ಬುಧವಾರ, ಮೇ 12, 2021
19 °C

ಆಧಾರಕ್ಕಾಗಿ ನಿತ್ಯ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಧೋಳ: ನಗರದಲ್ಲಿ `ಆಧಾರ್~ ಕಾರ್ಡ್ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ, ಮಾಹಿತಿ ಮತ್ತು ಇತರ ದಾಖಲೆಗಳನ್ನು ಒದಗಿಸಲು ನಸುಕಿನಲ್ಲಿ ನೂರಾರು ಜನ ಕೇಂದ್ರಗಳ ಎದುರು ಜಮಾಯಿಸಿರುತ್ತಾರೆ. ಕಾರ್ಡ್‌ಗಾಗಿ ನಿತ್ಯ ನೂಕು ನುಗ್ಗಲು ಇದ್ದರೆ, ಒತ್ತಡ ಮತ್ತು ಜನರ ಆಕ್ರೋಶಕ್ಕೆ ಕಚೇರಿ ಕಿಟಕಿ, ಗಾಜು ಒಡೆದ ಘಟನೆಗಳೂ ಇಲ್ಲಿ ನಡೆದಿವೆ.ನಗರದಲ್ಲಿ 3 ಸ್ಥಳಗಳಲ್ಲಿ ಆಧಾರ್ ಕಾರ್ಡ್ ವಿತರಣಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಎರಡು ಕಡೆ 4 ಕ್ಯಾಮೆರಾಗಳು ಮತ್ತು ಇನ್ನೊಂದೆಡೆ 2 ಕ್ಯಾಮೆರಾಗಳು ದಾಖಲೆ ಸಂಗ್ರಹಿಸುತ್ತಿವೆ. ಮುಂದಿನ 6 ತಿಂಗಳ ಕಾಲ ಕಾರ್ಡ್ ವಿತರಣಾ ವ್ಯವಸ್ಥೆ ಮಾಡುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಆದರೆ ಅದಕ್ಕೆ ಕಾಯುವ ವ್ಯವಧಾನ ಇಲ್ಲದೆ ಜನರು ದಿನಗೂ ಕೇಂದ್ರಕ್ಕೆ ಭೇಟಿ ನೀಡಿ ನುಗ್ಗಾಟವಾಡುತ್ತಿದ್ದಾರೆ.ನಿತ್ಯ 50 ಜನರಿಗೆ ಭಾವಚಿತ್ರ ತೆಗೆಸಿಕೊಳ್ಳಲು ಮುಂಚೆಯೇ ದಿನಾಂಕ ನಿಗದಿಗೊಳಿಸಿದ ಚೀಟಿಗಳನ್ನು ನೀಡಲಾಗುತ್ತದೆ. ಆದರೆ ಚೀಟಿಗಾಗಿ ಬೆಳಗಿನ 5 ಗಂಟೆಯಿಂದಲೇ ಜನ ಸರ್ಕಸ್ ಮಾಡುತ್ತಿದ್ದಾರೆ. ಶಾಲೆ, ಕಾಲೇಜು ವಿದ್ಯಾರ್ಥಿಗಳು ಓದಿಗೆ ಚಕ್ಕರ್ ಕೊಟ್ಟರೆ, ಇತರರು ದಿನಗಟ್ಟಲೆ ಕೆಲಸವನ್ನೆಲ್ಲ ಬಿಟ್ಟು ಕಾಯುತ್ತ ನಿಲ್ಲುವರು.ವಿದ್ಯಾರ್ಥಿಗಳು ಶಾಲೆ ಕಾಲೇಜುಗಳನ್ನು ಬಿಟ್ಟು, ವೃದ್ಧರು, ಅಂಗವಿಕಲರು, ದಿನಗೂಲಿ ಮಾಡಿಕೊಂಡು ಹೊಟ್ಟೆ ಹೊರೆಯುವವರು ತಮ್ಮ ಸಮಸ್ಯೆಗಳನ್ನು ಮರೆತಾದರೂ ಆಧಾರಕ್ಕಾಗಿ ಪಾಳಿ ಹಚ್ಚಬೇಕು.

ಸಾರ್ವಜನಿಕರಿಗೆ ಯಾವ ಕಾರ್ಡ್, ಏತಕ್ಕಾಗಿ ಬೇಕು, ಕಾರ್ಡ್ ಮಹತ್ವವೇನು? ಅದನ್ನು ಪಡೆಯಲು ಕಾಲಾವಕಾಶವೆಷ್ಟು, ಯಾರ‌್ಯಾರು ಪಡೆಯಬಹುದು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಇಲ್ಲ. ಆದರೂ ಕಾರ್ಡ್ ಪಡಿತರ ವಿತರಣೆ, ಅಡುಗೆ ಅನಿಲ ಸಂಪರ್ಕ ಪಡೆಯಲು ಬೇಕೇ ಬೇಕು ಎಂಬ ವದಂತಿ ಹಿನ್ನೆಲೆಯಲ್ಲಿ ನೂಕುನುಗ್ಗಲು ಶುರುವಾಗಿದೆ.ಆದಾರ್ ಕಾರ್ಡ್ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿ, ಒತ್ತಡ ಕಡಿಮೆ ಮಾಡಿದರೆ ಸಮಸ್ಯೆಗೆ  ಪರಿಹಾರ ಸಾಧ್ಯ. ಅದಕ್ಕಾಗಿ ವಿತರಣಾ ಕಾರ್ಯಕ್ರಮವನ್ನು ಸರಳಗೊಳಿಸಬೇಕು ಎಂದು ಗುರುಲಿಂಗಯ್ಯ ಹಿರೇಮಠ, ಪ್ರಕಾಶ ರಾಯಚೂರ, ಲಕ್ಷ್ಮಣ ಹೂಗಾರ, ಕಲ್ಮೇಶ ನಾವಿ, ರಾವಸಾಬ ತೇರದಾಳ, ಸುಭಾಷ ಗಾಯಕವಾಡ, ರಾಘವೇಂದ್ರ ಕುಲಕರ್ಣಿ, ಮೋಹನ ರುದ್ರಾಕ್ಷಿ, ಭೀಮಶಿ ತೋಟದಾರ, ದಿಲೀಪ ಪಾಲೋಜಿ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.