ಆದರ್ಶ ಯೋಗ ಕೇಂದ್ರ

7

ಆದರ್ಶ ಯೋಗ ಕೇಂದ್ರ

Published:
Updated:
ಆದರ್ಶ ಯೋಗ ಕೇಂದ್ರ

ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ತಂಬಾಕು ಸೇವನೆ ಮತ್ತು ಮಾನಸಿಕ ಒತ್ತಡಗಳಿಂದ ನಿದ್ರಾಹೀನತೆ ಮತ್ತು ಗಂಟಲುನೋವಿನಿಂದ ನರಳುತ್ತಿದ್ದರು. ನ್ಯಾಯಾಲಯಕ್ಕೆ ಬಿಡುವು ಇದ್ದಾಗ ಬೆಳಗಾವಿ ಜಿಲ್ಲೆಯ ಗಡಿ ಗ್ರಾಮ ಯಕ್ಸಂಬಿಯ ಆರೋಗ್ಯ ಯೋಗ ಕೇಂದ್ರಕ್ಕೆ ಬಂದರು. ಹದಿನೈದು ದಿನಗಳ ಯೋಗ ಶಿಬಿರದಲ್ಲಿ ಭಾಗವಹಿಸಿದರು. ದೀರ್ಘ ಕಾಲದ ಅವರ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡರು!ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತ ‘ನಾನು ಇಲ್ಲಿಗೆ ಬಂದು ಹೊಸ ಮನುಷ್ಯನಾದೆ. ವ್ಯಸನಗಳಿಂದ ಮುಕ್ತನಾದೆ. ನಿದ್ರಾಹೀನತೆ ದೂರವಾಯಿತು.  ಕೇಂದ್ರದ ಅಧ್ಯಕ್ಷರಾದ  ಯೋಗಾಚಾರ್ಯ ಸಂಗಮದೇವ ಸ್ವಾಮೀಜಿ ನನ್ನ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು.

 

ಇಲ್ಲಿನ ಪರಿಸರ, ಯೋಗ  ಕೇಂದ್ರದಲ್ಲಿ ನೀಡುವ ನಿಸರ್ಗ ಚಿಕಿತ್ಸೆ, ಶುದ್ಧಿ ಕ್ರಿಯೆಗಳು, ಯೋಗಾಸನಗಳು, ಪ್ರಾಣಾಯಾಮ, ಧ್ಯಾನ ಇತ್ಯಾದಿಗಳಿಂದ ನನ್ನ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿತು’ ಎಂದು ಹೃದಯ ತುಂಬಿ ಕೃತಜ್ಞತೆ ಸಲ್ಲಿಸಿದರು. ಇದೊಂದು ಉದಾಹರಣೆಯಷ್ಟೆ. ಇಂತಹ ನೂರಾರು ಜನರ ಸಮಸ್ಯೆಗಳಿಗೆ ಯಕ್ಸಂಬಿಯ ಆರೋಗ್ಯ,ಯೋಗ ಕೇಂದ್ರ ಪರಿಹಾರ ಒದಗಿಸಿದೆ.1990ರಲ್ಲಿ ಪ್ರಾರಂಭವಾದ ಈ ಆರೋಗ್ಯ-ಯೋಗ ಕೇಂದ್ರ ಪ್ರತಿ ವರ್ಷ ಜನವರಿ 1ರಿಂದ ಎರಡು ವಾರಗಳ ಅವಧಿಯ ಯೋಗ ಶಿಕ್ಷಣ ತರಬೇತಿ ಶಿಬಿರ ಹಮ್ಮಿಕೊಳ್ಳುತ್ತದೆ. ಅದರಲ್ಲಿ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಊರುಗಳ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.ಯೋಗಾಸನ ತರಬೇತಿಯ ಜತೆಗೆ ವ್ಯಸನ ಮುಕ್ತ ಸಾತ್ವಿಕ ಜೀವನ, ಶರಣರ, ಸಂತರ ಜೀವನ ಸಂದೇಶ, ಸಾವಯವ ಕೃಷಿ ಕುರಿತು ವಿಶೇಷ ಉಪನ್ಯಾಸಗಳ ಮೂಲಕ ಶಿಬಿರಾರ್ಥಿಗಳ ಪರಿವರ್ತನೆಗೆ ಶ್ರಮಿಸುತ್ತಿದೆ.ಪ್ರತಿ ವರ್ಷ ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಡಿ.ಎಡ್, ಬಿ.ಪಿ.ಎಡ್ ವಿದ್ಯಾರ್ಥಿ/ಶಿಕ್ಷಕರು ಹಾಗೂ ವೃತ್ತಿನಿರತ ಶಿಕ್ಷಕರು ಮತ್ತು ಆಸಕ್ತ ಸ್ತ್ರೀ, ಪುರುಷರಿಗಾಗಿ ‘ಯೋಗ ಮತ್ತು ನೈತಿಕ ಶಿಕ್ಷಣ’ ತರಬೇತಿ ಶಿಬಿರಗಳನ್ನು  ಸಂಘಟಿಸುತ್ತದೆ. ಜೂನ್ ಮತ್ತು ಅಕ್ಟೋಬರ್‌ನಲ್ಲಿ ಕೊಲ್ಲಾಪುರ ಜಿಲ್ಲೆಯ ಕನೇರಿ (ಸಿದ್ಧಗಿರಿ ಮಠ) ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ‘ಬಾಲಚೇತನ ಸಂಸ್ಕಾರ ಮತ್ತು ಯೋಗ ಶಿಬಿರ’ ಸಂಘಟಿಸುತ್ತದೆ.  ಕನೇರಿ, ವಿಜಾಪುರದ ಜ್ಞಾನಯೋಗಾಶ್ರಮ, ಚಡಚಣ ಮತ್ತಿತರ ಸ್ಥಳಗಳಲ್ಲಿ ‘ಆರೋಗ್ಯ ಮತ್ತು ನಿರಂತರ ಯೋಗ ತರಗತಿಗಳನ್ನು ಹಮ್ಮಿಕೊಳ್ಳುತ್ತದೆ. ವರ್ಷಕ್ಕೊಮ್ಮೆ ನಡೆಸುವ ‘ಬೃಹತ್ ಯೋಗ ಸಂಗಮ’ ಶಿಬಿರ ಕೇಂದ್ರದ ವಿಶೇಷ ಕಾರ್ಯಕ್ರಮ.‘ಪತಂಜಲಿ’ಯೋಗ ಆಧಾರಿತ ಯೋಗ ಶಿಕ್ಷಣ ನೀಡುತ್ತಿರುವ ಈ ಯೋಗ ಕೇಂದ್ರ ಕರ್ನಾಟಕದ ಗಡಿ ಭಾಗದ ಯೋಗಾಭ್ಯಾಸಿಗಳ ಪಾಲಿಗೆ ಗರಡಿ ಮನೆಯಾಗಿದೆ. ಅಲ್ಲಿ ಕಲಿಸುವ ಅನೇಕ ಯೋಗಾಸನ ಮತ್ತು  ಪ್ರಾಣಾಯಾಮ ಹಾಗೂ ಧ್ಯಾನ ತರಬೇತಿ ನೂರಾರು ಜನರಿಗೆ ಆರೋಗ್ಯ ಮಾರ್ಗದರ್ಶಿಯಾಗಿವೆ.ಶಿಬಿರಗಳಲ್ಲಿ ಸಾತ್ವಿಕ ಆಹಾರ ಪದ್ಧತಿ, ಶರೀರ ಶಾಸ್ತ್ರ, ದುಶ್ಚಟಗಳ ಪರಿಣಾಮ, ಆಹಾರ - ವಿಹಾರ, ಯೋಗ ಜೀವನ, ನೈತಿಕ ಪಾಠಗಳು, ವ್ಯಕ್ತಿತ್ವ ವಿಕಸನ, ಅಷ್ಟಾಂಗ ಯೋಗ ವಿವರಣೆ ಹಾಗೂ ಪ್ರಾತ್ಯಕ್ಷಿಕೆಗಳನ್ನು ವಿಷಯ ತಜ್ಞರು ನಡೆಸಿಕೊಡುತ್ತಾರೆ.ಯೋಗ ಕೇಂದ್ರದ ಅಧ್ಯಕ್ಷರಾದ  ಸಂಗಮ ದೇವ ಸ್ವಾಮೀಜಿ ಕರ್ನಾಟಕ, ಮಹಾರಾಷ್ಟ್ರ ಹಾಗೂ  ವಿದೇಶಗಳಲ್ಲಿ ಯೋಗ ಶಿಕ್ಷಣದ  ತರಬೇತಿ ನೀಡುವ ಮೂಲಕ ಜನರಿಗೆ ಸಾತ್ವಿಕ ಜೀವನದ ಪರಿಚಯ ಮಾಡಿಕೊಡುತ್ತಿದ್ದಾರೆ. ಅವರು ಬಿಹಾರದ ಮುಂಗೇರ ಯೋಗ ವಿದ್ಯಾಲಯ  ಮತ್ತು ಲೋಣಾವಳದ ಯೋಗ ಮಹಾವಿದ್ಯಾಲಯದಲ್ಲಿ  ಯೋಗಾಧ್ಯಯನ ಪದವಿ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry