ಗುರುವಾರ , ಮೇ 28, 2020
27 °C

ಆದರ್ಶ ಗ್ರಾಮ ಯೋಜನೆಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ದೇಶದ ಸಂಸ್ಕೃತಿ, ಯೋಗ, ಪ್ರಾಣಾಯಮ, ಆಯುರ್ವೇದ ಕುರಿತು ಪ್ರಚಾರ ಮಾಡಲು ಪತಂಜಲಿ ಯೋಗ ಸಮಿತಿಯಿಂದ “ಆದರ್ಶ ಗ್ರಾಮ’ ಯೋಜನೆ ರೂಪಿಸಲಾಗಿದೆ ಎಂದು ಪತಂಜಲಿ ಯೋಗ ಸಮಿತಿ ಹಾಗೂ ಭಾರತ್ ಸ್ವಾಭಿಮಾನ ಟ್ರಸ್ಟ್‌ನ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ತಿಳಿಸಿದರು.ಜಿಲ್ಲೆಯ ಒಂದು ಹಳ್ಳಿ ಆಯ್ಕೆ ಮಾಡಿಕೊಂಡು ಆ ಗ್ರಾಮದಲ್ಲಿ ಯೋಗ, ಪ್ರಾಣಾಯಮ, ಆಯುರ್ವೇದ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಿ ವ್ಯಸನಮುಕ್ತ ಹಳ್ಳಿ ಮಾಡುವುದು ಆದರ್ಶ ಗ್ರಾಮ ಯೋಜನೆಯ ಉದ್ದೇಶ. ಈ ಬೃಹತ್ ಯೋಜನೆಗೆ ಅನಿವಾಸಿ ಭಾರತೀಯರು ಧನ ಸಹಾಯ ಮಾಡುತ್ತಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ದೇಶದ 600 ಜಿಲ್ಲೆಗಳಲ್ಲಿ ಮಾದರಿ ಗ್ರಾಮ ಯೋಜನೆ ಅನುಷ್ಠಾನಗೊಳಿಸುವ ಗುರಿಯನ್ನು ಯೋಗಋಷಿ ಸ್ವಾಮಿ ರಾಮದೇವಜಿ ಅವರು ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.ಈಗಾಗಲೇ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಯೋಜನೆ ಅನುಷ್ಠಾನಗೊಂಡಿದೆ. ಕರ್ನಾಟಕದಲ್ಲಿ ಯಾವ ಜಿಲ್ಲೆಯ ಗ್ರಾಮ ಆಯ್ಕೆ ಮಾಡಿಕೊಂಡು ಕಾರ್ಯಾನುಷ್ಠಾನ ಮಾಡಲಾಗುವುದು ಎನ್ನುವುದನ್ನು ಏಪ್ರಿಲ್ ತಿಂಗಳಲ್ಲಿ ಚಿತ್ರದುರ್ಗಕ್ಕೆ ಆಗಮಿಸಿದಾಗ ಸ್ವಾಮಿ ರಾಮದೇವಾ ಜಿ ಅವರು ಪ್ರಕಟಿಸುವರು ಎಂದು ತಿಳಿಸಿದರು.ಪತಂಜಲಿ ಯೋಗ ಸಂಸ್ಥೆಯಿಂದ ಜಿಲ್ಲೆಯ ಆದರ್ಶ ಗ್ರಾಮದಲ್ಲಿ ಗೋಮೂತ್ರ ಕೇಂದ್ರ ಸ್ಥಾಪಿಸಲಾಗುವುದು. ಆ ಕೇಂದ್ರದಲ್ಲಿ ರೈತರಿಂದ ಲೀಟರ್‌ಗೆ ರೂ.10 ನೀಡಿ ಗೋಮೂತ್ರ ಖರೀದಿಸಿ ಸಂಗ್ರಹಿಸಿಡಲಾಗುವುದು. ಹೀಗೆ ಮಾಡುವುದರಿಂದ ಗೋಮೂತ್ರದಿಂದ ಒಂದು ವರ್ಷಕ್ಕೆ ರೈತರಿಗೆ ಸುಮಾರು ರೂ.35 ಸಾವಿರ ಆದಾಯ ದೊರೆಯಲಿದೆ ಎಂದು ವಿವರಿಸಿದರು.ಸ್ವಾಮಿ ರಾಮದೇವಜಿ ಅವರ ಮಾರ್ಗದರ್ಶನದಲ್ಲಿ ಬಗ್ಗೆ ಅರಿವು ಮೂಡಿಸಿ ಜನತೆಗೆ ಪ್ರಚಾರ ಮಾಡಲು ರಾಜ್ಯಾದ್ಯಂತ ಜಾಗರಣ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆಯ ಮೂಲಕ ಆಯಾ ಜಿಲ್ಲೆಯ ಎಲ್ಲ ತಾಲ್ಲೂಕು, ಪ್ರತಿ ಹಳ್ಳಿಗಳ ಜನತೆಗೆ ಯೋಗ, ಪ್ರಾಣಾಯಾಮ, ಆಯುರ್ವೇದ, ದೇಶದ ಸಂಸ್ಕೃತಿ ಬಗ್ಗೆ ಅರಿವು ನೀಡಲಾಗುವುದು. ಆ ಮೂಲಕ ಆರೋಗ್ಯವಂತ, ಸ್ವಾವಲಂಬಿ ಸಮಾಜ ಕಟ್ಟುವುದು ಯಾತ್ರೆಯ ಪ್ರಮುಖ ಉದ್ದೇಶ ಎಂದು ತಿಳಿಸಿದರು.ಉತ್ತರ ಕರ್ನಾಟಕದ 16 ಜಿಲ್ಲೆಗಳಲ್ಲಿ ಹಿಂದಿನ ವರ್ಷ ಅಕ್ಟೋಬರ್‌ನಲ್ಲಿ ಆರಂಭವಾಗಿರುವ ಜಾಗರಣಾ ಯಾತ್ರೆ 2011ರ ಫೆಬ್ರುವರಿ 13ರಂದು ಅಂತ್ಯಗೊಳ್ಳಲಿದೆ. ಯೋಗದಿಂದ ರೋಗಮುಕ್ತ ಕರ್ನಾಟಕ ಮಾಡುವುದು ಯಾತ್ರೆಯ ಪ್ರಮುಖ ಗುರಿ. ದೇಶದ ಸಂಸ್ಕೃತಿ ರಕ್ಷಣೆಗೆ ಗ್ರಾಮ, ಹೋಬಳಿ, ನಗರಮಟ್ಟದಲ್ಲಿ ಜನಜಾಗೃತಿ ಹಾಗೂ ಪ್ರತಿ ಗ್ರಾಮದಲ್ಲಿ ಯೋಗ ಕೇಂದ್ರ ಸ್ಥಾಪಿಸಿ ಜನತೆಗೆ ಯೋಗದ ಮಹತ್ವ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. ಎಸ್.ವಿ. ಬಸವರಾಜಪ್ಪ, ಟಿಪ್ಪು ಸುಲ್ತಾನ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಖಾಸಿಂ ಅಲಿ, ಷಣ್ಮುಖಪ್ಪ ಇತರರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.