ಶುಕ್ರವಾರ, ಮೇ 20, 2022
21 °C
ಹೊಳಲ್ಕೆರೆ ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಚಿವ ಆಂಜನೇಯ ವಿಷಾದ

ಆಧುನಿಕತೆ ಭರಾಟೆ; ದೇಸಿ ಸಂಸ್ಕೃತಿ, ಸೊಗಡು ಕಣ್ಮರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಆಧುನಿಕತೆಯ ಭರಾಟೆಯಲ್ಲಿ ನಮ್ಮ ಮೂಲ ದೇಸೀ ಸಂಸ್ಕೃತಿ, ಹಳ್ಳಿಗಾಡಿನ ನೈಜ ಸೊಗಡು ಕಣ್ಮರೆಯಾಗುತ್ತಿವೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ವಿಷಾದ ವ್ಯಕ್ತಪಡಿಸಿದರು.ಪಟ್ಟಣದ ಶಿಕ್ಷಕರ ಸದನದ ಗುಲ್ಯಪ್ಪನಾಯಕ ವೇದಿಕೆಯಲ್ಲಿ ಸೋಮವಾರ ನಡೆದ ನಾಲ್ಕನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಈಗ ಅಜ್ಜಿಕತೆ, ಸೋಬಾನೆ ಪದ, ಲಾಲಿ ಹಾಡು, ಗ್ರಾಮೀಣ ಆಟಗಳು ಎಲ್ಲವೂ ಮಾಯವಾಗಿವೆ. ಇದಕ್ಕೆ ಆಧುನಿಕ ಜೀವನ ಪದ್ಧತಿ, ದೃಶ್ಯ ಮಾಧ್ಯಮಗಳು, ನಗರ ಜೀವನದ ಅಂಧಾನುಕರಣೆಗಳು ಪ್ರಮುಖ ಕಾರಣ. ಕನ್ನಡಭಾಷೆಗೆ ತನ್ನದೇ ಆದ ಇತಿಹಾಸ, ವಿಶೇಷತೆಗಳಿದ್ದು, ರಾಷ್ಟ್ರಮಟ್ಟದಲ್ಲಿ ಉತ್ತಮ ಮನ್ನಣೆ ಪಡೆದಿದೆ. ನಾವು ಮೊದಲು ನಮ್ಮ ಭಾಷೆಯನ್ನು  ಬಳಸುವುದರೊಂದಿಗೆ, ಇತರರಿಗೂ ಕಲಿಸಬೇಕು. ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಎಲ್ಲಾ ಹಂತಗಳಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿಗೊಳಿಸಲು ಬದ್ಧವಾಗಿದೆ. ಈ ತಾಲ್ಲೂಕು ಪವಿತ್ರ ಭೂಮಿಯಾಗಿದ್ದು, ಅನೇಕ ದಿಗ್ಗಜರನ್ನು ಪೋಷಿಸಿದೆ. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಇದೇ ತಾಲ್ಲೂಕಿನ ರಾಮಗಿರಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಆರ್ಥಿಕ ತಜ್ಞ ಪ್ರೊ.ನಂಜುಂಡಸ್ವಾಮಿ ತಾಲ್ಲೂಕಿನ ದೊಗ್ಗನಾಳು ಗ್ರಾಮದವರು. ಯೋಗ, ಆಯುರ್ವೇದದಲ್ಲಿ ತಾಲ್ಲೂಕಿಗೆ ರಾಷ್ಟ್ರಮಟ್ಟದಲ್ಲಿ ಹೆಸರು ತಂದ ಕೀರ್ತಿ ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮೀಜಿಗೆ ಸಲ್ಲುತ್ತದೆ. ತಾಲ್ಲೂಕಿನಲ್ಲಿ ಕನ್ನಡಭವನ ಕಟ್ಟಲು ರೂ. 10 ಲಕ್ಷ ಅನುದಾನ ನೀಡುವುದಾಗಿ ಆಂಜನೇಯ ಭರವಸೆ ನೀಡಿದರು.ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿ, ಸಾಹಿತ್ಯ ಬದುಕನ್ನು ಸಂಪನ್ನಗೊಳಿಸುವ ದಿಕ್ಕಿನಲ್ಲಿ ಕೆಲಸ ಮಾಡಬೇಕು. ಆದರೆ ಪಂಪನ ಪೂರ್ವದಿಂದ ಸಾಹಿತ್ಯ ರಚನೆಯಾಗುತ್ತಿದ್ದರೂ ಜನರ ಬದುಕು ಹಸನಾಗಿಲ್ಲ. ಸಂಸ್ಕೃತಿ, ಸಂಸ್ಕಾರ, ನೈತಿಕತೆಗಳು ನೆಲೆಯೂರಿಲ್ಲ. ಮೂಢನಂಬಿಕೆಗಳು ತೊಲಗಿಲ್ಲ ಎಂದು ವಿಷಾದಿಸಿದರು.ನಿಕಟಪೂರ್ವ ಸಮ್ಮೇಳನಾಧ್ಯಕ್ಷ, ಕವಿ ಚಂದ್ರಶೇಖರ ತಾಳ್ಯ ಮಾತನಾಡಿ, ಈಗ ನಾವು ಕೇವಲ ಜ್ಞಾನದ ಭ್ರಮೆಯಲ್ಲಿ ಇದ್ದೇವೆಯೇ ಹೊರತು, ಸತ್ಯ, ಅರಿವು, ನ್ಯಾಯ, ನಿಷ್ಠೆ ಯಾರಿಗೂ ಬೇಕಾಗಿಲ್ಲ. ಜಾಗತೀಕರಣ, ಖಾಸಗೀಕರಣದ ನೆಲೆಯಲ್ಲಿ ನಮ್ಮ ವ್ಯಕ್ತಿತ್ವವನ್ನು ಮಾರಿಕೊಳ್ಳುತ್ತಿದ್ದೇವೆ. ಇದು ವಿಶ್ವದ ದುರಂತ ಎಂದರು.ಸಮ್ಮೇಳನಾಧ್ಯಕ್ಷ ಪ್ರೊ.ಡಿ.ಟಿ.ರಂಗಸ್ವಾಮಿ ಅವರನ್ನು ಭವ್ಯ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು. ಕನ್ನಡ ವಿಷಯದಲ್ಲಿ ಅತಿಹೆಚ್ಚು ಅಂಕ ಪಡೆದ ಎಸ್ಸೆಸ್ಸೆಲ್ಸಿ, ಪಿಯು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ಕಿರಣ್, ಸದಸ್ಯರಾದ ಪಾರ್ವತಮ್ಮ, ಭಾರತೀ ಕಲ್ಲೆೀಶ್, ಎಸ್.ಜೆ.ರಂಗಸ್ವಾಮಿ, ಪಿ.ಆರ್.ಶಿವಕುಮಾರ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ತಾಲ್ಲೂಕು ಅಧ್ಯಕ್ಷ ಎಂ.ಜಿ.ವೆಂಕಟೇಶ್, ಬಿ.ಎಲ್.ವೇಣು, ತಾ.ಪಂ. ಅಧ್ಯಕ್ಷ ಮೋಹನ್ ನಾಗರಾಜ್, ಬಿ.ಎಸ್.ರುದ್ರಪ್ಪ, ಕೆ.ಎಂ.ಶಿವಕುಮಾರ್, ಎಸ್.ವೇದಮೂರ್ತಿ, ಉಚ್ಚಂಗಪ್ಪ, ಬಸವರಾಜಯ್ಯ, ಜಿ.ಟಿ.ಶಂಕರಮೂರ್ತಿ, ಎಂ.ಬಿ.ತಿಪ್ಪೇರುದ್ರಪ್ಪ, ಎ.ಜಯಪ್ಪ ಹಾಜರಿದ್ದರು.ಪುಸ್ತಕ ಮಾರಾಟಕ್ಕೆ ಮಳೆ ಅಡ್ಡಿ

ಸಾಹಿತ್ಯ ಸಮ್ಮೇಳನದ ಹೊರಗೆ ಪುಸ್ತಕ ಮಳಿಗೆ ಹಾಕಿದ್ದರೂ ಬಿಟ್ಟು, ಬಿಟ್ಟು ಸುರಿಯುತ್ತಿದ್ದ ಮಳೆಯಿಂದ ವ್ಯಾಪಾರಿಗಳು ತೊಂದರೆ ಅನುಭವಿಸಿದರು. ವ್ಯಾಪಾರಕ್ಕಿಂತ ಪುಸ್ತಕ ಮುಚ್ಚುವುದು, ತೆರೆಯುವುದೇ ದೊಡ್ಡ ಕೆಲಸವಾಗಿತ್ತು. ಆದರೂ ಪುಸ್ತಕ ಪ್ರಿಯರು ತಮ್ಮ ಇಷ್ಟದ ಪುಸ್ತಕಗಳನ್ನು ಖರೀದಿಸಿದರು.ಆಕರ್ಷಿಸಿದ ನತ್ಯರೂಪಕ: ಪಟ್ಟಣದ ಲಿಟ್ಲ್‌ಬರ್ಡ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ  `ಕನ್ನಡ ನಾಡಿದ ರನ್ನದ ರತುನ ಕೇಳೋ ಕತೆಯನ್ನ' ನೃತ್ಯ ರೂಪಕ ಜನಮನ ಸೆಳೆಯಿತು. ಹೊಯ್ಸಳ ಹುಲಿಯನ್ನು ಕೊಲ್ಲುವ ನಟನೆಗೆ ಪ್ರೇಕ್ಷಕರು  ಚಪ್ಪಾಳೆ ಹೊಡೆದರು.ಕವಿಗೋಷ್ಠಿಗೆ ಉತ್ತಮ ಸ್ಪಂದನೆ:  ಮಧ್ಯಾಹ್ನ ನಡೆದ ಕವಿಗೋಷ್ಠಿಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಕವಿ ನಿಸಾರ್ ಅಹಮದ್ ಅವರ  `ಎಂದೋ ಮರೆತವಳಿಗೆ ಒಂದು ಸಲಾಮ್'  ಕವನ ವಾಚನಕ್ಕೆ ಸಾಹಿತ್ಯಪ್ರಿಯರು ಕರತಾಡನ ಮಾಡಿದರು. ಕನ್ನಡ ಭಾಷೆ, ಬದರಿನಾಥ ಪ್ರವಾಹ, ಪ್ರೀತಿ, ಹಾಸ್ಯ, ವಿಷಾದ, ನೋವು, ನಲಿವುಗಳ ಕುರಿತು ಕವನಗಳು ಹೊರಹೊಮ್ಮಿದವು.ಕವಿಗಳಾದ ಮೈಸೂರು ಆಕಾಶವಾಣಿಯ ಜಿ.ಕೆ.ರವೀಂದ್ರ ಕುಮಾರ್, ಸುಭಾಷ್‌ಚಂದ್ರ ದೇವರಗುಡ್ಡ, ಬಸವ ರಮಾನಂದ ಸ್ವಾಮೀಜಿ, ಗೀತಾ ಮೂರ್ತಿ, ಮಂಜಪ್ಪ, ಆರ್.ಎಸ್.ತಿಮ್ಮಯ್ಯ, ಕರಿಸಿದ್ದಪ್ಪ, ಮೂರ್ತಿ, ತಿಮ್ಮಣ್ಣ, ಖಮ್ರೋನ್ ಬೇಗ್, ಎ.ಪರಮೇಶ್ವರ್, ಜಗನ್ನಾಥ್, ಪದ್ಮಾವತಿ, ರಾಮಚಂದ್ರಪ್ಪ, ದೇವರಾಜ್, ರೇವಣಸಿದ್ದಪ್ಪ, ಶಿವರುದ್ರಪ್ಪ, ದೇವರತ್ನ ಮಂಜುನಾಥ್, ಟಿ.ತಿಪ್ಪೇಸ್ವಾಮಿ, ಲೀಲಾವತಿ, ರವಿರಾಜ್ ಕವನ ವಾಚಿಸಿದರು.`ವಿವಿಧತೆಯಲ್ಲಿ ಏಕತೆ' ಕುರಿತ ಗೋಷ್ಠಿಯಲ್ಲಿ ಡಾ.ಚಂದ್ರಪ್ಪ, ಶಿವಮೂರ್ತಿ, ಎಚ್.ಪಿ. ಸುದರ್ಶನ ಕುಮಾರ್, ಈಚಘಟ್ಟದ ಸಿದ್ದವೀರಪ್ಪ, ಟಿ.ಬಿ.ಚಂದ್ರಶೇಖರಪ್ಪ, ಬಿ.ಟಿ.ಬಸವರಾಜ್, ಡಾ.ಸಚ್ಚಿದಾನಂದ ಜಮದಗ್ನಿ, ಬಿ.ಎಸ್.ಪ್ರಭಾಕರ್, ಜಿ.ಎನ್.ಬಸವರಾಜಪ್ಪ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.