ಶುಕ್ರವಾರ, ಮೇ 14, 2021
35 °C

ಆದಿಚುಂಚನಗಿರಿ ತುಂಬ ಜಾನಪದ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಮಂಗಲ: ಆದಿಚುಂಚನಗಿರಿ ಪೀಠಾಧ್ಯಕ್ಷ ಬಾಲಗಂಗಾಧರನಾಥ ಸ್ವಾಮೀಜಿ ಅವರ 38ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಶುಕ್ರವಾರದಿಂದ ಶ್ರೀಕ್ಷೇತ್ರದಲ್ಲಿ ಆರಂಭವಾದ ರಾಜ್ಯಮಟ್ಟದ ಜಾನಪದ ಕಲಾಮೇಳಕ್ಕೆ ಕರ್ನಾಟಕ ಜಾನಪದ ಪರಿಷತ್‌ನ ಅಧ್ಯಕ್ಷ ನಾಡೋಜ ಜಿ.ನಾರಾಯಣ ಚಾಲನೆ ನೀಡಿದರು.ಮೇಳದಲ್ಲಿ ವಿವಿಧ ಜಿಲ್ಲೆಗಳು ಹಾಗೂ ತಮಿಳುನಾಡು, ಆಂಧ್ರಪ್ರದೇಶಗಳಿಂದಲೂ ಕಲಾವಿದರು ಆಗಮಿಸಿದ್ದಾರೆ. ಚುಂಚನಗಿರಿ ತಪ್ಪಲು  ಜಾನಪದ ಕಲಾವಿದರಿಂದ ತುಂಬಿ ತುಳುಕುತ್ತಿದೆ. ಉತ್ತರ ಕರ್ನಾಟಕದ ಕಲಾವಿದರೇ ಹೆಚ್ಚು ಭಾಗವಹಿಸಿರುವುದು ವಿಶೇಷ.ಕಲಾವಿದರು ಗ್ರಾಮೀಣ ಸೊಗಡಿನ ಸುಮಾರು 200ಕ್ಕೂ ಹೆಚ್ಚು ಜಾನಪದ ಕಲಾ ಪ್ರಾಕಾರಗಳನ್ನು ಪ್ರದರ್ಶಿಸಿ ನೆರೆದಿದ್ದು ಜನತೆಗೆ ಮುದ ನೀಡಿದರು. ಜಾನಪದ ಕಲಾ ಮೇಳದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಅದರಲ್ಲೂ ಹೆಚ್ಚು ಮಹಿಳೆಯರೇ ಭಾಗವಹಿಸಿದ್ದದ್ದು  ವಿಶೇಷವಾಗಿತ್ತು. ನಂತರ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಲವು ಸನಾತನ ಧಾರ್ಮಿಕ ಕ್ಷೇತ್ರಗಳಿವೆ. ಅವುಗಳಲ್ಲಿ ಆದಿಚುಂಚನಗಿರಿ ಕ್ಷೇತ್ರವೂ ಒಂದು. ಶ್ರೀಕ್ಷೇತ್ರಕ್ಕೆ ದೀರ್ಘವಾದ ಪೌರಾಣಿಕ ಹಿನ್ನೆಲೆ ಇದೆ. ಪ್ರಕೃತಿದತ್ತವಾಗಿರುವ ಚುಂಚನಗಿರಿ ಪ್ರದೇಶ ಅವ್ಯಕ್ತ ಶಕ್ತಿಯ ಆವಾಹನೆಯಿಂದಾಗಿ ಧಾರ್ಮಿಕ ಕ್ಷೇತ್ರವಾಗಿದೆ ಎಂದರು.ಸ್ವಾಮೀಜಿ 33 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ರಾಜ್ಯಮಟ್ಟದ ಜಾನಪದ ಕಲಾಮೇಳ ಅದ್ಭುತವಾದುದ್ದು, ಇದರಿಂದ ನಶಿಸಿಹೋಗುತ್ತಿರುವ ಜಾನಪದ ಕಲೆಗಳ ಪುನರುತ್ಥಾನವಾಗಲಿದೆ. ಜಾನಪದ ಕ್ಷೇತ್ರಕ್ಕೆ ಸ್ವಾಮೀಜಿ ನೀಡುತ್ತಿರುವ ಕೊಡುಗೆ ಅಪಾರವಾದುದು ಎಂದು ಶ್ಲಾಘಿಸಿದರು.  ಸಮಾರಂಭದ ಅಧ್ಯಕ್ಷತೆಯನ್ನು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ವಹಿಸಿ ಮಾತನಾಡಿ, ಸ್ವಾಮೀಜಿ ಕಾರ್ಯಕ್ಷೇತ್ರ ಭಾರತದ  ಉದ್ದಗಲಕ್ಕೂ ಹಬ್ಬಿನಿಂತಿದೆ. ಇವರು ಪವಾಡ ಪುರಷ, ನಡೆದಾಡುವ ದೇವರು. ಶೈಕ್ಷಣಿಕ ಕ್ಷೇತ್ರದಲ್ಲಿ 460ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾಸೇವೆ ಮಠದಿಂದ ಅವಿರತವಾಗಿ ನಡೆಯುತ್ತಿದೆ. ಭಾರತೀಯ ಸಂಸ್ಕೃತಿ, ಕಲೆ, ಪರಂಪರೆ, ಜಾನಪದ ಸಾಹಿತ್ಯ ಉಳಿಸುವ ನಿಟ್ಟಿನಲ್ಲಿ ಸ್ವಾಮೀಜಿ ನಾಡಿಗೆ ಹೊಸ ಆಯಾಮ ಸೃಷ್ಟಿಸಿದ್ದಾರೆ ಎಂದು ಹೇಳಿದರು.ಆದಿಚುಂಚನಗಿರಿ ಕ್ಷೇತ್ರದಲ್ಲಿ ನಿರ್ಮಾಣ ಮಾಡಿರುವ ಕಾಂಕ್ರೀಟ್ ರಸ್ತೆಯನ್ನು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು. ಡಾ.ಎಚ್.ಎಲ್.ನಾಗೇಗೌಡ ಪ್ರಶಸ್ತಿಯನ್ನು ಚುಂಚನಹಳ್ಳಿಯ ಸೋಬಾನೆ ಗಿರಿಯಮ್ಮ ಮತ್ತು ಭೈರಸಂದ್ರದ ಬಿ.ಕೆ. ರಾಮಣ್ಣ ಅವರಿಗೆ  ನೀಡಲಾಯಿತು.ಬಾಲಗಾಂಗಾಧರನಾಥಸ್ವಾಮೀಜಿಯವರ ಆಶೀರ್ವಚನ: ಗ್ರಾಮಾಂತರ ಪ್ರದೇಶದಲ್ಲಿ ಸಾವಿರಾರು ವರ್ಷಗಳಿಂದ ಉಳಿಸಿ ಬೆಳೆಸಿಕೊಂಡು ಬಂದಿರುವ ಜಾನಪದ ಕಲೆಯನ್ನು ಪುನರುತ್ಥಾನಗೊಳಿಸುವ ನಿಟ್ಟಿನಲ್ಲಿ ಪ್ರತೀ ವರ್ಷ ಈ ಕಲಾ ಮೇಳವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಜಾನಪದ ಕ್ಷೇತ್ರಕ್ಕೆ ಹೆಚ್.ಎಲ್.ನಾಗೇಗೌಡರು ನೀಡಿದ ಸೇವೆ ಅಪಾರ, ಅವರ ಸ್ಮರಾಣಾರ್ಥ ಜಾನಪದ ಕಲೆಯನ್ನು ಪ್ರೋತ್ಸಾಹಿಸು ದಿಸೆಯಿಂದ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮಠದ ಭಕ್ತರಾಗಿದ್ದು ಅವರು ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.ಪುರುಷೋತ್ತಮನಾಥ ಸ್ವಾಮೀಜಿ ಸ್ವಾಗತಿಸಿದರು, ಪ್ರಾಂಶುಪಾಲ ಸಿ. ನಂಜುಂಡಯ್ಯ ನಿರೂಪಿಸಿದರು, ಕಲ್ಪತರು ಆಶ್ರಮದ  ಶಿವಕುಮಾರನಾಥ ಸ್ವಾಮೀಜಿ ವಂದಿಸಿದರು. ಕ್ಷೇತ್ರದ ಕಾರ್ಯದರ್ಶಿ ನಿರ್ಮಲಾನಂದನಾಥ ಸ್ವಾಮೀಜಿ, ನಿರ್ಮಾಪಕ ನರಸಿಂಹಯ್ಯ, ನಿರ್ದೇಶಕ ಸಾಯಿಪ್ರಕಾಶ್, ಮಠದ ವ್ಯವಸ್ಥಾಪಕ ರಾಮಕೃಷ್ಣೇಗೌಡ, ಹಾಸ್ಯನಟ ಕರಿಬಸವಯ್ಯ, ಲಿಂಗರಾಜು, ಸಚ್ಚಿದಾನಂದ ಹಾಗೂ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.