ಭಾನುವಾರ, ಮೇ 16, 2021
29 °C

ಆದೇಶಕ್ಕೆ ಮುನ್ನವೇ ಅಖಾಡಕ್ಕಿಳಿದ ಸಮಿತಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸರ್ಕಾರಿ ಆದೇಶ ಬರುವ ಮುನ್ನವೇ ಮೈಸೂರು ದಸರಾ ಕುಸ್ತಿ ಸಮಿತಿಯು ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿರುವುದು ಈಗ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.ಇನ್ನೂ ಅಧ್ಯಕ್ಷರ ಘೋಷಣೆಯಾಗುವ ಮುನ್ನವೇ ಉಪಸಮಿತಿಯ ಇತರ ಸ್ಥಾನಗಳಲ್ಲಿರುವ ಅಧಿಕಾರಿಗಳೇ ತರಾತುರಿಯಲ್ಲಿ ಕುಸ್ತಿ ಸ್ಪರ್ಧೆಯ ದಿನಾಂಕ ಮತ್ತು ವೇಳಾಪಟ್ಟಿಯನ್ನು ಪ್ರಕಟಿಸಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಸ್ಥಳೀಯ ಜನಪ್ರತಿನಿಧಿಗಳು, ಕುಸ್ತಿ ಸಂಘ ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನೂ ಕಡೆಗಣಿಸಿ ಅಧಿಕಾರಿಗಳೇ ಮುಂದಾಗಿ ಕುಸ್ತಿ ದಿನಾಂಕವನ್ನು ಪ್ರಕಟಿಸಿ. ಭಿತ್ತಿಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.ಇದರಿಂದಾಗಿ ಅಸಮಾಧಾನಗೊಂಡಿರುವ ಕೆಲವು ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರು ಶುಕ್ರವಾರ ತುರ್ತುಸಭೆ ಸೇರಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಮತ್ತು  ಮುಖ್ಯಮಂತ್ರಿ ಸದಾನಂದಗೌಡರಿಗೆ ಮೌಖಿಕ ದೂರು ನೀಡಿದ್ದಾರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ಕಾರ್ಯಕರ್ತರ ವಲಯದಲ್ಲಿಯೂ ಈ ವಿಷಯ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.ದಸರಾ ಉತ್ಸವದ ಉಪಸಮಿತಿಗಳಿಗೆ ಈಗಾಗಲೇ 23 ಉಪಸಮಿತಿಗಳ ಕಾರ್ಯಾಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರದಿಂದ ಎಲ್ಲ ಉಪಸಮಿತಿಗಳಿಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕವಾಗುತ್ತದೆ. ಅವರ ಸೂಚನೆಗಳ ಮೇರೆಗೆ ಉಪಸಮಿತಿಗಳು ಕಾರ್ಯಾರಂಭ ಮಾಡುವುದು ನಿಯಮ. ಆದರೆ ಶುಕ್ರವಾರ ಸಂಜೆಯವರೆಗೂ ಸರ್ಕಾರಿ ಆದೇಶ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.ಆದರೆ, ಗುರುವಾರ ದಸರಾ ಕುಸ್ತಿ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಅಪರ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಕಾರ್ಯದರ್ಶಿಯಾಗಿರುವ  ಕಾವೇರಿ ನೀರಾವರಿ ನಿಗಮದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ನೇತೃತ್ವದಲ್ಲಿ ದಸರಾ ಉತ್ಸವದ ಅಖಿಲ ಭಾರತ ಕುಸ್ತಿ ಸ್ಪರ್ಧೆಯ ಆಹ್ವಾನ ಪತ್ರಿಕೆ, ಭಿತ್ತಿಚಿತ್ರಗಳು ಮತು ಮಾಹಿತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಎಲ್ಲಕ್ಕೂ ಹೆಚ್ಚಾಗಿ ಕುಸ್ತಿ ಸಂಘಟನೆಗಳು ಮತ್ತು ಜನಪ್ರತಿನಿಧಿಗಳನ್ನು ಲೆಕ್ಕಕ್ಕೆ ಪರಿಗಣಿಸದೇ ದಸರಾ ಕುಸ್ತಿ ಪ್ರಚಾರಕ್ಕೆ ಚಾಲನೆ ನೀಡಿರುವುದು ಎಷ್ಟು ಸರಿ ಎಂಬ ಗೊಂದಲ ಈಗ ಸಾರ್ವಜನಿಕ ವಲಯದಲ್ಲಿ ಸೃಷ್ಟಿಯಾಗಿದೆ.ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡುವ ದಸರಾ ಉತ್ಸವ ಸಮಿತಿಯ ಉಪವಿಶೇಷಾಧಿಕಾರಿಯೂ ಆಗಿರುವ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕರ್ಬೀಕರ್, `ಇದು ಯಾರದೇ ವೈಯಕ್ತಿಕ ನಿರ್ಧಾರವಲ್ಲ. ದಸರಾ ಸಮಿತಿಯ ಎಲ್ಲ ಅಧಿಕಾರಿಗಳೂ ಕೂಡಿ ತೆಗೆದುಕೊಂಡಿರುವ ನಿರ್ಧಾರ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಈ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ದೂರದ ರಾಜ್ಯಗಳ ಸ್ಪರ್ಧಿಗಳಿಗೆ ಆಹ್ವಾನ ಕಳಿಸಲು ಸರ್ಕಾರಿ ಅದೇಶ ಬರುವ ಮುನ್ನವೇ ಪ್ರಚಾರ ಆರಂಭಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ಇದನ್ನು ತರಲಾಗಿದ್ದು, ಎಲ್ಲರ ಅನುಮತಿಯ ಮೇರೆಗೆ ಇದನ್ನು ಮಾಡಲಾಗಿದೆ~ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಪ್ರತಿವರ್ಷವೂ ಸರ್ಕಾರಿ ಆದೇಶದ ಪ್ರಕಾರ ಅಧ್ಯಕ್ಷರು, ಉಪಾಧ್ಯಕ್ಷರ ನೇತೃತ್ವದಲ್ಲಿ ಕಾರ್ಯ ಕ್ರಮದ ರೂಪುರೇಷೆ ತಯಾರಾಗುತ್ತಿತ್ತು. ಆದರೆ ಈ ಬಾರಿ ಸರ್ಕಾರಿ ಆದೇಶ ಬರುವ ಮುನ್ನವೇ ಪ್ರಚಾರ ಆರಂಭಿಸಿ ಇತಿಹಾಸ ನಿರ್ಮಿಸಿರುವ ದಸರಾ ಕುಸ್ತಿ ಉಪಸಮಿತಿಯ ಕಾರ್ಯವೈಖರಿ ಗೊಂದಲ ಸೃಷ್ಟಿಸಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಸಂಪರ್ಕಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವರು ಲಭ್ಯರಾಗಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.