ಆದಾಯದ ಮೂಲ ಲಂಟಾನ ಕಳೆ

7

ಆದಾಯದ ಮೂಲ ಲಂಟಾನ ಕಳೆ

Published:
Updated:

ಚಾಮರಾಜನಗರ ಜಿಲ್ಲೆ ಬಿಳಿಗಿರಿ ರಂಗನಾಥ ಹಾಗೂ ಮಲೆ ಮಹದೇಶ್ವರ ಬೆಟ್ಟಗಳಲ್ಲಿ ಚಿಣ್ಣರ ಬಣ್ಣದ ಆಟಿಕೆಗಳು ಗಮನ ಸೆಳೆಯುತ್ತವೆ. ಇಲ್ಲಿನ ಸೋಲಿಗರು ಲಂಟಾನ ಗಿಡದ ರೆಂಬೆಕೊಂಬೆಗಳನ್ನು ಬಳಸಿಕೊಂಡು ಮಾಡಿದ ಪೀಠೋಪಕರಣಗಳು ಬೆಂಗಳೂರು, ಮೈಸೂರುಗಳ ಉಳ್ಳವರ ಮನೆಗಳನ್ನು ಅಲಂಕರಿಸಿವೆ.

 

‘ಲಂಟಾನ’ದ ರೆಂಬೆ ಕೊಂಬೆಗಳಲ್ಲಿ ಚೆಂದದ ಆಟಿಕೆಗಳು ಹಾಗೂ ಪೀಠೋಪಕರಣಗಳನ್ನು ತಯಾರಿಸಬಹುದು ಎನ್ನುವುದುಅನೇಕರಿಗೆ ತಿಳಿದಿಲ್ಲ.ಲಂಟಾನ ಭಾರತದಲ್ಲಿ ಬೇಲಿ ಸಸ್ಯವಾಗಿ ಬಳಕೆಯಾಗುತ್ತಿದೆ. ಇದನ್ನು ಅಲಂಕಾರಿಕ ಸಸ್ಯವಾಗಿ ಬೆಳೆಸುವ ಪರಿಪಾಠವೂ ಇದೆ. ವಿದೇಶಗಳಿಂದ ಭಾರತಕ್ಕೆ ಬಂದ ಲಂಟಾನ ಅತ್ಯಂತ ಅಪಾಯಕಾರಿ ಪೊದೆ ಸಸ್ಯ. ಇದು ಅತ್ಯಂತ ಆಕರ್ಷಕ ಸಸ್ಯ. ಇದರ ಎಲೆ,ಹೂ, ಹಣ್ಣುಗಳು ನೊಡಲು ಸುಂದರ. ಚಿಟ್ಟೆಗಳು ಲಂಟಾನದ ಹೂಗಳತ್ತ ಬೇಗ ಆಕರ್ಷಿತವಾಗುತ್ತವೆ.ವರ್ಭಿನೇಸಿಯ ಕುಟುಂಬಕ್ಕೆ ಸೇರಿದ ಲಂಟಾನವನ್ನು ಸೋಲಿಗರು ‘ಜೂಜಕ್ಕಿ’ ಅಥವಾ ‘ರೋಜ’ ಗಿಡ ಎಂದೇ ಕರೆಯುತ್ತಾರೆ.ಆದರೆ ಈ ಸಸ್ಯ ಪಾರ್ಥೇನಿಯಂನಂತೆ ನಿರಂತವಾಗಿ ಹರಡುತ್ತಲೇ ಇರುತ್ತದೆ. ಇದರ ನಿರ್ಮೂಲನೆ ಅರಣ್ಯ ಇಲಾಖೆಗೆ ಒಂದು ಸವಾಲು.ಅರಣ್ಯ ಪ್ರದೇಶದಲ್ಲಿ ವಾಸಿಸುವ ಸೋಲಿಗರು ಹಾಗೂ ಇತರ ಆದಿವಾಸಿಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ‘ಏಟ್ರಿ’ ಸಂಸ್ಥೆ ಬಿಳಿಗಿರಿ ರಂಗನ ಬೆಟ್ಟ ಹಾಗೂ ಮಾದೇಶ್ವರ ಬೆಟ್ಟಗಳಲ್ಲಿ ವ್ಯಾಪಿಸಿರುವ ಲಂಟಾನವನ್ನೇ ಬಳಸಿಕೊಂಡು ಬುಡಕಟ್ಟು ಜನರ ನಿರುದ್ಯೋಗ ನಿವಾರಣೆಗೆ ಶ್ರಮಿಸುತ್ತಿದೆ. ಕಾಯ್ದಿಟ್ಟ ಅರಣ್ಯ, ಕೃಷಿ ಭೂಮಿಗಳಲ್ಲಿ ಬೆಳೆದಿರುವ ಅನುಪಯುಕ್ತ ಕಳೆ ಗಿಡಗಳನ್ನು ಬಳಸಿಕೊಂಡು ಆನೆವಲ, ಕೋಣನಕೆರೆ, ಪಾಲಾರ್, ಪೂನ್ನಾಚಿಗಳಲ್ಲಿನ ಸುಮಾರು ಐವತ್ತು ಬುಡಕಟ್ಟು ಕುಟುಂಬಗಳು ಆಟಿಕೆ ಹಾಗೂ ಪೀಠೋಪಕರಣಗಳನ್ನು ತಯಾರಿಸುವ ಉದ್ಯೋಗದಲ್ಲಿ ತೊಡಗಿಕೊಂಡಿವೆ. ಆಟಿಕೆ, ಪೀಠೋಪಕರಣ ಮತ್ತಿತರ ವಸ್ತುಗಳನ್ನು ತಯಾರಿಸಿ ತಿಂಗಳಿಗೆ ರೂ 6 ರಿಂದ 12 ಸಾವಿರ  ರೂಪಾಯಿ ಗಳಿಸಲು ಅವಕಾಶವಿದೆ. ಕಾಡಿನಲ್ಲಿ ಆನೆ, ಇತರ ವನ್ಯಪ್ರಾಣಿಗಳ ಆವಾಸಕ್ಕೆ ಧಕ್ಕೆ ತಂದಿರುವ ಹಾಗೂ ಅನೇಕ ಅರಣ್ಯ ಸಸ್ಯಗಳ ನಾಶಕ್ಕೆ ಕಾರಣವಾಗಿರುವ ಲಂಟಾನವನ್ನು ಬಳಸಿಕೊಂಡರೆ ಅದನ್ನು ನಿರ್ಮೂಲನೆ ಮಾಡಲು ಸಾಧ್ಯವಾದೀತು ಎಂದು ಲಂಟಾನ ಸಸ್ಯದ ವಿರುದ್ಧ ಜಾಗೃತಿ ಮೂಡಿಸುತ್ತಿರುವ ನಾರಾಯಣ್ ಅಭಿಪ್ರಾಯಪಡುತ್ತಾರೆ.ತಮಿಳುನಾಡು ಹಾಗೂ ರಾಜ್ಯದ ಕೆಲವೆಡೆ ಲಂಟಾನ ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿದೆ. ಮೈಸೂರು, ಚಾಮರಾಜನಗರಗಳಲ್ಲಿ ಕೆಲ ವಿಶೇಷ ಸಂದರ್ಭಗಳಲ್ಲಿ ಇವುಗಳ ಪ್ರದರ್ಶನವನ್ನೂ ಏರ್ಪಡಿಸಲಾಗುತ್ತಿದೆ. ಕುರ್ಚಿ, ಮೇಜು, ಟೀಪಾಯಿ, ಬ್ಯಾಗು, ಬುಟ್ಟಿ ಹಾಗೂ ಹಲವು ಆಟಿಕೆಗಳು ಗ್ರಾಹಕರಿಗೆ ಇಷ್ಟವಾಗಿವೆ. ಬೆಲೆಯೂ ಹೆಚ್ಚಿಲ್ಲ.ಪ್ರತಿ ವರ್ಷ ಆಸಕ್ತ ಬುಡಕಟ್ಟು ಜನರಿಗೆ  ಮೂರು ತಿಂಗಳ ತರಬೇತಿ ನೀಡಲಾಗುತ್ತಿದೆ. ಅಗತ್ಯ ಕಚ್ಚಾ ವಸ್ತುಗಳನ್ನು ಏಟ್ರೀ ಸಂಸ್ಥೆ ಉಚಿತವಾಗಿ ನೀಡುತ್ತದೆ. ಲಂಟಾನ ಸಸ್ಯ ಸಾಕಷ್ಟು ಪ್ರಮಾಣದಲ್ಲಿ ಸಿಗುವ ಕಡೆಗಳಲ್ಲಿ ಅಲ್ಲಿಯೇ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿ ಬೇಕಿದ್ದವರು ಬಿಳಿಗಿರಿ ರಂಗನಬೆಟ್ಟದ ನಾಗೇಂದ್ರ ಅವರನ್ನು ಸಂಪರ್ಕಿಸಬಹುದು.

ಅವರ ಮೊಬೈಲ್ ನಂಬರ್: 9611553506.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry