ಆಧಾರ್ ಕಾರ್ಡ್‌ಗಾಗಿ ನೂಕು ನುಗ್ಗಲು

7

ಆಧಾರ್ ಕಾರ್ಡ್‌ಗಾಗಿ ನೂಕು ನುಗ್ಗಲು

Published:
Updated:

ದೊಡ್ಡಬಳ್ಳಾಪುರ: ಮನೆ ಮನೆಗಳಿಗೆ ತಲುಪಿಸಬೇಕಾದ ಆಧಾರ್ ಕಾರ್ಡ್‌ಗಳನ್ನು ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ರಾಶಿ ಹಾಕಿ `ನಿಮ್ಮ ಕಾರ್ಡ್‌ಗಳನ್ನು ಆಯ್ದುಕೊಳ್ಳಿ' ಎಂದು ಹೇಳಿದ ಪರಿಣಾಮ ಜನರ ನಡುವೆ ನೂಕುನುಗ್ಗಲು, ಮಾತಿನ ಚಕಮಕಿ ನಡೆದ ಘಟನೆ ದೊಡ್ಡಬಳ್ಳಾಪುರದ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯ್ತಿ ಕಾರ್ಯಾಲಯ ಆವರಣದಲ್ಲಿ  ಭಾನುವಾರ ನಡೆಯಿತು.ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನರಿಗೆ ಸೇರಿದ ಸುಮಾರು 4 ಸಾವಿರ ಆಧಾರ್ ಕಾರ್ಡ್‌ಗಳನ್ನು ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿ ಅಂಚೆ ಇಲಾಖೆ ಕಚೇರಿ ಅಧಿಕಾರಿಗಳು ಒಂದೆಡೆ ರಾಶಿ ಹಾಕಿ ಹೋಗಿದ್ದಾರೆ. ನೂರಾರು ಜನ ಕಾರ್ಡ್‌ಗಳನ್ನು ಪಡೆಯಲು ಒಮ್ಮೆಲೇ ಮುಂದಾದ ಪರಿಣಾಮ ನೂಕು ನುಗ್ಗಲು ಉಂಟಾಯಿತು. ಜೊತೆಗೆ ಜನರ ನಡುವೆ ಮಾತಿನ ಚಕಮಕಿ ನಡೆದು ಕೆಲ ಸಮಯ ಬಿಗುವಿನ ಪರಿಸ್ಥಿತಿ ನಿರ್ಮಾಣವಾಯಿತು.ಆಧಾರ್ ಕಾರ್ಡ್‌ಗಾಗಿ ಚಾತಕಪಕ್ಷಿಗಳಂತೆ ಕಾದಿದ್ದು, ಸರ್ಕಾರದ ಸವಲತ್ತುಗಳನ್ನು ಪಡೆಯಲು ಕಾತುರದಿಂದಿದ್ದ ಹಲವಾರು ಜನರ ಆಸೆ, ನಿರಾಸೆಯಾಗಿದೆ. ಆಧಾರ್ ಕಾರ್ಡ್‌ಗಳನ್ನ ಸಂಬಂಧಪಟ್ಟವರಿಗೆ ವಿತರಿಸದೇ ಈ ಭಾಗದ ಪೋಸ್ಟ್ ಮ್ಯಾನ್ ಮನೆಗಳ ಬಳಿ ತೆರಳಿ ವಿತರಿಸದೆ ನಿರ್ಲಕ್ಷ್ಯ ದಿಂದ ವರ್ತಿಸಿದ್ದಾರೆ.ಅಮೂಲ್ಯವಾದ ಈ ಆಧಾರ್ ಕಾರ್ಡ್‌ಗಳನ್ನು ಬೇಕಾಬಿಟ್ಟಿಯಾಗಿ ಆಟವಾಡುವ ಮಕ್ಕಳು ಸಹ ಗುಂಪಲ್ಲಿ ಸೇರಿಕೊಂಡು ಯಾರದೋ ಆಧಾರ್ ಕಾರ್ಡ್‌ಗಳನ್ನು ಕೈಗೆತ್ತಿಕೊಂಡು ದೌಡಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಒಟ್ಟಾರೆ ಯಾರದ್ದೋ, ಕಾರ್ಡ್ ಮತ್ಯಾರೋ ಕೈಗೆ ಸೇರಿ, ನೂಕು ನುಗ್ಗಲ್ಲಿನಲ್ಲಿ ಕೆಲವು ಆಧಾರ್ ಕಾರ್ಡ್‌ಗಳು ಹರಿದು ಹೋಗಿವೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry