ಆದಾಯ ಮುಖ್ಯ: ಅಕ್ರಮ ಮಾರಾಟ ತಡೆ ಅಲ್ಲ!

7

ಆದಾಯ ಮುಖ್ಯ: ಅಕ್ರಮ ಮಾರಾಟ ತಡೆ ಅಲ್ಲ!

Published:
Updated:

ನಂಜನಗೂಡು: `ನಮಗೆ ಸರ್ಕಾರ ನಿಗದಿ ಪಡಿಸಿರುವ ವಾರ್ಷಿಕ ಆದಾಯದ ಗುರಿ ಮುಟ್ಟುವುದು ಮುಖ್ಯವೇ ಹೊರತು, ಅಕ್ರಮ ಮದ್ಯ ಮಾರಾಟ ವನ್ನು ತಡೆಗಟ್ಟುವುದು ಅಲ್ಲ~ ಎಂದು ಮೈಸೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹೇಶ್‌ಕುಮಾರ್ ಶುಕ್ರವಾರ ಇಲ್ಲಿ ಹೇಳಿದರು.



ಕಳೆದ ಎರಡು ವರ್ಷಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ ವಿವಿಧೆಡೆ ವಶಪಡಿಸಿಕೊಂಡಿದ್ದ ಅಕ್ರಮ ಮದ್ಯ (ಇದು ಪೊಲೀಸರ ಕಾರ್ಯಾಚಾರಣೆಯಿಂದ ಸಂಗ್ರಹವಾದದ್ದು) ನಾಶಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದವರ ಜತೆ ಅವರು ಮಾತನಾಡಿದರು.



ವಾಹನಗಳ ಮೂಲಕ ಗ್ರಾಮೀಣ ಪ್ರದೇಶದ ಎಲ್ಲೆಡೆ ಸಣ್ಣಪುಟ್ಟ ಅಂಗಡಿಗಳಿಗೆ ರಾಜಾರೋಷವಾಗಿ ಅಕ್ರಮವಾಗಿ ಮದ್ಯ ಸರಬರಾಜು ಆಗುತ್ತಿದೆ. ಈ ಬಗ್ಗೆ ಏನು ಕ್ರಮ ಜರುಗಿಸಿದ್ದೀರಿ ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು. ಈಗ ನಾಶ ಪಡಿಸುತ್ತಿರುವ ಅಕ್ರಮ ಮದ್ಯ ಕೂಡ ಪೊಲೀಸರು ನಮಗೆ ಹಸ್ತಾಂತರಿಸಿರುವುದು. ಇದರಲ್ಲಿ ಅಬಕಾರಿ ಇಲಾಖೆ ಪಾತ್ರ ಏನೂ ಇಲ್ಲ ಎಂದರು.



ಮದ್ಯ ಬಾಟಲಿಯ ಮೇಲೆ ನಮೂದಿಸಿರುವ ಬೆಲೆಗಿಂತ ಅಧಿಕ ದರಕ್ಕೆ ಮಾರಿದ ಎಷ್ಟು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂಬ ಮತ್ತೊಂದು ಪ್ರಶ್ನೆಗೆ, ಜನವರಿಯಿಂದ ಕೇವಲ 6 ಪಕ್ರರಣ ದಾಖಲಾಗಿದೆ ಎಂದು ತಪ್ಪು ಮಾಹಿತಿ ನೀಡಿದರು. ಆಗ ಸ್ಥಳೀಯ ಅಬಕಾರಿ ನಿರೀಕ್ಷಕ ವಿವೇಕ್, ಕಳೆದ ಆಗಸ್ಟ್ 26 ರಿಂದ ಈವರೆಗೆ 5 ಪ್ರಕರಣ ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದರು.



ಇದಕ್ಕೂ ಮುನ್ನ ಮದ್ಯ, ಬಿಯರ್, ಸಾರಾಯಿ, ಸೇಂದಿ ಸೇರಿದಂತೆ ಒಟ್ಟು 246.17 ಲೀಟರ್ ಅಕ್ರಮ ಮದ್ಯ ಮತ್ತು 8.64 ಲೀಟರ್ ನಕಲಿ ಮದ್ಯವನ್ನು ನಾಶ ಪಡಿಸಲಾಯಿತು. ತಹಶೀಲ್ದಾರ್ ಕಾಮಾಕ್ಷಮ್ಮ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry