ಗುರುವಾರ , ಮೇ 19, 2022
20 °C

ಆಧುನಿಕತೆಯ ಅಂಧಕಾರಕ್ಕೊಂದು ನಕ್ಷತ್ರ ಕಂದೀಲು!

ತುರುವೇಕೆರೆ ಪ್ರಸಾದ್ Updated:

ಅಕ್ಷರ ಗಾತ್ರ : | |

ಇತ್ತೀಚೆಗೆ ವಿದ್ಯುತ್ ಇಲ್ಲದ ಪರಿಣಾಮ ನಮ್ಮೂರೂ ಕತ್ತಲಲ್ಲಿ ಮುಳುಗಿತ್ತು. ಇಡೀ ಊರಲ್ಲಿದ್ದ ಯುಪಿಎಸ್‌ಗಳೆಲ್ಲಾ ಬೆಳಿಗ್ಗೆಯಿಂದ ಉರಿದು ಖಾಲಿಯಾಗಿದ್ದವು. ಮನೆಗಳಲ್ಲಿ ಟಿವಿಯ ಸದ್ದಿಲ್ಲದೆ ಒಂದು ರೀತಿಯ ಮೌನ. ಮನೆಗಳು ಮಾತ್ರವಲ್ಲ, ಸುತ್ತಮುತ್ತಲಿನ ಪರಿಸರವೂ  ಮೌನದಲ್ಲಿ ಮುಳುಗಿ ಹೋಗಿತ್ತು. ಮಿಕ್ಸಿ, ಗ್ರೈಂಡರ್‌ಗಳ ಸದ್ದಿಲ್ಲ. ಸುತ್ತಮುತ್ತಲಿನ ಸಾ ಮಿಲ್, ಹಲ್ಲರ್ ಮಿಲ್‌ಗಳ ಕರ್ಕಶ ಶಬ್ದವೂ ಇಲ್ಲ.ಸುಮಾರು 30 ವರ್ಷಗಳ ಹಿಂದೆ ಆಧುನಿಕತೆ ದಾಂಗುಡಿ ಇಡದ ಆ ಕಾಲದ ಗುಂಯ್‌ಗುಡುವ ಮೌನರಾತ್ರಿಗಳ ನೆನಪಾಯಿತು. ಆ ನೆನಪಿನಲ್ಲೇ ಮುಳುಗೇಳುತ್ತಾ ವಾಸ್ತವದತ್ತ ಗಮನ ಹರಿಸಿದೆ. ಆದರೆ ನನ್ನ ಸುತ್ತಮುತ್ತಲಿನವರಾರಿಗೂ ಈ ತನ್ಮಯತೆ, ಪ್ರಶಾಂತತೆಯನ್ನು ಆಸ್ವಾದಿಸುವ ವ್ಯವಧಾನವಿರಲಿಲ್ಲ.ಕಾಲ ಗರ್ಭದೊಳಗೆ ಪಯಣಿಸುವ, ನೆನಪಿನಾಳಕ್ಕೆ ಇಳಿಯುವ ಪ್ರಶಾಂತ ಮನಸ್ಥಿತಿ ಇದ್ದಂತಿರಲಿಲ್ಲ. ಎಲ್ಲಾ  ಏನೋ ಕಳೆದುಕೊಂಡವರಂತೆ ಚಡಪಡಿಕೆಯಲ್ಲಿದ್ದರು. ಹಲವು ಗೃಹಿಣಿಯರು `ಕರೆಂಟ್ ಬರದಿದ್ದರೆ ಅಡುಗೆ ಆಗುವುದು ಯಾವಾಗ?~ `ಅಯ್ಯೋ! ಹಾಳಾದ್ದು ಈ ಸೀರಿಯಲ್ ಮಿಸ್ಸಾಗಿ ಹೋಯಿತಲ್ಲ!~ `ಹೀಗೆ ಅಂತ ಗೊತ್ತಿದ್ರೆ ನಾನು, ನಮ್ಮೆಜಮಾನರು ಸಿನಿಮಾಕ್ಕಾದರೂ ಹೋಗ್ತಿದ್ವಿ~ (ಜನರೇಟರ್ ಇರುತ್ತಲ್ಲ!) ಎಂದು ಅಸಹನೆಯಿಂದ ಗೊಣಗುವವರೇ ಆಗಿದ್ದರು.ಸ್ನೇಹಿತರೊಬ್ಬರ ಮನೆಯೊಳಗಿನ ಟಿವಿ, ಮಿಕ್ಸರ್, ಗ್ರೈಂಡರ್ ಮುಂತಾದ ಯಂತ್ರಗಳ ತರ ಮಕ್ಕಳೂ ಸ್ತಬ್ಧವಾಗಿ ಬಿಟ್ಟಿದ್ದರು. ಅಕ್ಕಪಕ್ಕದ ಮನೆ ಮಕ್ಕಳೂ ಸೇರಿದಂತೆ ಎಲ್ಲಾ ಒಂದೆಡೆ ಗರಬಡಿದವರಂತೆ ಕುಳಿತುಬಿಟ್ಟಿದ್ದರು.

 

ಕಾರ್ಟೂನ್ ಶೋ ನೋಡಲು ಟಿವಿ ಇಲ್ಲ, ಕಂಪ್ಯೂಟರ್ ಆನ್ ಮಾಡಲು ಯುಪಿಎಸ್ ಖಾಲಿ! ವೀಡಿಯೋ ಗೇಮ್ ಆಡಲು ಸೆಲ್ ಡೌನ್! ಅಮ್ಮನ ಮೊಬೈಲ್ ಕಿತ್ತುಕೊಂಡು ಗೇಮ್ಸ ಆಡೋಣವೆಂದರೆ ಅದರಲ್ಲಿ ಬ್ಯಾಟರಿ ಒಂದೇ ಕಡ್ಡಿ ಇರುವುದು ಎಂದು ಅಮ್ಮ ಕಿತ್ತಿಟ್ಟುಕೊಂಡಿದ್ದಳು.ಹೊರಗೆ  ಆಡೋಣವೆಂದರೆ ಕತ್ತಲು. ಎಷ್ಟೋ ವರ್ಷಗಳ ನಂತರ, ಪ್ರಾಯಶಃ ಕೆಲ ಮಕ್ಕಳು ಜೀವನದಲ್ಲಿ ಮೊದಲ ಬಾರಿಗೆ ಈ ತರಹ `ಘೋರ~ ಅಂಧಕಾರದಲ್ಲಿ ಕುಳಿತಿರುವಂತೆ ಭಯಭೀತರಾಗಿದ್ದರು !  `ಏನ್ ಮಾಡ್ತಿದೀರ ಎಲ್ಲಾ~ ಎಂದೆ.  `ಕರೆಂಟೇ ಇಲ್ಲ, ಏನು ಮಾಡೋದು ಸುಮ್ನೆ ತೂಕಡಿಸುತ್ತಾ ಕೂತಿದೀವಿ~ ಅಂದಳು ಒಬ್ಬಳು ಪುಟಾಣಿ.   `ಯಾಕೆ ಯಾವುದಾದರೂ ಹಾಡು ಹೇಳಿ~ ಅಂದೆ. ಸಿನಿಮಾ ಹಾಡು ಬಿಟ್ಟರೆ ಯಾವುದೇ ಭಕ್ತಿಗೀತೆಯಾಗಲೀ, ಜನಪದ ಗೀತೆಯಾಗಲೀ ಯಾರಿಗೂ ಗೊತ್ತಿರಲಿಲ್ಲ. `ಒಬ್ಬರಿಗೊಬ್ಬರು ಒಗಟು ಹೇಳಿ~ ಅಂದೆ. ಎಲ್ಲೋ ಒಂದೆರಡು ಒಗಟು ಈಚೆ ಬಂದವೇ ಹೊರತು ಮತ್ತೆ ಎ್ಲ್ಲಲಾ ಮುಖ ಒಣಗಿಸಿಕೊಂಡು ಕೂತವು.

ಗಾದೆಯಂತೂ ಹೊರಡಲೇ ಇಲ್ಲ. `ಕವಡೆ, ಪಗಡೆ, ಅಳುಗುಣಿ ಮಣೆ ಏನಾದರೂ ಇದ್ರೆ ತಗೊಂಡು ಬನ್ನಿ~ ಎಂದೆ.  `ಅವೆಲ್ಲ ಏನು~ ಎನ್ನುವಂತೆ ವಿಚಿತ್ರವಾಗಿ ಮುಖ ಮುಖ ನೋಡಿದವು. `ಇವೆಲ್ಲಾ  ಏನೂ ಇಲ್ಲ~ ಎಂದು ತಲೆ ಅಲ್ಲಾಡಿಸಿದವು. ಕೊನೆಗೆ ಒಂದು ಮಗು ಎದ್ದು ಹೋಗಿ ಅವರಪ್ಪ ಆಡುತ್ತಿದ್ದ ಇಸ್ಪೀಟ್ ಪ್ಯಾಕ್ ತಂದಿತು. `ಇದು ಬೇಡ, ಮಕ್ಕಳು ಇಸ್ಪೀಟ್ ಆಡಬಾರದು~ ಎಂದು ಹೇಳಿದೆ. ಮತ್ತೆ ಅವು ಪಿಳಿಪಿಳಿ ನೋಡುತ್ತ ಕುಳಿತುಕೊಂಡವು. ಯೋಚಿಸಿದ ನಾನು  `ಸರಿ ಬನ್ನಿ!~ ಎಂದು ಅವರನ್ನು ಕರೆದುಕೊಂಡು ಟೆರೇಸ್ ಮೇಲೆ ಬಂದೆ.ಮೇಲೆ ಶುಭ್ರ ಆಕಾಶದ ತುಂಬಾ  ಫಳಗುಟ್ಟುವ ನಕ್ಷತ್ರಗಳು, ಗ್ರಹಗಳು! ಹಾಲು ಚೆಲ್ಲಿದಂತೆ ದಕ್ಷಿಣದಿಂದ ಉತ್ತರಕ್ಕೆ ಹಾದು ಹೋಗಿದ್ದ ಕ್ಷೀರಪಥ! `ಮಕ್ಕಳೇ ಮೇಲೆ ನೋಡಿ~ ಎಂದೆ. `ವಾಹ್! ಆಕಾಶದಲ್ಲಿ ಇಷ್ಟೊಂದು ನಕ್ಷತ್ರ ಇರುತ್ತಾ~? ಎಂದು ಉದ್ಗರಿಸಿ ಆಶ್ಚರ್ಯಪಟ್ಟರು.`ಅಲ್ಲಿ ಯಾವ್ಯಾವ ನಕ್ಷತ್ರ ಇವೆ ಎಂದು ಯಾರಾದರೂ ಗುರುತಿಸಿ ಹೇಳ್ತೀರಾ~? ಎಂದು ಕೇಳಿದೆ. ಅವರ‌್ಯಾರಿಗೂ ಯಾವ ನಕ್ಷತ್ರದ ಪರಿಚಯವೂ ಇರಲಿಲ್ಲ. ವಿಜ್ಞಾನ ಪುಸ್ತಕದಲ್ಲಿ ಓದಿದ ಧ್ರುವ ನಕ್ಷತ್ರ, ಸಪ್ತರ್ಷಿ ಮಂಡಲ, ಶನಿ, ಗುರು, ಶುಕ್ರ ಮುಂತಾದ ಪ್ರಮುಖ ಆಕಾಶಕಾಯಗಳನ್ನು ಗುರುತಿಸಲೂ ಸಾಧ್ಯವಾಗಲಿಲ್ಲ.ಸಿಂಹ, ವೃಶ್ಚಿಕ ರಾಶಿಯಲ್ಲಿನ ನಕ್ಷತಗಳನ್ನು ನೋಡಿ ಮಕ್ಕಳು ಅಚ್ಚರಿಪಟ್ಟರು. ಕುಂತಿ, ನಕುಲ, ದ್ರೌಪದಿ ಮೊದಲಾದ ಪುಂಜಗಳ ಹೆಸರಿನ ಹಿಂದಿನ ಗ್ರೀಕ್ ಪುರಾಣದ ದಂತ ಕತೆಗಳನ್ನು ಕೇಳಿ ಖುಷಿಪಟ್ಟರು.ಹಲವು ಮಕ್ಕಳು ಜೀವಮಾನದಲ್ಲಿ ಒಮ್ಮೆಯೂ ಕತ್ತೆತ್ತಿ ಆಕಾಶದ ಕಡೆ ನೋಡಿರಲಿಲ್ಲ. ಆಧುನಿಕತೆಯ ಪ್ರತೀಕವಾದ ಪ್ರಜ್ವಲಿಸುವ ಮರ್ಕ್ಯುರಿ, ಸೋಡಿಯಂ ಲ್ಯಾಂಪಿನ ದೀಪಗಳ ಪ್ರಭಾವಳಿಯ ಆಚೆ  ಅವರಿಗೆಂದೂ ಕತ್ತೆತ್ತಿ ನೋಡುವ ಅಗತ್ಯ ಬಿದ್ದಿರಲಿಲ್ಲ.ಆ ಮಕ್ಕಳಲ್ಲಿ ಒಬ್ಬ ಹುಡುಗಿ ತೀರಾ ಚಿಂತಿತಳಾಗಿದ್ದಳು. ಅವಳೊಂದು `ಅಸೈನ್‌ಮೆಂಟ್~ ಮಾಡಬೇಕಿತ್ತು. ಅದಕ್ಕೆ `ಕರೆಂಟ್ ಇಲ್ಲವಲ್ಲ~ ಎಂಬ ಯೋಚನೆ ಅವಳದು.`ಅಸೈನ್‌ಮೆಂಟ್ ವಿಷಯ ಏನು~? ಎಂದು ಕೇಳಿದೆ. ಅದಕ್ಕವಳು `ನೆಲದೊಳಗಿನ ಸಂಪತ್ತುಗಳು, ಭೂ ಸಂಪನ್ಮೂಲಗಳ ಸುಸ್ಥಿರ ಬಳಕೆ ಹಾಗೂ ಜಮೀನಿನ ಬಳಕೆ ಕುರಿತ ಜನಜನಿತ ಜ್ಞಾನ-ಈ ಮೂರು ವಿಷಯದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ~ ಎಂದು ಕೇಳಿದಳು.ನಾನು ಕೊನೆಯದನ್ನು-`ಜಮೀನು ಬಳಕೆ ಕುರಿತು ಜನಜನಿತ ಜ್ಞಾನದ~ ಬಗ್ಗೆ ಅಸೈನ್‌ಮೆಂಟ್ ಬರೆಯುವಂತೆ ಸೂಚಿಸಿದೆ. `ಅದಕ್ಕೆ ಇಂಟರ್‌ನೆಟ್‌ನಲ್ಲಿ ವಿಷಯ ಸಿಗುತ್ತಾ~ಎಂದು ಕೇಳಿದಳು.  `ಈ ವಿಷಯಕ್ಕೆ ಇಂಟರ್‌ನೆಟ್‌ನಲ್ಲಿ ಹೆಚ್ಚಿನ ವಿಷಯ ಸಿಗಲಾರದು. ನೀವೇ ಕೆಲವು ಕೃಷಿಕರನ್ನ ಸಂಪರ್ಕಿಸಿ ಮಾಹಿತಿ ಸಂಗ್ರಹಿಸಬೇಕು~ ಎಂದಾಗ ಆ ಹುಡುಗಿ `ಅಯ್ಯೋ ಅದನ್ನೆಲ್ಲಾ  ಯಾರು ಮಾಡ್ತಾರೆ~ ಎಂದು ಬೇಸರ ವ್ಯಕ್ತಪಡಿಸಿದಳು. ನನಗೆ ಈ ಮಕ್ಕಳು ಬೆಳೆಯುತ್ತಿರುವ ಪರಿ, ಅವರ ಧೋರಣೆಗಳನ್ನು ಕಂಡು ಗಾಬರಿ ಆಯಿತು. ಆಧುನಿಕತೆ, ನಾಗರಿಕತೆಯ ಸೌಲಭ್ಯಗಳು ಹಾಗೂ ಪರಿಕರಗಳಿಗೆ ಒಗ್ಗಿಕೊಂಡಿರುವ ನಮ್ಮ ಮಕ್ಕಳಿಗೆ ಅದಿಲ್ಲದಿದ್ದರೆ ಅರೆಕ್ಷಣವೂ ಜೀವಿಸಲು ಸಾಧ್ಯವಿಲ್ಲ ಎಂಬಂತಾಗಿದೆ.ಮಾಧ್ಯಮಗಳ ಪ್ರಭಾವದಿಂದಾಗಿ ನಮ್ಮ ಮಕ್ಕಳು ಪ್ರಕೃತಿಯ ವಿಸ್ಮಯಗಳನ್ನು ನೋಡುವುದನ್ನು, ಅವುಗಳಿಗೆ ಸ್ಪಂದಿಸುವ ಸಹಜಗುಣವನ್ನು ಮರೆತೇ ಹೋಗಿ ಕೀ ಕೊಟ್ಟ ಯಂತ್ರಗಳಾಗಿವೆ. ಮಕ್ಕಳಲ್ಲಿರಬೇಕಾದ ಸಹಜ ಕುತೂಹಲ, ಮುಗ್ಧತೆ ಮುಕ್ಕಾಗಿಹೋಗಿದೆ.ಗಿಡ, ಮರ, ಹಕ್ಕಿ, ಪಕ್ಷಿ, ಬೆಟ್ಟ, ಗುಡ್ಡ ,ಆಕಾಶ, ನಕ್ಷತ್ರಗಳೆಲ್ಲಾ ವೀಡಿಯೋ ಗೇಮಿನ ತ್ರೀ-ಡಿ ಚಿತ್ರಗಳಾಗಿ ಸ್ಪಂದನೆಯನ್ನೇ ಕಳೆದುಕೊಂಡಿವೆ. ಯಂತ್ರ, ತಂತ್ರಜ್ಞಾನ ಸ್ತಬ್ದವಾದರೆ ಯುವ ಪೀಳಿಗೆ ಜೀವಂತಿಕೆಯನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪಿರುವುದು ಘೋರ ದುರಂತವೇ ಸರಿ!ಅಪ್ಪ, ಅಮ್ಮ, ಗುರುಗಳು ಮಕ್ಕಳಿಗೆ ನಮ್ಮ ಪರಂಪರೆ, ದೇಸೀ ಜ್ಞಾನ ಹಾಗೂ ಪ್ರಕೃತಿಯ ರಹಸ್ಯಗಳನ್ನು ಶೋಧಿಸುವ ಮತ್ತು ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಅವರಿಗೆ ಈ ಅಧುನಿಕ ಬೆಳಕಿನಾಚೆಯ ಪ್ರಖರ ನಕ್ಷತ್ರ ದರ್ಶನ ಮಾಡಿಸಬೇಕಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.