ಆದಾಯದಲ್ಲಿ ಮುಂದೆ: ಸೌಕರ್ಯದಲ್ಲಿ ಹಿಂದೆ

7
ಕರಾವಳಿಯ ರೈಲ್ವೆ ಬೇಡಿಕೆಗೆ ಸಿಗುತ್ತಿಲ್ಲ ಸ್ಪಂದನ

ಆದಾಯದಲ್ಲಿ ಮುಂದೆ: ಸೌಕರ್ಯದಲ್ಲಿ ಹಿಂದೆ

Published:
Updated:
ಆದಾಯದಲ್ಲಿ ಮುಂದೆ: ಸೌಕರ್ಯದಲ್ಲಿ ಹಿಂದೆ

ಮಂಗಳೂರು: ಮಂಗಳೂರಿಗೆ ರೈಲ್ವೆ ಸಂಪರ್ಕ ಲಭಿಸಿ ಶತಮಾನ ಕಳೆದಿದೆ. ಆದರೂ ರೈಲ್ವೆ ಸೇವೆಯಿಂದ ಕರಾವಳಿಯ ಜನತೆಗೆ ದೊರಕಿದ ಪ್ರಯೋಜನ ಅಷ್ಟಕ್ಕಷ್ಟೆ. ಕೊಂಕಣ ರೈಲ್ವೆ, ನೈಋತ್ಯ ರೈಲ್ವೆ ಹಾಗೂ ದಕ್ಷಿಣ ರೈಲ್ವೆ ವಲಯಗಳು ಸೇರುವಲ್ಲಿ ಇರುವ ಮಂಗಳೂರು, ಆಡಳಿತದ ದೃಷ್ಟಿಯಿಂದ ದಕ್ಷಿಣ ವಲಯದ ಪಾಲ್ಘಾಟ್ ವಿಭಾಗಕ್ಕೆ ಸೇರಿದೆ. ಹಾಗಾಗಿ ಇಲ್ಲಿನ ರೈಲ್ವೆ ಸೌಲಭ್ಯಗಳ ಅಭಿವೃದ್ಧಿ ಏನಿದ್ದರೂ ಕೇರಳೀಯರ ಹಿತದೃಷ್ಟಿಯಿಂದಲೇ ಆಗುತ್ತದೆ ಎಂಬುದು ಕರಾವಳಿ ಜನತೆಯ ಅಳಲು.ಕರಾವಳಿಗೆ ರೈಲ್ವೆ ಸೌಲಭ್ಯಗಳಿಂದ ಸಂಪೂರ್ಣ ಪ್ರಯೋಜನ ದೊರೆಯಬೇಕಿದ್ದರೆ, ಮಂಗಳೂರನ್ನು ಪ್ರತ್ಯೇಕ ವಿಭಾಗವನ್ನಾಗಿ ರೂಪಿಸಬೇಕು. ಅಲ್ಲಿಯವರೆಗೂ ಏನೇ ಮಾಡಿದರೂ ಪ್ರಯೋಜನ ಇಲ್ಲ ಎಂಬುದು ರೈಲು ಬಳಕೆದಾರರ ಅಭಿಪ್ರಾಯ.'ನವಮಂಗಳೂರು ಬಂದರು ಹಾಗೂ ಕರಾವಳಿಯಲ್ಲಿರುವ ಪ್ರಮುಖ ಉದ್ದಿಮೆಗಳ ಕಾರಣದಿಂದಾಗಿ ಮಂಗಳೂರು ರೈಲ್ವೆ ನಿಲ್ದಾಣವು ಪಾಲ್ಘಾಟ್ ವಿಭಾಗದ ಪ್ರಮುಖ ಆದಾಯದ ಮೂಲವೂ ಹೌದು. ಈ ಕಾರಣದಿಂದಾಗಿಯೇ ಕೊಂಕಣ ರೈಲ್ವೆ ಆರಂಭವಾಗುವಾಗ ಮಂಗಳೂರನ್ನು ಕೊಂಕಣ ರೈಲ್ವೆಗೆ ಸೇರಿಸಲು ಪಾಲ್ಘಾಟ್ ವಿಭಾಗದ ಅಧಿಕಾರಿಗಳು ಅವಕಾಶ ನೀಡಲಿಲ್ಲ.ಮಂಗಳೂರನ್ನು ಕೊಂಕಣ ರೈಲ್ವೆಯಡಿ ಪ್ರತ್ಯೇಕ ವಿಭಾಗ ಮಾಡಿದರೆ ಅದು ಲಾಭದಾಯಕವಾಗಿಯೂ ನಡೆಯಲಿದೆ, ಜತೆಗೆ ಪ್ರಯಾಣಿಕರಿಗೂ ಅನುಕೂಲ ಆಗಲಿದೆ' ಎನ್ನುತ್ತಾರೆ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್.ಜೋಡಿ ಹಳಿ ವಿಳಂಬ: ಉಡುಪಿ ಕಡೆಯಿಂದ ಬರುವ ಬಹುತೇಕ ಪ್ರಯಾಣಿಕ ರೈಲುಗಳು ಮಂಗಳೂರು ಜಂಕ್ಷನ್ ಪ್ರವೇಶಿಸುವ ಮುನ್ನ ತೋಕೂರಿನಲ್ಲಿ ಅರ್ಧ ತಾಸಿಗೂ ಅಧಿಕ ಹೊತ್ತು ಕಾಯಬೇಕಾದ ಸ್ಥಿತಿ ಇದೆ. ಈ ಮಾರ್ಗದಲ್ಲಿ ನಿತ್ಯ 20ಕ್ಕೂ ಅಧಿಕ ಪ್ರಯಾಣಿಕ ರೈಲುಗಳು ಸಂಚರಿಸುತ್ತವೆ. ತೋಕೂರು- ಮಂಗಳೂರು ಜಂಕ್ಷನ್ ನಡುವೆ ಜೋಡಿ ಹಳಿ ನಿರ್ಮಿಸುವ ಯೋಜನೆಗೆ 2008-09ರಲ್ಲೇ ಅನುಮೋದನೆ ದೊರಕಿದೆ.ಜೋಡಿ ಹಳಿ ಕಾಮಗಾರಿಗೆ 2008 ಮತ್ತು 2009ರ ಬಜೆಟ್‌ನಲ್ಲಿ ತಲಾ 2 ಕೋಟಿ ರೂಪಾಯಿ, 2009-10ರ ಸಾಲಿನಲ್ಲಿ 15 ಕೋಟಿ, 2010-11ರಲ್ಲಿ 10 ಕೋಟಿ, 2011-12ರ ಬಜೆಟ್‌ನಲ್ಲಿ 40 ಕೋಟಿ ರೂಪಾಯಿ ಬಿಡುಗಡೆಯಾಗಿತ್ತು. ಈವರೆಗೆ ಏಳು ಸಣ್ಣ ಸೇತುವೆಗಳು ಪೂರ್ಣಗೊಂಡಿದ್ದು, ಮೂರು ಸಣ್ಣ ಸೇತುವೆ ಹಾಗೂ ಒಂದು ದೊಡ್ಡ ಸೇತುವೆಯ ಕಾಮಗಾರಿ ಪ್ರಗತಿಯಲ್ಲಿದೆ.  ಇದೆಲ್ಲ ಪೂರ್ಣಗೊಳ್ಳಲು 147 ಕೋಟಿ ರೂಪಾಯಿ ಅಗತ್ಯವಿದೆ ಎನ್ನುತ್ತವೆ ರೈಲ್ವೆ ಇಲಾಖೆ ಮೂಲಗಳು.ಪ್ಲ್ಯಾಟ್‌ಫಾರ್ಮ್ ಕೊರತೆ:  ಶತಮಾನ ಕಂಡ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿರುವುದು ಕೇವಲ ಮೂರೇ ಪ್ಲ್ಯಾಟ್‌ಫಾರ್ಮ್. ಇಲ್ಲಿ ಎರಡು ಹೆಚ್ಚುವರಿ ಪ್ಲ್ಯಾಟ್‌ಫಾರ್ಮ್‌ಗಳನ್ನು ನಿರ್ಮಿಸಿದರೆ ಮಂಗಳೂರು ಜಂಕ್ಷನ್‌ವರೆಗೆ ಮಾತ್ರ ಬರುವ ರೈಲುಗಳು ನಗರದ ಹೃದಯಭಾಗದಲ್ಲೇ ಇರುವ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೂ ಬರಲು ಸಾಧ್ಯ.ಇಲ್ಲಿ ಎರಡು ಹೆಚ್ಚುವರಿ ಪ್ಲ್ಯಾಟ್‌ಫಾರ್ಮ್‌ಗಳನ್ನು ನಿರ್ಮಿಸಿದರೆ ಮಂಗಳೂರು ಜಂಕ್ಷನ್‌ವರೆಗೆ ಮಾತ್ರ ಬರುವ ರೈಲುಗಳು ನಗರದ ಹೃದಯಭಾಗದಲ್ಲೇ ಇರುವ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೂ ಬರಲು ಸಾಧ್ಯ. ಈ ಯೋಜನೆಗೆ ದಕ್ಷಿಣ ರೈಲ್ವೆ ಅಧಿಕಾರಿಗಳು ್ಙ 17 ಕೋಟಿ ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಿದ್ದರು. ಆದರೆ ಕಳೆದ ಬಾರಿಯ ಬಜೆಟ್‌ನಲ್ಲಿ ಇದಕ್ಕೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಮಂಗಳೂರು ಜಂಕ್ಷನ್‌ನಿಂದ ಸೆಂಟ್ರಲ್‌ವರೆಗೆ ಹಾಗೂ ಉಳ್ಳಾಲ ಸೇತುವೆಯಿಂದ ಸೆಂಟ್ರಲ್‌ವರೆಗೆ ಜೋಡಿ ಹಳಿಯನ್ನು ನಿರ್ಮಿಸಬೇಕಾದ ಅಗತ್ಯವೂ ಇದೆ.`ವಿಶ್ವದರ್ಜೆ' ಪ್ರಸ್ತಾಪ  ನೆನೆಗುದಿಗೆ: ನಿತ್ಯ ಸರಾಸರಿ 9 ಸಾವಿರಕ್ಕೂ ಅಧಿಕ ಪ್ರಯಾಣಿಕರನ್ನು ನಿರ್ವಹಿಸುವ ಮಂಗಳೂರು ರೈಲ್ವೆ ನಿಲ್ದಾಣವನ್ನು ವಿಶ್ವದರ್ಜೆಗೆ ಏರಿಸುವುದಾಗಿ 2009-10ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ ಈ ಪ್ರಸ್ತಾವ ಇನ್ನೂ ಕಾರ್ಯಗತಗೊಂಡಿಲ್ಲ. ಈ ಬಗ್ಗೆ ಪರಿಶೀಲಿಸಲು 12 ಮಂದಿಯನ್ನೊಳಗೊಂಡ ಸಂಸದೀಯ ಸ್ಥಾಯಿ ಸಮಿತಿ ಫೆ.14 ರಂದು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಬೇಕಿತ್ತು. ಈ ಸಮಿತಿಯ ಪ್ರವಾಸ ಕೊನೆಕ್ಷಣದಲ್ಲಿ ರದ್ದಾಗಿರುವುದು ಕೂಡಾ ಇಲ್ಲಿನ ಜನತೆಯಲ್ಲಿ ನಿರಾಶೆ ಮೂಡಿಸಿದೆ.ರಾಜಧಾನಿಗೆ ರೈಲು ಸಾಲದು: ಕರಾವಳಿಯಿಂದ ರಾಜ್ಯದ ರಾಜಧಾನಿ ಬೆಂಗಳೂರು ತಲುಪಲು ಸಾಕಷ್ಟು ರೈಲುಗಳಿಲ್ಲ ಎಂಬುದು ಇಲ್ಲಿನ ಜನರ ಇನ್ನೊಂದು ಕೊರಗು. ಬೆಂಗಳೂರು- ಮಂಗಳೂರು- ಕಾರವಾರ ನಡುವೆ ಈಗ ನಿತ್ಯ ರಾತ್ರಿ ರೈಲು ಸಂಚರಿಸುತ್ತಿದ್ದರೆ, ಹಗಲು ರೈಲು ವಾರದಲ್ಲಿ ಮೂರು ದಿನ ಮಾತ್ರ ಓಡುತ್ತದೆ. ಹಗಲು ರೈಲನ್ನು ನಿತ್ಯವೂ ಓಡಿಸಬೇಕು, ಇನ್ನೊಂದು ರಾತ್ರಿ ರೈಲನ್ನು ಹೆಚ್ಚುವರಿಯಾಗಿ ಒದಗಿಸಬೇಕು ಎಂದು ಒತ್ತಾಯಿಸುತ್ತಾರೆ ಪುತ್ತೂರು ಬಳಕೆದಾರರ ವೇದಿಕೆಯ ದಿನೇಶ್ ಭಟ್.'ಬೆಂಗಳೂರಿನಿಂದ-ಮಂಗಳೂರಿಗೆ ಸುತ್ತು ಬಳಸಿ ಪ್ರಯಾಣಿಸಬೇಕು. ಕಾರವಾರದಿಂದ ಬೆಂಗಳೂರು ತಲುಪಲು 17 ಗಂಟೆ ಪ್ರಯಾಣಿಸಬೇಕಾದ ಸ್ಥಿತಿ ಇದೆ. ಹಾಸನ- ಶ್ರವಣ ಬೆಳಗೊಳ- ಬೆಂಗಳೂರು ಮಾರ್ಗ ಪೂರ್ಣವಾದರೆ ಈ ಪ್ರಯಾಣದ ಅವಧಿಯಲ್ಲಿ 4 ಗಂಟೆ ಕಡಿಮೆಯಾಗಲಿದೆ' ಎನ್ನುತ್ತಾರೆ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯ ತಾಂತ್ರಿಕ ಸಲಹೆಗಾರ ಅನಿಲ್ ಹೆಗ್ಡೆ.ಸಮೀಕ್ಷೆ ನೆನೆಗುದಿಗೆ: ಕರಾವಳಿಯ ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಸಂಪರ್ಕಿಸಲು ಕೊಲ್ಲೂರು- ಕಾರ್ಕಳ- ವೇಣೂರು- ಧರ್ಮಸ್ಥಳ- ಸುಬ್ರಹ್ಮಣ್ಯ ಹಾಗೂ ಪಡುಬಿದ್ರಿ- ಧರ್ಮಸ್ಥಳ- ಸುಬ್ರಹ್ಮಣ್ಯ ನಡುವೆ ಹೊಸ ಮಾರ್ಗ ನಿರ್ಮಿಸಲು ಸಮೀಕ್ಷೆ ನಡೆಸುವ ಪ್ರಸ್ತಾವ 2009-10ನೇ ಬಜೆಟ್‌ನಲ್ಲಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಸಮೀಕ್ಷೆ ಇನ್ನೂ ನಡೆದಿಲ್ಲ. ಇದು ಕಾರ್ಯಗತಗೊಂಡರೆ ಕರಾವಳಿಯ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಗೋವಾ-ಮಂಗಳೂರು ಹಳಿಯನ್ನು ಜೋಡಿಹಳಿಯನ್ನಾಗಿ ಪರಿವರ್ತಿಸಬೇಕೆಂಬ ಬೇಡಿಕೆಯೂ ಇದೆ.ಪ್ರಮುಖ ಬೇಡಿಕೆಗಳು

* ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ* ಬೆಂಗಳೂರು- ಮಂಗಳೂರು- ಕಾರವಾರ ಮಧ್ಯೆ ಇನ್ನೊಂದು ರಾತ್ರಿ ರೈಲು, ನಿತ್ಯ ಹಗಲು ರೈಲು ಒದಗಿಸಬೇಕು* ಸುಬ್ರಹ್ಮಣ್ಯ- ಮಂಗಳೂರು-ಮಡಗಾಂವ್-ಹುಬ್ಬಳ್ಳಿಗೆ ರೈಲು ಸೇವೆ* ಕಾರ್ಕಳ- ಕುದುರೆಮುಖ ಮೂಲಕ ಹೊಸ ರೈಲು ಮಾರ್ಗ ನಿರ್ಮಿಸಬೇಕು.* ಮಂಗಳೂರು- ಮಡಿಕೇರಿ- ಮೈಸೂರು ಮಾರ್ಗ ನಿರ್ಮಿಸಬೇಕು.* ಕಳೆದ ವರ್ಷ ಬೇಸಿಗೆಯಲ್ಲಿ ಅಹಮದಾಬಾದ್‌ನಿಂದ ಮಂಗಳೂರಿಗೆ ಆರಂಭಿಸಿದ ವಿಶೇಷ ರೈಲನ್ನು ಕಾಯಂಗೊಳಿಸಬೇಕು.* ಮಂಗಳೂರು-ವಾಸ್ಕೊ ನಡುವೆ ಹೊಸ ಪ್ಯಾಸೆಂಜರ್ ರೈಲು ಆರಂಭಿಸಬೇಕು.* ಮಂಗಳೂರು- ಬೆಂಗಳೂರು- ಚೆನ್ನೈ ನಡುವೆ ಹೊಸ ರೈಲು ಆರಂಭಿಸಬೇಕು.* ಮಂಗಳೂರು-ಮುಂಬೈ ನಡುವೆ ಗರೀಬ್‌ರಥ್ ಸೇವೆ ಆರಂಭಿಸಬೇಕು* ಮಂಗಳೂರಿನಿಂದ ರಾಜ್ಯದ ಪ್ರಮುಖ ಕೇಂದ್ರಗಳಿಗೆ ಅದರಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry