಯೇ ಯಾರೊಬ್ಬರ ಸಾಲವೂ ಬಾಕಿ ಇರಬಾರದು. ಹಾಗಿದ್ದಲ್ಲಿ ಮಾತ್ರ ಅಲ್ಲಾಹು ಮೆಚ್ಚುತ್ತಾನೆ. ಹಜ್ ಸಾರ್ಥಕವಾಗುತ್ತದೆ.

ಅಂಗಳದಲ್ಲಿ ಕಡಿದು ಹಾಕಿದ್ದ ದೊಡ್ಡ ಹಲಸಿನ ಮರದತ್ತ ನೋಡುತ್ತಾನೆ ಅಬೂ. ಮರ ಕಡಿಯುವಾಗ ಅಕ್ಕಪಕ್ಕದ ಚಿಕ್ಕಪುಟ್ಟ ಸಸಿಗಳೆಲ್ಲ ಸತ್ತಿವೆ. `ಬಹುಶಃ ಅಲ್ಲಾಹುವಿಗೆ ಈ ಜೀವಹತ್ಯೆ ಇಷ್ಟವಾಗಿರಲಿಕ್ಕಿಲ್ಲ. ಅದಕ್ಕೇ ನಮಗೆ ಹೀಗಾಗಿದೆ. ನಾವು ಮುಂದಿನ ವರ್ಷ ಹಜ್‌ಗೆ ಹೋಗೋಣ ಐಸು~ ಎನ್ನುತ್ತಾ ಅಬೂ ಮಸೀದಿಯತ್ತ ನಮಾಜ್‌ಗೆ ಹೆಜ್ಜೆ ಹಾಕುತ್ತಾನೆ. ಮಸೀದಿಯ ಮಿನಾರದಲ್ಲಿ ಅಲ್ಲಾಹು ಅಕ್ಬರ್... ಮೊಳಗುತ್ತಿರುತ್ತದೆ.

****

ತುಂಬ ಸರಳ ಕಥೆಯಿದು. ಎಂಬತ್ತರ ದಶಕದ ಕೇರಳ ಸಮಾಜದ ಹಿನ್ನೆಲೆಯಲ್ಲಿ, ನಿರ್ದೇಶಕ ಸಲೀಂ ಅಹ್ಮದ್ ಮತ್ತು ಛಾಯಾಗ್ರಾಹಕ ಮಧು ಅಂಬಟ್ ಅದನ್ನು ಕಟ್ಟಿಕೊಟ್ಟ ವಿಧಾನ ಮಾತ್ರ ಅಪರೂಪದ್ದು. ಹಜ್ ಯಾತ್ರೆ ಎನ್ನುವುದು ಇವತ್ತು ಎಷ್ಟೊಂದು ವ್ಯಾಪಾರೀಕರಣಗೊಂಡಿದೆ ಎನ್ನುವುದು ಈ ಸಿನಿಮಾ ನೋಡಿದಾಗ ಗೊತ್ತಾಗುತ್ತದೆ. ಅದಕ್ಕಿಂತಲೂ ಮುಖ್ಯವಾಗಿ, ಮನುಷ್ಯನ ಒಳ್ಳೆಯತನ ಕಾಲ ಸರಿದಂತೆ ಹೇಗೆ ಗೊತ್ತೇ ಆಗದಂತೆ ಮಾಯವಾಗುತ್ತಿದೆ ಎನ್ನುವ ಸತ್ಯ ಮನಸ್ಸು ತಟ್ಟುತ್ತದೆ.

ನಿರ್ದೇಶಕ ಸಲೀಂ ಅಹ್ಮದ್ 9 ವರ್ಷಗಳ ಹಿಂದೆಯೇ ಈ ಚಿತ್ರಕಥೆಯನ್ನು ಸಿದ್ಧ ಮಾಡಿ ಇಟ್ಟಿದ್ದರಂತೆ. ನಿರ್ಮಾಪಕರು ಸಿಗಲಿಲ್ಲ. 2010ರಲ್ಲಿ ಗೆಳೆಯ ಅಶ್ರಫ್ ಬೆಡಿ ಹಣ ಹಾಕಿದ್ದಾರೆ. 29 ದಿನಗಳಲ್ಲೇ ಚಿತ್ರೀಕರಣ ಮುಗಿದಿದೆ. ಸಿದ್ಧವಾದ ಚಿತ್ರಕ್ಕೆ ವಿತರಕರೂ ಸಿಗದೆ, ಹೀರೋ ಸಲೀಂ ಕುಮಾರ್ ಚಿತ್ರದ ವಿತರಣೆ ನಡೆಸಿದ್ದಾರೆ. ತಲಾ ನಾಲ್ಕು ರಾಷ್ಟ್ರೀಯ (ಶ್ರೇಷ್ಠ ನಟ, ನಿರ್ದೇಶನ, ಛಾಯಾಗ್ರಹಣ, ಸಂಗೀತ) ಹಾಗೂ ನಾಲ್ಕು ಕೇರಳ ರಾಜ್ಯ ಪ್ರಶಸ್ತಿಗಳು (ಶ್ರೇಷ್ಠ ನಟ, ನಿರ್ದೇಶನ, ಚಿತ್ರಕಥೆ ಮತ್ತು ಸಂಗೀತ) ಈ ಚಿತ್ರಕ್ಕೆ ಸಂದಿವೆ. ಈಗ `ಆಸ್ಕರ್~ ಪ್ರಶಸ್ತಿಗೆ ಈ ಚಿತ್ರ ಭಾರತದ ಅಧಿಕೃತ ಎಂಟ್ರಿ ಎಂದು ಖಚಿತವಾಗಿದೆ. ಅದರಲ್ಲೂ ರಜನಿಕಾಂತ್ (ಎಂದಿರನ್), ಅಮೀರ್‌ಖಾನ್ (ಧೋಬಿ ಘಾಟ್) ಮುಂತಾದವರ ಚಿತ್ರಗಳ ಜತೆಗೆ ಸ್ಪರ್ಧೆಯಲ್ಲಿ ಗೆದ್ದು, ಈ ಚಿತ್ರ ಆಸ್ಕರ್ ಎಂಟ್ರಿ ಪಡೆದಿದೆ.

ನಿರ್ದೇಶಕ ಸಲೀಂ ಅಹ್ಮದ್, ಛಾಯಾಗ್ರಾಹಕ ಮಧು ಅಂಬಟ್ ಮತ್ತು ಅಬೂ ಪಾತ್ರಧಾರಿ ಸಲೀಂ ಕುಮಾರ್ ಈ ಚಿತ್ರದ ಜೀವಾಳ. ಮಧು ಅಂಬಟ್ ಅವರ ದೃಶ್ಯಕಾವ್ಯವನ್ನು ವರ್ಣಿಸುವುದು ಅಷ್ಟು ಸುಲಭವಿಲ್ಲ. ಈವರೆಗೆ ಹಾಸ್ಯಪಾತ್ರಗಳಲ್ಲೇ ಮಿಂಚುತ್ತಿದ್ದ ಸಲೀಂ ಕುಮಾರ್ ಇಲ್ಲಿ ವೃದ್ಧನ ಪಾತ್ರದಲ್ಲಿ ಅದ್ಭುತ ಎನ್ನಬಹುದಾದ ನಟನೆ ನೀಡಿದ್ದಾರೆ. ಐಸುವಾಗಿ ಜರೀನಾ ವಹಾಬ್ ಕೂಡಾ! ಐಸಾಕ್ ಕೊಟ್ಟಕಪಳ್ಳಿಯ ಹಿನ್ನೆಲೆ ಸಂಗೀತ ಚಿತ್ರದ ಓಟವನ್ನು ಅತ್ಯಂತ ಹೃದ್ಯವಾಗಿಸಿದೆ. ಹಾಡುಗಳೂ ಚಿತ್ರಕಥೆಯ ಪರಿಣಾಮವನ್ನು ಗಾಢವಾಗಿಸಿವೆ.

ಚಿತ್ರದಲ್ಲೊಬ್ಬ ನಿಗೂಢ ಸಂತನ ಪಾತ್ರವಿದೆ. ಆ ಸಂತ ಸತ್ತಾಗ ಎರಡೂ ಊರಿನವರು ಮೃತದೇಹ ಕೊಂಡೊಯ್ಯಲು ಹೊಡೆದಾಟ ನಡೆಸುತ್ತಾರೆ. ಸೂರ್ಯಾಸ್ತದ ಹಿನ್ನೆಲೆಯಲ್ಲಿ ಗುಡ್ಡದ ಮೇಲೆ ಸಂತನ ಮೃತದೇಹವನ್ನು ಹೊತ್ತ ಜನರ ಗುಂಪು ಓಡುವ ದೃಶ್ಯವೊಂದು ಬರುತ್ತದೆ. ಲಾಂಗ್‌ಶಾಟ್‌ನಲ್ಲಿ ಮಧು ಅಂಬಟ್ ಚಿತ್ರೀಕರಿಸಿರುವ ಈ ದೃಶ್ಯ ಸದ್ಯದ ಮಲಯಾಳಂ ಚಿತ್ರೋದ್ಯಮದ ಓಟಕ್ಕೆ ರೂಪಕದಂತಿದೆ. ಎಷ್ಟೋ ವರ್ಷಗಳ ಬಳಿಕ ಮಲಯಾಳಂನಲ್ಲಿ `ಸಾರ್ವಕಾಲಿಕ ಶ್ರೇಷ್ಠ~ ಎನ್ನಬಹುದಾದ ಸಿನಿಮಾವೊಂದು ಬಂದಿದೆ. ಹಳೆಯ `ಚೆಮ್ಮೀನ್~ ಕಾಲ ನೆನಪಾಗುತ್ತದೆ. 

ಈ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದಾಗ ಅಬೂ ಪಾತ್ರಧಾರಿ ಧರಿಸಿದ್ದ ಗಡ್ಡ ಯಾಕೋ ಸರಿಯಾಗಿಲ್ಲ ಎಂದು ಮೇಕಪ್‌ಮ್ಯಾನ್ ಪಟ್ಟಣಂ ರಜಾಕ್‌ಗೆ ತೀವ್ರವಾಗಿ ಅನ್ನಿಸಿ, ಸ್ವಂತ ದುಡ್ಡು ಖರ್ಚು ಮಾಡಿ ಮುಂಬೈಯಿಂದ ಆತ ಗಡ್ಡವೊಂದನ್ನು ತರಿಸಿ ಹೀರೋಗೆ ಅಂಟಿಸಿದನಂತೆ! ಖರ್ಚು ಕಡಿಮೆ ಮಾಡಲೆಂದು ಮಧು ಅಂಬಟ್ 16 ಎಂ ಎಂ ನಲ್ಲೇ ಶೂಟಿಂಗ್ ನಡೆಸಲು ಬಯಸಿದ್ದರೂ, ಸಾಕಷ್ಟು ಲಾಂಗ್‌ಶಾಟ್‌ಗಳು ಇದ್ದುದರಿಂದ ಅನಿವಾರ್ಯವಾಗಿ 65 ಎಂ ಎಂ ನಲ್ಲಿ ಶೂಟಿಂಗ್ ನಡೆಸಿದರಂತೆ. ಕಲಾ ನಿರ್ದೇಶಕರಂತೂ ಕೇವಲ 2 ಲಕ್ಷ ರೂಪಾಯಿಯಲ್ಲಿ ಸೆಟ್ ಒಂದನ್ನು ಹಾಕಿಕೊಟ್ಟರಂತೆ.  

ಒಳ್ಳೆಯ ಸಿನಿಮಾಕ್ಕೂ ಎಷ್ಟೊಂದು ಕಷ್ಟಗಳಿವೆ ನೋಡಿ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry