ಭಾನುವಾರ, ಮೇ 16, 2021
22 °C

ಆಧಾರ್ ನೋಂದಣಿ: ತಪ್ಪದ ಬವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ತಾಲ್ಲೂಕಿನಲ್ಲಿ ನಾಲ್ಕು ಆಧಾರ್ ನೋಂದಣಿ ಕೇಂದ್ರಗಳನ್ನು ತೆರೆದರೂ, ಆಧಾರ್ ಕಾರ್ಡ್ ನೋಂದಣಿ ಸಮಸ್ಯೆ ಬಗೆ ಹರಿಯದೇ ಮುಂದುವರೆದಿದೆ ಎಂದು ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.ಭಾನುವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದ ಬಳಿಯಿರುವ ಆಧಾರ್ ನೋಂದಣಿ ಕೇಂದ್ರದಲ್ಲಿ ಇನ್ನೂರಕ್ಕೂ ಹೆಚ್ಚು ಜನರು ನೋಂದಣಿಗಾಗಿ ಬಂದಿದ್ದು, ಸಂಜೆಯವರೆಗೂ ಸರದಿಯಲ್ಲಿ ನಿಂತು ಅರ್ಜಿ ಸಲ್ಲಿಸಲಾಗದೇ ವಾಪಾಸಾದ ಘಟನೆ ನಡೆಯಿತು.ತಾಲ್ಲೂಕಿನ ಕಳಸ ಹೋಬಳಿ ಕೇಂದ್ರದಲ್ಲಿ ಒಂದು ಮತ್ತು ಪಟ್ಟಣದಲ್ಲಿ ಮೂರು ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರದಲ್ಲಿ ನಿಗದಿತ ಸಂಖ್ಯೆಯ ಜನರಿಗೆ ಮಾತ್ರ ನೋಂದಣಿಗೆ ಅವಕಾಶವಿರುವುದರಿಂದ ನೋಂದಣಿಗಾಗಿ ತಾಲ್ಲೂಕಿನ ನಾನಾ ಭಾಗದ ಜನರು ಮುಂಜಾನೆಯೇ ಆಗಮಿಸಿದರೂ, ಅರ್ಜಿ ಸಲ್ಲಿಸಲಾಗದೇ ವಾಪಾಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ನೋಂದಣಿ ಕೇಂದ್ರದಲ್ಲಿ ದಿನಕ್ಕೆ 60 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಆದರೆ ಒಂದು ಕೇಂದ್ರಕ್ಕೆ ಕನಿಷ್ಠ 100 ಕ್ಕಿಂತಲೂ ಹೆಚ್ಚಿನ ಜನರು ಬರುತ್ತಿದ್ದು, ಉಳಿದ 40 ಜನರು ಅರ್ಜಿ ಸಲ್ಲಿಸಲಾಗದೇ ವಾಪಸು ಹೋಗಬೇಕಾಗಿದೆ.ಆಧಾರ್ ಕಾರ್ಡ್ ಮೂಲಕ ಬ್ಯಾಂಕ್ ಖಾತೆಗೆ ನೇರವಾಗಿ ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಯೋಜನೆಯ ವೇತನ, ಅಡುಗೆ ಅನಿಲದ ಸಬ್ಸಿಡಿ ಮೊತ್ತವನ್ನು ಪಾವತಿಸಲಾಗುತ್ತದೆ ಎಂಬ ಸುದ್ದಿ ಹರಡಿರುವುದೇ ಆಧಾರ್ ನೋಂದಣಿಗೆ ಮುಗಿ ಬೀಳಲು ಕಾರಣವಾಗಿದ್ದು, ಇದುವರೆಗೂ ತಾಲ್ಲೂಕಿನ ಶೇ 55 ರಷ್ಟು ಜನರು ಮಾತ್ರ ಆಧಾರ್   ಕಾರ್ಡ್‌ಗೆ ನೋಂದಣಿ ಮಾಡಿಸಿದ್ದು, ಉಳಿದ ಶೇ 45 ರಷ್ಟು ಜನರು ಇನ್ನಷ್ಟೇ ನೋಂದಣಿಯಾಗಬೇಕಾಗಿದೆ.ನೋಂದಣಿ ಕೇಂದ್ರದಲ್ಲಿ ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿರುವ ಅರ್ಜಿ ಭರ್ತಿ ಮಾಡಲು ಸಮರ್ಪಕ ಮಾಹಿತಿ ಇಲ್ಲದ ಕಾರಣ, ಅರ್ಜಿ ತುಂಬಿಸಲು ಏಜೆಂಟರ ಮೋರೆ ಹೋಗಬೇಕಾದ ಪರಿಸ್ಥಿತಿಯಿದ್ದು, ಒಂದು ದಿನ ಅರ್ಜಿ ಪಡೆದು ಭರ್ತಿಮಾಡಿ ಮರುದಿನ ಸರದಿಯಲ್ಲಿ ನಿಂತು ನೋಂದಣಿ ಮಾಡಿಸಬೇಕಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ತಾಲ್ಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಿಗೂ ಆಧಾರ್ ನೋದಣಿ ಕೇಂದ್ರ ನೀಡಬೇಕು. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಗಣಕಯಂತ್ರ ಮತ್ತು ಸಿಬ್ಬಂದಿ ಲಭ್ಯವಿರುವುದರಿಂದ ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ನೋಂದಣಿಗೆ ಅವಕಾಶ ಕಲ್ಪಿಸಬೇಕು ಮತ್ತು ಆಧಾರ್ ನೋದಣಿ ಕೇಂದ್ರದಲ್ಲಿ ಸಮರ್ಪಕ ಮಾಹಿತಿ ನೀಡಿ ಜನರಿಗಾಗುತ್ತಿರುವ ಸಮಸ್ಯೆಯನ್ನು ಪರಿಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.