ಆಧಾರ್: ಫಲಾನುಭವಿಗಳಿಗೆ ನೇರ ಹಣ

7

ಆಧಾರ್: ಫಲಾನುಭವಿಗಳಿಗೆ ನೇರ ಹಣ

Published:
Updated:
ಆಧಾರ್: ಫಲಾನುಭವಿಗಳಿಗೆ ನೇರ ಹಣ

ನವದೆಹಲಿ (ಪಿಟಿಐ): ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಎನ್‌ಆರ್‌ಇಜಿಎ) ಹಾಗೂ ಪಿಂಚಣಿ ಯೋಜನೆ ಫಲಾನುಭವಿಗಳಿಗೆ `ಆಧಾರ್~ ವ್ಯವಸ್ಥೆ ಮೂಲಕ ನೇರವಾಗಿ ಹಣ ಬಿಡುಗಡೆ ಮಾಡುವ ಬಹುನಿರೀಕ್ಷಿತ ಯೋಜನೆಗೆ ಪ್ರಧಾನಿ ಡಾ. ಮನಮೋಹನ ಸಿಂಗ್ ಶನಿವಾರ ರಾಜಸ್ತಾನದ ದುದು ಎಂಬಲ್ಲಿ ಚಾಲನೆ ನೀಡಲಿದ್ದಾರೆ.ಸಾಮಾಜಿಕ ಸೇವಾ ವಲಯದಲ್ಲಿ ಯೋಜನೆಗಳು ಜಾರಿಯಾಗುವ ಸಂದರ್ಭದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಹಾಗೂ ಇನ್ನಿತರ ಲೋಪಗಳನ್ನು ತಡೆಯುವ ಉದ್ದೇಶದಿಂದ ಫಲಾನುಭವಿಗಳಿಗೇ ನೇರವಾಗಿ ಹಣ ವಿತರಿಸುವ `ಆಧಾರ್~ ಯೋಜನೆಯನ್ನು ಬಳಸಿಕೊಳ್ಳಲಾಗುತ್ತಿದೆ.ಭಾರತೀಯ ವಿಶಿಷ್ಟ ಗುರುತು ಸಂಖ್ಯೆ ಪ್ರಾಧಿಕಾರ (ಯುಐಡಿಎಐ) `ಆಧಾರ್   ಕಾರ್ಡ್~ ನೀಡಿಕೆ ಯೋಜನೆ ಆರಂಭಿಸಿ ಎರಡು ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲೇ ಪ್ರಧಾನಿ ಇದೀಗ ಇದೇ ವ್ಯವಸ್ಥೆಯ ಮತ್ತೊಂದು ಮಹತ್ವದ ಪ್ರಕ್ರಿಯೆಗೆ ಚಾಲನೆ ನೀಡುತ್ತಿರುವುದು ಕಾಕತಾಳೀಯ ಎನಿಸಿದೆ. ಈ ಎರಡು ವರ್ಷಗಳ ಅವಧಿಯಲ್ಲಿ 20 ಕೋಟಿಗೂ ಹೆಚ್ಚು ಜನರಿಗೆ ಆಧಾರ್ ಕಾರ್ಡ್‌ಗಳ ಸಂಖ್ಯೆಗಳನ್ನು ವಿತರಿಸಲಾಗಿದೆ. 21ನೇ ಕೋಟಿಯ ಆಧಾರ್ ಸಂಖ್ಯೆಯನ್ನು ಪ್ರಧಾನಿ ಈ ಸಮಾರಂಭದಲ್ಲಿ ಸ್ಥಳೀಯರಿಗೆ ನೀಡಲಿದ್ದಾರೆ.ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಸುತ್ತಿದ್ದು, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಹಣಕಾಸು ಸಚಿವ ಪಿ. ಚಿದಂಬರಂ, ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ರಾಜಸ್ತಾನ ಮುಖ್ಯಮಂತ್ರಿ ಅಶೋಕ ಗೆಹ್ಲೊಟ್, ಸಂಪರ್ಕ ಖಾತೆ ರಾಜ್ಯ ಸಚಿವ ಸಚಿನ್ ಪೈಲಟ್, ಯೋಜನಾ ಖಾತೆ ರಾಜ್ಯ ಸಚಿವ ಅಶ್ವನಿ ಕುಮಾರ್ ಮತ್ತಿತರ ಗಣ್ಯರು ಪಾಲ್ಗೊಳ್ಳುವರು. `ಹಣ ದುರ್ಬಳಕೆ, ಅವ್ಯವಹಾರ ತಡೆಗಟ್ಟಿ ಸಮಯ ಉಳಿಸಲು ಈ ಹೊಸ ವ್ಯವಸ್ಥೆ ಸಹಕಾರಿ~ ಎಂದು ಯುಐಡಿಎಐ ಅಧ್ಯಕ್ಷ ನಂದನ್ ನಿಲೇಕಣಿ ಸುದ್ದಿಗಾರರಿಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry