ಶನಿವಾರ, ಮೇ 8, 2021
26 °C

ಆಧುನಿಕ ಕೃಷಿ ಪದ್ಧತಿಯಿಂದ ಭೂಮಿ ಬಂಜರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು: `ರಾಸಾಯನಿಕ ಯುಕ್ತ ಗೊಬ್ಬರ ಹಾಗೂ ಕ್ರಿಮಿನಾಶಕಯುಳ್ಳ ಆಧುನಿಕ ಕೃಷಿ ಪದ್ಧತಿಯಿಂದ ಕೃಷಿ ಜಮೀನು ಬಂಜರು ಭೂಮಿಯಾಗಿ ಪರಿವರ್ತನೆಯಾಗುತ್ತಿದೆ~ ಎಂದು ಖಾನಾಪುರ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಕಾಂತ ಕಾರೇಕರ್ ಆತಂಕ ವ್ಯಕ್ತಪಡಿಸಿದರು.ಖಾನಾಪುರ ತಾಲ್ಲೂಕಿನ ಗುಂಡೇನಟ್ಟಿ ಗ್ರಾಮದಲ್ಲಿ  ಮಂಗಳವಾರ, ಬೆಂಗಳೂರು ಗ್ರೀನ್ ಫೌಂಡೇಶನ್ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗೃಹ ವಿಜ್ಞಾನ ಕಾಲೇಜಿನ ಜಂಟಿಯಾಗಿ  ಏರ್ಪಡಿಸಲಾಗಿದ್ದ ಸಿರಿಧಾನ್ಯಗಳ ಆಹಾರ ಹಬ್ಬ ಉದ್ಘಾಟಿಸಿ ಅವರು ಮಾತ ನಾಡಿದರು.`ಸಾವಯವ ಕೃಷಿ ಪದ್ಧತಿಯಿಂದ ಬೇಸಾಯ ಮಾಡಿ ಬೆಳೆದ ಆಹಾರಧಾನ್ಯಗಳನ್ನು ಹಿರಿಯರು ಉಪಯೋಗಿಸುತ್ತಿದ್ದರು. ಇದರಿಂದ ಅವರ ಆರೋಗ್ಯ ಸ್ಥಿತಿಯೂ ಉತ್ತಮವಾಗಿತ್ತು. ಸಕ್ಕರೆ ಕಾಯಿಲೆ, ರಕ್ತದೊತ್ತಡದಂತಹ ತೊಂದರೆಗಳು ಅವರಲ್ಲಿರಲಿಲ್ಲ~ ಎಂದು ಹೇಳಿದರು.`ಸಮತೋಲನ ಆಹಾರ, ನೀರು, ಒಳ್ಳೆಯ ಕರ್ಮ (ಕೆಲಸ) ಹಾಗೂ ದೈಹಿಕ ವ್ಯಾಯಾಮ ಆರೋಗ್ಯವಂತ ಶರೀರದ ನಾಲ್ಕು ಆಯಾಮಗಳು~ ಎಂದು ವಿವರಿಸಿದ ಅವರು, `ಸದೃಢ ಸಂತತಿ ದೇಶದ ಸಂಪತ್ತಾಗಿದೆ. ಪ್ರತಿಯೊಬ್ಬರು ಆರೋಗ್ಯ ವಂತಾಗಿರಲು ಜನನಿಯೇ ಮೊದಲು ಕಾರಣವಾಗುತ್ತಾಳೆ~ ಎಂದು ಹೇಳಿದರು.`ದ್ವಿದಳ ಧಾನ್ಯಗಳ ಬಳಕೆ ಮಾಡಿ ಆಹಾರ ಕೊಟ್ಟರೆ ಅದರಲ್ಲಿ ಹೇರಳವಾಗಿ ಪೌಷ್ಟಿಕಾಂಶಗಳು ದೊರೆಯುತ್ತವೆ. ಗ್ರಾಮಾಂತರ ಪ್ರದೇಶದಲ್ಲಿ ಹೈನುಗಾರಿಕೆ ಇದ್ದರೂ ಅದರ ಬಳಕೆಯನ್ನು ಮಾಡದೇ ಡೈರಿಗೆ ಹಾಕುತ್ತಿದ್ದೇವೆ. ಸೊಪ್ಪು, ತರಕಾರಿ ಬಳಕೆಯೂ ಕಡಿಮೆಯಾಗಿದೆ. ಕೃತ್ರಿಮ ಶೀತ ಪೇಯಗಳನ್ನು ಕುಡಿಯುವ ಚಟವನ್ನು ಅಂಟಿಸಿಕೊಂಡಿದ್ದೇವೆ~ ಎಂದು ವಿಷಾದಿಸಿದರು.`ನಿಸರ್ಗದೊಳಗೆ ಎಲ್ಲ ಪೋಷಕಾಂಶಗಳು ಇವೆ. ಅವುಗಳನ್ನು ಬಳಸುವ ಮನಸ್ಸು ಮಾಡಬೇಕಿದೆ. ಉತ್ತಮ ಆರೋಗ್ಯದಿಂದ ಕಾರ್ಯಕ್ಷಮತೆ ಹಾಗೂ ಆದಾಯವೂ ಹೆಚ್ಚಾಗಬಲ್ಲದು ಎಂಬುದನ್ನು ಅರಿಯಬೇಕಾಗಿದೆ~ ಎಂದು ಕಾರೇಕರ ಅಭಿಪ್ರಾಯಪಟ್ಟರು.ಕೃಷಿ ವಿಶ್ವವಿದ್ಯಾಲಯದ ಗೃಹ ವಿಜ್ಞಾನ ಮಹಾವಿದ್ಯಾಲಯದ ಡೀನ್ ಡಾ. ರಮಾ ನಾಯ್ಕ ಮಾತನಾಡಿ, `ಸಿರಿ ಧಾನ್ಯಗಳಿಂದ ತಯಾರಿಸಿದ ಆಹಾರಕ್ಕೆ ಅನೇಕ ರೋಗಗಳನ್ನು ನಿವಾರಿಸುವ ಶಕ್ತಿಯಿದೆ. ಪೂರ್ವಜರ ಉತ್ತಮ ಆರೋಗ್ಯಕ್ಕೆ ಅದರ ಸಂಸ್ಕರಣ ವಿಧಾನವೂ ಕಾರಣವಾಗಿತ್ತು~ ಎಂದು ಅಭಿಪ್ರಾಯಪಟ್ಟರು.`ಬೀಸಿದ ಹಿಟ್ಟನ್ನು ಇಂದು ಸಾಣಿಗೆ ಹಾಕುತ್ತೇವೆ. ಅನ್ನ ಮಲ್ಲಿಗೆಯಂತಿರಲೆಂದು ಪಾಲಿಶ್ ಮಾಡಿಸುತ್ತೇವೆ. ಹೀಗೆ ಮಾಡುವುದರಿಂದ ಪೋಷಕಾಂಶ ಹೊರಟು ಹೋಗುತ್ತದೆ. ಬೀಸಿದ ಹಿಟ್ಟಿಗೆ ಸಾಣಿಗೆ ಹಾಕುವುದೂ ಬೇಡ. ಹಾಗೇ ರೊಟ್ಟಿ ಸಿದ್ಧಪಡಿಸಿ ಸೇವಿಸಬೇಕು~ ಎಂದು ಸಲಹೆ ನೀಡಿದರು.`ದೃಶ್ಯ, ಶ್ರವಣ ಹಾಗೂ ಮುದ್ರಣ ಮಾಧ್ಯಮದ ಮೂಲಕ ಸಿರಿಧಾನ್ಯಗಳ ಬಳಕೆ ಹಾಗೂ ಉಳಿಕೆಗಾಗಿ ಅನೇಕ ಕಾರ್ಯಕ್ರಮಗಳನ್ನು ಕೃಷಿ ವಿವಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಇವು ಮರಳಿ ಅಡುಗೆ ಮನೆಗೆ ಬರಬೇಕೆಂಬುದು ಇದರ ಉದ್ದೇಶವಾಗಿದೆ. ಸಿರಿ ಧಾನ್ಯಗಳ ಸಂರಕ್ಷಣೆಗಾಗಿಯೇ ವಿಶ್ವಬ್ಯಾಂಕ್ ರೂ. 4ಕೋಟಿಯನ್ನು  ಕೃಷಿ ವಿವಿಗೆ ಬಿಡುಗಡೆ ಮಾಡಿದೆ~ ಎಂದರು.ಜಿ. ಪಂ. ಸದಸ್ಯ ಅಶೋಕ ಚಲವಾದಿ, ಸುವರ್ಣ ಕುಠಾಳೆ, ಡಾ. ಸಂಜೀವ್ ಬಾವಚಿ, ಭೀಮಣ್ಣ ಕಿಲಾರಿ ಹಾಗೂ ಶ್ರೀಕಾಂತ ಮಾತನಾಡಿದರು.ತಾ. ಪಂ. ಸದಸ್ಯರಾದ ಶಿವಶಂಕರ ಮಡ್ಡಿಮನಿ, ಮಲ್ಲಿಕಾರ್ಜುನ ಮುತಗೇಕರ,  ಗಂಗಪ್ಪ ಸರಬಣ್ಣವರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಸೋಮಶೇಖರ ಇತರರು ವೇದಿಕೆ ಮೇಲಿದ್ದರು. ಶಾಲಾ ಮಕ್ಕಳು ಸ್ವಾಗತಗೀತೆ ಹಾಡಿದರು. ಮಾಲತಿ ಚಿನ್ನಣ್ಣವರ ಸ್ವಾಗತಿಸಿದರು. ಗ್ರೀನ್ ಫೌಂಡೇಶನ್ ಕ್ಷೇತ್ರ ಸಂಯೋಜಕ ಗಂಗಾಧರ ಮಡ್ಡಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಲಿತಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಗೀತಾ ಕಿಲಾರಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.