`ಆಧಾರ್' ಪುನರಾರಂಭ

7

`ಆಧಾರ್' ಪುನರಾರಂಭ

Published:
Updated:

ವಿಜಾಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಧಾರ್ ಕಾರ್ಡ್‌ನ ನೋಂದಣಿ ಕಾರ್ಯ ಇದೇ 15 ಇಲ್ಲವೆ 17ರಿಂದ ವಿಜಾಪುರ ನಗರದಲ್ಲಿ ಪುನರಾರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ತಿಳಿಸಿದರು.ಸದ್ಯ ವಿಜಾಪುರ ನಗರದಲ್ಲಿ ನೋಂದಣಿ ಕಾರ್ಯ ಆರಂಭಿಸುತ್ತಿದ್ದು, 2013ರ ಜನವರಿ ಅಂತ್ಯ ಇಲ್ಲವೆ ಫೆಬ್ರುವರಿ ಮೊದಲ ವಾರದಲ್ಲಿ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ನೋಂದಣಿ ಕೇಂದ್ರ ಆರಂಭಿಸಲಾಗುವುದು ಎಂದು ಗುರುವಾರ ಇಲ್ಲಿ `ಪ್ರಜಾವಾಣಿ'ಗೆ ತಿಳಿಸಿದರು.ವಿಜಾಪುರ ನಗರದಲ್ಲಿ ಎರಡನೇ ಹಂತದ ಆಧಾರ್ ಕಾರ್ಡ್ ನೋಂದಣಿ ಕಾರ್ಯ ಆರಂಭಗೊಳ್ಳಲಿದೆ. ಸದ್ಯಕ್ಕೆ 10 ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಪ್ರತಿಯೊಂದು ಕೇಂದ್ರದಲ್ಲಿ 4ರಿಂದ 5 ಕಂಪ್ಯೂಟರ್‌ಗಳು ಇರಲಿವೆ. ಜನ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿಯೇ ಬೆರಳಚ್ಚು ನೀಡಿ ತಮ್ಮ ಭಾವಚಿತ್ರ ತೆಗೆಸಿಕೊಳ್ಳಬಹುದು ಎಂದು ಹೇಳಿದರು.ಆಧಾರ್ ಕಾರ್ಡ್ ನೋಂದಣಿಯ ಏಜೆನ್ಸಿ ಬದಲಾಗಿದೆ. ಒಂದು ವಾರಗಳ ಕಾಲ ಪ್ರಾಯೋಗಿಕವಾಗಿ ನೋಂದಣಿ ನಡೆಯಲಿದೆ. ಆ ಅವಧಿಯಲ್ಲಿ ಎದುರಾಗಬಹುದಾದ ತೊಂದರೆಗಳನ್ನು ಪರಿಹರಿಸಿ ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಕೇಂದ್ರಗಳನ್ನು ತೆರೆಯಲಾಗುವುದು ಎಂದರು.ವಿಜಾಪುರ ಜಿಲ್ಲೆಯಲ್ಲಿ ಈಗ ಅಂದಾಜು 25 ಲಕ್ಷ ಜನಸಂಖ್ಯೆ ಇದ್ದು, ಎಲ್ಲರಿಗೂ ಆಧಾರ್ ಕಾರ್ಡ್ ನೀಡುವ ಗುರಿ ಇದೆ. ದಾಖಲೆಗಳ ಪರಿಶೀಲನೆಗೆ ಪ್ರತಿ ಕೇಂದ್ರಕ್ಕೆ ಇಬ್ಬರು-ಮೂರು ಜನ ನಿವೃತ್ತ ನೌಕರರನ್ನು ನೇಮಿಸಿಕೊಳ್ಳಲಾಗುತ್ತಿದೆ. ಅವರಿಗೆ ನಿತ್ಯ 100 ರೂಪಾಯಿ ಗೌರವ ಧನದ ಜೊತೆಗೆ ಅವರು ಪರಿಶೀಲನೆ ನಡೆಸುವ ಪ್ರತಿ ಫಾರ್ಮ್‌ಗೆ ರೂ.3 ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು.ಅರ್ಜಿ ನಮೂನೆ ಸೇರಿದಂತೆ ಈ ಸೇವೆ ಸಂಪೂರ್ಣ ಉಚಿತವಾಗಿದೆ. ಜನತೆ ಯಾರಿಗೂ ಹಣ ನೀಡಬಾರದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.5.80 ಲಕ್ಷ ಜನರ ನೋಂದಣಿ: ಜಿಲ್ಲೆಯಲ್ಲಿ ಜೂನ್ 27, 2011ರಿಂದ ಆರಂಭಗೊಂಡಿದ್ದ ಮೊದಲ ಹಂತದ ಆಧಾರ್ ಕಾರ್ಡ್ ಯೋಜನೆಯ ನೋಂದಣಿ ಕಾರ್ಯ ಫೆಬ್ರುವರಿ 11, 2012ರ ವರೆಗೆ ನಡೆದಿತ್ತು. ಜಿಲ್ಲೆಯಲ್ಲಿ 275 ಕೇಂದ್ರಗಳನ್ನು ತೆರೆದು ಒಟ್ಟಾರೆ 4.36 ಲಕ್ಷ ಜನರ ನೋಂದಣಿ ಮಾಡಿಕೊಳ್ಳಲಾಗಿತ್ತು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.ಆಧಾರ್ ಕಾರ್ಡ್‌ಗೆ ಈಗಾಗಲೆ ನೋಂದಣಿ ಮಾಡಿಸಿಕೊಂಡವರ ವಿವರ: ವಿಜಾಪುರ ನಗರ: 1,46,908, ವಿಜಾಪುರ ಗ್ರಾಮೀಣ: 65,663, ಮುದ್ದೇಬಿಹಾಳ ತಾಲ್ಲೂಕು: 51,226, ಸಿಂದಗಿ ತಾಲ್ಲೂಕು: 44,971, ಇಂಡಿ ತಾಲ್ಲೂಕು: 62,991, ಬಸವನ ಬಾಗೇವಾಡಿ ತಾಲ್ಲೂಕು: 64,531.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry