ಆಧುನಿಕ ಸೀತೆಯರ ವನವಾಸ

7

ಆಧುನಿಕ ಸೀತೆಯರ ವನವಾಸ

Published:
Updated:

ರಾಮಾಯಣ ಭಾರತದ ಆದಿಕಾವ್ಯ. ಅಯೋಧ್ಯೆಯ ರಾಮನ ಕಥಾವಳಿ ಹೇಳುವ ವಾಲ್ಮೀಕಿಯ  ರಾಮಾಯಣ ಎರಡು ಸಾವಿರ ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ರೂಪಾಂತರ ಕಂಡಿದೆ. ಕವಿಗಳ ಕಲ್ಪನೆ, ಜನಪದರ ನಂಬಿಕೆ, ಸಾಮಾಜಿಕ ಪ್ರಜ್ಞೆಗೆ ತಕ್ಕಂತೆ ಆಯಾ ಕಾಲಘಟ್ಟಗಳಲ್ಲಿ ಬದಲಾಗಿದೆ.ಕೆಲ ಬುಡಕಟ್ಟು ಜನಾಂಗಗಳು, ಶ್ರೀಲಂಕಾ, ತಮಿಳುನಾಡಿನಲ್ಲಿ ಪ್ರಚಲಿತವಿರುವ ಕಥೆ ಹೊರತುಪಡಿಸಿ ಬಹುತೇಕ ಎಲ್ಲ ಕಥೆಗಳಲ್ಲೂ ರಾಮನಿಗೆ ‘ಮರ್ಯಾದಾ ಪುರುಷೋತ್ತಮ’ ಎಂದೇ ಬಿಂಬಿತನಾಗಿದ್ದಾನೆ. ‘ಏಕಪತ್ನಿವ್ರತಸ್ಥ’ ಎಂಬ ಹೊಗಳಿಕೆ. ತನ್ನ ಮೇಲೆ ಅಪವಾದ ಬರಬಾರದು ಎಂದು ಹೂವಿನಂತಹ ಗರ್ಭಿಣಿ ಸೀತೆಯನ್ನು ಕಾಡಿಗಟ್ಟಿದ ರಾಮನ ಕುರಿತು ಈ ಕಥೆಗಳಲ್ಲಿ ತಕರಾರು ಕಾಣುವುದಿಲ್ಲ. ಆತ ಕಾಡಿಗಟ್ಟಿದ ಮೇಲೆ ಒಂಟಿ ಹೆಣ್ಣು ಸೀತೆ ಹೇಗೆ ಬದುಕು ಸಾಗಿಸಿದಳು ಎಂಬ ವಿವರ ದೊರಕುವುದಿಲ್ಲ. ರಾಮಾಯಣದ ಕುರಿತು ಸಂಶೋಧನೆ ನಡೆಸಿ ‘ಇನ್ ಸರ್ಚ್ ಆಫ್ ಸೀತಾ’ ಎಂಬ ಪ್ರೌಢ ಪ್ರಬಂಧಗಳ ಸಂಕಲನ ಪ್ರಕಟಿಸಿರುವ ನಮಿತಾ ಗೋಖಲೆ ಪ್ರಕಾರ ಸೀತೆ ಭಾರತದ ಮೊದಲ ‘ಸಿಂಗಲ್ ಮದರ್’. ಇಂದಿನ ಒಂಟಿ ತಾಯಂದಿರು ಅನುಭವಿಸುತ್ತಿರುವ ಸಂಕಷ್ಟ, ಅಪಮಾನ, ನೋವು ಸೀತೆಯನ್ನೂ ಕಾಡಿತ್ತು. ಆಕೆಯನ್ನು ಹಿಂಡಿ, ಹಿಪ್ಪೆಯಾಗಿಸಿತ್ತು.

 

ಸೀತೆಯನ್ನು ಆದರ್ಶ ಪತ್ನಿ, ಅತ್ತಿಗೆ, ಸೊಸೆಯ ರೂಪದಲ್ಲಿ ನೋಡುವ ಸಾಂಪ್ರದಾಯಿಕ ಚೌಕಟ್ಟನ್ನು ಅಲ್ಲಗಳೆಯುವ ನಮಿತಾ ಗೋಖಲೆ, ಆಕೆಯನ್ನು ಭಾರತೀಯ ಮಹಿಳೆಯ ಅಸ್ಮಿತೆಯ ಸಂಕೇತವಾಗಿ ನೋಡುತ್ತಾರೆ. ಲವಕುಶರನ್ನು ರಾಮನಿಗೆ ಒಪ್ಪಿಸಿ ಭೂಮಿಯ ಒಡಲು ಸೇರುವ ಆಕೆ ಅಲ್ಲಿ ರಾಮನನ್ನು ನಿರಾಕರಿಸುತ್ತಾಳೆ. ತನ್ನ ವಿರುದ್ಧದ ದೌರ್ಜನ್ಯವನ್ನು ಮೌನವಾಗಿ ಪ್ರತಿಭಟಿಸುತ್ತಾಳೆ ಎನ್ನುತ್ತಾರೆ. ಸುಮಾರು ಮೂರೂವರೆ ಸಾವಿರ ವರ್ಷಗಳ ಹಿಂದೆ ಅಯೋಧ್ಯೆಯ ರಾಣಿ ಸೀತೆ ಅನುಭವಿಸಿದ ಕಷ್ಟವನ್ನು ಅರಿಯಲು ನಾವು ಭಾರೀ ಸಂಶೋಧನೆಯೇನೂ ನಡೆಸಬೇಕಿಲ್ಲ. ಇಂದು ವಿಚ್ಛೇದನದ ಕಾರಣಕ್ಕೋ, ಮತ್ಯಾವುದೋ ಕಾರಣಕ್ಕೋ ಪತಿಯಿಂದ ಪ್ರತ್ಯೇಕಗೊಂಡು ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರ ಬವಣೆ ನೋಡಿದರೆ ಸೀತೆಯ ಮನೋಕ್ಲೇಶ ಅರ್ಥವಾದೀತು. ಸೀತೆಯಂತೆ ಅವರಿಗೂ ತಂದೆ-ತಾಯಿ, ಬಂಧು-ಬಳಗದ ಒತ್ತಾಸೆ ಇರುವುದಿಲ್ಲ.ವಿಚ್ಛೇದನದ ಕೂರಂಬು

ವಿಚ್ಛೇದನ ಎಂಬ ಪದಕ್ಕೆ ಅಂಟಿದ ಕಳಂಕ ಆಕೆಯನ್ನು ಎಲ್ಲರಿಂದ ದೂರ ಮಾಡುತ್ತದೆ. ಒಮ್ಮೆ ಪತಿಯಿಂದ ದೂರವಾದರೆ ಸಾಕು. ಆಕೆ ಸಾಮಾಜಿಕವಾಗಿ ಕೆಳ ದರ್ಜೆಗೆ ಇಳಿಯುತ್ತಾಳೆ. ಸಾಮಾಜಿಕವಾಗಿಯೇ ಬೆಂಬಲಿಸದ ತವರು ಮನೆಯವರಿಂದ ಆರ್ಥಿಕ ಬೆಂಬಲವನ್ನು ನಿರೀಕ್ಷಿಸುವುದು  ದೂರದ ಮಾತು.

ಕೊನೆಗಾಣದ ಮಾನಸಿಕ ವೇದನೆಗಳ ನಡುವೆಯೂ ‘ಅಸ್ಮಿತೆ’ಗಾಗಿ ಹುಡುಕಾಟ. ಕರುಳ ಕುಡಿಗಳಿಗೆ  ನೆಮ್ಮದಿಯ ಬಾಲ್ಯ ನೀಡಲು ಹೋರಾಟ.ಮತ್ತೊಂದೆಡೆ ಸದಾ ತಿವಿಯುತ್ತಿರುವ ‘ಡೈವೋರ್ಸ್’ ಎಂಬ  ಕೂರಂಬು. ಇತ್ತೀಚೆಗೆ ಹೊರಬಂದ ಸಮೀಕ್ಷಾ ವರದಿಯೊಂದು ಈ ಅಂಶಗಳನ್ನೆಲ್ಲ ಪುಷ್ಟೀಕರಿಸುತ್ತಿದೆ.2008ರ ಅಕ್ಟೋಬರ್‌ನಿಂದ 2009ರ ಸೆಪ್ಟೆಂಬರ್‌ವರೆಗೆ ದೇಶದಾದ್ಯಂತ ನಡೆಸಿದ ಅಧ್ಯಯನದ ಪ್ರಕಾರ ವಿಚ್ಛೇದನ ಪಡೆದ ಮಹಿಳೆಯರಲ್ಲಿ ಶೇ 80ಕ್ಕಿಂತ ಹೆಚ್ಚು ಮಹಿಳೆಯರು ಬಡತನ ರೇಖೆಯ ಕೆಳಗೆ ವಾಸಿಸುತ್ತಿದ್ದಾರೆ. ಅವರ ಮಾಸಿಕ ಆದಾಯ 4000 ರೂಪಾಯಿಗಿಂತ ಕಡಿಮೆ.ಯಾವುದೇ ಆದಾಯ ಇಲ್ಲದ ಕಾರಣ ಈ ಮಹಿಳೆಯರು ತಮ್ಮ ತವರು ಮನೆಗೆ ಮರಳುತ್ತಾರೆ. ಅಲ್ಲಿ ಅವರನ್ನು ಯಾರೂ ಸ್ವಾಗತಿಸುವುದಿಲ್ಲ. ಆಕೆಯನ್ನು ಹೊರೆ ಎಂದೇ ಪರಿಗಣಿಸುತ್ತಾರೆ. ವಿಚ್ಛೇದಿತ ಮಹಿಳೆಯರಲ್ಲಿ ಶೇ 21.63ರಷ್ಟು ಮಂದಿ ಜೀವನೋಪಾಯಕ್ಕಾಗಿ ಮನೆಗೆಲಸ ಅಥವಾ ಕೂಲಿ ಅವಲಂಬಿಸಿದ್ದಾರೆ.ಸಮೀಕ್ಷೆಗೆ ಆಯ್ದುಕೊಂಡ ಮಹಿಳೆಯರಲ್ಲಿ ಅರ್ಧದಷ್ಟು ಜನ ಪತಿಯಿಂದ ಜೀವನ ನಿರ್ವಹಣಾ ವೆಚ್ಚವನ್ನೂ ಕೇಳಿಲ್ಲ..! ಇವರಲ್ಲಿ ಬಹಳಷ್ಟು ಮಂದಿಗೆ ಕಾನೂನಿನ ಪ್ರಾಥಮಿಕ ಜ್ಞಾನವೇ ಇರುವುದಿಲ್ಲ. ಪತಿ ವಿಚ್ಛೇದನ ನೀಡಿದಾಗ ಅಥವಾ ಬೇರೆಯಾಗಿ ವಾಸಿಸುತ್ತಿದ್ದಾಗ  ಜೀವನ ನಿರ್ವಹಣೆ ವೆಚ್ಚ ಕೇಳಬಹುದು ಎಂಬ ಸರಳ ಅಂಶವೂ ತಿಳಿದಿರುವುದಿಲ್ಲ! ತಿಳಿದಿದ್ದರೂ ನ್ಯಾಯಾಲಯದಲ್ಲಿ ಹೋರಾಡಲು ಆರ್ಥಿಕ ಚೈತನ್ಯ ಇರುವುದಿಲ್ಲ.ಸಮೀಕ್ಷೆಯ ನೇತೃತ್ವ ವಹಿಸಿದ್ದ ವಕೀಲೆ ಕೀರ್ತಿ ಸಿಂಗ್ ಹೇಳುವ ಪ್ರಕಾರ, ನ್ಯಾಯಾಲಯದಲ್ಲಿರುವ  ಪ್ರಕರಣಗಳು ಇತ್ಯರ್ಥಗೊಳ್ಳಲು ವರ್ಷಗಳೇ ಹಿಡಿಯುತ್ತವೆ. ಪತಿಯ ಆದಾಯದ ಶೇ.5ರಷ್ಟು ನಿರ್ವಹಣಾ ವೆಚ್ಚ ಮಾತ್ರ ಆಕೆಗೆ ಸಿಗುತ್ತದೆ. ಜೊತೆಯಲ್ಲಿದ್ದಾಗ ಖರೀದಿಸಿದ ಆಸ್ತಿ ಬಹುತೇಕ ಪತಿಯ ಹೆಸರಿನಲ್ಲೇ ನೋಂದಣಿಯಾಗಿರುವುದರಿಂದ ಆಕೆಗೆ ಏನೂ ದೊರಕುವುದಿಲ್ಲ.ಶಾಬಾನು ಪ್ರಕರಣ


80ರ ದಶಕದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ, ರಾಜೀವ್ ಗಾಂಧಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದ ಶಾಬಾನು ಪ್ರಕರಣದಲ್ಲಿ ಆದದ್ದೂ ಇದೇ. 62 ವರ್ಷಗಳ ಐದು ಮಕ್ಕಳ ಬಡ ಮುಸ್ಲಿಂ ಮಹಿಳೆ ಶಾಬಾನುಗೆ ಜೀವನಾಂಶ ನೀಡುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ಸಹ ಆಕೆಯ ಪತಿ ಮುಸ್ಲಿಂ ಧಾರ್ಮಿಕ ನಾಯಕರ ಸಹಕಾರದಿಂದ ಜೀವನಾಂಶ ಕೊಡುವುದನ್ನು ತಪ್ಪಿಸಿಕೊಂಡ. ಸಂಸತ್ತಿನಲ್ಲಿ ಬಹುಮತ ಹೊಂದಿದ್ದ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಮಹಿಳೆಯರ ಕಾಯ್ದೆ (ವಿಚ್ಛೇದನಕ್ಕೆ ಸಂಬಂಧಿಸಿದ ಹಕ್ಕುಗಳ ರಕ್ಷಣೆ) 1986 ಜಾರಿಗೆ ತಂದು ಶಹಬಾನು ಅವರಂತಹ ಲಕ್ಷಾಂತರ ಮಹಿಳೆಯರಿಗೆ ಅನ್ಯಾಯ ಮಾಡಿತು.ಪ್ರಸ್ತುತ ಸಿಆರ್‌ಪಿಸಿ 125ನೇ ಕಲಂ ಪ್ರಕಾರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಅಥವಾ ವಿಚ್ಛೇದಿತ ಮಹಿಳೆ ತನ್ನ ಹಾಗೂ ತನ್ನ ಮಕ್ಕಳ ಜೀವನ ನಿರ್ವಹಣೆಗಾಗಿ ಪತಿಯ ಆದಾಯದಲ್ಲಿ ಪಾಲು ಕೇಳಬಹುದು. ಏನಿಲ್ಲ ಎಂದರೂ ಪತಿಯ ಆದಾಯದಲ್ಲಿ ಕಾಲು ಭಾಗದಷ್ಟಾದರೂ ಜೀವನಾಂಶವನ್ನು ಕೋರ್ಟ್ ಆಕೆಗೆ ಕೊಟ್ಟೇ ಕೊಡಿಸುತ್ತದೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ದಮನಿತ ಮಹಿಳೆಯರ ಪರವಾಗಿ ಪ್ರಕರಣಗಳನ್ನು ನಡೆಸುತ್ತಿರುವ ಹಿರಿಯ ವಕೀಲೆ ಎಸ್. ಸುಶೀಲಾ ಹೇಳುವ ಪ್ರಕಾರ, ವಿಚ್ಛೇದಿತ ಮಹಿಳೆಯರ ದುಃಸ್ಥಿತಿಗೆ ನಮ್ಮ ವ್ಯವಸ್ಥೆಯಲ್ಲಿನ ಹುಳುಕು ಕಾರಣ.‘ಬಹುತೇಕ ಎಲ್ಲ ಪ್ರಕರಣಗಳಲ್ಲೂ ನ್ಯಾಯಾಲಯ ಮಹಿಳೆಯರಿಗೆ ಜೀವನಾಂಶ ನೀಡಲು ಆದೇಶಿಸುತ್ತದೆ. ಆದರೆ, ಚಾಲಾಕಿ ಗಂಡಂದಿರು ಜೀವನಾಂಶ ಕೊಡಬೇಕು ಎಂಬ ಏಕೈಕ ಉದ್ದೇಶದಿಂದ ಕೆಲಸವನ್ನೂ ಬಿಡುತ್ತಾರೆ. ಎಲ್ಲೋ ನಾಪತ್ತೆಯಾಗುತ್ತಾರೆ. ಕಷ್ಟಪಟ್ಟು ಅವರನ್ನು ಹಿಡಿದು ತಂದರೂ ನ್ಯಾಯಾಲಯಕ್ಕೆ ದಂಡ ಕಟ್ಟಿ ಮತ್ತೆ ಪರಾರಿಯಾಗುತ್ತಾರೆ. ಬದುಕಲು ಯಾವುದೇ ದಾರಿ ಇಲ್ಲದ ಮಹಿಳೆ ಅನಿವಾರ್ಯವಾಗಿ ವೇಶ್ಯಾವೃತ್ತಿಗೆ ಇಳಿದ ಪ್ರಸಂಗಗಳೂ ಇವೆ. ಆಕೆಯ ಮಕ್ಕಳು ಬಾಲ ಕಾರ್ಮಿಕರಾಗಿ ದಾರಿ ತಪ್ಪುತ್ತಾರೆ. ಕೋರ್ಟ್ ಆದೇಶ ಬಂದ 2, 3 ವರ್ಷಗಳ ನಂತರ ಜೀವನಾಂಶ ಕೊಟ್ಟರೇ ಪ್ರಯೋಜನ ಏನು’ ಎಂದು ಪ್ರಶ್ನಿಸುತ್ತಾರೆ ಸುಶೀಲಾ.ನ್ಯಾಯಾಲಯದ ಆದೇಶ ಜಾರಿಗೊಳಿಸುವ ಹೊಣೆ ಹೊತ್ತಿರುವ ಪೊಲೀಸರಿಂದಲೂ ಲೋಪ ಆಗುತ್ತಿದೆ. ಪೊಲೀಸರಿಗೆ ಲಂಚ ತಿನ್ನಿಸಿ ಕಣ್ಣಾಮುಚ್ಚಾಲೆ ಆಡುವ ಪುರುಷರ ಸಂಖ್ಯೆಯೂ ಸಾಕಷ್ಟಿದೆ. ಆದೇಶ ಜಾರಿಗೊಳಿಸುವ ವ್ಯವಸ್ಥೆಯನ್ನು ಸರ್ಕಾರ ಮೊದಲು ಸರಿಪಡಿಸಬೇಕು. ಗಂಡಸು ಯಾವುದೇ ಕೆಲಸ ಮಾಡದೇ ಇದ್ದಲ್ಲಿ ಸರ್ಕಾರದ  ಕಾಮಗಾರಿಗಳಲ್ಲಿ ಆತನಿಗೆ ಕೆಲಸ ಕೊಡಬೇಕು. ಕೂಲಿಯ ಹಣ ಮಹಿಳೆಗೆ ನೀಡಬೇಕು. ಕಡೆಗೆ ಜೈಲುಗಳ, ಉದ್ಯಾನಗಳ ಸ್ವಚ್ಛತೆಯ ಕೆಲಸಗಳನ್ನಾದರೂ ಆತನಿಗೆ ನೀಡಲಿ. ಅಲ್ಲಿ ಊಟ, ವಸತಿ ಉಚಿತವಾಗಿ ದೊರಕುತ್ತದೆ. ಅವನ ಗಳಿಕೆ ವಿಚ್ಛೇದಿತ ಪತ್ನಿಗೆ  ನೇರ ತಲುಪುವಂತಾಗಬೇಕು ಎನ್ನುತ್ತಾರವರು.ತನ್ನನ್ನು ನಂಬಿ ಕೈಹಿಡಿದ ಹೆಣ್ಣು ಜೀವವನ್ನು ನರಳಿಸಬಾರದು. ಯಾವುದೋ ಕಾರಣಕ್ಕೆ ದಾಂಪತ್ಯದಲ್ಲಿ ಅಪಸ್ವರ ಮೂಡಿ ಬೇರೆಯಾಗುವ ಪ್ರಸಂಗ ಬಂದರೂ ಆಕೆಗೆ ಘನತೆಯ ಬದುಕನ್ನು ವಂಚಿಸಬಾರದು ಎಂಬ ಪ್ರಜ್ಞೆ ಪುರುಷನಲ್ಲಿ ಮೂಡುವವರೆಗೆ ವಿಚ್ಛೇದಿತ ಮಹಿಳೆಯರ ಬವಣೆ ಕೊನೆಯಾಗದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry