ಸೋಮವಾರ, ಮೇ 17, 2021
23 °C

ಆದಾಯಕ್ಕೆ ಆದ್ಯತೆ: ಅಕ್ರಮಕ್ಕೆ ಕಡಿವಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಲಮೂಲಗಳ ವಾಸ್ತವ ಸ್ಥಿತಿ ಆಧರಿಸಿ ನೀರಿನ ಸಮಸ್ಯೆಗೆ ಪರಿಹಾರ ಮತ್ತು ಅಕ್ರಮಕ್ಕೆ ಕಡಿವಾಣ ಹಾಕಿ ಜಾಹೀರಾತು ಮೂಲಕ ಆದಾಯ ವೃದ್ಧಿಗೆ ಕ್ರಮ ಕೈಗೊಳ್ಳುವ ಸ್ಥಾಯಿ ಸಮಿತಿಗಳ ಪುರೋಗಾಮಿ ಪ್ರಸ್ತಾವನೆಗಳಿಗೆ  ಗುಲ್ಬರ್ಗ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು ಸಾಕ್ಷಿಯಾಯಿತು.ಇಂದಿರಾ ಸ್ಮಾರಕ ಭವನದಲ್ಲಿ ಸೋಮವಾರ ಮೇಯರ್ ಸೋಮಶೇಖರ ಮೇಲಿನಮನಿ ಅಧ್ಯಕ್ಷತೆಯಲ್ಲಿ  ಈ ಬಾರಿಯ ಮೊದಲ ಸಾಮಾನ್ಯ ಸಭೆ ನಡೆಯಿತು.ಕುಡಿವ ನೀರು: ಕುಡಿವ ನೀರಿನ ಸಮಸ್ಯೆ, ಕೊಳವೆ ಬಾವಿ ತೆಗೆಸಲು ಅನುದಾನ, ನಳ-ತೊಟ್ಟಿ ನಿರ್ಮಾಣದಂತಹ ಬೇಡಿಕೆಗಳನ್ನು ಹಲವು ಸದಸ್ಯರು ಮುಂದಿಟ್ಟರು.ಇದಕ್ಕೆ ಪ್ರತಿಕ್ರಿಯಿಸಿದ ಯೋಜನಾ ಮತ್ತು ನಗರ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯ್ಯದ್ ಅಹ್ಮದ್, `ಕೊಳವೆ ಬಾವಿ ಕೊರೆಯಿಸುವಂತೆ ಒತ್ತಾಯಿಸಿ ಸದಸ್ಯರಿಂದ ಒಟ್ಟು 1.90 ಕೋಟಿ ರೂಪಾಯಿಯ ಪ್ರಸ್ತಾವನೆಗಳು ಬಂದಿವೆ. ಆದರೆ ಸುಮಾರು 40 ಲಕ್ಷ ರೂಪಾಯಿ ಅನುದಾನ ದೊರಕುವ ನಿರೀಕ್ಷೆ ಇದೆ. ಹೀಗಾಗಿ ಜಲಮೂಲಗಳ ವಾಸ್ತವ ಸ್ಥಿತಿ ಆಧರಿಸಿ ನೀರಿನ ಸಮಸ್ಯೆ ಪರಿಹರಿಸಬೇಕಾಗಿದೆ~ ಎಂದರು.`24/7 ಕುಡಿವ ನೀರು~ ವ್ಯವಸ್ಥೆ ಇರುವ 11 ವಾರ್ಡ್‌ಗಳಿಂದಲೂ ಕೊಳವೆ ಬಾವಿಗೆ ಬೇಡಿಕೆ ಬಂದಿದೆ. ಬಹುತೇಕ ಸದಸ್ಯರ ವಾರ್ಡ್‌ನ ಎಲ್ಲೆಲ್ಲಿ ಜಲಮೂಲಗಳಿವೆ (ಕೊಳವೆ ಬಾವಿ, ಬಾವಿ, ಕೆರೆ ಇತ್ಯಾದಿ) ಎಂಬ  ಮಾಹಿತಿಯಿಲ್ಲ. ಹೀಗಾಗಿ ಕೆಯುಡಬ್ಲ್ಯೂಡಿಬಿ (ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ)ಯಿಂದ ವಾಸ್ತವ ವರದಿ ಕೇಳಲಾಗಿದೆ.ಜಲಮೂಲಗಳು ಇಲ್ಲದ ಕಡೆಗೆ ಅನುದಾನ ಮಂಜೂರು ಮಾಡಲು ಸದಸ್ಯರು ಸಹಕಾರ ನೀಡಬೇಕು~ ಎಂದು ಅಹ್ಮದ್ ಸಭೆಗೆ ಮನವಿ ಮಾಡಿದರು. ಅಲ್ಲದೇ ಸಭೆಗೆ   ಕೆಯುಡಬ್ಲ್ಯೂಡಿಬಿ ಮತ್ತಿತರ ಅಧಿಕಾರಿಗಳನ್ನು ಕರೆಯಿಸಿಕೊಂಡು ನೀರು ಸರಬರಾಜು ಮತ್ತು ಒಳಚರಂಡಿ ಕಾರ್ಯಯೋಜನೆ ಬಗ್ಗೆ ಮಾಹಿತಿ ಪಡೆಯಬೇಕು ಎಂದರು. ಆದಾಯ:`ಪಾಲಿಕೆ ಪರವಾನಗಿ ಇಲ್ಲದೇ ಜಾಹೀರಾತು ಅಳವಡಿಸುವ ಪರಿಣಾಮ ನಗರ ಸೌಂದರ್ಯ ಹಾಗೂ ಆದಾಯಕ್ಕೆ ಕುತ್ತು ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಅನಧಿಕೃತ ಜಾಹೀರಾತು ಫಲಕ ತೆರವುಗೊಳಿಸುವ ಹಾಗೂ ಪರವಾನಗಿ ದರ ವಿಧಿಸುವ ಕುರಿತು ಅಧ್ಯಯನ ತಂಡವನ್ನು ನೇಮಿಸಲಾಗುವುದು. ಪಕ್ಷ, ವಿಪಕ್ಷ, ಅಧಿಕಾರಿಗಳು ಸೇರಿದ ಈ ತಂಡವು 15 ದಿನಗಳಲ್ಲಿ ನೀಡುವ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು.

 

ಆ ಮೂಲಕ  5ರಿಂದ 10 ಲಕ್ಷ ರೂಪಾಯಿ ಬರುತ್ತಿರುವ ಆದಾಯವನ್ನು 5 ಕೋಟಿಯ ಗಡಿ ದಾಟಿಸಬಹುದು~ ಎಂದು ಕರ ಮತ್ತು ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರೆಡ್ಡಿ ಕುರಕುಂದಾ ಪ್ರಸ್ತಾಪಿಸಿದರು. ಎರಡು ಪ್ರಸ್ತಾವನೆಗಳಿಗೂ ಸದಸ್ಯರು ಸಹಮತ ವ್ಯಕ್ತಪಡಿಸಿದರು.  ಇದಕ್ಕೆ ಮೊದಲು ಸೈಯ್ಯದ್ ಅಬ್ದುಲ್ ರೆಹಮಾನ್, ವಿನೋದ್ ಕೆ.ಬಿ., ಸಯ್ಯದ್ ಸಜ್ಜಾದ್ ಆಲಿ, ಫಯಾಜ್ ಹುಸೇನ್,  ವಿಜಯಕುಮಾರ ಪರಾಂಜಪೆ, ಪರಮೇಶ್ವರ ಮತ್ತಿತರರು ನೀರು, ಸ್ವಚ್ಛತೆ, ಅವ್ಯವಸ್ಥೆ ಮತ್ತಿತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದರು. ಕಾಮಗಾರಿ: ನೀರು, ತ್ಯಾಜ್ಯವಿಲೇವಾರಿ, ಚರಂಡಿ ಹಾಗೂ ಇನ್ನೂ ಮುಗಿಯದ `ನೂರು ಕೋಟಿ ರೂಪಾಯಿ~ ಕಾಮಗಾರಿಗಳ ಬಗ್ಗೆ ಸದಸ್ಯೆ ಅಮೀನಾ ಬೇಗಂ ಕೇಳಿದ ಪ್ರಶ್ನೆಗೆ `ನಗರದ ಒಳರಸ್ತೆಗಳ ಕಾಮಗಾರಿಯು ಶೇ 80ರಷ್ಟು ಮಗಿದಿದೆ. `ನೂರು ಕೋಟಿ~ಯ ಪ್ರಮುಖ ರಸ್ತೆ ಕಾಮಗಾರಿ ಬಗ್ಗೆ ಸರ್ಕಾರ ನೀಡಿದ್ದ ನಿರ್ದೇಶನ ಹಾಗೂ ವಿವಿಧ ಇಲಾಖೆಗಳ ಸಮನ್ವಯದಿಂದ (ಜೆಸ್ಕಾಂ, ಬಿಎಸ್ಸೆನ್ನೆಲ್) ಸ್ವಲ್ಪ ವಿಳಂಬವಾಗಿತ್ತು. ಈಗ ಮತ್ತೆ ವೇಗ ಪಡೆದಿದೆ. ಸ್ವಚ್ಚತೆ ಬಗ್ಗೆ ವಿಶೇಷ ತಂಡ ರಚಿಸಿ ಉಸ್ತುವಾರಿ ನಡೆಸಲಾಗುತ್ತಿದೆ~ ಎಂದು ಆಯುಕ್ತರು ಉತ್ತರಿಸಿದರು.ಕಪ್ಪು ಪಟ್ಟಿ: 2009-10ರಲ್ಲಿ ರಾಜ್ಯ ವಿತ್ತೀಯ ಆಯೋಗದ (ಎಸ್‌ಎಫ್‌ಸಿ) ಅನುದಾನದ ಅಡಿಯಲ್ಲಿ ವಾರ್ಡ್ 35 ಮತ್ತು 40ಕ್ಕೆ ಮಂಜೂರಾದ 29 ಲಕ್ಷ ರೂಪಾಯಿ ಸಿಸಿ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರ ಸಂಜಯ್ ಆರ್.ಕೆ. ಇನ್ನೂ ಕೈಗೆತ್ತಿಕೊಂಡಿಲ್ಲ. ಆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಸದಸ್ಯ ರಮೇಶ ಕಮಕನೂರ ಆಗ್ರಹಿಸಿದರು.ಬಸ್ ನಿಲ್ದಾಣ: ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಮನವಿಯಂತೆ ಜಿಲ್ಲಾಧಿಕಾರಿ ಅನುಮೋದಿಸಿರುವ 28 ಬಸ್‌ತಂಗುದಾಣ ನಿರ್ಮಾಣಕ್ಕೆ ಪಾಲಿಕೆ ಸಮ್ಮತಿಸಿತು. ಸದಸ್ಯರು ಕೆಲವು ಸಲಹೆ-ಸೂಚನೆಗಳನ್ನು ನೀಡಿದರು.ಶ್ರದ್ಧಾಂಜಲಿ: ಸಭೆಯ ಆರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ, ಸಚಿವ ಡಾ.ವಿ.ಎಸ್.ಆಚಾರ್ಯ ಹಾಗೂ ವೆಂಕಟೇಶ್ ಗುರುನಾಯಕ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಾಲಿಕೆಯ ಆಡಳಿತ ಪಕ್ಷದ ಸಭಾನಾಯಕರಾಗಿ ಆಯ್ಕೆಯಾದ ಶಿವಾನಂದ ಅಷ್ಟಗಿ ಅವರನ್ನು ಅಭಿನಂದಿಸಲಾಯಿತು.ಸಿಬ್ಬಂದಿ ಇಲ್ಲ, ನಾವೇ ಎಲ್ಲ...

ಗುಲ್ಬರ್ಗ: ಸ್ಥಾಯಿ ಸಮಿತಿ, ಹಿಂದಿನ ಸಭೆಗಳ ನಡಾವಳಿಗಳನ್ನು ಸದಸ್ಯರಿಗೆ ವಾರದೊಳಗೆ ಕಡ್ಡಾಯವಾಗಿ ನೀಡಬೇಕು ಎಂದು ವಿನೋದ್ ಕೆ.ಬಿ. ಪಟ್ಟು ಹಿಡಿದರು. ಉರ್ದು ಅವತರಣಿಕೆಯನ್ನೂ ಕೊಡಬೇಕು ಎಂದು ಮಹ್ಮದ್ ನೂಹ್ ಹೇಳಿದರು.ಈ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಸಿ.ನಾಗಯ್ಯ, `89 ಪ್ರಥಮ ದರ್ಜೆ ಸಹಾಯಕ ಹುದ್ದೆಯಲ್ಲಿ 9 ಮಂದಿ, 16 ಪ್ರಬಂಧಕರ ಪೈಕಿ ಒಬ್ಬರು, 23 ಗ್ರೂಪ್ ಬಿ ಹುದ್ದೆಯಲ್ಲಿ ಒಬ್ಬರೂ ಇಲ್ಲ, ಮಾಹಿತಿ ನೀಡಲು ಸಂಪರ್ಕ ಅಧಿಕಾರಿ ಇಲ್ಲ... ಹೀಗೆ ಸಿಬ್ಬಂದಿಯ ತೀವ್ರ ಕೊರತೆ ಇದೆ. ನಾವೇ ಎಲ್ಲವನ್ನೂ ಶ್ರಮ ವಹಿಸಿ ಮಾಡುತ್ತಿದ್ದೇವೆ~ ಎಂದು ಸಮಜಾಯಿಷಿ ನೀಡಿದರು. ಸಭಾ ಗೊತ್ತುವಳಿಯ ಸಮರ್ಪಕ ಅನುಷ್ಠಾನಕ್ಕೆ ಕೆಡಿಪಿ ಮಾದರಿಯಲ್ಲಿ ಸಭೆ ನಡೆಸಿ ಪರಿಶೀಲನೆ ನಡೆಸಬೇಕು ಎಂದೂ ವಿನೋದ್ ಸಲಹೆ ನೀಡಿದರು.

ತ್ಯಾಜ್ಯವಿಲೇವಾರಿಗಾಗಿ ಉಚಿತ ಕರೆ ಮಾಡಿ!

ಗುಲ್ಬರ್ಗ:
ತ್ಯಾಜ್ಯ ವಿಲೇವಾರಿಗೆ ಟೋಲ್ ಫ್ರೀ ನಂಬರ್ ಇಟ್ಟು ಸಾರ್ವಜನಿಕರಿಂದ ದೂರು ಸ್ವೀಕರಿಸಿ, ತಕ್ಷಣ ಸ್ಪಂದಿಸುವ ಸೂತ್ರವೊಂದನ್ನು ಸದಸ್ಯ ಭೀಮರೆಡ್ಡಿ ಸೂಚಿಸಿದರು.ಪಾಲಿಕೆಯ ಉತ್ತರ ಮತ್ತು ದಕ್ಷಿಣಕ್ಕೆ ಇಬ್ಬರು ಹಿರಿಯ ಸ್ವಚ್ಛತಾ ನಿರೀಕ್ಷರ ನೇತೃತ್ವದಲ್ಲಿ ತಲಾ 30 ಪೌರಕಾರ್ಮಿಕರ ಎರಡು ತಂಡಗಳನ್ನು ರಚಿಸುವುದು. ಈ ತಂಡಕ್ಕೆ ಬೇಕಾದ ಎಲ್ಲ ಆಧುನಿಕ ಸಲಕರಣೆಗಳನ್ನು ಒದಗಿಸುವುದು. ಯಾವುದೇ ವಾರ್ಡ್‌ನಿಂದ ಕರೆ ಬಂದರೂ ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಸ್ವಚ್ಛಗೊಳಿಸುವುದು ಎಂದು ಸುಮಾರು 6.5 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಅವರು ತಿಳಿಸಿದರು. ಬೀದಿ ದೀಪ ನಿರ್ವಹಣೆಗಾಗಿ ಪಾಲಿಕೆಯು ತಿಂಗಳಿಗೆ 15-20 ಲಕ್ಷ ರೂಪಾಯಿ ವ್ಯಯಿಸುತ್ತಿದೆ. ಇದರ ಬದಲಾಗಿ ವಿದ್ಯುತ್ ದೀಪದ ಕಂಬಗಳಲ್ಲಿ ಜಾಹಿರಾತು ಫಲಕ ಅಳವಡಿಸಿ ನಿರ್ವಹಣೆಯನ್ನು ಆಸಕ್ತ ಜಾಹೀರಾತುದಾರರಿಗೆ ನೀಡಬಹುದು ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.