ಶುಕ್ರವಾರ, ಮೇ 27, 2022
27 °C

ಆದಿವಾಸಿಗಳ ಅಭಿವೃದ್ಧಿಗಾಗಿ ಹಣ ಮೀಸಲಿಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ರಾಜ್ಯ ಸರ್ಕಾರ ಮಂಡಿಸಲಿರುವ ನೂತನ ಬಜೆಟ್‌ನಲ್ಲಿ ರಾಜ್ಯದ ಅರಣ್ಯ ಅವಲಂಬಿತ ಆದಿವಾಸಿಗಳು ಹಾಗೂ ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ  3 ಸಾವಿರ ಕೋಟಿ ಹಣವನ್ನು ಮೀಸಲಿಡಬೇಕು ಎಂದು ಗಿರಿಜನ ಕ್ರಿಯಾ ಕೂಟ ಮತ್ತು ರಾಜ್ಯ ಮೂಲನಿವಾಸಿ ಬುಡಕಟ್ಟು ಜನರ ವೇದಿಕೆ ಆಗ್ರಹಿಸಿವೆ.ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರಿಯಾ ಕೂಟದ ಸಂಚಾಲಕ ಎಸ್.ಶ್ರೀಕಾಂತ, ಆದಿವಾಸಿಗಳು ಹಾಗೂ ಬುಡಕಟ್ಟು ಜನರ ಸಮಸ್ಯೆಗಳಿಗೆ ರಾಜ್ಯದ ನೂತನ ಸರ್ಕಾರ ಸ್ಪಂದಿಸಬೇಕಿದೆ. ಆದಿವಾಸಿಗಳನ್ನು ರಾಜಕೀಯವಾಗಿ ಮುಖ್ಯವಾಹಿನಿಗೆ ತರಲು ಈ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಈ ಹಿನ್ನೆಲೆಯಲ್ಲಿ ರಾಜ್ಯಮಟ್ಟದಲ್ಲಿ ಅರಣ್ಯ ಅವಲಂಬಿತ ಬುಡಕಟ್ಟು ಸಮುದಾಯದ 30 ಪ್ರತಿನಿಧಿಗಳನ್ನು ಒಳಗೊಂಡ ಅಭಿವೃದ್ಧಿ ಮಂಡಳಿಯನ್ನು ರಚಿಸಿ, ಮುಖ್ಯಮಂತ್ರಿ ಅವರ ಕಚೇರಿ ಮೂಲಕವೇ ಮೇಲ್ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.     ಅರಣ್ಯ ಹಕ್ಕುಗಳ ಮಾನ್ಯತಾ ಕಾಯ್ದೆ ಅನ್ವಯ ಹಾಡಿಗಳಿಂದ ಜಿಲ್ಲಾ ಅರಣ್ಯ ಹಕ್ಕುಗಳ ಸಮಿತಿಗೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಗಣಿಸಿ, ಸಾಮೂಹಿಕ ಅರಣ್ಯ ಹಕ್ಕಿಗೆ ಹಕ್ಕು ಪತ್ರಗಳನ್ನು ಕೂಡಲೇ ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಬೇಕು. ಆದಿವಾಸಿ ಬುಡಕಟ್ಟುಗಳ ಪಾರಂಪರಿಕ ಗ್ರಾಮ ಮತ್ತು ಅರಣ್ಯ ಹಕ್ಕು ಸಮಿತಿಗಳನ್ನು ಬಲಗೊಳಿಸಲು ನಿರ್ವಹಣಾ ವೆಚ್ಚ ಮತ್ತು ಸಭಾ ಭವನ ನೀಡಬೇಕು ಎಂದು ತಿಳಿಸಿದರು.ಆದಿವಾಸಿಗಳ ವಾಸ ಸ್ಥಳಗಳನ್ನು ಅನುಸೂಚಿತ ಪ್ರದೇಶಗಳೆಂದು ಘೋಷಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದರು.ಶೈಕ್ಷಣಿಕವಾಗಿ ಆದಿವಾಸಿಗಳನ್ನು ಮುಂದೆ ತರಲು ಆಶ್ರಮ ಶಾಲೆಗಳನ್ನು ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ವಹಣೆಗೆ ತಂದು, ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು. ಪ್ರಾಥಮಿಕ ಶಾಲೆಯಲ್ಲಿನ ಆದಿವಾಸಿ ಮಕ್ಕಳಿಗೆ  5 ಸಾವಿರ, ಪ್ರೌಢಶಾಲೆಗಳಲ್ಲಿ  8 ಸಾವಿರ, ಕಾಲೇಜುಗಳಲ್ಲಿ  12 ಸಾವಿರ ಮತ್ತು ವೃತ್ತಿಪರ ಪದವಿ ಅಧ್ಯಯನ ಮಾಡುವವರಿಗೆ  50 ಸಾವಿರ ವಾರ್ಷಿಕ ವಿದ್ಯಾರ್ಥಿ ವೇತನ ನೀಡಬೇಕು ಎಂದು ಆಗ್ರಹಿಸಿದರು.ಆದಿವಾಸಿಗಳ ಅಭಿವೃದ್ಧಿ ಮಂಡಳಿ ಮತ್ತು ಆದಿವಾಸಿಗಳು ವಾಸಿಸುವ 8 ಜಿಲ್ಲೆಗಳಲ್ಲಿ ಜಿಲ್ಲಾ ಮಂಡಳಿಗಳ ರಚನೆಯಾಗಬೇಕು. ಆದಿವಾಸಿ ಮಹಿಳಾ ಸಬಲೀಕರಣಕ್ಕೆ  5 ಸಾವಿರ ಸ್ವಸಹಾಯ ಸಂಘಗಳ ಸ್ಥಾಪನೆ, ಜೊತೆಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಮಹಿಳಾ ಬ್ಯಾಂಕುಗಳನ್ನು ತರಲು ಹಣ ನಿಗದಿ ಮಾಡುವಂತೆ ಮನವಿ ಮಾಡಿದರು.ಈ ಸಂಬಂಧ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿದ್ದು, ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.