ಆದೇಶ ಕಾಯ್ದಿರಿಸಿದ ಹೈಕೋರ್ಟ್

7
ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿ

ಆದೇಶ ಕಾಯ್ದಿರಿಸಿದ ಹೈಕೋರ್ಟ್

Published:
Updated:

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯವಿರುವ ವಾರ್ಡ್‌ವಾರು ಮೀಸಲಾತಿಯ ಅಂತಿಮ ಪಟ್ಟಿಯನ್ನು 2 ದಿನಗಳಲ್ಲಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಅರ್ಜಿ ಕುರಿತ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.`ಮೀಸಲಾತಿ ಪಟ್ಟಿಯನ್ನು ಡಿ. 17ರೊಳಗೆ ನೀಡುವುದಾಗಿ ಸರ್ಕಾರ ಹಿಂದೆ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು. ಆದರೆ ಇದುವರೆಗೂ ಪಟ್ಟಿ ಒದಗಿಸದ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಬೇಕು' ಎಂದು ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಮತ್ತು ನ್ಯಾಯಮೂರ್ತಿ ಬಿ. ಮನೋಹರ್ ಅವರನ್ನು ಒಳಗೊಂಡ ಹೈಕೋರ್ಟ್‌ನ ರಜಾ ಕಾಲದ ವಿಭಾಗೀಯ ಪೀಠದ ಎದುರು ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಎಸ್. ವಿಜಯಶಂಕರ್ ಅವರು, `ನ್ಯಾಯಪೀಠಕ್ಕೆ ಈ ಹಿಂದೆ ಸಲ್ಲಿಸಿದ್ದ ಪ್ರಮಾಣಪತ್ರದ ಅನ್ವಯ ವಾರ್ಡ್‌ವಾರು ಕರಡು ಮೀಸಲಾತಿ ಪಟ್ಟಿಯನ್ನು ಇದೇ 4ರಂದು ಪ್ರಕಟಿಸಲಾಗಿದೆ. ಕರಡು ಪಟ್ಟಿಗೆ 2,500 ಆಕ್ಷೇಪಣೆಗಳು ಬಂದಿವೆ' ಎಂದು ತಿಳಿಸಿದರು.ಈಗ ಬಂದಿರುವ ಆಕ್ಷೇಪಣೆಗಳನ್ನು ಪರಿಶೀಲಿಸಲಾಗುತ್ತಿದೆ. ಆಕ್ಷೇಪಣೆಗಳನ್ನು ಸಲ್ಲಿಸಲು ಇದೇ 12ರವರೆಗೆ ಅವಕಾಶ ಇತ್ತು. ಐದು ದಿನಗಳ ಅವಧಿಯಲ್ಲಿ 2,500 ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುವುದು ಅಸಾಧ್ಯ. ಅಂತಿಮ ಪಟ್ಟಿ ಪ್ರಕಟಿಸಲು ಇನ್ನೂ ಎರಡು ವಾರ ಕಾಲಾವಕಾಶ ನೀಡಬೇಕು. ಅಧ್ಯಕ್ಷ/ಉಪಾಧ್ಯಕ್ಷ ಹಾಗೂ ಮೇಯರ್/ಉಪ ಮೇಯರ್ ಹುದ್ದೆಗೆ ಮೀಸಲಾತಿ ಪಟ್ಟಿ ಪ್ರಕಟಿಸಲು ಹೆಚ್ಚುವರಿಯಾಗಿ 6 ವಾರ ಬೇಕು ಎಂದು ವಿಜಯಶಂಕರ್ ಕೋರಿದರು.ಆಯೋಗದ ಆಕ್ಷೇಪ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚುನಾವಣಾ ಆಯೋಗದ ಪರ ವಕೀಲ ಕೆ.ಎನ್. ಫಣೀಂದ್ರ ಅವರು, `ಮೀಸಲಾತಿ ಪಟ್ಟಿ ಸಿದ್ಧಪಡಿಸುವಂತೆ ನಾವು ಸರ್ಕಾರವನ್ನು ಒಂದು ವರ್ಷದಿಂದ ಕೋರುತ್ತಿದ್ದೇವೆ. ಇದೇ 17ರೊಳಗೆ ಪಟ್ಟಿ ನೀಡಲು ಸರ್ಕಾರವೇ ಪ್ರಮಾಣಪತ್ರದಲ್ಲಿ ಒಪ್ಪಿಕೊಂಡಿದೆ. ಅದಕ್ಕೆ ಪಾವಿತ್ರ್ಯವೇ ಇಲ್ಲವೇ?' ಎಂದು ಪ್ರಶ್ನಿಸಿದರು.`ಸಂಪುಟದಲ್ಲಿ ಚರ್ಚೆಯಾಗಿದೆ':  ಮೀಸಲಾತಿ ಪಟ್ಟಿ ಸಿದ್ಧಪಡಿಸುವ ವಿಚಾರ ಇದೇ 13ರಂದು ನಡೆದ ಸಚಿವ ಸಂಪುಟ ಸಭೆಯಲ್ಲೂ ಚರ್ಚೆಯಾಗಿದೆ. 2011ರಲ್ಲಿ ನಡೆದ ಜನಗಣತಿಯ ವಾರ್ಡ್‌ವಾರು ಅಂಕಿ-ಸಂಖ್ಯೆಗಳನ್ನು ಜನಗಣತಿ ನಿರ್ದೇಶನಾಲಯ ಮಾರ್ಚ್‌ನಲ್ಲಿ ನೀಡಲಿದೆ. ಅದು ದೊರೆತಾಗ, ಈಗಿರುವ ನಗರ ಸ್ಥಳೀಯ ಸಂಸ್ಥೆಗಳ ಸ್ವರೂಪದಲ್ಲಿ  ಬದಲಾವಣೆಗಳಾಗಲಿವೆ ಎಂದು ವಿಜಯಶಂಕರ್ ವಾದಿಸಿದರು.2011ರ ಜನಗಣತಿಯಲ್ಲಿ ಕಂಡುಕೊಂಡ ಅಂಕಿ-ಸಂಖ್ಯೆ ಆಧಾರದಲ್ಲಿ ಅಷ್ಟೂ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿ ಪಟ್ಟಿ ಸಿದ್ಧಪಡಿಸಬೇಕು. ಹೊಸದಾಗಿ ರೂಪುಗೊಳ್ಳುವ ಸ್ಥಳೀಯ ಸಂಸ್ಥೆಗಳಿಗೆ ಆರು ತಿಂಗಳಲ್ಲಿ ಚುನಾವಣೆ ನಡೆಸಬೇಕು. ಇದನ್ನೂ ನ್ಯಾಯಪೀಠ ಪರಿಗಣಿಸಬೇಕು ಎಂದು ಅವರು ಕೋರಿದರು.2011ರ ಜನಗಣತಿಯ ಅಂತಿಮ ಅಂಕಿ-ಸಂಖ್ಯೆಗಳು ಮಾರ್ಚ್‌ನಲ್ಲಿ ಪ್ರಕಟವಾಗಬಹುದು. ಅದು ಪ್ರಕಟವಾದ ನಂತರ ವಾರ್ಡ್‌ಗಳ ಪುನರ್ ವಿಂಗಡಣೆ ಆಗಬೇಕು. ಇದಕ್ಕೆ ಏಳರಿಂದ ಎಂಟು ತಿಂಗಳ ಅವಧಿ ಬೇಕು. ಆಗ, ಚುನಾವಣೆ ನಡೆಸುವುದು ಒಂದು ವರ್ಷ ತಡವಾಗುತ್ತದೆ. ಇದು, ಕಿಶನ್‌ಸಿಂಗ್ ತೋಮರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಉಲ್ಲಂಘನೆ ಆಗುತ್ತದೆ ಎಂದು ಫಣೀಂದ್ರ ಪ್ರತಿವಾದ ಮಂಡಿಸಿದರು.

ಫೆಬ್ರುವರಿಯಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ಆಯೋಗ ಸಿದ್ಧತೆ ಮಾಡಿಕೊಂಡಿದೆ. ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ಶಾಲೆ, ಕಾಲೇಜುಗಳ ಪರೀಕ್ಷಾ ಸಮಯ. ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಈ ಸಂದರ್ಭದಲ್ಲಿ ನಡೆಸಲಾಗದು. ಮೀಸಲಾತಿ ಪಟ್ಟಿಯನ್ನು ಎರಡು ದಿನಗಳಲ್ಲಿ ನೀಡದಿದ್ದರೆ, ಸಂವಿಧಾನದ ಆಶಯವನ್ನೇ ಉಲ್ಲಂಘಿಸಿದಂತೆ ಆಗುತ್ತದೆ ಎಂದೂ ಅವರು ನ್ಯಾಯಪೀಠಕ್ಕೆ ತಿಳಿಸಿದರು.ಅಶೋಕ ಹಾರ್ನಳ್ಳಿ ವಾದ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು 2011ರ ಜನಗಣತಿಯ ಅಂಕಿ-ಸಂಖ್ಯೆಗಳು ಪ್ರಕಟವಾದ ನಂತರವೇ ನಡೆಸಬೇಕು ಎಂದು ಹೇಮಂತ್ ಎಂಬುವವರು ಸಲ್ಲಿಸಿದ ಅರ್ಜಿಯ ವಿಚಾರಣೆಯೂ ಇದೇ ಸಂದರ್ಭದಲ್ಲಿ ನಡೆಯಿತು.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಅಶೋಕ ಹಾರ್ನಳ್ಳಿ, 2001ರ ಜನಗಣತಿ ಆಧಾರದಲ್ಲಿ ಮೀಸಲಾತಿ ಪಟ್ಟಿ ಪ್ರಕಟಿಸಿದರೆ ಅದರ ಉದ್ದೇಶವೇ ಪೂರ್ಣಗೊಳ್ಳುವುದಿಲ್ಲ ಎಂದು ವಾದಿಸಿದರು.`ಹತ್ತು ವರ್ಷಗಳ ಅವಧಿಯಲ್ಲಿ ಜನಸಂಖ್ಯೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ವಿವಿಧ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವಾಗ ಇದನ್ನೂ ಗಮನಿಸಬೇಕು. ಹತ್ತು ವರ್ಷಗಳ ಹಿಂದಿನ ಜನಸಂಖ್ಯೆ ಆಧಾರದಲ್ಲಿ ಈಗ ಮೀಸಲಾತಿ ಕಲ್ಪಿಸಿದರೆ, ಅದರ ಉದ್ದೇಶ ಈಡೇರುವುದಿಲ್ಲ. ಹಾಗಾಗಿ 2011ರ ಅಂಕಿ-ಅಂಶಗಳು ಹೊರಬರುವತನಕ ಕಾಯಬೇಕು' ಎಂದು ಹಾರ‌್ನಹಳ್ಳಿ ವಾದಿಸಿದರು. ಈ ಅರ್ಜಿಗೆ ಸಂಬಂಧಿಸಿದ ಆದೇಶವನ್ನೂ ನ್ಯಾಯಪೀಠ ಕಾಯ್ದಿರಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry